35ನೇ ಟೆಸ್ಟ್ ಪಂದ್ಯ ಆಡುವ ಹೊತ್ತಿಗೆ ನಾಲ್ಕು ಶತಕಗಳನ್ನು ಗಳಿಸಿದ್ದ ರವಿಚಂದ್ರನ್ ಅಶ್ವಿನ್ ಇನ್ನೊಂದು ನೂರನ್ನು ಗಳಿಸಲು 41 ಪಂದ್ಯಗಳನ್ನು ತೆಗೆದುಕೊಂಡರು. ಕಳೆದ ಕೆಲವು ತಿಂಗಳುಗಳಲ್ಲಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೊಟ್ಟ ಕೆಲವು ಟಿಪ್ಸ್‌ನಿಂದ ಮತ್ತೆ ಅವರಿಗೆ ಬ್ಯಾಟಿಂಗ್ ಹಳಿಗೆ ಮರಳಲು ಸಾಧ್ಯವಾಗಿದೆ. ಸದಾ ಅಶ್ವಿನ್ ಬೌಲಿಂಗ್ ಕುರಿತೇ ಮಾತನಾಡುವ ನಾವು, ಈಗ ಅವರ ಬ್ಯಾಟಿಂಗ್ ಪ್ರತಿಭೆಯ ಕಡೆಗೆ ಕಣ್ಣುಹಾಯಿಸಬೇಕಿದೆ.
***
ಸರಿಯಾಗಿ ವರ್ಷದ ಹಿಂದೆ ಕ್ರಿಕೆಟ್ ಲೇಖಕರೊಬ್ಬರು ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರಶ್ನಿಸುತ್ತಾ, ಕೆಲವು ಅಂಕಿಅಂಶಗಳ ಸಮೇತ ವಿಶ್ಲೇಷಣೆ ಬರೆದಿದ್ದರು. ರವೀಂದ್ರ ಜಡೇಜಾ ಅವರೊಂದಿಗೆ ಹೋಲಿಸಿ ಅಶ್ವಿನ್ ಭವಿಷ್ಯದ ಎದುರು ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಂತಹ ಬರಹ ಅದು. ಅಶ್ವಿನ್ ಈಗ ಆ ಪ್ರಶ್ನಾರ್ಥಕ ಚಿಹ್ನೆಯನ್ನು ದೊಡ್ಡ ರಬ್ಬರ್‌ನಿಂದ ಅಳಿಸಿಹಾಕಿದ್ದಾರೆ. ಚೆನ್ನೈನ ಪಿ. ಚಿದಂಬರಂ ಕ್ರೀಡಾಂಗಣದ ಗರಿಕೆ ಗರಿಕೆಯೂ ಅಶ್ವಿನ್ ಆಟಕ್ಕೆ ಪದೇ ಪದೇ ಸಾಕ್ಷಿಯಾಗಿವೆ. ಇಂಗ್ಲೆಂಡ್ ಎದುರು 2ನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅವರು ದಾಖಲಿಸಿದ ಶತಕ ಈ ಕಾರಣದಿಂದಾಗಿ ತೂಕದ್ದು.
