ADVERTISEMENT

PV Web Exclusive | ಆಟದ ಮನೆ: ಪಿಚ್ಚು ಪಿಚ್ಚೆಂದೇತಕೆ ಬೀಳುಗಳೆವರು?

ವಿಶಾಖ ಎನ್.
Published 3 ಮಾರ್ಚ್ 2021, 12:16 IST
Last Updated 3 ಮಾರ್ಚ್ 2021, 12:16 IST
ಅಹಮದಾಬಾದ್‌ನ ಪಿಚ್
ಅಹಮದಾಬಾದ್‌ನ ಪಿಚ್   

ಅಹಮದಾಬಾದ್‌ ಟೆಸ್ಟ್‌ ಅನ್ನು ಭಾರತ ಎರಡೇ ದಿನಗಳಲ್ಲಿ ಗೆದ್ದದ್ದೇ ತಲೆಗೊಂದು ಅಭಿಪ್ರಾಯ ಹೊಮ್ಮುತ್ತಿದೆ. ಕ್ರಿಕೆಟ್ಟೇ ಅನಿಶ್ಚಿತತೆಯ ಆಟ ಎಂದಮೇಲೆ, ಪಿಚ್‌ನ ಚಂಚಲ ವರ್ತನೆಯನ್ನೂ ಸಹಿಸಿಕೊಂಡೇ ಆಡುವುದು ಕ್ರೀಡಾಧರ್ಮ ಅಲ್ಲವೇ?

***

1997ರ ಮಾರ್ಚ್ ಕೊನೆಯಲ್ಲಿ ವೆಸ್ಟ್‌ಇಂಡೀಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಭಾರತ ಆತಿಥೇಯ ತಂಡದ ಎದುರು ಮೂರನೇ ಟೆಸ್ಟ್‌ ಪಂದ್ಯ ಆಡಿತ್ತು. ಶಿವನಾರಾಯಣ ಚಂದ್ರಪಾಲ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿ ಹಲ್ಲುಗಳನ್ನೆಲ್ಲ ಕಿರಿದು ಖುಷಿಯಲ್ಲಿದ್ದರು. ಭಾರತದ ವೆಂಕಟೇಶ್ ಪ್ರಸಾದ್ ಲೆಗ್ ಕಟರ್‌ಗಳ ಮೊನಚು ತೋರಿ ಅದೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದು ಮಿಂಚಿದರು. ವಿಂಡೀಸ್ 298 ರನ್‌ ಗಳಿಸಿತಷ್ಟೆ. ಭಾರತ ಇದಕ್ಕೆ ಉತ್ತರವಾಗಿ ಇನ್ನೂ 21 ರನ್‌ಗಳನ್ನು ಹೆಚ್ಚಾಗಿ ಕಲೆಹಾಕಿತು. ಸಚಿನ್ ತೆಂಡೂಲ್ಕರ್ 14 ಬೌಂಡರಿ ಒಂದು ಸಿಕ್ಸರ್ ಸಿಡಿಸಿ ಬರೀ 147 ಎಸೆತಗಳಲ್ಲಿ 92 ರನ್ ಗಳಿಸಿದರೆ, ರಾಹುಲ್ ದ್ರಾವಿಡ್ 243 ಎಸೆತಗಳನ್ನು ಆಡಿ 78 ರನ್ ಸೇರಿಸಿದ್ದರಿಂದ ಇಷ್ಟು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು. ಮೊದಲ ಎರಡು ದಿನ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ನಲಿದಾಡಿದರೆನ್ನಲು ಇವಿಷ್ಟು ಅಂಕಿಅಂಶ ಪುಷ್ಟಿ. ಫ್ರಾಂಕ್ಲಿನ್ ರೋಸ್ ಎಂಬ ವಿಂಡೀಸ್‌ನ ಕಟ್ಟುಮಸ್ತಾದ ವೇಗದ ಬೌಲರ್ ಆಗ ಉತ್ತಮ ಲಯದಲ್ಲಿದ್ದರು. ನಾಲ್ಕು ಬ್ಯಾಟ್ಸ್‌ಮನ್‌ಗಳಿಗೆ ಆ ಇನಿಂಗ್ಸ್‌ನಲ್ಲಿ ಅವರು ಪೆವಿಲಿಯನ್ ಹಾದಿ ತೋರಿದ್ದರು.

