ADVERTISEMENT

PV Web Exclusive: ಮ್ಯಾಕ್ಸ್‌ವೆಲ್ 93 ಸಿಕ್ಸರ್‌ಗಳಲ್ಲಿ ಮೊನ್ನೆಯದು ಎರಡು

ಆಟದಮನೆ

ವಿಶಾಖ ಎನ್.
Published 14 ಏಪ್ರಿಲ್ 2021, 8:59 IST
Last Updated 14 ಏಪ್ರಿಲ್ 2021, 8:59 IST
ಮ್ಯಾಕ್ಸ್‌ವೆಲ್ ಆಟದ ವೈಖರಿ (ಪಿಟಿಐ ಚಿತ್ರ)
ಮ್ಯಾಕ್ಸ್‌ವೆಲ್ ಆಟದ ವೈಖರಿ (ಪಿಟಿಐ ಚಿತ್ರ)   

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪದೇ ಪದೇ ಪಾತ್ರ ಬದಲಾವಣೆಯಾಗುವುದಕ್ಕೆ ಹೊಂದಿಕೊಳ್ಳಲು ತಡಕಾಡಿದ್ದಾಗಿ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿಕೊಂಡಿದ್ದರು. 170 ಎಸೆತಗಳ ನಂತರ ಈ ಚುಟುಕು ಕ್ರಿಕೆಟ್‌ನಲ್ಲಿ ಮತ್ತೆ ಒಂದು ಸಿಕ್ಸರ್ ಗಳಿಸಿ, ಲಯಕ್ಕೆ ಮರಳಿರುವ ಅವರು ಸಂದೇಶವೊಂದನ್ನು ರವಾನಿಸಿದ್ದಾರೆ. ಅವರ ಐಪಿಎಲ್ ಆಟದ ಏರಿಳಿತಗಳ ಪರಾಮರ್ಶೆ ಇಲ್ಲಿದೆ...

ಕೃಣಾಲ್ ಪಾಂಡ್ಯ ಹಾಕಿದ ಎಸೆತವೊಂದನ್ನು ಲಾಂಗ್‌ಆನ್ ಕಡೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಹೊಡೆದರು. ಅದು ಕನೆಕ್ಟ್ ಆದ ರೀತಿ ಹಾಗೂ ಚೆಂಡು ಸಾಗಿದ ಪರಿ ಎರಡನ್ನೂ ದಿಟ್ಟಿಸಿ ನೋಡುತ್ತಿದ್ದುದು ಇನ್ನೊಂದು ತುದಿಯಲ್ಲಿ ಆಡುತ್ತಿದ್ದ ವಿರಾಟ್ ಕೊಹ್ಲಿ. ಚಾವಣಿಯ ಮೇಲಕ್ಕೆ ಹೋಗಿ ಬಿದ್ದ ಚೆಂಡನ್ನು ನೋಡಿದ ಅನೇಕರ ಕಣ್ಣುಗಳಲ್ಲಿ ಸೋಜಿಗ. ನೂರು ಮೀಟರ್ ದೂರಕ್ಕೆ ಹಾಗೆ ಸಿಕ್ಸರ್ ಹೊಡೆದ ಗ್ಲೆನ್ ಮ್ಯಾಕ್‌ವೆಲ್ ನಿಟ್ಟುಸಿರೊಂದನ್ನು ಹೊರಸೂಸಿದರು. ಅದಕ್ಕೆ ಕಾರಣವಿಷ್ಟೆ: 1079 ದಿನಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಅವರಿಗೆ ಸಿಕ್ಸರ್ ಹೊಡೆಯಲು ಸಾಧ್ಯವಾದದ್ದು. ಸಿಕ್ಸರ್ ಹೊಡೆಯಲೇ ಜನ್ಮತಾಳಿರುವವರಂತೆ ಆಡುವ ಆಟಗಾರನೊಬ್ಬ ಇಷ್ಟು ದೀರ್ಘಾವಧಿಯ ನಂತರ ಅಂಥದೊಂದು ಹೊಡೆತ ಹೊಡೆಯುವುದು ಅಚ್ಚರಿಯೇ ಹೌದು.

