ADVERTISEMENT

IPL 2025: ರಾಜಸ್ಥಾನ ರಾಯಲ್ಸ್ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್?

ಪಿಟಿಐ
Published 4 ಸೆಪ್ಟೆಂಬರ್ 2024, 10:07 IST
Last Updated 4 ಸೆಪ್ಟೆಂಬರ್ 2024, 10:07 IST
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್    

ನವದೆಹಲಿ: ಭಾರತ ಕ್ರಿಕೆಟ್ ತಂಡದ ಟಿ–20 ವಿಶ್ವಕಪ್ ಜಯದ ಹಿಂದಿನ ಮಾಸ್ಟರ್ ಮೈಂಡ್ ರಾಹುಲ್ ದ್ರಾವಿಡ್ ಅವರು, ಮುಂದಿನ ವರ್ಷದ ಐಪಿಎಲ್ ಆವೃತ್ತಿಗೆ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೂನ್‌ನಲ್ಲಿ ಟೀಮ್ ಇಂಡಿಯಾ ಟಿ–20 ವಿಶ್ವಕಪ್ ಗೆದ್ದ ಬಳಿಕ ಕಿರು ವಿರಾಮದಲ್ಲಿರುವ ಅವರು, ಸದ್ಯದಲ್ಲೇ ಫ್ರಾಂಚೈಸಿ ಜೊತೆ ಆಟಗಾರರನ್ನು ಉಳಿಸಿಕೊಳ್ಳುವಿಕೆ, ಈ ವರ್ಷ ನಡೆಯಲಿರುವ ಬಿಡ್ಡಿಂಗ್‌ನಲ್ಲಿ ಹೊಸ ಆಟಗಾರರ ಖರೀದಿ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ಅದು ಹೇಳಿದೆ.

‘ರಾಹುಲ್ ದ್ರಾವಿಡ್ ಅವರ ಜೊತೆಗಿನ ಮಾತುಕತೆ ಅಂತಿಮ ಹಂತ ತಲುಪಿದ್ದು, ಸದ್ಯದಲ್ಲೇ ರಾಜಸ್ಥಾನ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಲಿದ್ದಾರೆ’ಎಂದು ಫ್ರಾಂಚೈಸಿಯ ನಿಕಟ ಮೂಲಗಳು ಪಿಟಿಐಗೆ ತಿಳಿಸಿವೆ.

ADVERTISEMENT

2021ರಿಂದ ರಾಜಸ್ಥಾನ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿರುವ ಕುಮಾರ ಸಂಗಕ್ಕರ ಅದೇ ಹುದ್ದೆಯಲ್ಲಿ ಮುಂದುವರಿಯಲಿದ್ದು,ಬಾರ್ಬಡೋಸ್ ರಾಯಲ್ಸ್ (ಸಿಪಿಎಲ್) ಮತ್ತು ಪಾರ್ಲ್ ರಾಯಲ್ಸ್ (ಎಸ್‌ಎ-20)ಯಲ್ಲಿಯೂ ಅವರು ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.

ಎರಡು ವರ್ಷಗಳ ಕಾಲ ರಾಜಸ್ಥಾನ ರಾಯಲ್ಸ್ ಮೆಂಟರ್ ಆಗಿದ್ದ ದ್ರಾವಿಡ್, ಅದಕ್ಕೂ ಮುನ್ನ 2012 ಮತ್ತು 2013ರಲ್ಲಿ ತಂಡದ ಕ್ಯಾಪ್ಟನ್ ಆಗಿದ್ದರು.

2016ರಿಂದ ಡೆಲ್ಲಿ ಕ್ಯಾಪಿಟಲ್ಸ್ ಮೆಂಟರ್ ಆಗಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ಆಗುವವರೆಗೂ ಅದೇ ಹುದ್ದೆಯಲ್ಲಿದ್ದರು.

2021ರಲ್ಲಿ ರವಿಶಾಸ್ತ್ರಿ ಬಳಿಕ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು.

ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿದ್ದಾಗ ಬ್ಯಾಟಿಂಗ್ ಕೋಚ್ ಆಗಿದ್ದ ವಿಕ್ರಮ್ ರಾಥೋಡ್ ಅವರನ್ನು ರಾಜಸ್ಥಾನ ರಾಯಲ್ಸ್ ಸಹಾಯಕ ಕೋಚ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.