ಅಡಿಲೇಡ್: ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ನ್ಯೂಜಿಲೆಂಡ್ ಕ್ರಿಕೆಟ್ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡದ ಹಂಗಾಮಿ ಮುಖ್ಯಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ತಂಡಕ್ಕೆ ವಿಶ್ರಾಂತಿ ನೀಡಲಾಗಿದೆ.
ಭಾರತ ತಂಡ ನ್ಯೂಜಿಲೆಂಡ್‌ನಲ್ಲಿ ತಲಾ ಮೂರು ಟಿ20 ಮತ್ತು ಏಕದಿನ ಪಂದ್ಯಗಳನ್ನಾಡಲಿದೆ. ಮೊದಲ ಪಂದ್ಯ ನ.18 ರಂದು ವೆಲಿಂಗ್ಟನ್‌ನಲ್ಲಿ ನಡೆಯಲಿದೆ.
‘ವಿವಿಎಸ್ ಲಕ್ಷ್ಮಣ್, ಋಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್ ಕೋಚ್) ಮತ್ತು ಸಾಯಿರಾಜ್ ಬಹುತುಲೆ (ಬೌಲಿಂಗ್ ಕೋಚ್) ಅವರು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಲಕ್ಷ್ಮಣ್ ಅವರನ್ನು ಭಾರತ ತಂಡದ ಕೋಚ್ ಆಗಿ ನೇಮಕ ಮಾಡಿದ್ದು ಇದೇ ಮೊದಲಲ್ಲ. ಜಿಂಬಾಬ್ವೆ ಮತ್ತು ಐರ್ಲೆಂಡ್‌ನಲ್ಲಿ ನಡೆದ ಸರಣಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಈಚೆಗೆ ತವರು ನೆಲದಲ್ಲಿ ನಡೆದ ಸರಣಿಯ ವೇಳೆಯೂ ಅವರು ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಮತ್ತು ಆರ್.ಅಶ್ವಿನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ಅವರು ಕ್ರಮವಾಗಿ ಟಿ20 ಹಾಗೂ ಏಕದಿನ ಸರಣಿಗೆ ತಂಡವನ್ನು ಮುನ್ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.