ಬೆಂಗಳೂರು: ‘ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಕಣಕ್ಕಿಳಿಯುವ ಅವಕಾಶ ಸಿಗುವುದಿಲ್ಲವೆಂಬುದು ಪಂದ್ಯ ಆರಂಭದ 48 ಗಂಟೆಗಳ ಮೊದಲೇ ನನಗೆ ತಿಳಿದಿತ್ತು‘ ಎಂದು ಭಾರತ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಹೇಳಿದ್ದಾರೆ.
ವಿಶ್ವದ ಅಗ್ರ ಶ್ರೇಯಾಂಕದ ಬೌಲರ್ ಆರ್. ಅಶ್ವಿನ್ ತಮ್ಮನ್ನು ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ಹನ್ನೊಂದರ ಬಳಗದಿಂದ ಕೈಬಿಟ್ಟಿದರ ಕುರಿತು ಇದೇ ಮೊದಲ ಬಾರಿಗೆ ಇಂಗ್ಲಿಷ್ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
’ಡಬ್ಲ್ಯಟಿಸಿ ಫೈನಲ್‌ನಲ್ಲಿ ಆಡುವ ಅದಮ್ಯ ಹಂಬಲ ಹೊಂದಿದ್ದೆ. ತಂಡವು ಈ ಹಂತಕ್ಕೆ ತಲುಪಲು ಉಪಯುಕ್ತ ಕಾಣಿಕೆ ನೀಡಿದ್ದೆ. ಅಷ್ಟೇ ಅಲ್ಲ; ಮೊದಲ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡಿದ್ದಾಗ ನಾಲ್ಕು ವಿಕಟ್ ಕೂಡ ಗಳಿಸಿದ್ದೆ. ಆದರೆ ಈ ಬಾರಿ ಆಡಲು ಅವಕಾಶ ಪಡೆಯದಿರುವುದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಆದರೆ ಇದನ್ನು ಹಿನ್ನಡೆಯೆಂದು ಭಾವಿಸುವುದಿಲ್ಲ. ಇದೊಂದು ಅಡಚಣೆಯಷ್ಟೇ‘ ಎಂದು 36 ವರ್ಷದ ಅಶ್ವಿನ್ ಹೇಳಿದ್ದಾರೆ.
’2018-19ರಿಂದ ನಾನು ವಿದೇಶಿ ಪಿಚ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿರುವೆ. ತಂಡದ ಗೆಲುವಿಗಾಗಿ ಶ್ರೇಷ್ಟ ಬೌಲಿಂಗ್ ಪ್ರದರ್ಶನ ನೀಡಿದ್ದೆ. ಇಂಗ್ಲೆಂಡ್‌ನಲ್ಲಿ ನಾಲ್ವರು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್ ಇರುವ ಬೌಲಿಂಘ್ ಸಂಯೋಜನೆ ಸಾಕು ಎಂದು ತಂಡಕ್ಕೆ ಅನಿಸಿರಬೇಕು. ಆದರೆ ಅಲ್ಲಿಯ ಪಿಚ್‌ಗಳಲ್ಲಿ ನಾಲ್ಕನೇ ಇನಿಂಗ್ಸ್‌ಗಳಲ್ಲಿ ಸ್ಪಿನ್ನರ್ ಪಾತ್ರ ಮುಖ್ಯವಾಗುತ್ತದೆ. ಕೊನೆಯ ಇನಿಂಗ್ಸ್ ಯಾವಾಗಲೂ ಸವಾಲಿನದ್ದು‘ ಎಂದರು.
’ನನ್ನ ಕುರಿತು ಬೇರೆ ಯಾರೋ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದುಕೊಳ್ಳೂವುದು ಮೂರ್ಖತನವಾಗುತ್ತದೆ. ಬೇರೆಯವರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂದು ಚಿಂತಿಸುವ ಹಂತದಲ್ಲಿ ನಾನಿಲ್ಲ. ನನ್ನ ಸಾಮರ್ಥ್ಯದ ಕುರಿತು ಚೆನ್ನಾಗಿ ಅರಿವಿದೆ. ನನಗೆ ನಾನೇ ಅತ್ಯುತ್ತಮ ವಿಶ್ಲೇಷಣೆಕಾರ. ಯಾರೇನೆ ಮಾಡಿದರೂ ಅದು ನನಗೆ ಸಂಬಂಧವಿಲ್ಲ‘ ಎಂದು ಅಶ್ವಿನ್ ಹೇಳಿದ್ದಾರೆ.
’ಚಿಕ್ಕವನಿದ್ದಾಗ ಟಿವಿಯಲ್ಲಿ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತಿದ್ದೆ. ಯಾವಾಗಲೂ ಬ್ಯಾಟರ್‌ಗಳೇ ವಿಜೃಂಭಿಸುತ್ತಿದ್ದರು. ಸಚಿನ್ ತೆಂಡೂಲ್ಕರ್ ನನ್ನ ಅಚ್ಚುಮೆಚ್ಚಿನ ಆಟಗಾರನಾಗಿದ್ದು. ಅವರು ಉತ್ತಮವಾಗಿ ಆಡಿ ರನ್ ಗಳಿಸುತ್ತಿದ್ದರು. ಆದರೆ ನಮ್ಮ ಬೌಲರ್‌ಗಳೂ ರನ್‌ಗಳನ್ನು ಬಿಟ್ಟುಕೊಡುತ್ತಿದ್ದರು. ಇದರಿಂದಾಗಿ ಭಾರತಕ್ಕೆ ಪಂದ್ಯ ಗೆದ್ದುಕೊಡುವ ಬೌಲರ್ ಆಗಬೇಕೆಂಬ ಛಲದಿಂದ ಅಭ್ಯಾಸ ಮಾಡಿ ಬೆಳೆದ. ಆದರೆ ಮುಂದೆ ನಿವೃತ್ತಿಯ ನಂತರ ನಾನು ಬ್ಯಾಟರ್ ಆಗಬೇಕಿತ್ತು, ಬೌಲರ್ ಅಲ್ಲ ಎಂಬ ಪಶ್ವಾತ್ತಾಪವಾಗುವ ಸಾಧ್ಯತೆ ಇದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.