ADVERTISEMENT

ಟೆಸ್ಟ್‌ನಲ್ಲಿ ರಾಹುಲ್, ಅಭಿಮನ್ಯು ಉತ್ತಮ ಆರಂಭ ನೀಡಬಲ್ಲರು: ರಾಬಿನ್ ಉತ್ತಪ್ಪ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 14:09 IST
Last Updated 8 ನವೆಂಬರ್ 2024, 14:09 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಬೆಂಗಳೂರು: ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಕೆ.ಎಲ್. ರಾಹುಲ್ ಮತ್ತು ಅಭಿಮನ್ಯು ಈಶ್ವರನ್ ಅವರು ಭಾರತ ತಂಡಕ್ಕೆ ಉತ್ತಮ ಆರಂಭಿಕ ಬ್ಯಾಟರ್ ಆಗಿ ಕಾರ್ಯನಿರ್ವಹಿಸಬಲ್ಲರು. ಅನುಭವಿ ಬ್ಯಾಟರ್‌ ಚೇತೇಶ್ವರ್ ಪೂಜಾರ ಅವರಿಗೆ ಟೆಸ್ಟ್‌ನಲ್ಲಿ ಆಡುವ ಅವಕಾಶ ಇನ್ನೂ ಇದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

‘ರಾಹುಲ್ ಮತ್ತು ಅಭಿಮನ್ಯು ಅವರು ಸಾಂಪ್ರದಾಯಿಕ ಶೈಲಿಯ ಬ್ಯಾಟರ್‌ಗಳಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ರಕ್ಷಣಾ ತ್ಮಕವಾಗಿ ಮತ್ತು ಸಂಪ್ರದಾಯಬದ್ಧವಾಗಿ ಆಡುವ ಸಮರ್ಥರು ಬೇಕು. ರಾಹುಲ್ ಮತ್ತು ಅಭಿಮನ್ಯು ಆ ತರಹದ ಆಟಗಾರರು’ ಎಂದು ಜಿಯೊ ಸಿನೆಮಾ ಮತ್ತು ಸ್ಪೋರ್ಟ್ಸ್ 18 ವಾಹಿನಿಯ ಕ್ರಿಕೆಟ್ ಪರಿಣತರೂ ಆಗಿರುವ ರಾಬಿನ್ ಹೇಳಿದರು.

ಈಚೆಗೆ ಭಾರತ ತಂಡವು ತವರಿನಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ 0–3ರಿಂದ ಸೋತಿತ್ತು. ಅದರಿಂದಾಗಿ ಆಸ್ಟ್ರೇಲಿಯಾದಲ್ಲಿ ಸರಣಿಯಲ್ಲಿ ಆಡಲಿರುವ ಭಾರತ ತಂಡದ ಮೇಲೆ ಹೆಚ್ಚಿನ ಒತ್ತಡ ವಿದೆ.

ADVERTISEMENT

ತಂಡದ ಸಂಯೋಜನೆ ಕುರಿತು ರೌಂಡ್‌ ಟೇಬಲ್‌ ಸಂವಾದದಲ್ಲಿ  ಮಾತನಾಡಿದ ರಾಬಿನ್, ‘ಎಲ್ಲರೂ ಸಕಾರಾತ್ಮಕವಾಗಿ ಹಾಗೂ ಆಕ್ರಮಣಶೀಲವಾಗಿ ಆಡಲು ಇಚ್ಛಿಸುತ್ತಾರೆ. ವೇಗವಾಗಿ ರನ್‌ ಗಳಿಸಲು ಬಯಸುತ್ತಾರೆ. ಶುಭಮನ್ ಗಿಲ್ ಅವರು ಸ್ವಭಾವತಃ ಸ್ಟ್ರೋಕ್‌ ಪ್ಲೇಯರ್ ಆಗಿದ್ದಾರೆ. ಅವರಿಗೆ ತಾಳ್ಮೆಯ ಬ್ಯಾಟಿಂಗ್ ಮಾಡುವಂತೆ ಸೂಚಿಸಿ ನೋಡಿ. ಅವರು ಅದನ್ನು ಆಸ್ವಾದಿಸದೇ ಇರಬಹುದು. ಅವರ ನೈಜ ಆಟವನ್ನು ಕಸಿದುಕೊಂಡಂತಾಗುತ್ತದೆ’ ಎಂದರು. 

2018–19 ಹಾಗೂ 2020–21ರಲ್ಲಿ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಗಳನ್ನು ಜಯಿಸುವಲ್ಲಿ ಚೇತೇಶ್ವರ್ ಪೂಜಾರ ಮಹತ್ವದ ಪಾತ್ರ ವಹಿಸಿದ್ದರು.

‘ಪೂಜಾರ ಅವರಂತಹ ಆಟಗಾರರು ಟೆಸ್ಟ್ ತಂಡದಲ್ಲಿ ಇರಬೇಕಿತ್ತು ಎಂದು ನನಗೆ ಈಗಲೂ ಅನಿಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.