ADVERTISEMENT

ಎರಡನೇ ಇನಿಂಗ್ಸ್‌ನಲ್ಲಿ ಎಲ್ಲಾ ಉಲ್ಟಾಪಲ್ಟಾ. ಬ್ರಯಾನ್ ಲಾರಾ ಪಟಪಟನೆ ಆರು ಬೌಂಡರಿಗಳಿದ್ದ 45 ರನ್ ಗಳಿಸದೇ ಹೋಗಿದ್ದರೆ ವಿಂಡೀಸ್ ಇನ್ನೂ ಸಂಕಷ್ಟದಲ್ಲಿ ಇರುತ್ತಿತ್ತು. 140 ರನ್‌ಗಳಿಗೆ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಔಟಾದರು. ದ್ರಾವಿಡ್ ಮೊದಲ ಇನಿಂಗ್ಸ್‌ನಲ್ಲಿ ಒಬ್ಬರೇ ಎಷ್ಟು ಹೊತ್ತು ಆಡಿದ್ದರೋ ಅಷ್ಟು ಹೊತ್ತಿನಲ್ಲಿ ವಿಂಡೀಸ್‌ನ ಎಲ್ಲರೂ ಪೆವಿಲಿಯನ್‌ಗೆ ಔಟಾಗಿ ಹೋಗಿ ಆಗಿತ್ತು. ಭಾರತದ ಎದುರು ಗೆಲ್ಲಲು ಬರೀ 120 ರನ್‌ಗಳ ಗುರಿ. ಎರಡು ದಿನಗಳ ಆಟ ಬಾಕಿ ಇತ್ತು. ಎರಡನೇ ಇನಿಂಗ್ಸ್‌ನಲ್ಲಿ ಅಭಯ್ ಕುರುವಿಲ್ಲಾ 5 ವಿಕೆಟ್‌ ಪಡೆದಿದ್ದನ್ನು ವಿಂಡೀಸ್‌ನ ಕರ್ಟ್ಲಿ ಆ್ಯಂಬ್ರೂಸ್, ಇಯಾನ್ ಬಿಷಪ್, ಫ್ರಾಂಕ್ಲಿನ್ ರೋಸ್ ಗಮನಿಸಿದ್ದರು. ಸ್ಕೋರ್ 45 ಆಗುವಷ್ಟರಲ್ಲಿ ನವಜೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಈ ಐವರೂ ಔಟಾಗಿಬಿಟ್ಟರು. ಸ್ವಿಂಗ್‌ಗೆ ಹೇಳಿ ಮಾಡಿಸಿದಂಥ ಪಿಚ್‌ನಲ್ಲಿ ಮೊದಲು ರೋಸ್ ಮೂರು ವಿಕೆಟ್ ಪಡೆದರು. ಆಮೇಲೆ ಆ್ಯಂಬ್ರೂಸ್ ಪಾಳಿ. ಮೊಹಮ್ಮದ್ ಅಜರುದ್ದೀನ್ ಅವರನ್ನು ಬೌಲ್ಡ್ ಮಾಡಿದಾಗ ಭಾರತಕ್ಕೆ ಗೆಲ್ಲಲು ಇನ್ನೂ 59 ರನ್‌ಗಳು ಬೇಕಿದ್ದವು. ಆದರೆ, 81 ರನ್‌ಗಳಾಗುವಷ್ಟರಲ್ಲಿ ಎಲ್ಲರೂ ಔಟಾಗಿ, ಇಡೀ ಭಾರತ ತಂಡ ದಂಗುಬಡಿದುಹೋಯಿತು.