ಕಳೆದ ವರ್ಷ ಯುಎಇಯಲ್ಲಿ ನಡೆದಿದ್ದ ಐಪಿಎಲ್‌ನ 13ನೇ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡವನ್ನು ಮ್ಯಾಕ್ಸ್‌ವೆಲ್ ಪ್ರತಿನಿಧಿಸಿದ್ದರು. 10 ಕೋಟಿ ರೂಪಾಯಿಗೂ ಹೆಚ್ಚು ಹಣಕ್ಕೆ ಅವರನ್ನು ತಂಡ ಹರಾಜಿನಲ್ಲಿ ಖರೀದಿಸಿತ್ತು. ಆ ಋತುವಿನಲ್ಲಿ ಒಂದೂ ಸಿಕ್ಸರ್ ಹೊಡೆಯಲು ಅವರಿಗೆ ಸಾಧ್ಯವಾಗಿರಲಿಲ್ಲ. ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡಿದ್ದ ಅವರನ್ನು ಭಾರತದ ಒಂದು ಕಾಲದ ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ‘ದುಬಾರಿ ಚಿಯರ್‌ಲೀಡರ್’ ಎಂದು ಗೇಲಿ ಮಾಡಿದ್ದರು. ಪಂಜಾಬ್ ತಂಡ ಅವರನ್ನು ಬಿಡುಗಡೆಗೊಳಿಸಿದ ಮೇಲೆ ಹದಿನಾಲ್ಕೂ ಕಾಲು ಕೋಟಿ ರೂಪಾಯಿ ಮೊತ್ತದ ಹಣವನ್ನು ವ್ಯಯಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಅವರನ್ನು ಖರೀದಿಸಿತು. ಅವರು ಈ ಋತುವಿನಲ್ಲಿ ಹೇಗೆ ಆಡುವರೋ ಎಂಬ ಪ್ರಶ್ನೆ ಎದುರಲ್ಲಿತ್ತು. ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಸಮ್ಮುಖದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಆ ಪ್ರಶ್ನೆಗೆ ಒಳ್ಳೆಯ ಇನಿಂಗ್ಸ್‌ನಿಂದ ಮ್ಯಾಕ್ಸ್‌ವೆಲ್ ಉತ್ತರ ನೀಡಿದ್ದು ಅನೂಹ್ಯ ಗಳಿಗೆ.

ADVERTISEMENT

2018ರ ಏಪ್ರಿಲ್‌ನಲ್ಲಿ ಐಪಿಎಲ್‌ನಲ್ಲಿ ಸಿಕ್ಸರ್ ಹೊಡೆದ ನಂತರ 18 ಪಂದ್ಯಗಳಲ್ಲಿ ಇನ್ನು ಒಂದು ಸಿಕ್ಸರ್ ಹೊಡೆಯಲು ಮ್ಯಾಕ್ಸ್‌ವೆಲ್‌ಗೆ ಸಾಧ್ಯವಾಗಿರಲಿಲ್ಲ. 170 ಎಸೆತಗಳಲ್ಲಿ ಸಿಕ್ಸರ್ ಬರ ಕಾಡಿದ ಮೇಲೆ ಅದನ್ನು ಮೀರಿ ಆಡಿದ್ದು ಅವರ ಉತ್ಕಟತೆಗೆ ಸಾಕ್ಷಿ.

