ನವದೆಹಲಿ: ಭಾರತ ತಂಡದಲ್ಲಿ ಆಡುವಾಗ ‘ಗೋಡೆ’ಯೆಂಬ ಖ್ಯಾತಿ ಗಳಿಸಿದ್ದ ರಾಹುಲ್ ದ್ರಾವಿಡ್, ನಂತರ ಯುವ ತಂಡಗಳ ಮುಖ್ಯ ಕೋಚ್ ಆಗಿ ಮಾಡಿದ್ದ ಸಾಧನೆಯು ಅಮೋಘವಾದದ್ದು.
ಇದೀಗ ಅವರ ಮುಂದೆ ಭವಿಷ್ಯದ ಭಾರತ ಸೀನಿಯರ್ ತಂಡವನ್ನು ಕಟ್ಟಿ ಬೆಳೆಸುವ ಹೊಣೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನೀಡಿದೆ.
ಪ್ರಸ್ತುತ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಕಾರ್ಯಾವಧಿಯು ಇದೇ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ನಂತರ ಮುಕ್ತಾಯವಾಗಲಿದೆ. ಅವರ ಸ್ಥಾನಕ್ಕೆ48 ವರ್ಷದ ದ್ರಾವಿಡ್ ಬರಲಿದ್ದಾರೆ.
ಹೋದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತದ ಯುವ ಪಡೆ ಐತಿಹಾಸಿಕ ಟೆಸ್ಟ್ ಸರಣಿ ಜಯ ಸಾಧಿಸಿದಾಗಿನಿಂದಲೂ ರಾಹುಲ್ ಅವರ ಹೆಸರು ಕೇಳಿಬರುತ್ತಿತ್ತು. ಆದರೆ ರಾಹುಲ್ ಮಾತ್ರ ನಿರಾಕರಿಸುತ್ತಲೇ ಬಂದಿದ್ದಾರೆ. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಮನವೋಲಿಸಿದ ನಂತರ ಒಪ್ಪಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ತಮ್ಮ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯುವ ಉದ್ದೇಶದಿಂದ ಆಗ ನಿರಾಕರಿಸಿದ್ದರೆನ್ನಲಾಗಿದೆ. ಇದೀಗ ಮಕ್ಕಳು ಕೂಡ ದೊಡ್ಡವರಾಗಿದ್ದಾರೆ. ಆದ್ದರಿಂದ ದ್ರಾವಿಡ್ ಕೋಚ್ ಹುದ್ದೆಯ ಹೊಣೆ ನಿಭಾಯಿಸಲು ಒಪ್ಪಿರಬಹುದು ಎಂದು ಬಿಸಿಸಿಯ ಮೂಲಗಳು ತಿಳಿಸಿವೆ.
ಅವರು ಭಾರತ ಎ ಮತ್ತು 19 ವರ್ಷದೊಳಗಿನವರ ತಂಡದ ಮುಖ್ಯ ಕೋಚ್ ಆಗಿದ್ದಾಗ ಬೆಳೆದ ಪ್ರತಿಭೆಗಳು ಈಗ ಭಾರತ ತಂಡದಲ್ಲಿ ಮಿಂಚುತ್ತಿದ್ದಾರೆ. ಪೃಥ್ವಿ ಶಾ, ರಿಷಭ್ ಪಂತ್, ಹನುಮವಿಹಾರಿ, ಶುಭಮನ್ ಗಿಲ್ ಅವರು ಪ್ರಮುಖ ಆಟಗಾರರು.
ಸದ್ಯ ತಂಡದಲ್ಲಿರುವ ಅನುಭವಿ ಆಟಗಾರರಾದ 35 ವರ್ಷದ ರೋಹಿತ್ ಶರ್ಮಾ, 33 ವರ್ಷದ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರು ತಂಡಕ್ಕೆ ಉತ್ತಮ ಕಾಣಿಕೆ ಕೊಡುತ್ತಿದ್ದಾರೆ. ಕೆಲವು ವರ್ಷಗಳ ನಂತರ ಅವರು ನಿವೃತ್ತರಾದಾಗ ಆ ಸ್ಥಾನಗಳನ್ನು ತುಂಬುವವರನ್ನು ಸಿದ್ಧಗೊಳಿಸುವ ಹೊಣೆ ದ್ರಾವಿಡ್ ಅವರ ಮೇಲೆ ಬೀಳಲಿದೆ.
ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ತಂಡವು ಹಲವು ದಾಖಲೆಗಳನ್ನು ಮಾಡಿದೆ. ವಿದೇಶಿ ನೆಲದಲ್ಲಿ ಬಲಾಢ್ಯ ತಂಡಗಳನ್ನು ಮಣಿಸಿದೆ. ಆದ್ದರಿಂದ ಅದೇ ಸಾಧನೆಯನ್ನು ಮುಂದುವರಿಸುವ ಸವಾಲು ಕೂಡ ರಾಹುಲ್ ಮುಂದಿದೆ.
ರವಿಶಾಸ್ತ್ರಿ ಅವರಿಗೆ ಬಿಸಿಸಿಐ ₹ 8.5 ಕೋಟಿ ವೇತನ ನೀಡುತ್ತಿದೆ. ದ್ರಾವಿಡ್ ಅವರಿಗೆ ಅದಕ್ಕಿಂತಲೂ ಹೆಚ್ಚು ಲಭಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.
ದ್ರಾವಿಡ್ ಅವರ ಆಪ್ತರಾಗಿರುವ ಪಾರಸ್ ಮಾಂಬ್ರೆ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡುವ ಸಾಧ್ಯತೆಯೂ ಇದೆ. ವಿಕ್ರಂ ರಾಥೋಡ್, ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಯುವ ನಿರೀಕ್ಷೆ ಇದೆ.
ಆಯ್ಕೆ ಪ್ರಕ್ರಿಯೆಗೆ ಸಂದರ್ಶನ
ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಕ ಮಾಡುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದ್ದರೂ ಕೂಡ ನಿಯಮಾವಳಿಯಂತೆ ಆಯ್ಕೆ ಸಂದರ್ಶನ ಪ್ರಕ್ರಿಯೆ ನಡೆಸಲಿದೆ.
ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರ ಶಿಫಾರಸುಗಳ ಮೇರೆಗೆ ನಿಯಮಾವಳಿಯನ್ನು ರೂಪಿಸಲಾಗಿದೆ. ಅದರಲ್ಲಿ ಕ್ರಿಕೆಟ್ ಆಯ್ಕೆ ಸಮಿತಿಯ ಮೂಲಕವೇ ಕೋಚ್‌ಗಳ ನೇಮಕ ಮಾಡುವುದು ಕಡ್ಡಾಯ. ಆದ್ದರಿಂದ ಈ ಪ್ರಕ್ರಿಯೆಯನ್ನು ಬಿಸಿಸಿಐ ಪಾಲಿಸಲಿದೆ ಎನ್ನಲಾಗಿದೆ.
ನವೆಂಬರ್ 17ರಿಂದ ಭಾರತದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಸರಣಿಗೂ ಮುನ್ನ ಈ ಎಲ್ಲ ಪ್ರಕ್ರಿಯೆಗಳನ್ನು ಮುಗಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.