ಕ್ರಿಕೆಟ್‌ನಲ್ಲಿನ ಅಧಿಕಾರಶಾಹಿಗಳ ದುರಾಸೆಯ ಕುರಿತು ರಾಮಚಂದ್ರ ಗುಹಾ ಅಕ್ಷರ, ಮಾತಿನ ಕತ್ತಿ ಝಳಪಿಸಿದ್ದಾರೆ. ಅವರ ಸಾತ್ವಿಕ ಸಿಟ್ಟಿನ ಈ ಹೊತ್ತಿನಲ್ಲಿ ಬಿಸಿಸಿಐ ಎಂತೆಂಥವರಿಗೆಲ್ಲ ಕುರ್ಚಿ ಕಲ್ಪಿಸಿಕೊಟ್ಟಿದೆ ಎನ್ನುವುದನ್ನು ಮೆಲುಕು ಹಾಕಬೇಕಿದೆ.
2000ನೇ ಇಸವಿಯಲ್ಲಿ ಅನುರಾಗ್ ಠಾಕೂರ್ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ರಣಜಿ ಪಂದ್ಯವನ್ನು ಆಡಿದರು. ಅದಾಗಲೇ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವರು ರಣಜಿ ಪಂದ್ಯ ಆಡಲು ಕಾರಣವಿತ್ತು. ರಾಜ್ಯ ಮಟ್ಟದಲ್ಲಿ ತಂಡವನ್ನು ಆಯ್ಕೆ ಮಾಡುವ ಸಮಿತಿಗೆ ಸೇರಬೇಕಾದರೆ ಒಂದಾದರೂ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವನ್ನು ಆಡಿರಬೇಕು ಎನ್ನುವ ನಿಯಮವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಡಿದೆ. ಹೀಗಾಗಿ ಅನಿವಾರ್ಯವಾಗಿ ಅನುರಾಗ್ ಕ್ರಿಕೆಟಿಗರಾದರು. ಮರುವರ್ಷವೇ ತಮ್ಮ ರಾಜ್ಯದ ಕ್ರಿಕೆಟ್ ಆಯ್ಕೆ ಸಮಿತಿಯಲ್ಲೂ ತೂರಿಕೊಂಡರು. ಒಂಬತ್ತು ಓವರ್ ಬೌಲ್ ಮಾಡಿ, ಎರಡು ವಿಕೆಟ್‌ಗಳನ್ನು ಆ ಪಂದ್ಯದಲ್ಲಿ ಅವರು ಪಡೆದಿದ್ದರು. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿಯ ಮಗನಾದ ಅನುರಾಗ್, ಚಿನ್ನದ ಚಮಚವನ್ನು ಬಾಯಿಯಲ್ಲೇ ಇಟ್ಟುಕೊಂಡು ಬೆಳೆದವರು. ಹೀಗಾಗಿ ಒಂದು ಕಾಲನ್ನು ಅವರು ಕ್ರಿಕೆಟ್‌ನಲ್ಲಿ ಇಟ್ಟು, ಇನ್ನೊಂದು ಕಾಲನ್ನು ಬಲು ಬೇಗ ರಾಜಕೀಯಕ್ಕೂ ಇಟ್ಟರು. ಕಳೆದ ವರ್ಷ ಬಿಜೆಪಿ ಅವರನ್ನು ಕೇಂದ್ರದ ಹಣಕಾಸು ರಾಜ್ಯ ಸಚಿವರನ್ನಾಗಿ ಮಾಡಿತು. ಅದಕ್ಕೂ ಮೊದಲು ಅನುರಾಗ್ ಬಿಸಿಸಿಐ ಅಧ್ಯಕ್ಷರಾಗಿದ್ದರು. 2017ರಲ್ಲಿ ಭ್ರಷ್ಟಾಚಾರದ ಆರೋಪದ ಕಾರಣ ಸುಪ್ರೀಂ ಕೋರ್ಟ್ ಅವರನ್ನು ಕಿತ್ತುಹಾಕಿತು. ಅದಕ್ಕೂ ಮೊದಲು ಹಿಮಾಚಲ ಪ್ರದೇಶದಲ್ಲೂ ಕ್ರಿಕೆಟ್ ಸಂಬಂಧಿ ವ್ಯವಹಾರಗಳ ವಿಷಯದಲ್ಲಿ ಅವರು ಕೋರ್ಟಿಗೆ ಎಡತಾಕಿದವರೇ. ಒಂದೇ ಒಂದು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವನ್ನು ಆಡಿದ ಅವರು ಬಿಸಿಸಿಐ ದೊಡ್ಡ ಗಾದಿಯ ಮೇಲೆ ಕುಳಿತದ್ದು ಸಿನಿಮೀಯ.