ಹದಿನೆಂಟು ಟೆಸ್ಟ್‌ಗಳಲ್ಲಿ ಒಂದೂ ಶತಕ ಗಳಿಸದೇ ಇದ್ದ ಚಂದ್ರಪಾಲ್ ಆ ಟೆಸ್ಟ್‌ ಅನ್ನು ಹಣ್ಣಾಗಿಸಿಕೊಂಡಿದ್ದರು. ವಿಂಡೀಸ್ ವೇಗವನ್ನು ತಮ್ಮ ಪಂಚ್ ಹಾಗೂ ಡ್ರೈವ್‌ಗಳಿಂದ ಸಚಿನ್ ಚಿಂದಿ ಮಾಡುತ್ತಿರುವಾಗಲೇ ಗಲ್ಲಿಯಲ್ಲಿ ಕ್ಯಾಚ್ ಔಟ್ ಆದರು. ಇಯಾನ್ ಬಿಷಪ್ ಹಾಕಿದ್ದ ಆ ಎಸೆತ ನೋಬಾಲ್ ಆಗಿದ್ದುದು ರೀಪ್ಲೇಯಲ್ಲಿ ಕಾಣುತ್ತಿತ್ತು. ಒಂದು ವೇಳೆ ಅಂಪೈರ್ ಅದನ್ನು ಗಮನಿಸಿದ್ದರೆ ಪಂದ್ಯದ ಫಲಿತಾಂಶ ಬೇರೆಯದೇ ಆಗುತ್ತಿತ್ತೋ ಏನೋ? ಮೊದಲ ಇನಿಂಗ್ಸ್‌ನಲ್ಲಿ ರೋಸ್ ವೇಗದ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದೇ ಅಲ್ಲದೆ ಮೂರನೇ ವಿಕೆಟ್‌ಗೆ 170 ಚಿಲ್ಲರೆ ರನ್‌ಗಳ ಜತೆಯಾಟ ಆಡಿ, ಟೆಸ್ಟ್‌ ಕ್ರಿಕೆಟ್‌ನಲ್ಲೂ ವೇಗವರ್ಧಕವಾಗಬಲ್ಲ ಚಾಣಾಕ್ಷತನವನ್ನು ಸಚಿನ್ ಪ್ರದರ್ಶಿಸಿದ್ದರು. ಆದರೆ, ಕೊನೆಯ ಮೂರು ದಿನ ಪಿಚ್‌ ವರ್ತಿಸಿದ ರೀತಿ ಸಚಿನ್ ತಮ್ಮ ನಾಯಕತ್ವವನ್ನೇ ತ್ಯಜಿಸುವ ಯೋಚನೆ ಮಾಡಲು ಕಾರಣವಾದದ್ದು ಇತಿಹಾಸ.

ಪಾಕಿಸ್ತಾನ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಇಂಜಮಾಮ್ ಉಲ್ ಹಲ್ ಇದೇ ಪಂದ್ಯವನ್ನು ಉಲ್ಲೇಖಿಸಿ, ಮೊನ್ನೆ ಭಾರತವು ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ಎರಡೇ ದಿನಗಳಲ್ಲಿ ಗೆದ್ದದ್ದನ್ನು ಟೀಕಿಸಿದರು. ಆಗ ಪಿಚ್‌ ಕುರಿತು ಭಾರತದ ಎಷ್ಟೋ ಆಟಗಾರರು, ಹಿರಿಯರ ಪರಿಣತರು ತಗಾದೆ ತೆಗೆದಿದ್ದರು. ಈಗ ಸ್ಪಿನ್ನರ್‌ಗಳನ್ನು ಶ್ಲಾಘಿಸಿದರೆ ಹೇಗೆ ಎನ್ನುವುದು ಇಂಜಮಾಮ್ ವಾದ.

