ವಾಸಿಂ ಅಕ್ರಂ ಸ್ವಿಂಗ್ ಸುಲ್ತಾನ ಆಗಿ ಮೆರೆದ ಕಾಲವನ್ನು ಮೆಲುಕು ಹಾಕುತ್ತಲೇ, ಭಾರತಕ್ಕೆ ಅಂತಹ ಎಡಗೈ ವೇಗದ ಬೌಲರ್‌ಗಳು ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆಯೂ ಮೂಡುತ್ತಿದೆ. ಪ್ರಸಿದ್ಧ ಕೃಷ್ಣ ಇಂಗ್ಲೆಂಡ್ ಪ್ರವಾಸಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವ ಹೊತ್ತಿನಲ್ಲಿ ಎಡಗೈ ವೇಗಿಗಳ ಕರಾಮತ್ತನ್ನು ಕಾಣುವ...
***
1988ರಲ್ಲಿ ಲ್ಯಾಂಕಾಷೈರ್ ಕೌಂಟಿ ಕ್ರಿಕೆಟ್ ತಂಡದ ಸ್ಥಳೀಯ ಅಭಿಮಾನಿಗಳು ಹಾಡೊಂದನ್ನು ಕಟ್ಟಿದ್ದರು. ‘ವಾಸಿಂ ಫಾರ್ ಇಂಗ್ಲೆಂಡ್’ ಎಂಬ ಆ ಹಾಡು ಆ ಕಾಲದಲ್ಲಿ ಕ್ರಿಕೆಟ್ ಗಲ್ಲಿಗೀತೆಯೂ ಆಗಿತ್ತು. ಆಗಿನ್ನೂ ಇಪ್ಪತ್ತೆರಡರ ಹರೆಯದ ವಾಸಿಂ ಅಕ್ರಂ ಇಂಗ್ಲೆಂಡ್‌ನ ಕೌಂಟಿ ತಂಡದ ಆರಂಭಿಕ ಬೌಲರ್ ಆಗಿ ಮಿಂಚಿದ್ದರು. 1998ರಲ್ಲಿ ಆ ಕೌಂಟಿ ತಂಡದ ನಾಯಕರೂ ಆಗಿ ಬೆಳೆದ ವಾಸಿಂ, ಲ್ಯಾಂಕಾಷೈರ್ ತಂಡಕ್ಕೆ ಇಸಿಬಿ ಟ್ರೋಫಿ ಹಾಗೂ ಆಕ್ಸಾ ಲೀಗ್‌ನಲ್ಲಿ ಗೆಲುವನ್ನೂ ದಕ್ಕಿಸಿಕೊಟ್ಟರು.
ಕೌಂಟಿ ಕ್ರಿಕೆಟ್ ಕಣ್ಮಣಿಯಾಗುವ ಮೂರು ವರ್ಷ ಮೊದಲೇ, ಅಂದರೆ 1985ರಲ್ಲಿ ಅಕ್ರಂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಪರ ಮೊದಲ ಪಂದ್ಯ ಆಡಿದ್ದರು. ಆಡಿದ ಎರಡನೇ ಟೆಸ್ಟ್‌ನಲ್ಲೇ ಹತ್ತು ವಿಕೆಟ್ ಪಡೆದು ಮಿಂಚಿದ್ದು ಇತಿಹಾಸ. ಅದಕ್ಕೂ ಕೆಲವೇ ತಿಂಗಳ ಹಿಂದೆ ಅಕ್ರಂ ಯಃಕಶ್ಚಿತ್ ಕ್ಲಬ್ ಆಟಗಾರನಾಗಿದ್ದರು. ಕಾಲೇಜು ತಂಡಕ್ಕೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಗಡಾಫಿ ಕ್ರೀಡಾಂಗಣದಲ್ಲಿ ಆಯ್ಕೆಗೆಂದು ಬಂದ ಮೊದಲ ಎರಡು ದಿನ ಅಕ್ರಂಗೆ ಬೌಲಿಂಗ್ ಮಾಡುವ ಅವಕಾಶವೇ ಸಿಕ್ಕಿರಲಿಲ್ಲ. ಆಮೇಲೆ ಅವರ ಸ್ವಿಂಗ್ ಕರಾಮತ್ತನ್ನು ನೋಡಿ ಜಾವೆದ್ ಮಿಯಾಂದಾದ್ ಅವಾಕ್ಕಾದರು. ದೇಸಿ ಕ್ರಿಕೆಟ್‌ನಲ್ಲಿ ಹೇಳಿಕೊಳ್ಳುವಂತಹ ಅನುಭವ ಇಲ್ಲದೇ ಇದ್ದರೂ ಮಿಯಾಂದಾದ್ ಮಾತಿನಿಂದಾಗಿ ಅಕ್ರಂ ರಾಷ್ಟ್ರೀಯ ತಂಡದ ಭಾಗವಾದರು. 1985ರಲ್ಲಿ ಆಸ್ಟ್ರೇಲಿಯಾ ಎದುರು ಆಡಿದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಐವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಅವರು ಸೀಮಿತ ಓವರ್‌ಗಳ ಪಂದ್ಯದಲ್ಲೂ ತಾವೆಷ್ಟು ಮೊನಚು ಎನ್ನುವುದನ್ನು ಸಾರಿದರು. 104 ಟೆಸ್ಟ್ ಪಂದ್ಯಗಳಲ್ಲಿ 414 ವಿಕೆಟ್, 255 ಏಕದಿನ ಪಂದ್ಯಗಳಲ್ಲಿ 510 ವಿಕೆಟ್‌ಗಳನ್ನು ಪಡೆದ ಅವರ ಸಾಧನೆಗೆ ಸಮನಾದ ಇನ್ನೊಬ್ಬ ಎಡಗೈ ವೇಗದ ಬೌಲರ್ ಆಮೇಲೆ ಹುಟ್ಟಲಿಲ್ಲ. ಲಿಸ್ಟ್ ‘ಎ’ ಪಂದ್ಯಗಳಲ್ಲಿ ಒಟ್ಟು 881 ವಿಕೆಟ್‌ಗಳನ್ನು ಪಡೆದ ವಿಶ್ವದಾಖಲೆ ಕೂಡ ಅವರ ಹೆಸರಲ್ಲಿ ಇದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಡಗೈ ವೇಗಿಗಳನ್ನು ಅಸ್ತ್ರಗಳಂತೆ ಬಳಸುತ್ತಾ ಬಂದಿರುವುದಕ್ಕೆ ಗಟ್ಟಿ ಉದಾಹರಣೆಗಳು ಇವೆ. ಬಲಗೈ ಬ್ಯಾಟ್ಸ್‌ಮನ್‌ಗಳತ್ತ ಒಳಮುಖವಾಗಿ ನುಗ್ಗಿಬರುವ ಚೆಂಡು ಬೌಲ್ಡ್ ಮಾಡುವುದು, ಎಲ್‌ಬಿ ಬಲೆಗೆ ಬೀಳಿಸುವುದನ್ನು ಕಾಣುತ್ತಿರುತ್ತೇವೆ. ಇಂತಹ ಉದಾಹರಣೆಗಳೆಲ್ಲ ವಾಸಿಂ ಅಕ್ರಂ ಪ್ರಭಾವಳಿಯ ಎದುರು ಮಂಕೆನಿಸಿದರೂ, ಕೆಲವರ ಸಾಧನೆಗಳು ಉಲ್ಲೇಖನಾರ್ಹ. ಜಹೀರ್ ಖಾನ್, ಇರ್ಫಾನ್ ಪಠಾಣ್ ಆಟ ನಿಂತಮೇಲೆ, ಆಶಿಶ್ ನೆಹ್ರಾ ಕಾಲುಗಳು ಬೇಗ ದಣಿದ ಮೇಲೆ ಭಾರತ ಒಬ್ಬ ಸಮರ್ಥ ಎಡಗೈ ಮಧ್ಯಮ ವೇಗದ ಬೌಲರ್‌ನನ್ನು ಕಂಡುಕೊಳ್ಳುವುದಕ್ಕೆ ಹೆಣಗಾಡುತ್ತಿದೆ.
