ADVERTISEMENT

ದ್ರಾವಿಡ್ ಕಟ್ಟುನಿಟ್ಟು.. ಆದರೆ ಗಂಭೀರ್...: ಅಶ್ವಿನ್ ಹೇಳಿದ್ದೇನು?

ಪಿಟಿಐ
Published 24 ಸೆಪ್ಟೆಂಬರ್ 2024, 14:47 IST
Last Updated 24 ಸೆಪ್ಟೆಂಬರ್ 2024, 14:47 IST
ಅಶ್ವಿನ್‌
ಅಶ್ವಿನ್‌   

ಚೆನ್ನೈ: ರಾಹುಲ್ ದ್ರಾವಿಡ್‌ ಅವರ ಕಟ್ಟುನಿಟ್ಟು, ಶಿಸ್ತಿನ ಸ್ವಭಾವಕ್ಕೆ ಹೋಲಿಸಿದರೆ, ಗೌತಮ್ ಗಂಭಿರ್ ಸ್ವಲ್ಪ ನಿರಾಳವಾಗಿ ಇರುವ ಕೋಚ್‌.... ಇದು ಹಾಲಿ ಭಾರತ ತಂಡದ ಅತಿ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಹಿಂದಿನ ಮತ್ತು ಈಗಿನ ಮುಖ್ಯ ಕೋಚ್‌ ಅವರನ್ನು ತುಲನೆ ಮಾಡಿದ ರೀತಿ.

ದ್ರಾವಿಡ್‌ ಅವರು 2021ರ ನವೆಂಬರ್‌ನಿಂದ ಈ ವರ್ಷದ ಜುಲೈವರೆಗೆ ಟೀಮ್ ಇಂಡಿಯಾದ ಮುಖ್ಯ ಕೋಚ್‌ ಆಗಿದ್ದರು. ಟಿ20 ವಿಶ್ವಕಪ್ ನಂತರ ಅವರ ಅವಧಿ ಕೊನೆಗೊಂಡಿದ್ದು, ಗಂಭೀರ್ ಆ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.

ಗಂಭೀರ್ ಅವರ ಈ ನಿರಾಳ, ಆರಾಮವಾಗಿರುವ ಸ್ವಭಾವದಿಂದಾಗಿ ಡ್ರೆಸಿಂಗ್‌ ರೂಮ್‌ನಲ್ಲಿ ಲವಲವಿಕೆಯ ವಾತಾವರಣ ಮೂಡಿದೆ. ಗಂಭೀರ್‌ ಅವರನ್ನು ‘ರಿಲ್ಯಾಕ್ಸ್ಡ್‌ ರ್‍ಯಾಂಚೊ’ ಎಂದು ಅಶ್ವಿನ್ ಕರೆದಿದ್ದಾರೆ. ಗಂಭೀರ್ ತುಂಬಾ ನಿರಾಳರಾಗಿರುತ್ತಾರೆ. ಒಂದಿಷ್ಟೂ ಒತ್ತಡವಿಲ್ಲದವರು ಎಂದು ಬಣ್ಣಿಸಿದ್ದಾರೆ.

ADVERTISEMENT

‘ಬೆಳಿಗ್ಗೆ ತಂಡದ ಸಭೆಯಿರುತ್ತದೆ. ಅವರು ಆ ವೇಳೆಯೂ ಒತ್ತಡ ತೆಗೆದುಕೊಳ್ಳುವುದಿಲ್ಲ. ಸಭೆಗೆ ನೀನು ಬರು‌ತ್ತಿಯಾ?, ದಯವಿಟ್ಟು ಬಾ‘ ಎನ್ನುವಷ್ಟಕ್ಕೇ ಸುಮ್ಮನಾಗುತ್ತಾರೆ’ ಎಂದು ಅಶ್ವಿನ್ ಹೇಳಿದ್ದಾರೆ.