ಅಶ್ವಿನ್ ಬ್ಯಾಟಿಂಗ್ ಮಾಡಲು ಬಂದಾಗ ಕ್ರೀಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಇದ್ದರು. ಅವರು ಒಂದೂ ಸ್ವೀಪ್ ಮಾಡಿರಲಿಲ್ಲ. ಚೆಂಡು ಹೆಚ್ಚು ತಿರುವು ಪಡೆಯುತ್ತಾ, ನಿರ್ದಿಷ್ಟ ಜಾಗದ ಮೇಲೆ ಬಿದ್ದಾಗ ದಿಢೀರನೆ ನುಗ್ಗಿಬರುತ್ತಾ ತೊಂದರೆ ಕೊಡುತ್ತಿರುವುದನ್ನು ಅಧ್ಯಯನ ಮಾಡುವ ರೀತಿಯಲ್ಲಿ ತಣ್ಣಗೆ ಆಡುತ್ತಿದ್ದರು. ಆ ಹೊತ್ತಿಗೆ ಭಾರತ ಗೆದ್ದೇ ಗೆಲ್ಲುತ್ತದೆ ಎನ್ನುವಷ್ಟು ಸುರಕ್ಷಿತ ಸ್ಥಿತಿಗೆ ತಲುಪಿತ್ತು ಎಂದು ಹೇಳಲೂ ಸಾಧ್ಯವಿರಲಿಲ್ಲ. ಅಶ್ವಿನ್ ಬಂದವರೇ ಮೊದಮೊದಲೇ ಸ್ವೀಪ್‌ಗಳನ್ನು ಮಾಡಿದರು. ಅದು ಸುಮ್ಮನೆ ಪ್ರಯೋಗಕ್ಕೆ ಇರಲಿ ಎನ್ನುವಂತೆ ಮಾಡಿದ್ದಲ್ಲ; ಅಧಿಕಾರಯುತವಾಗಿ ದೀರ್ಘ ಕಾಲದ ಅಭ್ಯಾಸ ಕೊಟ್ಟ ಫಲ ಎನ್ನುವಂತೆ ಮಾಡಿದ್ದು. ಚೆನ್ನಾಗಿಯೇ ಬೌಲ್ ಮಾಡುತ್ತಿದ್ದ ಇಂಗ್ಲೆಂಡ್‌ನ ಜಾಕ್ ಲೀಚ್ ಕೂಡ ಅವಾಕ್ಕಾಗುವಂತಹ ಸ್ವೀಪ್‌ಗಳು ಅವು. ಹೀಗೆ ಶುರುವಾದ ಅಶ್ವಿನ್ ಆಟ ರಿವರ್ಸ್ ಸ್ವೀಪ್, ಡ್ರೈವ್, ಸ್ಟ್ಕ್ವೇರ್ ಕಟ್ ಹೀಗೆ ವೈವಿಧ್ಯಕ್ಕೂ ತೆರೆದುಕೊಂಡಿತು. ಇಶಾಂತ್ ಶರ್ಮಾ ಜತೆ ಶತಕದತ್ತ ಇನ್ನಷ್ಟು ಹೆಜ್ಜೆಗಳನ್ನಿಟ್ಟರು. ಮೊಹಮ್ಮದ್ ಸಿರಾಜ್ ಕೊನೆಯ ಬ್ಯಾಟ್ಸ್‌ಮನ್ ಆಗಿ ಇಳಿದ ಮೇಲೆ ಸಿಕ್ಸರ್ ಹೊಡೆಯುವ ಮನಸ್ಸನ್ನೂ ಮಾಡಿದರು. ಅಶ್ವಿನ್ ಆಟ ಹೀಗೆಲ್ಲ ಅಲಂಕೃತಗೊಂಡದ್ದಾದರೂ ಹೇಗೆ ಎಂಬ ಪ್ರಶ್ನೆ ಕ್ರಿಕೆಟ್ಟನ್ನು ಸೂಕ್ಷ್ಮವಾಗಿ ಗಮನಿಸುವ ಯಾರಿಗೇ ಆದರೂ ಅನ್ನಿಸಿರದೇ ಇರದು.
ಆಟದ ನಂತರ, ಅಶ್ವಿನ್ ಅದರ ಹಿಂದೆ ಇದ್ದ ಶ್ರಮವನ್ನು ನೆನಪಿಸಿಕೊಂಡರು. ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಅವರು ಸ್ವೀಪ್ ಶಾಟ್ ಅಭ್ಯಾಸ ಮಾಡುತ್ತಾ ಗೋಡೆಗೆ ಚೆಂಡನ್ನು ಹೊಡೆಯುತ್ತಿದ್ದುದು, ಆಸ್ಟ್ರೇಲಿಯಾದಲ್ಲಿ ನೆಟ್ಸ್ ಅಭ್ಯಾಸ ಮಾಡಲು ಪ್ರಾರಂಭಿಸಿದಾಗ ಅದೇ ಹೊಡೆತವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದು, ಚೆನ್ನೈನಲ್ಲೂ ಅದನ್ನೇ ಮುಂದುವರಿಸಿದ್ದು ಎಲ್ಲವನ್ನೂ ಹೇಳಿಕೊಂಡರು. ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರಿಗೆ ವಿಶೇಷವಾಗಿ ಅವರು ಕ್ರೆಡಿಟ್ಟನ್ನು ಕೊಟ್ಟರು.
