ADVERTISEMENT

ಲಖನೌ ತಂಡದಿಂದ ರಾಹುಲ್‌ಗೆ ಅರ್ಧಚಂದ್ರ?

ನಿಕೊಲಸ್ ಪೂರನ್, ಮಯಂಕ್ ಯಾದವ್ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 18:22 IST
Last Updated 30 ಅಕ್ಟೋಬರ್ 2024, 18:22 IST
ಕೆ.ಎಲ್. ರಾಹುಲ್ 
ಕೆ.ಎಲ್. ರಾಹುಲ್    

ನವದೆಹಲಿ (ಪಿಟಿಐ): ಕಡಿಮೆ ಸ್ಟ್ರೈಕ್‌ ರೇಟ್ ಮತ್ತು ಟಿ20 ಕ್ರಿಕೆಟ್‌ನ ಬದಲಾವಣೆಗಳಿಗೆ ಹೊಂದಿಕೊಳ್ಳದ  ಕೆ.ಎಲ್. ರಾಹುಲ್ ಅವರು ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವು ಬಹುತೇಕ ಖಚಿತವಾಗಿದೆ. 

ಕಳೆದ ಆಗಸ್ಟ್‌ನಲ್ಲಿಯೇ ಅವರು ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿತ್ತು. ಆದರೆ ಈಗ ಅವರನ್ನು ತಂಡವು ಉಳಿಸಿಕೊಳ್ಳಲೂ ಮನಸು ಮಾಡಿಲ್ಲವೆನ್ನಲಾಗಿದೆ. 

ತಂಡದಲ್ಲಿರುವ ಸ್ಫೋಟಕ ಶೈಲಿಯ ಬ್ಯಾಟರ್ ನಿಕೊಲಸ್ ಪೂರನ್ ಅವರನ್ನು ಉಳಿಸಿಕೊಳ್ಳಲು ಆದ್ಯತೆ ನೀಡಿದೆ. ಅವರೊಂದಿಗೆ ವೇಗಿ ಮಯಂಕ್ ಯಾದವ್, ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ಆಯುಷ್ ಬಡೋಣಿ ಅವರನ್ನೂ ಉಳಿಸಿಕೊಳ್ಳಲಿದೆ. 

ADVERTISEMENT

ಐಪಿಎಲ್ ತಂಡಗಳಿಗೆ ತಾವು ಉಳಿಸಿಕೊಳ್ಳಲಿರುವ ಮತ್ತು ಬಿಡ್‌ಗೆ ಬಿಡುಗಡೆ ಮಾಡಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ನೀಡಲು ಗುರುವಾರ ಕೊನೆಯ ದಿನವಾಗಿದೆ. ಬುಧವಾರ ಲಖನೌ ತಂಡದ ಸಭೆಯಲ್ಲಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಮೆಂಟರ್ ಜಹೀರ್ ಖಾನ್ ಅವರು ನಿಕೊಲಸ್ ಪೂರನ್ ಅವರನ್ನು ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡಿದರೆನ್ನಲಾಗಿದೆ.

‘ಕಳೆದ ಮೂರು ವರ್ಷಗಳಲ್ಲಿ ಆಟಗಾರರು ಮಾಡಿದ ಸಾಧನೆಯೊಂದೇ ಮಾನದಂಡವಾಗಿ ಇಟ್ಟುಕೊಳ್ಳಲಾಗಿತ್ತು. ವಿಶೇಷವಾಗಿ ರಹುಲ್ ಅವರ ಬ್ಯಾಟಿಂಗ್ ಶೈಲಿ ಮತ್ತು ಸ್ಟ್ರೈಕ್‌ ರೇಟ್‌ಗಳ ಲೆಕ್ಕಾಚಾರ ನಡೆಯಿತು. ಈ ಎಲ್ಲ ಅಂಕಿ ಸಂಖ್ಯೆಗಳೊಂದಿಗೆ ಸಮಾಲೋಚನೆ ನಡೆಸಿದ ಲ್ಯಾಂಗರ್ ಮತ್ತು ಜಹೀರ್ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ   ರಾಹುಲ್ ಅವರ ಸ್ಟ್ರೈಕ್‌ ರೇಟ್‌ಗಳು ಕ್ರಮವಾಗಿ 136.13 (616 ರನ್), 113.23 (274 ರನ್) ಮತ್ತು 135.38 (520 ರನ್) ಇವೆ. ಆದರೆ ಇವತ್ತಿನ ಟಿ20 ಕ್ರಿಕೆಟ್ ವೇಗ ತಕ್ಕ ಸ್ಟ್ರೈಕ್‌ರೇಟ್‌ಗಳು ಇವು ಅಲ್ಲ’ ಎಂದು ತಂಡದ ಮೂಲಗಳು ಹೇಳಿವೆ.

