ಹೋದ ವಾರ ಸಿಡ್ನಿಯಲ್ಲಿ ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಆರಂಭವಾಗುವ ಮುನ್ನ ಹನುಮ ವಿಹಾರಿ ಬದಲು ಕೆ.ಎಲ್. ರಾಹುಲ್ ಆಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ರಾಹುಲ್ ಅಭ್ಯಾಸದ ಸಂದರ್ಭದಲ್ಲಿ ಗಾಯಗೊಂಡು ಹೊರಬಿದ್ದಾಗಲೂ ಹನುಮವಿಹಾರಿ ಬದಲು ಯಾರಿಗಾದರೂ ಅವಕಾಶ ಕೊಡಬಹುದೇ ಎಂದು ತಡಕಾಡಲಾಗಿತ್ತು.
ಆದರೆ ಈಗ ನೋಡಿ; ’ಅಯ್ಯೋ ಕೊನೆಯ ಟೆಸ್ಟ್‌ನಲ್ಲಿ ಹನುಮವಿಹಾರಿ ಆಡುವುದಿಲ್ಲವಂತೆ. ಅವರ ಸ್ಥಾನದಲ್ಲಿ ಯಾರಿದ್ದಾರೆ. ಅವರಿದ್ದರೆ ಚೆನ್ನಾಗಿತ್ತಲ್ಲ‘ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಆರು ದಿನಗಳ ಅಂತರದಲ್ಲಿ ಬದಲಾದ ಸನ್ನಿವೇಶವಿದು.
ಅಪರೂಪಕ್ಕೆಂಬಂತೆ ಟೆಸ್ಟ್ ಪಂದ್ಯವೊಂದರ ಐದನೇ ದಿನದಾಟ ನೋಡುವ ಅವಕಾಶ ಕೊಟ್ಟಿದ್ದು ಈ ಪಂದ್ಯ. ಆದರೆ ಸಿಡ್ನಿಯಲ್ಲಿ ಐದನೇ ದಿನದಾಟದ ಪಿಚ್‌ನಲ್ಲಿ 161 ಎಸೆತಗಳನ್ನು ಎದುರಿಸುವುದೆಂದರೆ ಎಂಟೆದೆಯೇ ಇರಬೇಕು. ಆ ಪಂದ್ಯದಲ್ಲಿ ಈ ಪಿಚ್‌ನಲ್ಲಿಆಡಿದ ಎಲ್ಲ ಬ್ಯಾಟ್ಸ್‌ಮನ್‌ಗಳ ಮೈ ಕೈ ಮೇಲೆ ಚೆಂಡಿನ ಪೆಟ್ಟಿಗೆ ಮೂಡಿದ ಹಸಿರು ಹಚ್ಚೆ ಗುರುತುಗಳು ಇದ್ದೇ ಇವೆ. ಪ್ರಸ್ತುತ ವಿಶ್ವಶ್ರೇಷ್ಠ ಬೌಲರ್‌ಗಳಾಗಿರುವ ಪ್ಯಾಟ್ ಕಮಿನ್ಸ್, ಜೋಷ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ನಿಖರ ಮತ್ತು ಯಮವೇಗದ ಎಸೆತಗಳನ್ನು ಎದುರಿಸಿದ್ದು ಸಣ್ಣ ಮಾತೇನಲ್ಲ. ಇಂತಹ ಛಾತಿ ಹನುಮವಿಹಾರಿಗೆ ಬಂದಿದ್ದು ಹೇಗೆ?
ಅವರಲ್ಲಿ ಅಂತಹ ಶಕ್ತಿ ತುಂಬಿದ್ದು ಇಬ್ಬರು. ಮೊದಲನೇಯವರು ಹನುಮವಿಹಾರಿಯ ತಾಯಿ ವಿಜಯಲಕ್ಷ್ಮೀ ಅವರು. ಇನ್ನೊಬ್ಬರು ಖ್ಯಾತ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್.
ಆಂಧ್ರಪ್ರದೇಶದ ಕಾಕಿನಾಡದ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಹನುಮವಿಹಾರಿ ಬದುಕು ಹೂವಿನ ಹಾದಿಯಾಗಿರಲಿಲ್ಲ. ಆರನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡುವ ಆಸಕ್ತಿ ಬೆಳೆಯಿತು. ಸಿಂಗ್ರೇಣಿ ಗಣಿ ಉದ್ಯಮದಲ್ಲಿ ಉದ್ಯೋಗಿಯಾಗಿದ್ದ ತಂದೆ ಸತ್ಯನಾರಾಯಣ ವಿಹಾರಿ ಮಗನ ಆಸಕ್ತಿಯನ್ನು ಗಮನಿಸಿದರು. ಆದರೆ ಸ್ಥಳೀಯವಾಗಿ ಕ್ರಿಕೆಟ್ ಸೌಲಭ್ಯಗಳು ಅಷ್ಟೇನೂ ಚೆನ್ನಾಗಿರಲಿಲ್ಲ.
