ADVERTISEMENT

ಮೊದಲ ಏಕದಿನ: ಭಾರತದ ಗೆಲುವಿನಲ್ಲಿ ಮಿಂಚಿದ ರಾಧಾ

ಮೊದಲ ಏಕದಿನ: ನ್ಯೂಜಿಲೆಂಡ್ ವಿರುದ್ಧ 59 ರನ್ ಜಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:12 IST
Last Updated 24 ಅಕ್ಟೋಬರ್ 2024, 16:12 IST
ರಾಧಾ ಯಾದವ್
ಎಎಫ್‌ಪಿ ಸಂಗ್ರಹ ಚಿತ್ರ
ರಾಧಾ ಯಾದವ್ ಎಎಫ್‌ಪಿ ಸಂಗ್ರಹ ಚಿತ್ರ   

ಅಹಮದಾಬಾದ್ (ಪಿಟಿಐ): ಎಡಗೈ ಸ್ಪಿನ್ನರ್ ರಾಧಾ ಯಾದವ್ ನೇತೃತ್ವದಲ್ಲಿ ಬೌಲರ್‌ಗಳ ಕರಾರುವಾಕ್ ದಾಳಿಯಿಂದ ಭಾರತ ತಂಡ, ಗುರುವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 59 ರನ್‌ಗಳಿಂದ ನ್ಯೂಜಿಲೆಂಡ್‌ ಮೇಲೆ ಸುಲಭ ಗೆಲುವು ಪಡೆಯಿತು.

228 ರನ್‌ಗಳ ಗುರಿಯೆದುರಿಸಿದ ನ್ಯೂಜಿಲೆಂಡ್‌ ತಂಡ 41ನೇ ಓವರಿನಲ್ಲಿ 168 ರನ್‌ಗಳಿಗೆ ಆಲೌಟ್‌ ಆಯಿತು. ರಾಧಾ ಯಾದವ್ (35ಕ್ಕೆ3) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕಿ ಸೋಫಿ ಡಿವೈನ್ ಸೇರಿದಂತೆ ಮೂವರು ಆಟಗಾರ್ತಿಯರು ರನೌಟ್ ಆದರು.

ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ವೇಗದ ಬೌಲರ್ ಸೈಮಾ ಠಾಕೂರ್ (26ಕ್ಕೆ2) ತಮ್ಮ ಮೂರನೇ ಎಸೆತದಲ್ಲೇ ಅನುಭವಿ ಸೂಝಿ ಬೇಟ್ಸ್ (1) ವಿಕೆಟ್‌ ಪಡೆದರು. 12ನೇ ಓವರಿನ ಕೊನೆಯ ಎಸೆತದಲ್ಲಿ ನಾಯಕಿ ಸೋಫಿ ಡಿವೈನ್ ರನೌಟ್‌ ಆಗಿದ್ದು ನ್ಯೂಜಿಲೆಂಡ್ ಮೇಲಿನ ಒತ್ತಡ ಹೆಚ್ಚಿಸಿತು. ಫೀಲ್ಡರ್‌ ಕಡೆಯಿಂದ ಬೌಲರ್ ಚೆಂಡು ಪಡೆದು ಬೇಲ್ಸ್ ಉರುಳಿಸಿದಾಗ ತಮ್ಮ ಕಾಲು ಕ್ರೀಸಿನಿಂದ ಆಚೆಯಿದ್ದುದನ್ನು ಸೋಫಿ ಗಮನಿಸದೇ ದಂಡ ತೆತ್ತರು.

ADVERTISEMENT

ಬ್ರೂಕ್ ಹ್ಯಾಲಿಡೆ (39) ಮತ್ತು ಮ್ಯಾಡಿ ಗ್ರೀನ್ (31) ಐದನೇ ವಿಕೆಟ್‌ಗೆ 49 ರನ್ ಸೇರಿಸಿ ಸ್ವಲ್ಪಕಾಲ ಪ್ರತಿರೋಧ ಪ್ರದರ್ಶಿಸಿದರು. ಸೈಮಾ ಈ ಹಂತದಲ್ಲಿ ಹ್ಯಾಲಿಡೇ ವಿಕೆಟ್ ಪಡೆದರು.

ಇದಕ್ಕೆ ಮೊದಲು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ 45ನೇ ಓವರಿನಲ್ಲಿ 227 ರನ್‌ಗಳಿಗೆ ಆಟ ಮುಗಿಸಿತು. ಪದಾರ್ಪಣೆಗೈದ ತೇಜಲ್ ಹಸಬ್ನಿಸ್‌ (42, 64 ಎ) ಮತ್ತು ದೀಪ್ತಿ ಶರ್ಮಾ (41, 51ಎ) ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆಯೊಡನೆ ತಂಡಕ್ಕೆ ಆಧಾರವಾದರು. ಲೆಗ್‌ ಸ್ಪಿನ್ನರ್ ಅಮೇಲಿಯಾ ಕೆರ್ (42ಕ್ಕೆ4) ಪ್ರವಾಸಿ ತಂಡದ ಪರ ಯಶಸ್ವಿ ಬೌಲರ್ ಎನಿಸಿದರು.

ಸ್ಕೋರುಗಳು: ಭಾರತ: 44.3 ಓವರುಗಳಲ್ಲಿ 227 (ಶಫಾಲಿ ವರ್ಮಾ 33, ಯಷ್ಟಿಕಾ ಭಾಟಿಯಾ 37, ಜೆಮಿಮಾ ರಾಡ್ರಿಗಸ್‌ 35, ತೇಜಲ್ ಹಸಬ್ನಿಸ್‌ 42, ದೀಪ್ತಿ ಶರ್ಮಾ 41; ಜೆಸ್‌ ಕೆರ್‌ 49ಕ್ಕೆ3, ಈಡನ್ ಕಾರ್ಸನ್ 42ಕ್ಕೆ2, ಅಮೇಲಿಯಾ ಕೆರ್‌ 42ಕ್ಕೆ 4); ನ್ಯೂಜಿಲೆಂಡ್‌: 40.4 ಓವರುಗಳಲ್ಲಿ 168 (ಜಾರ್ಜಿಯಾ ಪ್ಲಿಮ್ಮರ್‌ 25, ಲಾರೆನ್‌ ಡೌನ್ 26, ಬ್ರೂಕ್ ಹ್ಯಾಲಿಡೆ 39, ಮ್ಯಾಡಿ ಗ್ರೀನ್ 31, ಅಮೇಲಿಯಾ ಕೆರ್‌ ಔಟಾಗದೇ 25; ಸೈಮಾ ಠಾಕೂರ್ 26ಕ್ಕೆ2, ರಾಧಾ ಯಾದವ್ 35ಕ್ಕೆ3). ಪಂದ್ಯದ ಆಟಗಾರ್ತಿ: ದೀಪ್ತಿ ಶರ್ಮಾ (41 ಮತ್ತು 35ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.