ADVERTISEMENT

PV Web Exclusive| ಅಪ್ಪನ ಕನಸು ನನಸಾಗಿಸಿದ ಆರೂವರೆ ಅಡಿ ಹುಡುಗ ಹ್ಯಾಜಲ್‌ವುಡ್

ವಿಶಾಖ ಎನ್.
Published 23 ಡಿಸೆಂಬರ್ 2020, 11:59 IST
Last Updated 23 ಡಿಸೆಂಬರ್ 2020, 11:59 IST
ಹ್ಯಾಜಲ್‌ವುಡ್
ಹ್ಯಾಜಲ್‌ವುಡ್   

ಭಾರತ ಕ್ರಿಕೆಟ್ ತಂಡವು ಅಡಿಲೇಡ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲ 36 ರನ್‌ಗಳಿಗೆ ಚಿಂದಿಯಾದದ್ದನ್ನೇ ನೊಂದು ವಿಶ್ಲೇಷಿಸುತ್ತಾ ಕುಳಿತಿದ್ದೇವೆ. ತಂಡದ ಅರ್ಧದಷ್ಟು ಬ್ಯಾಟ್ಸ್‌ಮನ್‌ಗಳನ್ನು ಆ ಇನಿಂಗ್ಸ್‌ನಲ್ಲಿ ಔಟ್ ಮಾಡಿದ ಬೌಲಿಂಗ್ ಪ್ರತಿಭೆಯ ಹೆಜ್ಜೆಗುರುತುಗಳೂ ನಮಗೆ ಮುಖ್ಯವಾಗಬೇಕಲ್ಲವೇ? ಹ್ಯಾಜಲ್‌ವುಡ್ ಎಂಬ ಮಗುವಿನ ಮುಖದ, ಆರೂವರೆ ಅಡಿ ಎತ್ತರದ ದೈತ್ಯಪ್ರತಿಭೆಯ ಪರಿಚಯ ಇಲ್ಲಿದೆ...

‘ಶಹಬ್ಬಾಸ್ ಮಗನೇ. 1985ರಲ್ಲಿ ನಿಮಿಂಗ್ಹಾ ತಂಡದ ವಿರುದ್ಧ ನಾನು 4 ರನ್‌ ಕೊಟ್ಟು 5 ವಿಕೆಟ್ ಪಡೆದಿದ್ದಾಗ ಎಷ್ಟು ಸಂತೋಷವಾಗಿತ್ತೋ ಅದಕ್ಕಿಂತಲೂ ಹೆಚ್ಚು ಸಂತೋಷ ನಿನ್ನ ಆಟ ನೋಡಿ ಆಗಿದೆ’– ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್‌ ಅಪ್ಪ ಟ್ರೆವರ್‌ ಅವರು ‘ದಿ ಲೀಡರ್’ ಎಂಬ ಪತ್ರಿಕೆಗೆ ಮೊನ್ನೆ ಮೊನ್ನೆ ನೀಡಿದ ಪ್ರತಿಕ್ರಿಯೆ ಇದು.

ಭಾರತದ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ಅರ್ಧದಷ್ಟು ಮಂದಿಗೆ ಪೆವಿಲಿಯನ್ ತೋರಿಸಿದ್ದು ಹ್ಯಾಜಲ್‌ವುಡ್. ಅಂಥದೊಂದು ಇನಿಂಗ್ಸ್ ನೋಡಿ, 36 ರನ್‌ಗಳಿಗೆ ಕುಸಿದ ಬ್ಯಾಟರ್‌ಗಳ ಲೋಪಗಳನ್ನೇ ಇನ್ನೂ ಬಗೆಯುತ್ತಾ ಇರುವವರೇ ಹೆಚ್ಚು. ಹ್ಯಾಜಲ್‌ವುಡ್ ಮಾಡಿದ ಸರಳ, ಸುಂದರ ವೇಗದ ಎಸೆತಗಳ ಕುರಿತು ಮಾತನಾಡಿದವರು ಕಡಿಮೆಯೇ. ‘ಸುಂದರ’ ಎನ್ನುವ ವಿಶೇಷಣವನ್ನು ವೇಗದ ಬೌಲಿಂಗ್‌ಗೆ ಅನ್ವಯಿಸುವುದು ಒಂದು ಬಗೆಯಲ್ಲಿ ವ್ಯಂಗ್ಯ ಎನಿಸಬಹುದು. ಆದರೆ, ರಿಚರ್ಡ್ ಹ್ಯಾಡ್ಲಿ, ಗ್ಲೆನ್ ಮೆಕ್‌ಗ್ರಾ, ಕರ್ಟ್ನಿ ವಾಲ್ಶ್ ತರಹದ ಧೀಮಂತರ ಬೌಲಿಂಗ್ ಶೈಲಿ ಹಾಗೂ ತಂತ್ರಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಗುಣವಿಶೇಷಣದ ಮರ್ಮವೇನು ಎನ್ನುವುದು ತಿಳಿಯುತ್ತದೆ.

