ADVERTISEMENT

IPL-2020: ಕಿಂಗ್ಸ್ ಛಲಕ್ಕೆ ದಕ್ಕಿದ ಫಲ

ರಾಹುಲ್ ಬಳಗದ ಬೌಲರ್‌ಗಳ ದಾಳಿಗೆ ಕುಸಿದ ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳು; ಪಂದ್ಯಕ್ಕೆ ತಿರುವು ನೀಡಿದ ಸುಚಿತ್ ಕ್ಯಾಚ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 19:44 IST
Last Updated 24 ಅಕ್ಟೋಬರ್ 2020, 19:44 IST
ಜಾನಿ ಬೆಸ್ಟೊ ವಿಕೆಟ್‌ಗಾಗಿ ಕಿಂಗ್ಸ್ ಇಲೆವನ್ ಪಂಜಾಬ್‌ನ ರವಿ ಬಿಷ್ಣೋಯಿ ಮನವಿ ಮಾಡಿದ ಬಗೆ –ಪಿಟಿಐ ಚಿತ್ರ
ಜಾನಿ ಬೆಸ್ಟೊ ವಿಕೆಟ್‌ಗಾಗಿ ಕಿಂಗ್ಸ್ ಇಲೆವನ್ ಪಂಜಾಬ್‌ನ ರವಿ ಬಿಷ್ಣೋಯಿ ಮನವಿ ಮಾಡಿದ ಬಗೆ –ಪಿಟಿಐ ಚಿತ್ರ   

ದುಬೈ: ಸಾಧಾರಣ ಮೊತ್ತ ಪೇರಿಸಿದರೂ ಛಲ ಬಿಡದೆ ಕಾದಾಡಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಶನಿವಾರ ರಾತ್ರಿ ಅಮೋಘ ಜಯ ಸಾಧಿಸಿತು. ಸನ್‌ರೈಸರ್ಸ್ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಂಗೆಡಿಸಿದ ಬೌಲರ್‌ಗಳು ಕೆ.ಎಲ್‌.ರಾಹುಲ್ ಬಳಗಕ್ಕೆ 12 ರನ್‌ಗಳ ಗೆಲುವು ತಂದುಕೊಟ್ಟರು.

127 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಒಂದು ಹಂತದಲ್ಲಿ 100 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಭರವಸೆಯಲ್ಲಿತ್ತು. ಆದರೆ ಬದಲಿ ಆಟಗಾರ, ಕನ್ನಡಿಗ ಜೆ.ಸುಚಿತ್ ಅವರ ಮೋಹಕ ಕ್ಯಾಚ್‌ ಪಂದ್ಯಕ್ಕೆ ತಿರುವು ನೀಡಿತು. ಅಂತಿಮವಾಗಿ ತಂಡ ಇನ್ನೂ ಒಂದು ಎಸೆತ ಬಾಕಿ ಇರುವಾಗ 114 ರನ್‌ಗಳಿಗೆ ಪತನ ಕಂಡಿತು.

ನಾಯಕ ಡೇವಿಡ್ ವಾರ್ನರ್ ಮತ್ತು ವಿಕೆಟ್ ಕೀಪರ್ ಜಾನಿ ಬೆಸ್ಟೊ ಆರಂಭದಲ್ಲೇ ವೇಗವಾಗಿ ರನ್ ಗಳಿಸುವತ್ತ ಗಮನ ನೀಡಿದರು. 38 ಎಸೆತಗಳಲ್ಲಿ 56 ರನ್ ಸೇರಿಸಿ ಭರವಸೆ ಮೂಡಿಸಿದರು. ಆದರೆ ಎರಡು ರನ್‌ಗಳ ಅಂತರದಲ್ಲಿ ಅವರಿಬ್ಬರು ವಾಪಸಾದರು. ರವಿ ಬಿಷ್ಣೋಯಿ ಎಸೆತದಲ್ಲಿ ಕೆ.ಎಲ್‌.ರಾಹುಲ್‌ಗೆ ವಾರ್ನರ್ ಕ್ಯಾಚ್‌ ನೀಡಿದರೆ ಮುರುಗನ್ ಅಶ್ವಿನ್ ಎಸೆತದಲ್ಲಿ ಬೆಸ್ಟೊ ಬೌಲ್ಡ್ ಆದರು. ತಂಡದ ಮೊತ್ತಕ್ಕೆ ಒಂಬತ್ತು ರನ್ ಸೇರಿಸುವಷ್ಟರಲ್ಲಿ ಅಬ್ದುಲ್ ಸಮದ್ ಕೂಡ ಔಟಾದರು.