ಅದೇ ಪೂರನ್ ಅವರ ಸ್ಟ್ರೈಕ್‌ ರೇಟ್‌ಗಳು ಮೂರು ವರ್ಷಗಳಲ್ಲಿ ರಾಹುಲ್‌ ಗಿಂತ ಹೆಚ್ಚಾಗಿವೆ. 2022ರಲ್ಲಿ 144.34 ರಷ್ಟಿತ್ತು. ನಂತರದ  ಎರಡು ಆವೃತ್ತಿಗಳಲ್ಲಿ ಕ್ರಮವಾಗಿ 172.95 ಮತ್ತು 178.21 ಸ್ಟ್ರೈಕ್‌ ರೇಟ್ ದಾಖಲಿಸಿದ್ದಾರೆ.

‘2024ರಲ್ಲಿ ರಾಹುಲ್ ಅವರು 520 ರನ್‌ ಗಳಿಸಿದರು. ಆದರೆ ತಂಡಕ್ಕೆ ಪ್ಲೇ ಆಫ್‌  ಅರ್ಹತೆ ಗಿಟ್ಟಿಸಿಕೊಡಲು ಈ ಸಾಧನೆ ಸಾಕಾಗಲಿಲ್ಲ. ಪವರ್‌ಪ್ಲೇ  ಅವಧಿಯ ಬ್ಯಾಟಿಂಗ್‌ ವೈಫಲ್ಯದಿಂದಾಗಿ ನಾವು ಬಹಳಷ್ಟು ಪಂದ್ಯಗಳನ್ನು ಸೋತೆವು. ಗೆದ್ದ ಪಂದ್ಯಗಳೂ ಪವರ್‌ಪ್ಲೇ ಆಟದಿಂದಲೇ’ ಎಂದು ಹೇಳಿದರು. 

ಪೂರನ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಕಡಿಮೆ ಓವರ್‌ಗಳು  ಇರುವ ಕಠಿಣ ಸಮಯದಲ್ಲಿ ಅವರು ಮಿಂಚಿದ್ದಾರೆ. ವೆಸ್ಟ್ ಇಂಡೀಸ್ ತಂಡದ ನಾಯಕತ್ವ ಕೂಡ ನಿಭಾಯಿಸಿದ್ದಾರೆ. 

ಡೆಲ್ಲಿ ಕ್ಯಾಪಿಟಲ್ ನಡೆ ನಿಗೂಢ:  ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಿಷಭ್ ಪಂತ್ ಅವರನ್ನು ಉಳಿಸಿಕೊಳ್ಳುವ ಕುರಿತು ರಹಸ್ಯವನ್ನು ಕಾಪಾಡಿಕೊಂಡಿದೆ. ಪಂತ್ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಮುಖ್ಯ ಕೋಚ್ ರಿಕಿ ಪಾಟಿಂಗ್, ನಿರ್ದೇಶಕ ಸೌರವ್ ಗಂಗೂಲಿ ಮತ್ತು ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರು ಈ ವರ್ಷ ಡೆಲ್ಲಿ ತಂಡದಲ್ಲಿಲ್ಲ. ಆದ್ದರಿಂದ ಪಂತ್ ಕೂಡ ಬಿಡುಗಡೆಯಾಗುವ ಮಾತುಗಳು ಕೇಳಿಬಂದಿದ್ದವು. 

‘ಒಂದೊಮ್ಮೆ ಪಂತ್ ಬಿಡ್‌ ಪ್ರಕ್ರಿಯೆಯಲ್ಲಿ ಲಭ್ಯರಾದರೆ, ಫ್ರ್ಯಾಂಚೈಸಿಗಳು ತುರುಸಿನ ಪೈಪೋಟಿ ನಡೆಸಿ ಖರೀದಿ ಮಾಡಬಹುದು. ₹ 25 ಕೋಟಿ ಮೌಲ್ಯ ದಾಟಿ ಐಪಿಎಲ್ ದಾಖಲೆಯೂ ನಿರ್ಮಾಣವಾಗಬಹುದು’ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.