ADVERTISEMENT

ಈ ವರ್ಷದ ಪ್ರಾರಂಭದಲ್ಲಿ ಇಂಗ್ಲಿಷ್ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಚರ್ಡ್ ಹ್ಯಾಡ್ಲಿ ತಮಗೆ ಈ ಕಾಲದಲ್ಲಿ ಇಷ್ಟವಾದ ವೇಗದ ಬೌಲರ್‌ ಹ್ಯಾಜಲ್‌ವುಡ್ ಎಂದಿದ್ದರು. ನ್ಯೂಜಿಲೆಂಡ್‌ನ ಮಾಜಿ ವೇಗಿ ಆಸ್ಟ್ರೇಲಿಯಾ ಬೌಲರನ್ನು ಹೊಗಳುವುದು ಅಪರೂಪವೇ ಹೌದು. ಯಾಕೆಂದರೆ, ಅಲ್ಲಿನ ಪಿಚ್‌ಗಳಲ್ಲಿ ಪಳಗುವ ವೇಗಿಗಳ ವರಸೆ ಯಾವತ್ತೂ ಒಂದು ಕೈ ಮೇಲಿರುತ್ತದೆ. ಟ್ರೆಂಟ್ ಬೌಲ್ಟ್‌ ಕಡೆಗೆ ನೋಡಿದರೆ ಈ ವಿಷಯ ಸ್ಪಷ್ಟವಾದೀತು. ಹ್ಯಾಡ್ಲಿ ಅದಕ್ಕೆ ಕೊಟ್ಟ ಕಾರಣ ಹೀಗಿತ್ತು: ‘ಹ್ಯಾಜಲ್‌ವುಡ್ ಬೌಲಿಂಗ್ ಆ್ಯಕ್ಷನ್ ಚೆನ್ನಾಗಿದೆ. ವಿಕೆಟ್‌ನತ್ತ ಹಾಗೂ ತುಸು ಆಫ್‌ಸ್ಟಂಪ್‌ನ ಆಚೆಗೆ ಗುರಿ ಮಾಡಿ ಗುಡ್‌ ಲೆಂಗ್ತ್ ಜಾಗಕ್ಕೆ ಬೌಲ್ ಮಾಡುತ್ತಾನೆ. ವಿಪರೀತ ‍ಪ್ರಯೋಗ ಮಾಡಲು ಹೋಗುವುದಿಲ್ಲ. ಮೂಲ ತಂತ್ರಗಳಿಗೆ ಕಟ್ಟುಬಿದ್ದು ಹೀಗೆ ಬೌಲಿಂಗ್ ಮಾಡುವುದು ಸುಲಭವಲ್ಲ. ಅದರಲ್ಲೂ ನಿಯಂತ್ರಣ ಸಾಧಿಸುವುದು ದೊಡ್ಡ ಸವಾಲು. ಅದನ್ನು ಅವನು ಮಾಡುತ್ತಾ ಬಂದಿದ್ದಾನೆ. ಎರಡೂ ದಿಕ್ಕಿಗೆ ಚೆಂಡನ್ನು ಅವನು ಸ್ವಿಂಗ್ ಮಾಡಬಲ್ಲ. ಪಿಚ್‌ ಬಿದ್ದ ನಂತರದ ಕ್ಷಣದಲ್ಲಿ ತುಸು ಆಫ್‌ಸ್ಟಂಪ್‌ನಿಂದ ಹೊರಭಾಗಕ್ಕೆ ಆಗುವ ಸ್ವಿಂಗ್ ನೋಡಲು ಎರಡು ಕಣ್ಣು ಸಾಲದು’.

ಭಾರತದ ವಿರುದ್ಧದ ಎರಡನೇ ಇನಿಂಗ್ಸ್‌ನಲ್ಲಿ ಹ್ಯಾಜಲ್‌ವುಡ್ ಹಾಕಿದ ಎಷ್ಟೋ ಎಸೆತಗಳು ಹ್ಯಾಡ್ಲಿ ಹೊಗಳಿಕೆಯನ್ನು ಸಾಕಾರಗೊಳಿಸುವ ಪ್ರಾತ್ಯಕ್ಷಿಕೆಯಂತೆ ಇದ್ದವು. ಗ್ಲೆನ್ ಮೆಕ್‌ಗ್ರಾ ಅಂತೂ ತಮ್ಮದೇ ದೇಶದ ಈ ಯುವಕನ ಬೌಲಿಂಗ್ ನೋಡಿ, ‘ನನಗೆ ನನ್ನದೇ ಬೌಲಿಂಗ್ ನೆನಪಾಯಿತು. ಅದೇ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಬೇಕೆಂದು ನಾನು ಎಷ್ಟು ಬೆವರು ಹರಿಸಿದ್ದೆ ಎನ್ನುವುದು ಗೊತ್ತಿದೆ. ಇವನು ನನ್ನನ್ನೇ ತನ್ನ ಮೂಲಕ ಕಾಣಿಸಿದ’ ಎಂದು ಹೊಗಳಿದರು.

ಹ್ಯಾಜಲ್‌ವುಡ್ ಅಪ್ಪ ಟ್ರೆವರ್‌ಗೆ ಖುದ್ದು ಕ್ರಿಕೆಟಿಗ ಆಗಬೇಕೆಂಬ ಆಸೆ ಇತ್ತು. ಕ್ಲಬ್‌ ಮಟ್ಟದಿಂದ ಮೇಲೇರಲು ಆಗಲಿಲ್ಲ. ಆಮೇಲೆ ಅವರು ಗಾಲ್ಫ್ ಆಟದ ಕಡೆಗೆ ವಾಲಿದರು. ಫ್ಯಾಬ್ರಿಕೇಷನ್ ವ್ಯಾಪಾರಿಯಾದ ಮೇಲೆ ಮಕ್ಕಳನ್ನು ಕ್ರಿಕೆಟಿಗರನ್ನಾಗಿಸುವ ಸಂಕಲ್ಪ ಮಾಡಿದರು. ಹಾಗೆಂದು ವಿಶೇಷವಾಗಿ ಅವರಿಗೆ ಬೋಧನೆ ಮಾಡಲಿಲ್ಲ. ದೊಡ್ಡ ಮಗ ಆ್ಯರನ್ ಟ್ಯಾಮ್‌ವರ್ತ್‌ನ ಓಲ್ಡ್‌ ಬಾಯ್ಸ್‌ ಕ್ರಿಕೆಟ್‌ ಕ್ಲಬ್ ಸೇರಿಕೊಂಡ. ಸಿಡ್ನಿಯಿಂದ 300 ಕಿ.ಮೀ. ದೂರದಲ್ಲಿರುವ ಬೆಂಡೆಮೀರ್‌ ಎಂಬಲ್ಲಿನ 30 ಮಕ್ಕಳು ಕಲಿಯುತ್ತಿದ್ದ ಶಾಲೆಯಲ್ಲಿಯೇ ಆ್ಯರನ್ ಹಾಗೂ ಹ್ಯಾಜಲ್‌ವುಡ್ ವಿದ್ಯಾರ್ಥಿಗಳು. 300 ಮಂದಿ ವಾಸವಿದ್ದ ಸ್ಥಳದಲ್ಲಿ ಮೈದಾನಕ್ಕೇನೂ ಕೊರತೆ ಇರಲಿಲ್ಲ. ಶಾಸ್ತ್ರೀಯವಾಗಿ ಕಲಿಸಿಕೊಡುವ ಕ್ರಿಕೆಟ್ ಕ್ಲಬ್‌ ಬೇಕಿತ್ತು. ಆ ಕಾರಣಕ್ಕೆ ಮನೆಯಿಂದ 30 ಮೈಲಿ ದೂರದಲ್ಲಿದ್ದ ಕ್ಲಬ್‌ಗೆ ಆ್ಯರನ್ ಸೇರಿದ್ದು. ಅಣ್ಣನ ಹಾದಿಯಲ್ಲೇ ತಮ್ಮ ಬಲು ಬೇಗ ನಡೆದಾಗ ಅಪ್ಪ ಟ್ರೆವರ್‌ಗೆ ಖುಷಿಯೋ ಖುಷಿ. ಅವರಿಗೆ ಮೊದಲಿನಿಂದಲೂ ಚಿಕ್ಕಮಗನ ದೈಹಿಕ ಬೆಳವಣಿಗೆ ಬೆರಗಿನಂತೆ ಕಂಡಿತ್ತು. ಆ್ಯರನ್ ಆಡುತ್ತಿದ್ದ ಕ್ಲಬ್‌ನಲ್ಲೇ ಜೋಶ್‌ ಹ್ಯಾಜಲ್‌ವುಡ್‌ ಬೌಲಿಂಗ್ ವರಸೆಗಳನ್ನು ಕಲಿತದ್ದು. ಇಬ್ಬರಲ್ಲಿ ಅಣ್ಣ ಯಾರು, ತಮ್ಮ ಯಾರು ಎಂದು ಅನೇಕರು ತಬ್ಬಿಬ್ಬಾಗುತ್ತಿದ್ದರು. ಗ್ರೇಡ್‌ ಪಂದ್ಯವೊಂದು ಮುಗಿದ ಮೇಲೆ ಅಂಪೈರ್‌ ಒಬ್ಬರು, ಇಪ್ಪತ್ತು ಇಪ್ಪತ್ತೈದು ವಯಸ್ಸಿನವರನ್ನು ಯಾಕೆ ಆಡಿಸುತ್ತಿದ್ದೀರಿ ಎಂದು ಕೇಳಿದ್ದನ್ನು ಬೆನ್‌ ಮಿಡ್ಲ್‌ಬ್ರೂಕ್ ಎಂಬ ಅದೇ ತಂಡದ ಆಟಗಾರ ನೆನಪಿಸಿಕೊಂಡಿದ್ದರು. ಆ ಅಂಪೈರ್‌ ಕಣ್ಣಿಗೆ 13 ವರ್ಷದ ಹ್ಯಾಜಲ್‌ವುಡ್‌ ಇಪ್ಪತ್ತು ದಾಟಿದವನಂತೆ ಕಂಡಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಯಾಕೆಂದರೆ, ಅಷ್ಟು ಹೊತ್ತಿಗಾಗಲೇ ಅಪ್ಪನ ಭುಜದ ಮಟ್ಟಕ್ಕೆ ಬೆಳೆದಿದ್ದ. ಅವನ ನಿಜವಾದ ವಯಸ್ಸೆಷ್ಟು ಎಂದು ತಿಳಿದ ಮೇಲೆ ಅಂಪೈರ್ ಬೆಕ್ಕಸ ಬೆರಗಾಗಿದ್ದರು.