ADVERTISEMENT

ಈ ಸಂದರ್ಭದಲ್ಲಿ ಜೊತೆಗೂಡಿದ ಮನೀಷ್ ಪಾಂಡೆ ಮತ್ತು ವಿಜಯಶಂಕರ್ ನಿರಾಯಾಸವಾಗಿ ರನ್ ಗಳಿಸಿದರು. ಹೀಗಾಗಿ ತಂಡ ಸುಲಭ ಜಯ ಸಾಧಿಸುವ ನಿರೀಕ್ಷೆ ಮೂಡಿತು. ಆದರೆ 17ನೇ ಓವರ್‌ನಲ್ಲಿ ಸುಚಿತ್ ಮಾಡಿದ ಮ್ಯಾಜಿಕ್ ಪಂದ್ಯದ ಗತಿಯನ್ನೇ ಬದಲಿಸಿತು. ಕ್ರಿಸ್ ಜೋರ್ಡಾನ್ ಎಸೆತದಲ್ಲಿ ಮನೀಷ್ ಪಾಂಡೆ ಸಿಕ್ಸರ್‌ಗೆ ಎತ್ತಿದ ಚೆಂಡನ್ನು ಸುಚಿತ್ ಬೌಂಡರಿ ಗೆರೆ ಬಳಿ ಜಿಗಿದು ಹಿಡಿತಕ್ಕೆ ತೆಗೆದುಕೊಂಡರು. ಆಗ ತಂಡದ ಮೊತ್ತ 100 ಆಗಿತ್ತು. ಸ್ವಲ್ಪದರಲ್ಲೇ ವಿಜಯಶಂಕರ್ ಕೂಡ ಮರಳಿದರು.

ಈ ಹಂತದಿಂದ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದ ಕಿಂಗ್ಸ್ ಇಲೆವನ್ ಸತತವಾಗಿ ವಿಕೆಟ್‌ಗಳನ್ನು ಕಬಳಿಸಿತು. ಹೀಗಾಗಿ ಸನ್‌ರೈಸರ್ಸ್ ಮೇಲೆ ಒತ್ತಡ ಹೆಚ್ಚಾಯಿತು. ಆರ್ಷದೀಪ್ ಸಿಂಗ್ ಮತ್ತು ಕ್ರಿಸ್ ಜೋರ್ಡಾನ್ ಅವರ ಪ್ರಬಲ ದಾಳಿಗೆ ನಲುಗಿದ ತಂಡದ ಕೊನೆಯ ಆರು ಮಂದಿಗೆ ಎರಡಂಕಿ ಕೂಡ ದಾಟಲಾಗಲಿಲ್ಲ. ಈ ಪೈಕಿ ಕೊನೆಯ ನಾಲ್ವರು ಶೂನ್ಯಕ್ಕೆ ಔಟಾದರು.

ನಿಕೋಲಸ್ ಪೂರನ್ ಏಕಾಂಗಿ ಹೋರಾಟ

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್‌ ಪರ ಬೌಲರ್‌ಗಳು ಉತ್ತಮ ದಾಳಿ ಸಂಘಟಿಸಿದರು. ಗಾಯಗೊಂಡಿರುವ ಮಯಂಕ್ ಅಗರವಾಲ್ ಅವರಿಲ್ಲದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಬ್ಯಾಟಿಂಗ್‌ ಪಡೆಯನ್ನು ಅವರು ದೂಳೀಪಟ ಮಾಡಿದರು. ಕಿಂಗ್ಸ್‌ ಇಲೆವನ್‌ಗೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 126 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ನಾಯಕ ಕೆ.ಎಲ್. ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ಮನದೀಪ್ ಸಿಂಗ್ ಮೊದಲ ವಿಕೆಟ್‌ಗೆ 37 ರನ್‌ ಸೇರಿಸಿದರು. ಅವರು ಔಟಾದ ನಂತರ ರಾಹುಲ್ ಮತ್ತು ಕ್ರಿಸ್ ಗೇಲ್ ವೇಗವಾಗಿ ರನ್ ಗಳಿಸಿದರು.

ಆದರೆ ತಂಡದ ಮೊತ್ತ 66 ಆದಾಗ ಕ್ರಿಸ್ ಗೇಲ್ ಔಟಾದರು. ಅದೇ ಮೊತ್ತಕ್ಕೆ ರಾಹುಲ್ ಕೂಡ ಮರಳಿದರು. ನಂತರ ಬ್ಯಾಟ್ಸ್‌ಮನ್‌ಗಳು ಪರೇಡ್ ನಡೆಸಿದರು. ನಿಕೋಲಸ್ ಪೂರನ್ ಮಾತ್ರ ಹೋರಾಟ ಮುಂದುವರಿಸಿದರು. 28 ಎಸೆತಗಳಲ್ಲಿ 32 ರನ್ ಗಳಿಸಿದ ಅವರು ಔಟಾಗದೇ ಉಳಿದರು. ಮ್ಯಾಕ್ಸ್‌ವೆಲ್ ಕೇವಲ 12 ರನ್ ಗಳಿಸಿದರೆ, ಕೊನೆಯ ನಾಲ್ವರು ಬ್ಯಾಟ್ಸ್‌ಮನ್‌ಗಳಿಗೆ ಎರಡಂಕಿ ಮೊತ್ತ ತಲುಪಲು ಕೂಡ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.