ರಂಜಿತ್‌ಸಿಂಗ್‌ಜಿ ವಿಭಾಜಿ ಜಡೇಜ ನವಾಬ್‌ನಗರದ ರಾಜ. ಅವರು ಕೇಂಬ್ರಿಜ್ ವಿಶ್ವವಿದ್ಯಾಲಯ ಹಾಗೂ ಸಸೆಕ್ಸ್ ತಂಡದ ಪರವಾಗಿ ಕ್ರಿಕೆಟ್ ಆಡಿದರಷ್ಟೇ ಅಲ್ಲದೆ ಇಂಗ್ಲೆಂಡ್ ತಂಡವನ್ನೂ ಪ್ರತಿನಿಧಿಸಿದರು. ರಾಜವಂಶಸ್ಥರಾದ ಅವರಿಗೆ ಇದ್ದ ಕ್ರಿಕೆಟ್ ಪ್ರೀತಿ ಅನುಕರಣೀಯ. 307 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಹಾಗೂ 15 ಟೆಸ್ಟ್ ಪಂದ್ಯಗಳನ್ನು 20ನೇ ಶತಮಾನದ ಪ್ರಾರಂಭದಲ್ಲೇ ಅವರು ಆಡಿದ್ದರು. ಟೆಸ್ಟ್‌ನಲ್ಲಿ 175 ಅವರ ಗರಿಷ್ಠ ಸ್ಕೋರ್. ಎರಡು ಶತಕ, ಆರು ಅರ್ಧ ಶತಕಗಳನ್ನು ಟೆಸ್ಟ್ ಪಂದ್ಯಗಳಲ್ಲಿ ಗಳಿಸಿದ ಅವರು, ಪ್ರಥಮ ದರ್ಜೆ ಪಂದ್ಯಗಳಲ್ಲಿ 72 ಶತಕಗಳನ್ನು ದಾಖಲಿಸಿರುವುದು ವಿಶೇಷ. ನೆವಿಲ್ ಕಾರ್ಡಸ್ ಅವರನ್ನು ‘ದಿ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್ ಆಫ್ ಕ್ರಿಕೆಟ್’ ಎಂದು ಹೊಗಳಿದ್ದರು. ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರಂಜಿತ್‌ಸಿಂಗ್ ಹೆಸರು ನಿಸ್ಸಂಶಯವಾಗಿ ಕಾಣುತ್ತದೆ. ರಂಜಿತ್‌ಸಿಂಗ್ ಅವರು ರಣಜಿ ಎಂದೇ ಹೆಸರಾಗಿದ್ದವರು. ಅವರ ಹೆಸರಿನಲ್ಲೇ ನಾವು ರಣಜಿ ಪಂದ್ಯಗಳನ್ನು ನೋಡಲು ಸಾಧ್ಯವಾಗುತ್ತಿರುವುದು. ಕ್ರಿಕೆಟ್ ಮರದಲ್ಲಿ ರಣಜಿ ಕಾಂಡವಿದ್ದಂತೆ. ಅಲ್ಲಿ ಸಾರ– ಸತ್ವ ಬಸಿದು ಇನ್ನಷ್ಟು ಬಲಿತರೆ ದೇಶದ ಕ್ರಿಕೆಟ್‌ನ ಮರವಾಗಲು ಸಾಧ್ಯ. ಅಂತಹ ದೇಸಿ ಕ್ರಿಕೆಟ್‌ನ ಒಂದೇ ಒಂದು ಪಂದ್ಯವನ್ನು ಅನುರಾಗ್ ಆಯ್ಕೆಗಾರನಾಗುವ ಅಧಿಕಾರದ ಬಯಕೆಯಿಂದ ಆಡಿದ್ದು ಹೊಸ ಶತಮಾನದ ವ್ಯಂಗ್ಯ.