ದೈಹಿಕವಾಗಿ ಅಷ್ಟೇ ಹ್ಯಾಜಲ್‌ವುಡ್‌ ಬಲಾಢ್ಯನಾಗಿ ನಿಲ್ಲಲಿಲ್ಲ. ಬೌಲಿಂಗ್‌ನ ಮುಖ್ಯವಾದ ಕೌಶಲಗಳನ್ನು ರೂಢಿಸಿಕೊಳ್ಳುತ್ತಾ ಬಂದರು. ವೇಗ ಕಾಯ್ದುಕೊಳ್ಳುವುದರ ಜತೆಗೆ ಹಾಕಬೇಕು ಎಂದುಕೊಂಡ ಸ್ಥಳಕ್ಕೇ ಚೆಂಡು ಬೀಳುವಂತೆ ಮಾಡುವ ನಿಯಂತ್ರಣ ಸಾಧಿಸುವುದಕ್ಕೆ ಮಾಡಿದ ಅಭ್ಯಾಸ ಫಲ ಕೊಟ್ಟಿದೆ.

ಟ್ರೆವರ್ ಸ್ನೇಹಿತರು ದೊಡ್ಡ ಮಗ ಆ್ಯರನ್ ಆಲ್‌ರೌಂಡರ್ ಎಂಬ ಕಾರಣಕ್ಕೆ ಹೊಗಳುತ್ತಿದ್ದರು. ಅಪ್ಪನಿಗೆ ಚಿಕ್ಕ ಮಗನೇ ಆಸ್ಟ್ರೇಲಿಯಾ ತಂಡದ ಪರವಾಗಿ ಆಡುತ್ತಾನೆ ಎಂಬ ನಂಬುಗೆ. ಕೆಲವರು ಈ ವಿಷಯವಾಗಿ ಬೆಟ್ಟಿಂಗ್ ಕಟ್ಟಿದ್ದರು. ಟ್ರೆವರ್ ಕೂಡ ಮೂವತ್ತು ದಾಟುವ ಮೊದಲು ತಮ್ಮ ಚಿಕ್ಕಮಗ ಆಸ್ಟ್ರೇಲಿಯಾ ತಂಡದ ಹಸಿರು ಟೋಪಿ ತೊಡುತ್ತಾನೆ, ನೋಡ್ತಾ ಇರಿ ಎಂದು ಆತ್ಮವಿಶ್ವಾಸದ ನಗು ಚೆಲ್ಲಿದ್ದರು. 30 ತುಂಬುವ ಮೊದಲೇ ಹ್ಯಾಜಲ್‌ವುಡ್‌ 52 ಟೆಸ್ಟ್‌ ‍ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರವಾಗಿ ಆಡಿ, ಅಪ್ಪನ ಕನಸನ್ನು ನನಸಾಗಿಸಿದ್ದರು.

