ADVERTISEMENT

BAN vs SA ಮೊದಲ ಟೆಸ್ಟ್‌| 106 ರನ್‌ಗೆ ಬಾಂಗ್ಲಾ ಆಲೌಟ್: ದ. ಆಫ್ರಿಕಾಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:14 IST
Last Updated 21 ಅಕ್ಟೋಬರ್ 2024, 15:14 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಮೀರ್‌ಪುರ್‌ (ಬಾಂಗ್ಲಾದೇಶ): ಬಾಂಗ್ಲಾದೇಶ ತಂಡ, ಸೋಮವಾರ ಆರಂಭವಾದ  ಮೊದಲ ಕ್ರಿಕೆಟ್‌ ಟೆಸ್ಟ್‌ನ ಮೊದಲ ದಿನ ಕೇವಲ 106 ರನ್‌ಗಳಿಗೆ ಉರುಳಿತು. ದಿನದ ಕೊನೆಗೆ ದಕ್ಷಿಣ ಆಫ್ರಿಕಾ ಮುನ್ನಡೆ ಪಡೆದರೂ, 140 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ ಕಳೆದುಕೊಂಡಿದೆ.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ (26ಕ್ಕೆ3) ಈ ಪಂದ್ಯದಲ್ಲಿ 300 ವಿಕೆಟ್‌ ಪೂರೈಸಿದರು. ಆದರೆ ದಾಖಲೆಯೊಂದರ ಒಡೆಯರೂ ಆದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 39 ಮಂದಿ ಬೌಲರ್‌ಗಳು ಈ ಮೈಲಿಗಲ್ಲು ದಾಟಿದರೂ, ರಬಾಡ ಈ ಸಾಧನೆಗೆ ಉಳಿದವರಿಗಿಂತ ಕಡಿಮೆ ಎಸೆತಗಳನ್ನು ಬಳಸಿದ್ದಾರೆ.

ADVERTISEMENT

ಟಾಸ್‌ ಗೆದ್ದು ಬ್ಯಾಟ್ ಮಾಡಲು ನಿರ್ಧರಿಸಿದ ಬಾಂಗ್ಲಾ ದೇಶ ಆರಂಭದಿಂದಲೇ ಕುಸಿಯಿತು. ಅದರ ಅಗ್ರ ಆರು ಆಟಗಾರರಲ್ಲಿ ನಾಲ್ವರು ಎರಡಂಕಿ ಮೊತ್ತ ತಲುಪಲಾಗಲಿಲ್ಲ. ವೇಗದ ಬೌಲರ್‌ಗಳು ಮೊದಲ ಆರು ವಿಕೆಟ್ ಪಡೆದರೆ, ಸ್ಪಿನ್ನರ್ ಕೇಶವ ಮಹಾರಾಜ್ (34ಕ್ಕೆ3) ಕೊನೆಯಲ್ಲಿ ಪೆಟ್ಟುಕೊಟ್ಟರು.

ದಕ್ಷಿಣ ಆಫ್ರಿಕ ಕೂಡ ನಿಯಮಿತವಾಗಿ ವಿಕೆಟ್‌ ಕಳೆದುಕೊಂಡಿತು. ವೇಗಿ ಹಸನ್‌ ಮೆಹಮೂದ್‌ ಆರಂಭದಲ್ಲೇ ಏಡನ್‌ ಮರ್ಕರಂ (6) ವಿಕೆಟ್‌ ಪಡೆದರು. ನಂತರ ಎಡಗೈ ಸ್ಪಿನ್ನರ್ ತೈಜುಲ್‌ ಇಸ್ಲಾಂ ಐದು ವಿಕೆಟ್‌ ಗೊಂಚಲಿನೊಡನೆ ಹರಿಣಗಳ ಪಡೆ ಸಂಪೂರ್ಣ ಹತೋಟಿ ಸಾಧಿಸದಂತೆ ನೋಡಿಕೊಂಡರು.

ಆಗಸ್ಟ್ ತಿಂಗಳ ವಿದ್ಯಾರ್ಥಿ ಚಳವಳಿಯ ನಂತರ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಇದಾಗಿದೆ. ಚಳವಳಿಕಾರರ ಆಕ್ರೋಶಕ್ಕೆ ಬೆದರಿ, ಆಲ್‌ರೌಂಡರ್ ಹಾಗೂ ಆಡಳಿತ (ಅವಾಮಿ ಲೀಗ್‌) ಪಕ್ಷದ ಮಾಜಿ ಸಂಸದ ಸಕೀಬ್ ಅಲ್ ಹಸನ್ ದೇಶ ತೊರೆದಿದ್ದರು. ಟೆಸ್ಟ್‌ ಪಂದ್ಯಕ್ಕೆ ವಿದಾಯ ಹೇಳಿದ್ದ ಶಕೀಬ್‌, ಸ್ವದೇಶದಲ್ಲಿ ಕೊನೆಯ ಟೆಸ್ಟ್ ಆಡಲು ಬಯಸಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ.

ಸ್ಕೋರುಗಳು:

ಮೊದಲ ಇನಿಂಗ್ಸ್‌: ಬಾಂಗ್ಲಾದೇಶ: 40.1 ಓವರುಗಳಲ್ಲಿ 106 (ಮಹಮದುಲ್ ಹಸನ್ ಜಾಯ್ 30; ಕಗಿಸೊ ರಬಾಡ 26ಕ್ಕೆ3, ವಿಯಾನ್ ಮುಲ್ಡರ್‌ 22ಕ್ಕೆ3, ಕೇಶವ ಮಹಾರಾಜ್‌ 34ಕ್ಕೆ3); ದಕ್ಷಿಣ ಆಫ್ರಿಕಾ: 41 ಓವರುಗಳಲ್ಲಿ 6 ವಿಕೆಟ್‌ಗೆ 140 (ಟೋನಿ ಡಿ ಜೋರ್ಜಿ 30, ಟ್ರಿಸ್ಟನ್‌ ಸ್ಟಬ್ಸ್‌ 23, ರ‍್ಯಾನ್ ರಿಕೆಲ್ಟನ್ 27; ಕೈಲ್ ವೇರಿಯನ್ ಔಟಾಗದೇ 18, ವಿಯಾನ್ ಮುಲ್ಡರ್ ಔಟಾಗದೇ 17; ತೈಜುಲ್‌ ಇಸ್ಲಾಂ 49ಕ್ಕೆ5).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.