ಹನ್ನೊಂದು ವರ್ಷಗಳಾದವು, ಸೌರಾಷ್ಟ್ರದ ಜಯದೇವ ಉನದ್ಕತ್ ದಕ್ಷಿಣ ಆಫ್ರಿಕಾ ವಿರುದ್ಧ ಒಂದೇ ಒಂದು ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿ. ಆಮೇಲೆ ಅವರಿಗೆ ಟೆಸ್ಟ್‌ನಲ್ಲಿ ಅವಕಾಶವೇ ಸಿಗಲಿಲ್ಲ. ಆಗ ಹದಿನೆಂಟರ ಹುಡುಗನಾಗಿ ಚಿಗರೆಯಂತೆ ಇದ್ದ ಅವರಿಗೀಗ ಇಪ್ಪತ್ತೊಂಬತ್ತು ವರ್ಷ.
ತಮಿಳುನಾಡಿನ ತಂಗರಸು ನಟರಾಜನ್ ಅವರನ್ನು ಟ್ವೆಂಟಿ20 ಕ್ರಿಕೆಟ್ ಸ್ಪೆಷಲಿಸ್ಟ್ ಆಗಿ ರೂಪಿಸಲು ಭಾರತ ತಂಡ ನಿರ್ಧರಿಸಿರುವಂತಿದೆ. ಯಾಕೆಂದರೆ, ಈ ಎಡಗೈ ಮಧ್ಯಮ ವೇಗದ ಬೌಲರ್ ಬತ್ತಳಿಕೆಯಲ್ಲಿ ಯಾರ್ಕರ್ ಬಾಣಗಳು ಹೆಚ್ಚಾಗಿವೆ. ಶ್ರೀನಾಥ್ ಅರವಿಂದ್ ಕರ್ನಾಟಕದ ಇನ್ನೊಬ್ಬ ಪ್ರತಿಭಾವಂತ ಎಡಗೈ ವೇಗಿ. ಅವರು ಒಂದೇ ಒಂದು ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯವನ್ನಷ್ಟೇ ಆಡಿದ್ದು. ಪ್ರಥಮ ದರ್ಜೆ ಪಂದ್ಯಗಳಲ್ಲಿ 186 ವಿಕೆಟ್‌ಗಳನ್ನು ಪಡೆದಿದ್ದರೂ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಅವಕಾಶದ ಬಾಗಿಲು ತೆರೆಯಲಿಲ್ಲ. ಬಲಗೈ ವೇಗಿ ಪ್ರಸಿದ್ಧ ಕೃಷ್ಣ ಕೌಶಲ ಏಕದಿನ ಪಂದ್ಯಗಳಿಗೆ ಹೊಂದುವಂತೆ ಇದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶ ಸಿಕ್ಕರೂ ಅವರಿಗೆ ಇನ್ನಷ್ಟು ಸಾಣೆ ದೊರೆತೀತು. ಹೀಗಾಗಿ ಎಡಗೈ ವೇಗಿಗಳನ್ನು ಕರ್ನಾಟಕ ಕಾಣ್ಕೆಯ ರೂಪದಲ್ಲಿ ಕೊಡಲಾಗುತ್ತಿಲ್ಲ. ರಾಜಸ್ಥಾನದ ಖಲೀಲ್ ಅಹಮದ್ ಆಗೀಗ ಭರವಸೆ ಮೂಡಿಸಿರುವ ರಾಜಸ್ಥಾನದ ಎಡಗೈ ಮಧ್ಯಮ ವೇಗದ ಬೌಲರ್. ಅವರನ್ನೂ ಚುಟುಕು ಕ್ರಿಕೆಟ್‌ಗೇ ಹೆಚ್ಚಾಗಿ ನೆಚ್ಚಿಕೊಂಡಿದ್ದು, 11 ಏಕದಿನ ಪಂದ್ಯಗಳಲ್ಲಿ ಆಡುವ ಅವಕಾಶ ಅವರಿಗೆ ಒಲಿದಿದೆ. ಈ ಮಾದರಿಯಲ್ಲಿ 15 ವಿಕೆಟ್‌ಗಳನ್ನು ಅವರು ಪಡೆದಿರುವ ಅವರು, ಈ ಸಲದ ಐಪಿಎಲ್‌ನಲ್ಲಿ ಅವರು ಉತ್ತಮ ಲಯದಲ್ಲಿ ಬೌಲ್ ಮಾಡುತ್ತಿದ್ದರು.