ಆರು ಟೆಸ್ಟ್ ಹಾಗೂ ಏಳು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ಆಡಿರುವ ವಿಕ್ರಮ್, ಏಕದಿನ ಪಂದ್ಯಗಳಲ್ಲಿ ಒಂದು ಅರ್ಧ ಶತಕ ಗಳಿಸಿದ್ದರಷ್ಟೆ. ದೇಸಿ ಕ್ರಿಕೆಟ್‌ನಲ್ಲಿ ತೋರಿದ್ದಂತಹ ಜಿಗುಟುತನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ 1990ರ ದಶಕದ ನಡುಘಟ್ಟದಲ್ಲಿ ಅವರಿಗೆ ತೋರಲು ಸಾಧ್ಯವಾಗಿರಲಿಲ್ಲ. ಸಂಜಯ್ ಬಾಂಗರ್ ನಂತರ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡ ಮೇಲೆ ಅವರು ತರಬೇತಿಯಲ್ಲಿ ಆಟಗಾರರಿಗೆ ನೀಡುತ್ತಿರುವ ಸ್ವಾತಂತ್ರ್ಯದ ಬಗೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪಿನ್ನರ್ ಆಲ್‌ರೌಂಡರ್‌ಗಳು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ಒತ್ತುನೀಡುವುದು ಕಡಿಮೆ. ಹರಭಜನ್ ಸಿಂಗ್ ತರಹದವರು ಅಭ್ಯಾಸಕ್ಕೆ ಸಿಗುತ್ತಿದ್ದ ಅವಕಾಶದಲ್ಲಿ ಆಕಾಶಕ್ಕೆ ಚೆಂಡನ್ನು ಹೊಡೆಯುತ್ತಾ ಸುಖಿಸುತ್ತಿದ್ದರು. ಆದರೆ, ಹೊಸ ತಲೆಮಾರಿನ ಮೇಲೆ ಪಂದ್ಯವನ್ನು ಉಳಿಸಿಕೊಳ್ಳುವ ಅಥವಾ ಗೆಲುವನ್ನು ಎಳೆದುಕೊಳ್ಳುವ ಸವಾಲು ಇದೆ. ಚುಟುಕು ಕ್ರಿಕೆಟ್ ಹಾಗೂ ಏಕದಿನದ ಪಂದ್ಯಗಳ ಮಾದರಿಗೆ ಒಗ್ಗಿಕೊಂಡ ಮನಸ್ಸನ್ನು ಅದರಿಂದ ಕಿತ್ತು, ಸಂಯಮದ ಸಾಣೆಗೆ ಒಡ್ಡಿಕೊಳ್ಳುವಂತೆ ಮಾಡುವುದು ಸವಾಲೇ ಸರಿ. ವಿಕ್ರಮ್ ಹೇಳಿಕೊಡುತ್ತಿರುವ ಪಾಠಗಳು ಅಂತಹ ಕೆಲವು ಸತ್ಫಲಗಳನ್ನು ನೀಡುವ ಶಕ್ತಿಯನ್ನು ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳಿಗೂ ತುಂಬುತ್ತಿದೆ. ವಾಷಿಂಗ್ಟನ್ ಸುಂದರ್ ಮೊದಲ ಟೆಸ್ಟ್‌ನಲ್ಲಿ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿರಲಿಲ್ಲವಾದರೂ, ಬ್ಯಾಟಿಂಗ್ ಬಲವನ್ನು ತೋರಿದ್ದರು. ಆಸ್ಟ್ರೇಲಿಯನ್ನರ ಎದುರು ಶಾರ್ದೂಲ್ ಠಾಕೂರ್ ಮಾಡಿದ್ದ ಡ್ರೈವ್‌ಗಳ ನೆನಪಿನ್ನೂ ಮಾಸಿಲ್ಲ. ಇಶಾಂತ್ ಶರ್ಮ ಕೂಡ ಒಂದು ಡ್ರೈವ್ ಮಾಡಿದ್ದನ್ನು ನೋಡಿ ವಿರಾಟ್ ಕೊಹ್ಲಿ ಎದ್ದುನಿಂತು ಮೊನ್ನೆ ಚಪ್ಪಾಳೆ ಹೊಡೆದರು. ಹೀಗಿರುವಾಗ, ಮೊಹಮ್ಮದ್ ಸಿರಾಜ್ ಸಿಕ್ಸರ್ ಹೊಡೆದರೆ ಪುಳಕವಾಗದೇ ಇದ್ದೀತೇ?
