ADVERTISEMENT

ರಾಜಸ್ಥಾನ ರಾಯಲ್ಸ್ ಕೋಚ್ ಆಗಿ ರಾಹುಲ್ ದ್ರಾವಿಡ್: ಹಲವು ವರ್ಷಗಳ ಒಪ್ಪಂದ

ಪಿಟಿಐ
Published 6 ಸೆಪ್ಟೆಂಬರ್ 2024, 13:36 IST
Last Updated 6 ಸೆಪ್ಟೆಂಬರ್ 2024, 13:36 IST
<div class="paragraphs"><p>ರಾಹುಲ್ ದ್ರಾವಿಡ್</p></div>

ರಾಹುಲ್ ದ್ರಾವಿಡ್

   

(ಪಿಟಿಐ ಚಿತ್ರ)

ಮುಂಬೈ: ಟೀಮ್ ಇಂಡಿಯಾ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಹಲವು ವರ್ಷಗಳ ಒಪ್ಪಂದಕ್ಕೆ ದ್ರಾವಿಡ್ ಸಹಿ ಹಾಕಿದ್ದಾರೆ ಎಂದು ಫ್ರಾಂಚೈಸಿ ಶುಕ್ರವಾರ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

ADVERTISEMENT

ಟಿ–20 ವಿಶ್ವಕಪ್ ಸರಣಿಗೆ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅವಧಿ ಅಂತ್ಯವಾಗಿತ್ತು. ಸದ್ಯ, ಅವರು ಕಿರು ವಿರಾಮದಲ್ಲಿದ್ದಾರೆ.

‘ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ನಾಯಕ ಮತ್ತು ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರು, 2011ರಿಂದ 2015ರವರೆಗೆ ಐದು ವರ್ಷಗಳ ಕಾಲ ನಮ್ಮ ಜೊತೆ ಕೆಲಸ ಮಾಡಿದ್ದಾರೆ. ಈಗ ಮತ್ತೆ ಫ್ರಾಂಚೈಸಿಯ ಎಲ್ಲ ಕ್ರಿಕೆಟ್ ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸಲು ಸದ್ಯದಿಂದಲೇ ತಂಡದ ಕ್ರಿಕೆಟ್ ನಿರ್ದೆಶಕರಾದ ಕುಮಾರ ಸಂಗಕ್ಕರ ಜೊತೆ ಕೆಲಸ ಮಾಡಲಿದ್ದಾರೆ’ಎಂದು ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ.

2014ರಲ್ಲಿ ರಾಜಸ್ಥಾನ ರಾಯಲ್ಸ್ ಕೋಚ್ ಆಗಿದ್ದ ದ್ರಾವಿಡ್, ಬಳಿಕ ಭಾರತದ 19 ವರ್ಷದೊಳಗಿನವರ ತಂಡ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕೋಚ್ ಮತ್ತು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕೆಲಸ ಮಾಡಿದ್ದಾರೆ.

‘ಅವರ ಅಸಾಧಾರಣ ತರಬೇತಿ ಕೌಶಲ್ಯವನ್ನು ಭಾರತ ಕ್ರಿಕೆಟ್ ತಂಡದ ಪರಿವರ್ತನೆಯಲ್ಲಿ ನೋಡಿದ್ದೇವೆ. ಫ್ರಾಂಚೈಸಿ ಜೊತೆ ಅವರಿಗೆ ಗಾಢ ಸಂಬಂಧವಿದೆ. ನಮ್ಮ ಜೊತೆ ಹಲವು ಬಾರಿ ಮಾತುಕತೆ ವೇಳೆ ಕ್ರೀಡೆ ಬಗೆಗಿನ ಅವರ ಉತ್ಸಾಹವನ್ನು ನೋಡಿದ್ದೇವೆ’ಎಂದು ರಾಜಸ್ಥಾನ ರಾಯಲ್ಸ್ ಕ್ರೀಡಾ ಸಮೂಹದ ಸಿಇಒ ಜೇಕ್ ಲುಸ್ ಮ್ಯಾಕ್ರಮ್ ಹೇಳಿದ್ದಾರೆ.

‘ವಿಶ್ವಕಪ್ ಬಳಿಕ ಮತ್ತೊಂದು ಸವಾಲು ಸ್ವೀಕರಿಸಲು ಇದು ಸರಿಯಾದ ಸಮಯ ಎಂದು ನನಗೆ ಅನಿಸುತ್ತದೆ. ಅದನ್ನು ಮಾಡಲು ರಾಜಸ್ಥಾನ ರಾಯಲ್ಸ್ ಸೂಕ್ತ ತಂಡ’ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

‘ಕಳೆದ ಕೆಲ ವರ್ಷಗಳಿಂದ ನಮ್ಮ ತಂಡದ ಪ್ರದರ್ಶನದಲ್ಲಿ ಸುಧಾರಣೆ ಕಂಡಿದೆ. ಆದರೆ, ಮತ್ತಷ್ಟು ಕಲಿಯುವುದು, ಸುಧಾರಿಸುವುದು ಮತ್ತು ಬೆಳೆಯುವುದು ಅಗತ್ಯವಿದೆ. ದ್ರಾವಿಡ್ ಮರುಸೇರ್ಪಡೆಯು ನಮ್ಮ ತಂಡದ ಪ್ರಗತಿಗೆ ವೇಗ ನೀಡಲಿದೆ’ಎಂದು ಮಾಲೀಕರಲ್ಲೊಬ್ಬರಾದ ಮನೋಜ್ ಬಡಾಲೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.