‘ನನ್ನ ಅಪ್ಪನಿಂದ ಸಾಕಷ್ಟು ಕಲಿತಿದ್ದೇನೆ. ನನ್ನ ದೇಹಾಕಾರ ಅವರಿಂದ ಬಂದ ಬಳುವಳಿ. ಹೆಚ್ಚೂಕಡಿಮೆ ನಮ್ಮಿಬ್ಬರದ್ದು ಒಂದೇ ಆಕಾರದ ಶರೀರ. ನಾನು ಕೆಲವು ಸೆಂ.ಮೀಗಳಷ್ಟು ಹೆಚ್ಚು ಎತ್ತರ ಇದ್ದೇನಷ್ಟೆ. ಅವರ ಎಷ್ಟೋ ಗುಣಗಳು ನನ್ನ ಆಟಕ್ಕೆ ವರದಾನವಾಗಿವೆ’ ಎಂದು ಹ್ಯಾಜಲ್‌ವುಡ್ ಭಾರತದ ವಿರುದ್ಧ ಗೆದ್ದಮೇಲೂ ಹೇಳಿಕೊಂಡಿದ್ದರು.

ಹೈ ಆರ್ಮ್ ಆ್ಯಕ್ಷನ್‌ ಹಾಗೂ ನಿಯಂತ್ರಿತ ವೇಗದಲ್ಲಿ ಓಡಿಬರುವ ರೀತಿ ಹ್ಯಾಜಲ್‌ವುಡ್‌ಗೆ ಚೆಂಡನ್ನು ತಮ್ಮ ಮನೋಲೆಕ್ಕಾಚಾರಕ್ಕೆ ತಕ್ಕಂತೆ ಬೌಲ್ ಮಾಡುವ ಕೌಶಲವನ್ನು ರೂಢಿಸಿವೆ. ಇದು ಮೆಕ್‌ಗ್ರಾ ಶೈಲಿ. ಇದೊಂದೇ ಕಾರಣಕ್ಕೆ ಪದೇ ಪದೇ ಹ್ಯಾಜಲ್‌ವುಡ್ ಅವರನ್ನು ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಮೆಕ್‌ಗ್ರಾ ಜತೆ ಹೋಲಿಸುತ್ತಾರೆ. ಇಂತಹ ಹೋಲಿಕೆ ಪ್ರಸ್ತಾಪವಾದಾಗಲೆಲ್ಲ ಮೂವತ್ತರ ಹರೆಯದ ಮಗುವಿನ ಮುಖದ ವೇಗಿಗೆ ಪುಳಕ.

2014ರಲ್ಲಿ ಭಾರತದ ಎದುರೇ ಈ ಪ್ರತಿಭಾವಂತ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟದ್ದು. 52 ಪಂದ್ಯಗಳಲ್ಲಿ 200 ವಿಕೆಟ್‌ಗಳ ಗಡಿ ದಾಟಿ ಮುಂದೆ ಸಾಗಿರುವುದು ಸಾಧನೆಯ ಪಥಕ್ಕೆ ಹಿಡಿದ ಕನ್ನಡಿ. 8 ಸಲ ಐದು ವಿಕೆಟ್‌ಗಳ ಗುಚ್ಛ ಪಡೆದಿದ್ದು, ಭಾರತದ ಎದುರು ಮೊನ್ನೆ ಬರೀ 8 ರನ್‌ಗಳನ್ನಷ್ಟೇ ಎರಡನೇ ಇನಿಂಗ್ಸ್‌ನಲ್ಲಿ ನೀಡಿದ್ದು ಆ ದೇಶದ ಪರವಾಗಿ ಯಾವ ಬೌಲರ್ ಕೂಡ ಸಾಧಿಸಿರದೇ ಇದ್ದ ವಿಕ್ರಮ. ಅಷ್ಟು ಕಡಿಮೆ ರನ್‌ಗಳನ್ನು ನೀಡಿ 5 ವಿಕೆಟ್‌ ಅನ್ನು ಇದುವರೆಗೆ ಆಸ್ಟ್ರೇಲಿಯಾದ ಯಾವ ಬೌಲರ್ ಕೂಡ ಪಡೆದಿರಲಿಲ್ಲ.