ಎದುರಾಳಿಯನ್ನು ಕಾಡುವಂಥ ಬ್ಯಾಟಿಂಗ್ ಬಲವೀಗ ಭಾರತಕ್ಕೆ ದಕ್ಕಿರುವುದರಲ್ಲಿ ಅಶ್ವಿನ್ ತಂತ್ರಗಾರಿಕೆಯ ಪಾತ್ರವೂ ಇದೆಯೆನ್ನಿ. ವಿಂಡೀಸ್ ತಂಡದ ಎದುರು ಅಶ್ವಿನ್ ನಾಲ್ಕು ಶತಕಗಳನ್ನು ದಾಖಲಿಸಿದವರು. 2016ರ ನಂತರ ಅವರ ಬ್ಯಾಟ್‌ನಿಂದ ಶತಕ ಬಂದಿರಲಿಲ್ಲ. ಹನ್ನೊಂದು ವರ್ಷಗಳಾದ ಮೇಲೆ ಸ್ವೀಪ್ ಹೊಡೆತಗಳನ್ನು ಪ್ರಯೋಗಿಸಿ ಸ್ಪಿನ್ನರ್‌ಗಳನ್ನು ಅವರು ಕಂಗಾಲು ಮಾಡಿದರು. ಅಂದರೆ, ಅಂತರರಾಷ್ಟ್ರೀಯ ಕ್ರಿಕೆಟ್ ಆಡತೊಡಗಿದ ಮೇಲೆ ಆ ಶಾಟ್ ಅನ್ನು ಅನಾವರಣಗೊಳಿಸಲು ಅವರು ಮನಸ್ಸನ್ನೇ ಮಾಡಿರಲಿಲ್ಲ. ಹಾಗೆ ನೋಡಿದರೆ ಕ್ರಿಕೆಟ್ ಬದುಕನ್ನು ಆರಂಭಿಕ ಆಟಗಾರನಾಗಿ ಶುರುಮಾಡಿದ ಅವರಿಗೆ ಬ್ಯಾಟಿಂಗ್ ತಂತ್ರಗಾರಿಕೆಯ ಅರಿವು ಚೆನ್ನಾಗಿಯೇ ಇದೆ. ಆಫ್ ಸ್ಪಿನ್ನರ್ ಆಗಿ ಬದಲಾದ ಮೇಲೆ ಆ ಕಡೆಗೆ ಹೆಚ್ಚು ನಿಗಾ ಮಾಡತೊಡಗಿದರಷ್ಟೆ.
2017ರ ನಂತರ ಅಶ್ವಿನ್ ಬ್ಯಾಟಿಂಗ್ ಖರಾಬೆನ್ನಿಸತೊಡಗಿತು. 36 ಇನಿಂಗ್ಸ್‌ಗಳ ಪೈಕಿ 20ರಲ್ಲಿ ಅವರು ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ಅದರಲ್ಲೂ ಇನ್‌ಸ್ವಿಂಗರ್‌ಗಳನ್ನು ಆಡಲು ತಡಬಡಾಯಿಸುತ್ತಿದ್ದರು. 2017ರ ಆಗಸ್ಟ್‌ನಲ್ಲಿ ಶ್ರೀಲಂಕಾ ಎದುರು ಅರ್ಧಶತಕ ಗಳಿಸಿದ್ದು ಬಿಟ್ಟರೆ ಅವರು 30 ಎಸೆತಗಳನ್ನು ಆಡುವಷ್ಟರಲ್ಲಿ ವಿಕೆಟ್ ಒಪ್ಪಿಸಿದ್ದೇ ಹೆಚ್ಚು. ಏಳು ಸಲ ಮಾತ್ರ 50ಕ್ಕೂ ಹೆಚ್ಚು ಎಸೆತಗಳನ್ನು ಆಡಲು ಸಾಧ್ಯವಾಗಿತ್ತು. ಆಸ್ಟ್ರೇಲಿಯಾದಲ್ಲಿ ಅವರು ಹಾಗೂ ಹನುಮ ವಿಹಾರಿ ಪಂದ್ಯವೊಂದನ್ನು ಡ್ರಾ ಮಾಡಿಕೊಳ್ಳಲು ಸುದೀರ್ಘಾವಧಿ ಆಡಿದ ಮೇಲೆ ಹಳೆಯ ಗಾಯಗಳೆಲ್ಲ ಮಾಯವಾದಂತೆ ಕಂಡಿತು.