ಇಂಗ್ಲೆಂಡ್ ಎದುರು ಮೂರನೇ ಟೆಸ್ಟ್ ಅನ್ನು ಭಾರತ ಎರಡನೇ ದಿನದಾಟದ ರಾತ್ರಿ ಊಟದ ಹೊತ್ತಿಗೆ ಗೆದ್ದಿತೆನ್ನುವುದು ಅನೇಕರು ಮಾತು ಹರಿಬಿಡಲು ಕಾರಣವಾಗಿದೆ. ಅದು ಸಹಜವೇ. 54 ವರ್ಷಗಳ ನಂತರ ಇಷ್ಟು ಕಡಿಮೆ ಅವಧಿಯಲ್ಲಿ ಟೆಸ್ಟ್‌ ಪಂದ್ಯವೊಂದು ಮುಗಿದರೆ ಹೀಗೆಲ್ಲ ಮಾತನಾಡುವುದು ಅಚ್ಚರಿಯೇನಲ್ಲ. ಅದೇ ಪಂದ್ಯದ ವಿಂಡೀಸ್‌ನ ಎರಡನೇ ಇನಿಂಗ್ಸ್‌ನ ಕೊನೆಯ ವಿಕೆಟ್ ಜತೆಯಾಟದ ಬಗೆಗೆ ಇಂಜಮಾಮ್ ಬೆಳಕು ಚೆಲ್ಲುವುದೇ ಇಲ್ಲ. ಮರ್ಲನ್ ಧಿಲ್ಲೋನ್ ಒಂದು ತುದಿಯಲ್ಲಿ. ಇನ್ನೊಂದೆಡೆ ಕರ್ಟ್ಲಿ ಆಂಬ್ರೂಸ್. ಧಿಲ್ಲೋನ್‌ಗೆ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಬ್ಯಾಟ್‌ ಬೀಸಿದರು. ಮೂರು ಎಸೆತಗಳು ಕನೆಕ್ಟ್ ಆದವು. ಎಲ್ಲವೂ ಬೌಂಡರಿ. ಕೆಟ್ಟದಾಗಿ ಮಾಡಿದ ಒಂದು ಪುಲ್ ಕೂಡ ಬೌಂಡರಿ ಗೆರೆ ದಾಟಬೇಕೆ? 21 ರನ್‌ಗಳ ಅವರ ಕಾಣ್ಕೆ ವಿಂಡೀಸ್ ತಂಡ ಕೊನೆಯ ವಿಕೆಟ್‌ಗೆ 33 ರನ್‌ಗಳು ಹರಿದುಬರಲು ಕಾರಣವಾಯಿತು. ಒಂದು ವೇಳೆ ಅವರು ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ಔಟಾಗಿದ್ದಿದ್ದರೆ, ವಿಂಡೀಸ್‌ ತಂಡದ ಒಟ್ಟು ಲೀಡ್ 86 ರನ್‌ಗಳಿಗೇ ನಿಲ್ಲುತ್ತಿತ್ತು.

ಕ್ರಿಕೆಟ್‌ನಲ್ಲಿ ಇಂತಹ ಅನಿಶ್ಚಿತತೆಗಳು ಇರುತ್ತವೆ, ಇರಬೇಕು. ಹಾಗೆಯೇ ಪಿಚ್‌ ಕೂಡ. ಇಂಗ್ಲೆಂಡ್‌ಗೋ, ವಿಂಡೀಸ್‌ಗೋ, ನ್ಯೂಜಿಲೆಂಡ್‌ಗೋ ಹೋಗಿ ಭಾರತದ ಬ್ಯಾಟ್ಸ್‌ಮನ್‌ಗಳು ವೇಗಿಗಳ ಸ್ವಿಂಗ್‌ಗೆ ಹೊಂದಿಕೊಂಡು ಆಡಲು ತಡಕಾಡುವುದಿಲ್ಲವೇ? ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಎದುರು ಒಂದೇ ಇನಿಂಗ್ಸ್‌ನಲ್ಲಿ ಭಾರತದ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ತರಗೆಲೆಗಳಂತೆ ಉದುರಲಿಲ್ಲವೇ? ನ್ಯೂಜಿಲೆಂಡ್‌ನ ಹೊಸ ಪ್ರತಿಭೆ, ಆರು ಅಡಿ ಎಂಟು ಇಂಚು ಎತ್ತರದ ಕೈಲ್ ಜೆಮಿಸನ್ ಹಾಕಿದ ಎದೆಮಟ್ಟಕ್ಕೆ ಬರುತ್ತಿದ್ದ ಎಸೆತಗಳನ್ನು ಆಡಲು ಟೆಸ್ಟ್‌ ಒಂದರಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಕಳೆದ ವರ್ಷ ತಡಕಾಡಿದ್ದನ್ನೂ ಇಂಜಮಾಮ್ ಗಮನಿಸಿರಬೇಕು.

