ADVERTISEMENT

ಎದುರಾಳಿ ಬ್ಯಾಟರ್‌ಗೆ ನಿಂದನೆ; ಜೈಸ್ವಾಲ್‌ರನ್ನು ಮೈದಾನದಿಂದ ಹೊರಗಟ್ಟಿದ ರಹಾನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2022, 12:07 IST
Last Updated 25 ಸೆಪ್ಟೆಂಬರ್ 2022, 12:07 IST
   

ಕೊಯಮತ್ತೂರು: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎದುರಾಳಿ ಬ್ಯಾಟರ್‌ಗೆ ನಿಂದಿಸಿದ್ದಕ್ಕಾಗಿ ತಮ್ಮ ತಂಡದ ಸಹ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಪಶ್ಚಿಮ ವಲಯದ ನಾಯಕ ಅಜಿಂಕ್ಯ ರಹಾನೆ ಮೈದಾನದಿಂದಹೊರಗಟ್ಟಿದ ಘಟನೆ ವರದಿಯಾಗಿದೆ.

ದಕ್ಷಿಣ ವಲಯ ವಿರುದ್ಧ ಭಾನುವಾರ ನಡೆದ ಅಂತಿಮ ದಿನದಾಟದಲ್ಲಿ ಈ ಘಟನೆ ನಡೆದಿದೆ.

ದಕ್ಷಿಣ ವಲಯದ ಬ್ಯಾಟರ್ ರವಿತೇಜಾ ಅವರಿಗೆ ಜೈಸ್ವಾಲ್ ಪದೇ ಪದೇ ನಿಂದಿಸುತ್ತಿದ್ದರು. ಈ ಬಗ್ಗೆ ಆನ್ ಫೀಲ್ಡ್ ಅಂಪೈರ್ ಬಳಿ ರವಿ ತೇಜಾ ದೂರಿದ್ದರು.

ADVERTISEMENT

ಪರಿಣಾಮ ಜೈಸ್ವಾಲ್‌ಗೆ ಎಚ್ಚರಿಕೆ ನೀಡಲಾಯಿತು. ಆದರೆ ಬ್ಯಾಟರ್ ಹತ್ತಿರದಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್, ಮತ್ತದೇ ಚಾಳಿಯನ್ನು ಮುಂದುವರಿಸಿದರು.

57ನೇ ಓವರ್‌ನಲ್ಲಿ ಜೈಸ್ವಾಲ್ ಅನುಚಿತ ವರ್ತನೆ ಬಗ್ಗೆ ಅಂಪೈರ್, ಪಶ್ಚಿಮ ವಲಯದ ನಾಯಕ ರಹಾನೆ ಅವರ ಗಮನಕ್ಕೆ ತಂದರು.

ಇದರಿಂದ ಬೇಸತ್ತ ರಹಾನೆ, ಕೊನೆಗೆ ಸಹ ಆಟಗಾರ ಜೈಸ್ವಾಲ್ ಅವರಲ್ಲಿ ಮೈದಾನದಿಂದ ಹೊರಗುಳಿಯುವಂತೆ ಸೂಚಿಸಿದರು. ಈ ವೇಳೆ ಜೈಸ್ವಾಲ್ ಅಸಮಾಧಾನ ತೋಡಿಕೊಂಡಿದ್ದರಲ್ಲದೆ ನಿಧಾನವಾಗಿ ಮೈದಾನದಿಂದ ಹೊರಗೆ ಹೆಜ್ಜೆ ಹಾಕಿದರು.

ಪರಿಣಾಮ ಪಶ್ಚಿಮ ವಲಯ 10 ಫೀಲ್ಡರ್‌ಗಳೊಂದಿಗೆ ಪಂದ್ಯ ಮುಂದುವರಿಸಬೇಕಾಯಿತು. ಏಳು ಓವರ್‌ಗಳ ನಂತರ ಜೈಸ್ವಾಲ್ ಕ್ಷೇತ್ರರಕ್ಷಣೆಗಾಗಿ ಪುನರಾಗಮಿಸಿದರು.

ಈ ಪಂದ್ಯದಲ್ಲಿ ಅಮೋಘ ದ್ವಿಶತಕ ಗಳಿಸಿರುವ ಜೈಸ್ವಾಲ್ (265) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ ದಕ್ಷಿಣ ವಲಯ ವಿರುದ್ಧ 294 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ಪಶ್ಚಿಮ ವಲಯ, ದುಲೀಪ್ ಟ್ರೋಫಿ ಎತ್ತಿ ಹಿಡಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.