’ಒಂಬತ್ತು ವರ್ಷದವನಿದ್ದಾಗಲೇ ಕ್ರಿಕೆಟಿಗನಾಗಿಯೇ ಬೆಳೆಯಬೇಕು ಎಂಬ ಭಾವನೆ ಮೂಡಿತ್ತು. ಅದಕ್ಕಾಗಿಯೇ ನಮ್ಮ ಕುಟುಂಬವು ಹೈದರಾಬಾದ್‌ಗೆ ಸ್ಥಳಾಂತರಗೊಂಡಿತು. ತರಬೇತಿಯೂ ಸಿಕ್ಕಿತು. ಎಲ್ಲವೂ ಒಂದು ಹಂತಕ್ಕೆ ಬಂದು ನಾನೂ ಪುಟ್ಟ ಹೆಜ್ಜೆ ಇಡುವ ಹೊತ್ತಿಗೆ ಅಪ್ಪ ನಿಧನರಾದರು. ಆಗಿನ್ನೂ ನನಗೆ 12 ವರ್ಷ ಅಷ್ಟೇ. ಆದರೆ ಅಮ್ಮನ ದಿಟ್ಟತನ ಮತ್ತು ಯೋಚನಾಶಕ್ತಿ ನಮ್ಮ ಕುಟುಂಬವನ್ನು ಕಾಪಾಡಿತು. ಹೋಮ್‌ಮೇಕರ್ ಆಗಿಯೂ ಅವರು ಅಪ್ಪನ ಪಿಂಚಣಿಯಲ್ಲಿಯೇ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿದರು. ಅಕ್ಕನಿಗೆ ಉತ್ತಮ ಶಿಕ್ಷಣ ಸಿಗುವಂತೆ ನೋಡಿಕೊಂಡರು. ನನ್ನ ಕ್ರಿಕೆಟ್ ಪ್ರೀತಿಗೆ ಚ್ಯುತಿ ಬರದಂತೆ ನೋಡಿಕೊಂಡರು. ಭಾರತ ತಂಡದಲ್ಲಿ ನಾನು ಆಡಬೇಕು ಎಂಬ ಅಪ್ಪನ ಕನಸು ಈಡೇರಲು ಅಮ್ಮನೇ ಕಾರಣ‘ ಎಂದು ಎರಡು ವರ್ಷಗಳ ಹಿಂದೆ ಟೆಸ್ಟ್‌ನಲ್ಲಿ ಮೊದಲ ಶತಕ ಗಳಿಸಿದಾಗ ಹನುಮವಿಹಾರ ಸಂದರ್ಶನವೊಂದರಲ್ಲಿ ಹೇಳಿದ್ದರು.
2010ರಲ್ಲಿ ಹೈದರಾಬಾದ್ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದರು. ದ್ವಾರಕಾ ರವಿತೇಜ ನಾಯಕತ್ವದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಕ್ರಮೇಣ ತಮ್ಮ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಅರ್ಧಶತಕಗಳನ್ನು, ಶತಕಗಳಲ್ಲಿ ಮತ್ತು ಶತಕಗಳನ್ನು ದ್ವಿಶತಕಗಳಲ್ಲಿ ಪರಿವರ್ತಿಸುವ ಕಲೆ ರೂಢಿಸಿಕೊಂಡರು. ಬಾಲ್ಯದಿಂದಲೂ ತಮಗೆ ಸ್ಪೂರ್ತಿಯಾಗಿದ್ದ ವಿವಿಎಸ್ ಲಕ್ಷ್ಮಣ್ ಅವರ ಸ್ಥಾನವನ್ನು ಹೈದರಾಬಾದ್ ಕ್ರಿಕೆಟ್ ತಂಡದಲ್ಲಿ ತುಂಬಿದರು.
ಮೂರು ವರ್ಷಗಳ ಹಿಂದೆ ಅವರು ಆಂಧ್ರಪ್ರದೇಶ ತಂಡಕ್ಕೆ ವಲಸೆ ಹೋದರು. ಅದರೆ ಅವರ ರನ್ ಗಳಿಕೆಯ ಶೈಲಿ ಬದಲಾಗಲಿಲ್ಲ. ದೇಶಿ ಕ್ರಿಕೆಟ್‌ನ ಶ್ರೇಷ್ಠ ಬೌಲರ್‌ಗಳ ಮುಂದೆ ಬಂಡೆಗಲ್ಲಿನಂತೆ ನಿಂತು ಆಡಿದ್ದು, ಆಗಿನ ಆಯ್ಕೆ ಸಮಿತಿ ಅಧ್ಯಕ್ಷ, ಆಂಧ್ರದವರೇ ಆಗಿದ್ದ ಎಂ.ಎಸ್.ಕೆ. ಪ್ರಸಾದ್ ಅವರನ್ನು ಸೆಳೆಯಿತು. 2018ರಲ್ಲಿ ಟೆಸ್ಟ್ ತಂಡದ ಬಾಗಿಲು ತೆರೆಯಿತು. ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ ಹನುಮವಿಹಾರಿ ಮೊದಲ ಇನಿಂಗ್ಸ್‌ನಲ್ಲಿ 56 ರನ್ ಗಳಿಸಿದರು.
ನಂತರದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರ ಬ್ಯಾಟ್‌ನಿಂದ ಅರ್ಧಶತಕವೂ ಸಿಡಿಯಲಿಲ್ಲ. ಆದರೆ ಅವರ ಕೌಶಲ ಮತ್ತು ತಾಳ್ಮೆಯ ಬ್ಯಾಟಿಂಗ್ ಗಮನ ಸೆಳೆಯಿತು. ಟೆಸ್ಟ್ ಪರಿಣತರಾಗಿ ಗುರುತಿಸಿಕೊಂಡರು. 2019ರ ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸವು ಅವರಿಗೆ ಅವರಿಸ್ಮರಣೀಯ. ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ಶತಕವನ್ನು ಅಲ್ಲಿ ದಾಖಲಿಸಿದರು.ಕಿಂಗ್ಸ್‌ಟನ್‌ನಲ್ಲಿ ನಡೆದಿದ್ದ ಆ ಟೆಸ್ಟ್‌ನಲ್ಲಿ ವಿಂಡೀಸ್ ಬೌಲರ್‌ಗಳನ್ನು ಕಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ 225 ಎಸೆತಗಳಲ್ಲಿ 111 ರನ್ ಗಳಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ 76 ಎಸೆತಗಳಲ್ಲಿ 53 ರನ್ ಹೊಡೆದಿದ್ದರು. ಭಾರತ ಜಯಿಸಿತ್ತು. ವಿಹಾರಿ ಪಂದ್ಯದ ಆಟಗಾರ ಗೌರವ ಗಳಿಸಿದ್ದರು.
ಇಲ್ಲಿಯವರೆಗೆ ಒಟ್ಟು 12 ಟೆಸ್ಟ್ ಆಡಿರುವ ವಿಹಾರಿ 32.84ರ ಸರಾಸರಿಯಲ್ಲಿ ಗಳಿಸಿರುವುದು 624 ರನ್‌ಗಳು ಮಾತ್ರ. ಸಾಂದರ್ಭಿಕ ಬೌಲರ್ ಆಗಿಯೂ ಕಣಕ್ಕಿಳಿಯುವ ಹನುಮ ಐದು ವಿಕೆಟ್ ಗಳಿಸಿದ್ದಾರೆ. ಟ್ವೆಂಟಿ–20 ಕ್ರಿಕೆಟ್ ಯುಗದಲ್ಲಿ ಅವರ ಆಟವು ಕೆಲವರಿಗೆ ಸಪ್ಪೆ ಎನಿಸಬಹುದು. ಆದರೆ ಒಬ್ಬ ಕ್ರಿಕೆಟಿಗನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡುವುದು ಟೆಸ್ಟ್ ಪಂದ್ಯಗಳು ಮಾತ್ರ. ಅದರಲ್ಲಿ ಯಶಸ್ವಿಯಾದವರೇ ’ಲೆಜೆಂಡ್‘ ಎಂದು ಕರೆಸಿಕೊಳ್ಳುತ್ತಾರೆ. ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ಜಿ.ಆರ್. ವಿಶ್ವನಾಥ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್ ಸಾಧನೆಯೇ ಅವರನ್ನು ಉತ್ತುಂಗಕ್ಕೇರಿಸಿದೆ. ವಿರಾಟ್, ಸಚಿನ್, ರಾಹುಲ್ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿಯೂ ಅಮೋಘ ಸಾಧನೆ ಮಾಡಿದ್ದಾರೆ. ಆದರೆ ಅವರೇ, ತಮ್ಮ ಟೆಸ್ಟ್ ಕರಿಯರ್ ಬಗ್ಗೆಯೇ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ. ಆದ್ದರಿಂದಲೇ ಟೆಸ್ಟ್ ಕ್ರಿಕೆಟ್ ಇಂದಿಗೂ ಅಪ್ಯಾಯಮಾನವಾಗುತ್ತದೆ.
ಹನುಮವಿಹಾರಿಯ ಇನ್ನೊಂದು ವಿಶೇಷವೆಂದರೆ; ಅವರ ಅರ್ಧಶತಕ ಮತ್ತು ಶತಕಗಳು ವಿದೇಶಿ ನೆಲದಲ್ಲಿಯೇ ದಾಖಲಾಗಿವೆ. ಸ್ವದೇಶದಲ್ಲಿ ಇನ್ನೂ ಅವರು ಮಿಂಚಬೇಕಿದೆ. ಆದರೆ ಬಾರ್ಡರ್ ಗಾವಸ್ಕರ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಅದರ ನಂತರ ಭಾರತದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಆಡುವುದು ಅನುಮಾನ. 27 ವರ್ಷದ ಹನುಮ ಸ್ನಾಯುಸೆಳೆತದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯದ ನಿರ್ವಹಣೆ ಮತ್ತು ಫಿಟ್‌ನೆಸ್ ಬಗ್ಗೆಯೂ ಅವರು ಲಕ್ಷ್ಮಣ್, ದ್ರಾವಿಡ್ ಮತ್ತು ಕೊಹ್ಲಿಯನ್ನು ಅನುಕರಿಸಿದರೆ ಇನ್ನಷ್ಟು ಯಶಸ್ಸು ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.