ಜಹೀರ್ ಖಾನ್ 311 ಟೆಸ್ಟ್ ವಿಕೆಟ್‌ಗಳನ್ನು, 282 ಏಕದಿನ ಪಂದ್ಯಗಳ ವಿಕೆಟ್‌ಗಳನ್ನು ಪಡೆದು ಯಶಸ್ವಿ ಎಡಗೈ ವೇಗಿ ಎನಿಸಿಕೊಂಡವರು. ಇರ್ಫಾನ್ ಪಠಾಣ್ 29 ಟೆಸ್ಟ್‌ಗಳಲ್ಲೇ 100 ವಿಕೆಟ್ ಪಡೆದರಾದರೂ ಅವರಿಗೆ ಪಕ್ಕೆನೋವು ಬಾಧಿಸಿತು. 173 ಏಕದಿನ ಪಂದ್ಯಗಳ ವಿಕೆಟ್ ಕೂಡ ಅವರ ಖಾತೆಗೆ ಸಂದವು. ಆಮೇಲೆ ಸ್ವಿಂಗ್ ಮೂಲಕ ಕೆಲವು ಪಂದ್ಯಗಳಲ್ಲಿ ಮೊನಚಾಗಿ ಕಂಡ ಆಶೀಶ್ ನೆಹ್ರಾ 17 ಟೆಸ್ಟ್‌ಗಳಲ್ಲಿ ಅಷ್ಟೇ ಆಡಲು ಸಾಧ್ಯವಾದದ್ದು. 44 ವಿಕೆಟ್‌ಗಳು ಅವರಿಗೆ ಸಂದವು. ಏಕದಿನ ಪಂದ್ಯಗಳಲ್ಲಿ 157 ವಿಕೆಟ್ ಪಡೆದಿರುವ ಅವರು, ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 34 ವಿಕೆಟ್‌ಗಳನ್ನು ಕಿತ್ತರು. ಐಪಿಎಲ್ ಶುರುವಾದಾಗಲೂ ಅವರಿಗೆ ಅವಕಾಶ ಸಿಕ್ಕಿದ್ದು ಭಾರತದಲ್ಲಿ ಎಡಗೈ ವೇಗಿಗಳಿಗೆ ಎಷ್ಟು ಬರಗಾಲವಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿತ್ತು.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಹಾಗೂ ನ್ಯೂಜಿಲೆಂಡ್‌ನ ಟ್ರೆಂಟ್ ಬೋಲ್ಟ್ ಸರಿಸಮನಾದ ದಾಳಿ ಮಾಡುತ್ತಾ ಬಂದಿರುವ ಎಡಗೈ ವೇಗಿಗಳು. 61 ಟೆಸ್ಟ್‌ಗಳಲ್ಲಿ 255 ವಿಕೆಟ್, 96 ಏಕದಿನ ಪಂದ್ಯಗಳಲ್ಲಿ 184 ವಿಕೆಟ್ ಅಲ್ಲದೆ ಟ್ವೆಂಟಿ20 ಪಂದ್ಯಗಳಲ್ಲಿ 47 ವಿಕೆಟ್‌ಗಳನ್ನು ಸ್ಟಾರ್ಕ್ ಪಡೆದಿದ್ದಾರೆ. ಅವರಿಗಿಂತ ಹತ್ತು ಹೆಚ್ಚು ಟೆಸ್ಟ್‌ಗಳನ್ನು ಆಡಿರುವ ಬೋಲ್ಟ್ 281 ವಿಕೆಟ್‌ಗಳನ್ನು, 169 ಏಕದಿನ ಪಂದ್ಯಗಳ ವಿಕೆಟ್‌ಗಳನ್ನು ಖಾತೆಗೆ ಹಾಕಿಕೊಂಡಿದ್ದಾರೆ. ಟ್ವೆಂಟಿ20ಯಲ್ಲಿ 