ದ್ರಾವಿಡ್‌ ವಿಷಯಕ್ಕೆ ಬರುವುದಾದರೆ, ಅವರು ಮಿಲಿಟರಿ ಶಿಸ್ತಿನ ಮನುಷ್ಯ. ಅವರು ಆದೇಶ ನೀಡುವವರು. ಒಂದು ಬಾಟಲಿಯನ್ನು  ಕೂಡ ನಿರ್ದಿಷ್ಟ ಸಮಯದಲ್ಲಿ ಅದರದ್ದೇ ಆದ ಜಾಗದಲ್ಲೇ ಇಟ್ಟಿರಬೇಕು ಎಂದು ಬಯಸುವ ವ್ಯಕ್ತಿ. ಅವರದು ಸೇನೆಯ ಶಿಸ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.

‘ಗಂಭೀರ್ ಅದನ್ನೆಲ್ಲಾ ನಿರೀಕ್ಷಿಸುವುದಿಲ್ಲ. ಅವರು ಆರಾಮವಾಗಿ ಹೇಳುವವರು. ಅವರ ಸಾಮಾನ್ಯರ ಕೋಚ್‌. ಅವರ ಎಲ್ಲರ ಹೃದಯ ಗೆಲ್ಲಬಯಸುವ ವ್ಯಕ್ತಿ. ಅವರನ್ನು ಎಲ್ಲರೂ ಇಷ್ಟಪಡುತ್ತಾರೆ ಎನ್ನುವುದು ನನ್ನ ಅನಿಸಿಕೆ’ ಎಂದು ಹೊಗಳಿಕೆಯ ಮಾತುಗಳನ್ನೂ ಆಡಿದ್ದಾರೆ.

‘ಪಂತ್‌–ಕ್ರಿಕೆಟ್‌ಗಾಗಿಯೇ ಹುಟ್ಟಿದವರು’:

16 ತಿಂಗಳ ಹಿಂದೆ ಭೀಕರ ಅಪಘಾತದ ನಂತರ ಕ್ರಿಕೆಟ್‌ಗೆ ಮರಳಿದ ಪಂತ್‌ ಕೂಡ ಇತ್ತೀಚಿನ ಟೆಸ್ಟ್‌ನಲ್ಲಿ ಶತಕ ಹೊಡೆದು ಸುದ್ದಿಯಾದರು. ಅವರ ಬಗ್ಗೆ ಪ್ರಸ್ತಾಪಿಸಿದ ಅಶ್ವಿನ್‌, ‘ಅವರು ಕ್ರಿಕೆಟ್‌ಗಾಗಿಯೇ ಹುಟ್ಟಿದವರು. ಅವರ ಸಾಮರ್ಥ್ಯವನ್ನು ಸರಿಯಾಗಿ ಅಂದಾಜು ಮಾಡಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಅವರು (ಪಂತ್‌) ಚೆನ್ನಾಗಿ ಆಡುತ್ತಾರೆ. ಇದನ್ನು ರೋಹಿತ್‌ ಶರ್ಮಾ ಅವರಿಗೆ ಹಲವು ಹತ್ತಾರು ಬಾರಿ ಹೇಳಿದ್ದೇನೆ. ಕೆಲವೊಮ್ಮೆ, ಅವರು ಹೇಗೆ ಔಟಾಗುತ್ತಾರೆ, ಏಕೆ ರನ್ ಹೊಡೆಯುವುದಿಲ್ಲ ಎನ್ನುವುದೇ ನನಗೆ ಅರ್ಥವಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಎಲ್ಲ ದೃಷ್ಟಿಯಿಂದ ಅವರು ಕ್ರಿಕೆಟ್‌ಗಾಗಿಯೇ ಹುಟ್ಟಿದವರು. ಅವರು ಗಟ್ಟಿ ಮನುಷ್ಯ. ಚೆಂಡನ್ನು ಬಲವಾಗಿ ಹೊಡೆಯಬಲ್ಲವರು. ಒಂದೇ ಕೈಯಿಂದ ಕೂಡ ಹೊಡದಟ್ಟಬಲ್ಲವರು’ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.