2019ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧದ ಟ್ವೆಂಟಿ20 ಕ್ರಿಕೆಟ್ ಪಂದ್ಯಕ್ಕೆ ಮುನ್ನ ಅಭ್ಯಾಸ ಮಾಡಿದ ಸಂದರ್ಭ. ಪ್ರಜಾವಾಣಿ ಚಿತ್ರ: ಆರ್. ಶ್ರೀಕಂಠ ಶರ್ಮ

ಕಳೆದ ವರ್ಷ ಐಪಿಎಲ್‌ನಲ್ಲಿ ಆಡುವ ಮೊದಲು ಮ್ಯಾಕ್ಸ್‌ವೆಲ್ ಇಂಗ್ಲೆಂಡ್‌ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿ ಬಂದಿದ್ದರು. 90 ಎಸೆತಗಳಲ್ಲಿ 108 ರನ್‌ಗಳನ್ನು ಕೊನೆಯ ಏಕದಿನದ ಪಂದ್ಯದಲ್ಲಿ ಹೊಡೆದು, ಸರಣಿ ಗೆಲುವಿಗೆ ಕಾರಣರಾಗಿದ್ದರು. ಅಲೆಕ್ಸ್ ಕ್ಯಾರಿ ಜತೆಗೂಡಿ ಗುರಿಯ ಬೆನ್ನುಹತ್ತಿದ ಸಂದರ್ಭದಲ್ಲಿ ಏಳನೇ ಬ್ಯಾಟ್ಸ್‌ಮನ್ ಆಗಿ ಅವರು ಅಂಥದೊಂದು ಇನಿಂಗ್ಸ್ ಆಡಿದ್ದರು. ಸಹಜವಾಗಿಯೇ ಪಂಜಾಬ್ ತಂಡಕ್ಕೆ ಅವರ ಮೇಲೆ ನೆಚ್ಚಿಗೆ ಇತ್ತು. 2014ರ ಐಪಿಎಲ್‌ನಲ್ಲಿ ಮಾತ್ರ ಪಂಜಾಬ್ ತಂಡ ಐಪಿಎಲ್ ಫೈನಲ್ಸ್ ಪ್ರವೇಶಿಸಿದ್ದು. ಆ ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ 552 ರನ್‌ಗಳ ಕಾಣಿಕೆ ಸಲ್ಲಿಸಿದ್ದರು. 2017ರಲ್ಲಿ ನಾಯಕನಾಗಿದ್ದಾಗಲೂ ಅವರು ತಮ್ಮ ಪಾತ್ರವನ್ನು ಅನುಭವಿಸಿದ್ದರು. ಬೌಲಿಂಗ್‌ನಲ್ಲೂ ಉತ್ತಮ ಲಯದಲ್ಲಿದ್ದರು. ಕೆಲವು ಪಂದ್ಯ ಪುರುಷೋತ್ತಮ ಪ್ರಶಸ್ತಿಗಳೂ ಆ ಋತುವಿನಲ್ಲಿ ಸಂದಿದ್ದವು. 173ರ ಸ್ಟ್ರೈಕ್‌ ರೇಟ್‌ನಲ್ಲಿ 310 ರನ್‌ಗಳನ್ನು ಗಳಿಸಿದ್ದೇ ಅಲ್ಲದೆ, ಏಳು ವಿಕೆಟ್‌ಗಳನ್ನು 6.57ರ ಎಕಾನಮಿ ರೇಟ್‌ ಕಾಯ್ದುಕೊಂಡು ಪಡೆದದ್ದು ಸಾಧನೆಯೇ ಸರಿ.