ಮೊಟೆರಾದ ಕ್ರೀಡಾಂಗಣದಲ್ಲಿ ಪಿಂಕ್ ಬಾಲ್ ಟೆಸ್ಟ್‌ ಆಡಲು ಭಾರತ ಸಿದ್ಧಪಡಿಸಿದ ಪಿಚ್‌ ಮೇಲೆ ಈಗ ಮಾರಿಕಣ್ಣು. ಪಂದ್ಯ ಮುಗಿದು ವಾರವಾಗುತ್ತಾ ಬಂದರೂ ಕಲ್ಲೆಸೆಯುವವರೇನೂ ಕಡಿಮೆಯಾಗಿಲ್ಲ. ಪರ–ವಿರೋಧ ಅಭಿಪ್ರಾಯಗಳು ಹೊಮ್ಮುತ್ತಲೇ ಇವೆ. ವಿವಿಎಸ್ ಲಕ್ಷ್ಮಣ್, ‘ಇದು ಟೆಸ್ಟ್‌ ವಿಕೆಟ್ ಅಲ್ಲ. ಯಾಕೆಂದರೆ, ಎರಡೇ ದಿನಕ್ಕೆ ಆಟ ಮುಗಿಯಿತಲ್ಲ’ ಎಂದು ಮುಖ ಗಂಟಿಕ್ಕಿದ್ದಾರೆ. ಇಂಗ್ಲೆಂಡ್‌ನ ಮೈಕಲ್ ವಾನ್, ಅಲಿಸ್ಟರ್ ಕುಕ್ ಕಡೆಯಿಂದ ‘ಇಂತಹ ಪಿಚ್‌ ವಿಷಯದಲ್ಲಿ ಐಸಿಸಿ ಸುಮ್ಮನಿರಕೂಡದು’ ಎಂಬ ವಾಗ್ದಾಳಿ. ಅವರದ್ದೇ ದೇಶದ ಇನ್ನೊಬ್ಬ ಪ್ರತಿಭಾವಂತ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್, ‘ಎಲ್ಲ ತರಹದ ಪಿಚ್‌ ಮೇಲೂ ಆಡುವುದನ್ನು ಕಲಿಯಬೇಕು’ ಎಂದು ಅರ್ಥಪೂರ್ಣ ಕಿವಿಮಾತು ಹಾಕಿದ್ದಾರೆ.

ಚೂಯಿಂಗ್ ಗಮ್ ಜಗಿಯುತ್ತಲೇ ಬೌಲರ್‌ಗಳ ಜಂಘಾಬಲ ಉಡುಗಿಸುವಂತೆ ಒಂದು ಕಾಲದಲ್ಲಿ ಆಡುತ್ತಿದ್ದ ವಿಂಡೀಸ್‌ನ ವಿವಿಯನ್ ರಿಚರ್ಡ್ಸ್ ಕೂಡ ‘ಎಲ್ಲ ದೇಶದವರೂ ತಮಗೆ ಅನುಕೂಲವಾಗುವ ಪಿಚ್‌ಗಳನ್ನೇ ಮಾಡಿಕೊಳ್ಳುವುದು. ಅದರಲ್ಲಿ ತಪ್ಪೇನಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ನ ಬೌಲರ್ ಜೋಫ್ರಾ ಆರ್ಚರ್ ಸಹ, ‘ನಮ್ಮ ನೆಲದಲ್ಲೂ ಕಡಿಮೆ ಸ್ಕೋರ್‌ಗೆ ಔಟ್‌ ಮಾಡಿದ್ದೇವಲ್ಲ’ ಎಂದು ಸ್ಥಿತಪ್ರಜ್ಞೆಯ ನುಡಿ ತುಳುಕಿಸಿದ್ದಾರೆ.

