ADVERTISEMENT

ಏಷ್ಯಾಕಪ್ ಟೂರ್ನಿಗೆ ಚಾಹಲ್, ಅಶ್ವಿನ್‌ ಆಯ್ಕೆ ಆಗಬೇಕಿತ್ತು: ಮದನ್ ಲಾಲ್

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 15:44 IST
Last Updated 22 ಆಗಸ್ಟ್ 2023, 15:44 IST
ಆರ್‌. ಅಶ್ವಿನ್
ಆರ್‌. ಅಶ್ವಿನ್    

ಮುಂಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಆಯ್ಕೆಯಾಗಿರುವ ಭಾರತ ತಂಡದಲ್ಲಿ ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಇರಬೇಕಿತ್ತು ಎಂದು ಮಾಜಿ ಕ್ರಿಕೆಟಿಗರಾದ ಮದನ್ ಲಾಲ್ ಮತ್ತು ಕರ್ಸನ್ ಗಾವ್ರಿ ಅಭಿಪ್ರಾಯಪಟ್ಟಿದ್ದಾರೆ.

ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಪ್ರಮುಖ ಸ್ಪಿನ್ನರ್ ಆಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಎಡಗೈ ಸ್ಪಿನ್, ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಕೂಡ ತಂಡದಲ್ಲಿದ್ಧಾರೆ.

‘ಅಶ್ವಿನ್ 500–600 ವಿಕೆಟ್‌ಗಳನ್ನು ಗಳಿಸಿರುವ ಅನುಭವಿ. ವಿಕೆಟ್‌ ಗಳಿಸುವ ಕಲೆ ಅವರಿಗೆ ಚೆನ್ನಾಗಿ ಗೊತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿಯೂ ಅವರನ್ನು ಆಡಿಸಲಿಲ್ಲ. ತಂಡದ ವ್ಯವಸ್ಥಾಪಕ ತಂಡಕ್ಕೇ ಇದು ಗೊತ್ತಿರಬೇಕು‘ ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಆಡಿದ್ದ ಮದನ್ ಲಾಲ್ ಹೇಳಿದ್ದಾರೆ.

ADVERTISEMENT

ಸೋಮವಾರ ರಾತ್ರಿ ನಡೆದ ಸಿಯೆಟ್ ಕ್ರಿಕೆಟ್ ರೇಟಿಂಗ್ ಪ್ರಶಸ್ತಿ  ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಒಟ್ಟು 712 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಗಳಿಸಿದ ನಂತರವೂ ಅಶ್ವಿನ್ ಇನ್ನೂ ಏನು ಸಾಬೀತುಪಡಿಸಬೇಕಿದೆ? ಅನುಭವಿ ಆಟಗಾರನಿಗೆ ಸಿಗಬೇಕಾದ ಮನ್ನಣೆ ಅವರಿಗೆ ಸಿಗುತ್ತಿಲ್ಲ. ಉತ್ತಮ ಕೌಶಲ ಇರುವ ಆಟಗಾರ ಅಶ್ವಿನ್. ಏಷ್ಯಾ ಕಪ್ ಟೂರ್ನಿಗೆ ಅವರನ್ನು ಆಯ್ಕೆ ಮಾಡಬೇಕಿತ್ತು. ಭಾರತದಲ್ಲಿಯೇ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿಯೂ ಅವರು ಪರಿಣಾಮಕಾರಿಯಾಗಬಲ್ಲರು‘ ಎಂದು ಕರ್ಸನ್ ಗಾವ್ರಿ ಹೇಳಿದರು.

ಯಜುವೇಂದ್ರ ಚಾಹಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.