ಕಳೆದ ವರ್ಷ ಮ್ಯಾಕ್ಸ್‌ವೆಲ್ ಪಂಜಾಬ್ ತಂಡದ ಪರವಾಗಿ ಮೊದಲ ಏಳು ಪಂದ್ಯಗಳ ಪೈಕಿ ಮೂರರಲ್ಲಿ ಔಟಾಗದೆ ಉಳಿದಿದ್ದರಾದರೂ ಹೆಚ್ಚು ರನ್‌ಗಳ ಕಾಣಿಕೆ ಸಲ್ಲಿಸುವ ಅವಕಾಶ ಸಿಕ್ಕಿರಲಿಲ್ಲ. ಐದನೇ ಕ್ರಮಾಂಕದಲ್ಲಿ ಆಡುವುದು ಅವರ ಜವಾಬ್ದಾರಿಯಾಗಿತ್ತು. ನಾಲ್ಕನೇ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುತ್ತಿದ್ದ ನಿಕೊಲಸ್ ಪೂರನ್ ಒಳ್ಳೆಯ ಫಾರ್ಮ್‌ನಲ್ಲಿದ್ದರು. ಅವರ ಯಶಸ್ಸೇ ಮ್ಯಾಕ್ಸ್‌ವೆಲ್‌ಗೆ ಅವಕಾಶದ ಬಾಗಿಲನ್ನು ಅರ್ಧ ತೆರೆದಿತ್ತೇ ಎಂಬ ಪ್ರಶ್ನೆಯನ್ನೂ ಕ್ರಿಕೆಟ್‌ನ ಕೆಲವು ಪಂಡಿತರು ಆ ಟೂರ್ನಿಯ ನಡುಘಟ್ಟದಲ್ಲೇ ಎತ್ತಿದ್ದರು.

‘ಆಸ್ಟ್ರೇಲಿಯಾ ತಂಡದ ಪರವಾಗಿ ಆಡುವಾಗ ನನ್ನ ಪಾತ್ರವೇನು ಎನ್ನುವ ಸ್ಪಷ್ಟತೆ ಇರುತ್ತದೆ. ನಾನು ಐದನೇ ಅಥವಾ ಆರನೇ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿಯುವುದಾದರೆ ಮೇಲಿನ ಕ್ರಮಾಂಕದವರ ನಂತರ ಹೇಗೆ ಆಡಬೇಕು ಎನ್ನುವ ಕುರಿತು ಗೊಂದಲ ಇರುವುದಿಲ್ಲ. ಐಪಿಎಲ್‌ನಲ್ಲಿ ಹಾಗಲ್ಲ. ಪದೇ ಪದೇ ನಾನು ಪಾತ್ರ ಬದಲಾವಣೆಗೆ ಒಗ್ಗಿಕೊಳ್ಳಬೇಕಾದ ಸವಾಲು ಎದುರಿಸಿರುವೆ. ಕಳೆದ ವರ್ಷ ಆ ಸವಾಲು ಹೆಚ್ಚೇ ದೊಡ್ಡದಾಯಿತು. ಹಿಂದೆಯೂ ನನ್ನ ಪಾತ್ರ ಏನು ಎಂಬ ಗೊಂದಲ ಮೂಡಿದ್ದು ನಿಜವೇ ಆದರೂ ಆಟದ ಲಯ ಹಾಳಾಗಲು ಬಿಟ್ಟಿರಲಿಲ್ಲ. ಕಳೆದ ವರ್ಷ ನನಗೂ ಮಾಡಿದ ತಪ್ಪುಗಳ ಅರಿವಾಯಿತು. ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ. ನನ್ನ ಫಾರ್ಮ್ ಹಾಳಾಗಿದ್ದು ಏಕೆ ಎನ್ನುವುದರ ಸ್ಪಷ್ಟತೆ ಆಡುವ ನನಗಿದ್ದರೆ ಸಾಕು’ ಎಂದು ಮ್ಯಾಕ್ಸ್‌ವೆಲ್ ಪ್ರತಿಕ್ರಿಯಿಸಿದ್ದರು.