ಚಂಡಿದಾಸ್ ಹಾಗೂ ನಿರುಪಮಾ ಗಂಗೂಲಿಯ ಮಗ ಸೌರವ್ ಗಂಗೂಲಿ. ಮುದ್ರಣ ಉದ್ಯಮ ನಡೆಸುತ್ತಿದ್ದ ಚಂದೀದಾಸ್ ಕೋಲ್ಕತ್ತದ ದೊಡ್ಡ ಶ್ರೀಮಂತ. ಚಿಕ್ಕಂದಿನಲ್ಲೇ ಸೌರವ್‌ಗೆ ‘ಮಹಾರಾಜ’ ಎಂಬ ಹೆಸರನ್ನು ಆಪ್ತೇಷ್ಟರು ಇಟ್ಟಿದ್ದರು. ಬಾಲಕನ ಐಷಾರಾಮಿ ಬದುಕನ್ನು ಕಂಡವರು ಹಾಗೆ ಕರೆದದ್ದು ಸಹಜವೇ. ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಯಶಸ್ವಿ ಮಾರ್ಗದಲ್ಲಿ ಸಾಗಿದ ಗಂಗೂಲಿಗೆ ‘ಗಾಡ್ ಆಫ್ ಆಫ್‌ಸೈಡ್’ ಎಂಬ ವಿಶೇಷಣವೂ ಇದೆ. ಆಫ್‌ಸೈಡ್‌ನತ್ತ ಅವರು ಚೆಂಡನ್ನು ಹೊಡೆಯುತ್ತಿದ್ದ ವೈಖರಿ ಅಂಥದೊಂದು ಗರಿಯನ್ನು ಸಿಕ್ಕಿಸಿತು. 113 ಟೆಸ್ಟ್, 311 ಏಕದಿನ ಪಂದ್ಯಗಳು, 254 ಪ್ರಥಮ ದರ್ಜೆ ಪಂದ್ಯಗಳು... ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿ ಇಂಥ ದೊಡ್ಡ ಅನುಭವ ಅವರದ್ದು. ಈಗ ಅವರು ಬಿಸಿಸಿಐ ಅಧ್ಯಕ್ಷ. ಕಾರ್ಯದರ್ಶಿಯಾಗಿ ಅವರ ಪಕ್ಕದಲ್ಲಿ ಜಯ್ ಶಾ ಇದ್ದಾರೆ. ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಎನ್ನುವುದು ಬಹುತೇಕರಿಗೆ ತಿಳಿದಿದೆ.
ಬಿಸಿಸಿಐ ವಿಶ್ವದ ಅತಿ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದು. ಜಾಗತಿಕ ಕ್ರಿಕೆಟ್‌ನಲ್ಲಿ ಇಷ್ಟು ಶ್ರೀಮಂತವಾದ ಇನ್ನೊಂದು ಸಂಸ್ಥೆ ಇಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವರ್ಷಕ್ಕೆ ಗಳಿಸುವ ಆದಾಯದ ಶೇ 26ರಷ್ಟು ಕಾಣ್ಕೆ ಬಿಸಿಸಿಐನಿಂದಲೇ ಸಿಗುತ್ತದೆ. ಇದೇ ಕಾರಣಕ್ಕೆ ಭಾರತದ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡುವುದೆಂದರೆ ಈಗ ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ದೇಶಗಳಿಗೂ ಪ್ರತಿಷ್ಠೆಯ ಬಾಬತ್ತಾಗಿರುವುದು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎನ್ನುವುದು ಗಳಿಕೆಯ ದೃಷ್ಟಿಯಿಂದ ದೊಡ್ಡ ಬೋನಸ್ಸು. ಸೌರವ್ ಗಂಗೂಲಿ ಯುಎಇನಲ್ಲಿ ನಡೆದ ಐಪಿಎಲ್ ಪಂದ್ಯಗಳನ್ನು ತಾದಾತ್ಮ್ಯದಿಂದ ಕಣ್ತುಂಬಿಕೊಂಡಿದ್ದನ್ನು ನಾವು ಕಂಡಿದ್ದೇವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಅವರಿಗೆ ವಿಶೇಷ ಧನ್ಯವಾದ ಹೇಳಿದ್ದು ವಿವಾದ ಸೃಷ್ಟಿಸಿತ್ತು. ಗಂಗೂಲಿ ಈ ಹಿಂದೆ ತಮ್ಮ ತಂಡಕ್ಕೆ ಮಾರ್ಗದರ್ಶಿ ಆಗಿದ್ದವರು. ಹೀಗಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದಾಗಿ ಶ್ರೇಯಸ್ ಆಮೇಲೆ ಸಮಜಾಯಿಷಿ ಕೊಟ್ಟರು. ಐಪಿಎಲ್‌ಗೆ ಮೊದಲೇ ಗಂಗೂಲಿ ಡೆಲ್ಲಿ ತಂಡದ ಪ್ರಾಯೋಜಕ ಸಿಮೆಂಟ್ ಕಂಪನಿ ಜೆಎಸ್‌ಡಬ್ಲ್ಯುನ ರಾಯಭಾರಿ ಆಗಿದ್ದರು ಎಂಬ ಕಾರಣಕ್ಕೆ ಇನ್ನೊಂದು ವಿವಾದ ಸೃಷ್ಟಿಯಾಗಿತ್ತು.