58 ವಿಕೆಟ್‌ಗಳನ್ನು ಅವರು ಕಿತ್ತಿದ್ದಾರೆ. ಸ್ಟಾರ್ಕ್ ಅವರಿಗಿಂತ ಬೋಲ್ಟ್ ಒಂದು ವರ್ಷ ಹಿರಿಯರು. ಇಬ್ಬರ ಸಾಧನೆಯ ಗ್ರಾಫ್‌ನಲ್ಲಿ ಇರುವ ಸಾಮ್ಯ ನೋಡಿದರೆ, ವಿಶ್ವದ ಸದ್ಯದ ಶ್ರೇಷ್ಠ ಎಡಗೈ ವೇಗಿಗಳಲ್ಲಿ ಇವರಿಬ್ಬರ ಹೆಸರುಗಳು ಮುಂಚೂಣಿಯಲ್ಲಿವೆ. ಬಾಂಗ್ಲಾದೇಶದ ಮುಷ್ತಫಿಜುರ್ ರೆಹಮಾನ್ ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 58 ವಿಕೆಟ್‌ಗಳನ್ನು ಪಡೆದಿರುವುದು, ಆ ಮಾದರಿಯಲ್ಲಿ ಸ್ಪೆಷಲಿಸ್ಟ್ ಎನಿಸಿಕೊಳ್ಳಲು ಕಾರಣವಾಗಿದೆ. 30 ಟೆಸ್ಟ್ ವಿಕೆಟ್, 117 ಏಕದಿನ ಪಂದ್ಯಗಳ ವಿಕೆಟ್‌ಗಳಷ್ಟೇ ಅವರ ಖಾತೆಯಲ್ಲಿ ಇರುವುದರಿಂದ ಅವರಿಗಿನ್ನೂ ಹೆಚ್ಚು ಅವಕಾಶ ಸಿಗಬೇಕಿದೆ. ಇನ್ನೂ ಇಪ್ಪತ್ತೈದರ ಪ್ರಾಯದ ಅವರು ಬಲಾಢ್ಯ ತಂಡಗಳ ಎದುರು ಆಡುವ ಅವಕಾಶ ಸಿಕ್ಕರೆ ಮಾಗಬಲ್ಲರು. ಪಾಕಿಸ್ತಾನದ ವಹಾಬ್ ರಿಯಾಜ್ ಕೂಡ ಕೆಲವು ವರ್ಷಗಳ ಹಿಂದೆ ಮೋಡಿ ಮಾಡಿದ ಎಡಗೈ ಬೌಲರ್. 83 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಅವರು 2015ರ ವಿಶ್ವಕಪ್‌ನ ಪ್ರಮುಖ ಪಂದ್ಯದಲ್ಲಿ ಕಾಡಿದ್ದನ್ನು ಮರೆಯಲಾಗದು.
ಮತ್ತೆ ವಾಸಿಂ ಅಕ್ರಂ ಅವರನ್ನೇ ಸ್ಮರಿಸಬೇಕು. ಮೂವತ್ತನೇ ವಯಸ್ಸಿನಲ್ಲಿ ಮಧುಮೇಹದ ಸಮಸ್ಯೆ ಎದುರಿಸಿ, ಆನಂತರವೂ ಇನ್ನೂ ಏಳು ವರ್ಷ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅವರಂತಹ ಇನ್ನೊಬ್ಬ ಎಡಗೈ ವೇಗದ ಬೌಲರ್ ಅನ್ನು ಜಗತ್ತು ನೋಡುವುದು ಯಾವಾಗ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.