ಕ್ರಿಕೆಟ್ ಈಗ ಬ್ಯಾಟ್ಸ್‌ಮನ್‌ಗಳ ಆಟವಾಗಿಯೇ ಜನಮಾನಸದಲ್ಲಿ ನೆಲೆಸಿದೆ. ಹೊಡೆಯಬೇಕು, ನೆಲೆನಿಂತು ಸುದೀರ್ಘ ಕಾಲ ದಣಿಯಬೇಕು ಎನ್ನುವುದು ಮಂತ್ರ. ಶತಕಗಳು, ಬೌಂಡರಿಗಳು, ಸಿಕ್ಸರ್‌ಗಳು ಹೊಮ್ಮುತ್ತಿದ್ದರೆ ರಂಜನೆ. ವಿಕೆಟ್‌ಗಳು ಉರುಳಿದರೆ ಸೂತಕದ ಕಳೆ. ಇದೇ ಭಾವನೆ ಬೌಲರ್‌ಗಳ ಕರಾಮತ್ತನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸದಂತೆ ಮಾಡಿರುವುದು. ಅಹಮದಾಬಾದ್ ಟೆಸ್ಟ್‌ನಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಇಂಗ್ಲೆಂಡ್‌ನ ನಾಯಕ ಜೋ ರೂಟ್ ಚೆನ್ನಾಗೇ ಆಡಿದರು. ರೂಟ್ ಬರೀ 6 ಓವರ್‌ನಲ್ಲಿ 5 ವಿಕೆಟ್ ಪಡೆದು ಮೊದಲ ಇನಿಂಗ್ಸ್‌ನಲ್ಲಿ ಬೀಗಿದರು. ಅದೇ ಪಿಚ್‌ನಲ್ಲೇ ಅಲ್ಲವೇ ಉಭಯ ತಂಡದವರೂ ಆಡಿದ್ದು? ಹಾಗಿದ್ದಮೇಲೆ ಸರಿಯಿಲ್ಲ ಎಂದು ಕೊರಗುವುದರಲ್ಲಿ ಅರ್ಥವಿಲ್ಲ.

ಆಸ್ಟ್ರೇಲಿಯಾಗೆ ಹೋಗಿ, ಅವರ ಮಾತಿನ ಅಂಬುಗಳ ಜತೆಗೆ ವೇಗದ ಎಸೆತಗಳನ್ನು ಹೊಂದಾಣಿಕೆಯಿಂದ ಎದುರಿಸಿ ಭಾರತ ಸರಣಿ ಗೆದ್ದು ಬಂದದ್ದೇ ಕೆಚ್ಚೆದೆಯ ಧೋರಣೆಯಿಂದ. ಇಂಗ್ಲೆಂಡ್ ಪಾಲಿಗೆ ಅಶ್ವಿನ್ ಅಚ್ಚರಿಯ ಎಸೆತಗಳು ಹಾಗೂ ಟೆಸ್ಟ್‌ ಮಟ್ಟಿಗೆ ಹೊಸ ಪ್ರತಿಭೆಯಾದ ಅಕ್ಷರ್ ಪಟೇಲ್ ಹಾಕಿದ ‘ಡ್ರಿಫ್ಟಿಂಗ್’ (ಸ್ಪಿನ್ ಆಗದೆ ಸರಕ್ಕನೆ ನುಗ್ಗಿಬರುವಂಥದು) ಎಸೆತಗಳು ನುಂಗಲಾರದ ತುತ್ತಾದವು. ಅಂತಹ ಎಸೆತಗಳನ್ನು ಎದುರಿಸುವ ಬ್ಯಾಟ್ಸ್‌ಮನ್‌ಷಿಪ್ ರೂಢಿಸಿಕೊಳ್ಳಬೇಕಿದೆ ಎಂಬ ಅಭಿಪ್ರಾಯ ಹೆಚ್ಚು ತೂಕದ್ದಾದೀತು.

ಅನಿಶ್ಚಿತತೆಯ ಆಟದಲ್ಲಿ ಪಿಚ್‌ನ ವಿಲಕ್ಷಣ ವರ್ತನೆಯನ್ನೂ ಸಹಿಸಿಕೊಳ್ಳದೇ ವಿಧಿಯಿಲ್ಲ. ಈ ಅಭಿಪ್ರಾಯವೂ ಕೆಲವರಿಂದ ಕೇಳಿಬಂದಿದೆ. ಕೊನೆಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ಪ್ರತಿದಾಳಿ ಹೇಗಿರುವುದೋ ಎಂಬ ಕುತೂಹಲವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.