ನ್ಯೂಸೌತ್‌ ವೇಲ್ಸ್‌ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಡೇವಿಡ್‌ ಟರ್ಬ್ಯಾಟನ್ ಎಂಬ ಅಂಕಿಅಂಶ ತಜ್ಞರಿದ್ದಾರೆ. 12 ವರ್ಷದ ವಿದ್ಯಾರ್ಥಿಯೊಬ್ಬ ಜಾವೆಲಿನ್‌ ಅನ್ನು 53.11 ಮೀಟರ್ ದೂರಕ್ಕೆ ಎಸೆದ ದಾಖಲೆಯೊಂದನ್ನು ಅವರು ಹದಿನೆಂಟು ವರ್ಷಗಳ ಹಿಂದೆ ನೋಟ್ ಮಾಡಿಕೊಂಡಿದ್ದರು. ಅದು ಆಗ ಶಾಲಾ ದಾಖಲೆ. ಜಾವೆಲಿನ್ ಅನ್ನು ಅಷ್ಟು ದೂರಕ್ಕೆ ಎಸೆದಿದ್ದ ಹುಡುಗನಿಗೆ ಸರಿಯಾಗಿ ತರಬೇತಿ ಕೊಟ್ಟಿದ್ದಿದ್ದರೆ ಒಂದು ಒಲಿಂಪಿಕ್ ಮೆಡಲ್ ಗ್ಯಾರಂಟಿ ಸಿಗುತ್ತಿತ್ತು ಎಂದು ಅವರು ಹೇಳಿದ್ದರು.

ಅಷ್ಟು ದೂರಕ್ಕೆ ಜಾವೆಲಿನ್ ಎಸೆದಿದ್ದ ಹುಡುಗ ಬೇರೆ ಯಾರೂ ಅಲ್ಲ, ಹ್ಯಾಜಲ್‌ವುಡ್. ‘ಆಗ ನನಗೆ ಕ್ರೀಡೆ ಮನರಂಜನೆಯಾಗಿತ್ತು. ಚಳಿಗಾಲದಲ್ಲಿ ಅನೇಕ ಸ್ಪರ್ಧೆಗಳಿಗೆ ಹೋಗುತ್ತಿದ್ದೆ. ಜಾವೆಲಿನ್ ಥ್ರೋ ಕೂಡ ಅದರಲ್ಲಿ ಒಂದು. ಎಷ್ಟೋ ಚಿನ್ನದ ಪದಕಗಳನ್ನು ಆಗ ಗೆದ್ದಿದ್ದೆ. ದಾಖಲೆಯ ಬಗೆಗೆ ಏನೇನೂ ತಲೆಕೆಡಿಸಿಕೊಂಡಿರಲಿಲ್ಲ. ಕ್ರಿಕೆಟ್‌ ನನಗೆ ನೆಲೆ ಕೊಟ್ಟಿತು. ಈಗ ಅದರಲ್ಲೇ ಇಷ್ಟರಮಟ್ಟಿಗೆ ಆಡಲು ಸಾಧ್ಯವಾಗಿರುವುದು ಹೆಮ್ಮೆ’ ಎಂದು ಹ್ಯಾಜಲ್‌ವುಡ್ ನಮ್ರವಾಗಿ ಹೇಳುತ್ತಾರೆ.

ಟ್ರೆವರ್ ತಮ್ಮ ಮಗನ ಜತೆ ಹೊಸ ವರ್ಷದ ಪಾರ್ಟಿಯನ್ನು ತಡವಾಗಿಯಾದರೂ ಆಚರಿಸಲು ಉತ್ಸುಕರಾಗಿದ್ದಾರೆ. ‘ವೆಲ್‌ಕಮ್‌ ಟು ಬೆಂಡೆಮೀರ್–ದಿ ಹೋಮ್‌ಟೌನ್ ಆಪ್ ಹ್ಯಾಜಲ್‌ವುಡ್’ ಎಂಬ ಊರಿನ ತಲೆಬಾಗಿಲಿನಲ್ಲಿ ಇರುವ ಹಳದಿ ಬೋರ್ಡ್‌ ಕೂಡ ಕಾಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.