ಈಗ ಕ್ರಿಕೆಟ್ ಇತಿಹಾಸಕಾರ ರಾಮಚಂದ್ರ ಗುಹಾ ತಮ್ಮ ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದಾರೆ. ‘ಕಾಮನ್‌ವೆಲ್ತ್ ಆಫ್ ಕ್ರಿಕೆಟ್: ಎ ಲೈಫ್‌ಲಾಂಗ್ ಲವ್ ಅಫೇರ್ ವಿತ್ ದಿ ಮೋಸ್ಟ್ ಸಟಲ್ ಅಂಡ್ ಸೊಫಿಸ್ಟಿಕೇಟೆಡ್ ಗೇಮ್ ನೋನ್ ಟು ಹ್ಯೂಮನ್‌ಕೈಂಡ್’ ಎನ್ನುವ ಕೃತಿಯಲ್ಲಿ ಅವರು ನೆನಪಿನ ಬುತ್ತಿ ಬಿಚ್ಚಿಕೊಂಡಿರುವುದಷ್ಟೇ ಅಲ್ಲ, ಕ್ರಿಕೆಟ್‌ನ ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವ ಅನೇಕರ ದುರಾಸೆಯ ಕುರಿತು ಮಾತಿನ ಕತ್ತಿ ಝಳಪಿಸಿದ್ದಾರೆ. ಫ್ಯಾಂಟಸಿ ಕ್ರಿಕೆಟ್ ನೆಪದಲ್ಲಿ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳಿಗೆ ಖುದ್ದು ಗಂಗೂಲಿ ರಾಯಭಾರಿಯಾಗಿರುವ ನೈತಿಕತೆಯನ್ನು ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಉದ್ಯಮಿ ಎನ್.ಶ್ರೀನಿವಾಸನ್ (ಬಿಸಿಸಿಐ ಮಾಜಿ ಅಧ್ಯಕ್ಷ) ಹಾಗೂ ಜಯ್ ಶಾ ತರಹದವರು ಕ್ರಿಕೆಟ್ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳೂ ಪ್ರಭಾವಿ ಉದ್ಯಮಿಗಳ, ರಾಜಕಾರಣಿಗಳ ಮಕ್ಕಳದ್ದೋ ಅಥವಾ ಸಂಬಂಧಿಕರದ್ದೋ ಕೈಗಳಲ್ಲಿವೆ ಎಂದು ಕೆಲವು ಉದಾಹರಣೆಗಳ ಸಹಿತ ತರಾಟೆಗೆ ತೆಗೆದುಕೊಂಡಿದ್ದಾರೆ. ಐಪಿಎಲ್ ಕ್ರಿಕೆಟ್ ಪ್ರಭಾವಿ ಆದಮೇಲೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಗುಹಾ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ. ಜಂಟಲ್‌ಮನ್‌ಗಳ ಆಟವಾದ ಕ್ರಿಕೆಟ್ಟನ್ನು ದುರಾಸೆಯ ಕೂಪಕ್ಕೆ ತಳ್ಳಿದ್ದಾರಲ್ಲ ಎನ್ನುವ ಬಗೆಗೆ ಅವರ ಬೇಸರ, ಸಿಟ್ಟು.