ಐಪಿಎಲ್ ಎನ್ನುವುದು ಅಚ್ಚರಿಗಳ ಮೂಟೆ. 2019ರಲ್ಲಿ ಬೆಂಚು ಕಾದಿದ್ದ ದೇವದತ್ತ ಪಡಿಕ್ಕಲ್ ಕಳೆದ ಐಪಿಎಲ್‌ನಲ್ಲಿ ಆರ್‌ಸಿಬಿಗೆ ದೊಡ್ಡ ಕಾಣ್ಕೆ ನೀಡಿದ್ದನ್ನು ಕಂಡೆವು. ಆದರೆ, ಕೊನೆಯಲ್ಲಿ ಸತತ ಸೋಲುಗಳನ್ನು ಕಂಡು ತಂಡವು ಮತ್ತೆ ಹಳೆಯ ಚಾಳಿಗೆ ಮರಳಿತ್ತು. ಎಬಿ ಡಿವಿಲಿಯರ್ಸ್‌ ಹಾಗೂ ವಿರಾಟ್ ಕೊಹ್ಲಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದರೆ ತಂಡದ ಸಮತೋಲನ ಇನ್ನಷ್ಟು ಸುಧಾರಿಸೀತು ಎನ್ನುವುದು ಆರ್‌ಸಿಬಿ ನಿರ್ದೇಶಕರ ಲೆಕ್ಕಾಚಾರ. ಅದಕ್ಕೇ ದೊಡ್ಡ ಮೊತ್ತ ಕೊಟ್ಟು ಮ್ಯಾಕ್ಸ್‌ವೆಲ್‌ ಅವರನ್ನು ಖರೀದಿಸಿದ್ದು. ಆರ್‌ಸಿಬಿ ಡೈರೆಕ್ಟರ್ ಆಫ್ ಕ್ರಿಕೆಟ್ ಮೈಕ್ ಹಸನ್ ಇದನ್ನೇ ಹೇಳಿದ್ದರು.

ಇದುವರೆಗೆ 83 ಐಪಿಎಲ್‌ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ 93 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. 121 ಬೌಂಡರಿಗಳು ಅವರ ಖಾತೆಗೆ ಸೇರಿವೆ. ಕಳೆದ ಋತುವಿನಲ್ಲಿ 9 ಬೌಂಡರಿಗಳನ್ನಷ್ಟೇ ಅವರು ಹೊಡೆದಿದ್ದರು. 2014ರಲ್ಲಿ 36 ಸಿಕ್ಸರ್‌ಗಳು, 48 ಬೌಂಡರಿಗಳು ಅವರ ಬ್ಯಾಟ್‌ನಿಂದ ಹೊಮ್ಮಿದ್ದವು. 2017ರಲ್ಲಿ 26 ಸಿಕ್ಸರ್‌ಗಳು, 19 ಬೌಂಡರಿಗಳಿಗೆ ಎದುರಾಳಿಗಳು ಸಾಕ್ಷಿಗಳಾಗಿದ್ದರು. 2018ರಲ್ಲೂ 9 ಸಿಕ್ಸರ್‌ಗಳನ್ನು ಅವರು ದಾಖಲಿಸಿದ್ದು ಇತಿಹಾಸ.

‘ನಾಯಕನ ಎದುರು ಸಿಕ್ಸರ್ ಹೊಡೆದು, ಅವರ ಮನಗೆಲ್ಲುವುದು ದೊಡ್ಡ ಸಂಗತಿಯೇ. ವಿರಾಟ್‌ ಕೊಹ್ಲಿ ಅಂಥದೊಂದು ಮನೋಬಲ ತುಂಬಿದರು’ ಎಂದು ಮ್ಯಾಕ್ಸ್‌ವೆಲ್ ಚೆನ್ನೈನ ಪಿ.ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಗೆದ್ದಮೇಲೆ ಹೇಳಿದ್ದರು. ಆ ಪಂದ್ಯದಲ್ಲಿ ಎರಡು ಸಿಕ್ಸರ್‌ಗಳು ಸೇರಿದ 39 ರನ್‌ಗಳನ್ನು ಅವರು 28 ಎಸೆತಗಳಲ್ಲಿ ಗಳಿಸಿ, ಲಯಕ್ಕೆ ಮರಳಿದ್ದಾರೆ. ಈ ಐಪಿಎಲ್‌ ಋತುವಿನಲ್ಲಿ ಅವರ ಆಟದ ವೈಖರಿ, ಸಿಕ್ಸರ್ ಸುರಿಮಳೆ ನೋಡಲು ಅಭಿಮಾನಿಗಳಂತೂ ಕಾತರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.