ಅಶ್ವಿನ್ ಇದುವರೆಗೆ 76 ಟೆಸ್ಟ್‌ಗಳನ್ನು ಆಡಿದ್ದಾರೆ. 3, 17, 33, 35ನೇ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಶತಕಗಳು ಹೊಮ್ಮಿದ್ದವು; ಎಲ್ಲವೂ ವಿಂಡೀಸ್ ವಿರುದ್ಧ. ಆ ಹಂತದಲ್ಲಿ ವಿಂಡೀಸ್ ಅನ್ನು ದುರ್ಬಲ ಎಂದೇ ಭಾವಿಸಲಾಗಿತ್ತು. ಇನ್ನೊಂದು ಶತಕ ಗಳಿಸಲು ಅವರಿಗೆ 41 ಟೆಸ್ಟ್‌ಗಳು ಬೇಕಾದದ್ದು ಅಚ್ಚರಿಯೇ ಹೌದು. ಇಂಗ್ಲೆಂಡ್ ವಿರುದ್ಧ ತವರು ನೆಲದಲ್ಲಿ ಈ ಶತಕ ಹೊಮ್ಮಿದ್ದು ಅವರಿಗೆ ಸ್ಮರಣೀಯ.
ಇನ್ನು ಆರು ವಿಕೆಟ್ ಪಡೆದರೆ 400ರ ಗಡಿ ದಾಟಲಿರುವ ತಮಿಳುನಾಡಿನ ಈ ಪ್ರತಿಭೆ, ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವೀಧರ. ಚೆಂಡು ಎಲ್ಲಿ ಬಿದ್ದು ಎಷ್ಟು ಡಿಗ್ರಿ ತಿರುವು ಪಡೆದರೆ ಯಾವ ಬ್ಯಾಟ್ಸ್‌ಮನ್ ಹೇಗೆಲ್ಲ ಸಮಸ್ಯೆಗೆ ಸಿಲುಕುತ್ತಾರೆ ಎನ್ನುವುದನ್ನು ಚಿತ್ರ ಬರೆದು ಭೌತವಿಜ್ಞಾನಿಯಂತೆ ಅವರು ವಿವರಿಸುತ್ತಾರೆ ಎಂದು ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಒಮ್ಮೆ ಹೇಳಿದ್ದರು. ದೇಶದ ಇನ್ನೊಬ್ಬ ಹಳೆಯ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಕೂಡ ಇದೇ ರೀತಿ ಸ್ಪಿನ್ ತಂತ್ರ ಬಣ್ಣಿಸುತ್ತಾರೆ. ಅವರಿಂದ ಕ್ರಿಕೆಟ್ ಪಾಠಗಳನ್ನು ಕಲಿತಾಗ ದೇಸಿ ಕ್ರಿಕೆಟ್‌ನಲ್ಲಿ ವಿಕ್ರಮ್ ರಾಥೋಡ್ ಮಿಂಚಿದ್ದರು. ಈಗ ಇದೇ ವಿಕ್ರಮ್ ಅವರಿಂದ ಬ್ಯಾಟಿಂಗ್ ತಂತ್ರಗಳನ್ನು ಅಳವಡಿಸಿಕೊಂಡು ಅಶ್ವಿನ್ ಹೊಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.