ಕ್ರಿಕೆಟ್ ಐತಿಹಾಸಿಕವಾಗಿ ಶ್ರೀಮಂತರ ಆಟವಾಗಿಯೇ ಬೆಳೆದುಕೊಂಡು ಬಂದಿದೆ. ಇದೇ ಕಾರಣಕ್ಕೆ ಬಿಸಿಸಿಐ ಅಧ್ಯಕ್ಷ ಗಾದಿಗೆ ಏರಿದವರಲ್ಲಿ ಬಹುತೇಕರು ಉದ್ಯಮಿಗಳು, ರಾಜಕಾರಣಿಗಳು ಅಥವಾ ರಾಜಕಾರಣಿಗಳ ಒಡನಾಡಿಗಳು. ಮಹಾರಾಜರಿಗೆ ಇದೊಂದು ಪ್ರತಿಷ್ಠೆಯಾಗಿತ್ತು. ಜತೆಗೆ ಆಟಪ್ರೀತಿಯೂ ಇತ್ತೆನ್ನಿ. ಈಗ ಜಗತ್ತಿನ ದೊಡ್ಡ ಉದ್ಯಮವಾಗಿ ಕ್ರಿಕೆಟ್ ಚಟುವಟಿಕೆ ಬೆಳೆದಿದೆ. ಹೀಗಾಗಿ ಬಿಸಿಸಿಐ ಶ್ರೀಮಂತ. ಅದರ ನೆರಳಿನಲ್ಲಿ ಇರುವ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಆಯಕಟ್ಟಿನಲ್ಲಿ ಇರುವವರೂ ಭವಿಷ್ಯದಲ್ಲಿ ಬಿಸಿಸಿಐ ಹೆಮ್ಮರವನ್ನು ಏರುವ ಬಯಕೆಯಿಂದಲೇ ವರ್ತಿಸುತ್ತಾ ಇರುತ್ತಾರೆ. ಸರ್ಕಾರದ ಯಾವುದೇ ಹಂಗಿಲ್ಲದೆ ಸ್ವತಂತ್ರ ‘ಕ್ರಿಕೆಟ್ ಸರ್ಕಾರ’ದ ರೂಪದಲ್ಲಿ ವಿಶ್ವರೂಪ ತಾಳಿರುವ ಬಿಸಿಸಿಐ ಈಗ ಐಸಿಸಿಯಲ್ಲೂ ಪ್ರಭಾವಿ. ಇದೇ ಕಾರಣಕ್ಕೆ ಎಷ್ಟೋ ಹಿತಾಸಕ್ತಿ ಸಂಘರ್ಷಗಳಲ್ಲಿ ಈ ಸಂಸ್ಥೆಗೆ ಗೆಲುವು ಸಿಕ್ಕಿದೆ.
ಒಂದು ಕಡೆ ಆಟಪ್ರೀತಿಯನ್ನು ತಲೆತುಂಬ ತುಂಬಿಕೊಂಡ ಕ್ರಿಕೆಟ್ ಪ್ರತಿಭೆಗಳು. ಇನ್ನೊಂದು ಕಡೆ ರಾಜಕೀಯ ನಡೆಗಳನ್ನು ಆವಿರ್ಭವಿಸಿಕೊಂಡಂತಹ ಅಧಿಕಾರಶಾಹಿಗಳು. ಮತ್ತೊಂದು ಕಡೆ ಈ ಉದ್ಯಮವನ್ನು ಇನ್ನಷ್ಟು ಕಾರ್ಪೊರೆಟೀಕರಣಗೊಳಿಸಿ ದುರಾಸೆಗೂ ವ್ಯಾವಹಾರಿಕ ಚೌಕಟ್ಟು ಹಾಕುತ್ತಿರುವ ತಿಮಿಂಗಿಲದಂಥ ಕಂಪನಿಗಳು. ಇವುಗಳ ಆಟ–ಮಾಟವನ್ನು ನೋಡಿ ಸಹಜವಾಗಿಯೇ ರಾಮಚಂದ್ರ ಗುಹಾ ತರಹದ ತುಂಬು ಕ್ರಿಕೆಟ್ ಪ್ರೇಮಿಗಳಿಗೆ ಹೊಟ್ಟೆ ಉರಿಯುತ್ತದೆ. ಇಲ್ಲಿ ಅನುರಾಗ್ ಠಾಕೂರ್ ಅವರಂಥವರಿಗೂ ಜಾಗವಿದೆ. ರಣಜಿ ನೆನಪುಗಳು ಚಿರಸ್ಥಾಯಿ. ಗಂಗೂಲಿ ಅವರಂಥ ಅವಕಾಶ ದೊಡ್ಡದು ಮಾಡಿಕೊಳ್ಳುವ ‘ಕುಶಲಮತಿ’ಗಳೂ ಮಿಂಚುತ್ತಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.