ADVERTISEMENT

ರಾಹುಲ್ –ಹಾರ್ದಿಕ್ ಪ್ರಕರಣ: ತ್ವರಿತ ವಿಚಾರಣೆಗೆ ರಾಯ್ ಒತ್ತಡ

ಅವಸರ ಬೇಡವೆಂದ ಎಡುಲ್ಜಿ

ಪಿಟಿಐ
Published 12 ಜನವರಿ 2019, 20:00 IST
Last Updated 12 ಜನವರಿ 2019, 20:00 IST
ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್
ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್   

ನವದೆಹಲಿ: ಮಹಿಳೆಯರ ಕುರಿತ ಆಕ್ಷೇಪಾರ್ಹ ಹೇಳಿಕೆಗಳಿಂದಾಗಿ ಭಾರತ ಕ್ರಿಕೆಟ್ ತಂಡದಿಂದ ಅಮಾನತಾಗಿರುವ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಅವರನ್ನು ತ್ವರಿತವಾಗಿ ವಿಚಾರಣೆ ನಡೆಸಿ, ಕ್ರಮಕ್ಕೆ ಮುಂದಾಗಬೇಕು ಎಂದು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಪಟ್ಟು ಹಿಡಿದಿದ್ದಾರೆ.

ಆದರೆ ಸಮಿತಿಯ ಸದಸ್ಯೆ ಡಯಾನಾ ಎಡುಲ್ಜಿ ಆವರು, ‘ಇಬ್ಬರೂ ಆಟಗಾರರ ವಿಚಾರಣೆ ಮುಗಿಯುವವರೆಗೆ ಮತ್ತು ಕ್ರಮದ ಕುರಿತ ನಿರ್ಧಾರ ಕೈಗೊಳ್ಳುವವರೆಗೆ ಅಮಾನತಿನಲ್ಲಿಡಬೇಕು. ಈಚೆಗೆ ಮಂಡಳಿಯ ಸಿಇಒ ರಾಹುಲ್ ಜೊಹ್ರಿ ಅವರ ವಿರುದ್ಧ ಲೈಂಗಿಕ ಶೋಷಣೆ ಆರೋಪ ಕೇಳಿ ಬಂದಾಗಲೂ ಇದೇ ಕ್ರಮವನ್ನು ಅನುಸರಿಸಲಾಗಿತ್ತು. ತ್ವರಿತವಾಗಿ ವಿಚಾರಣೆ ಮಾಡುವುದರಿಂದ ತಪ್ಪಿತಸ್ಥರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ’ ಎಂದಿದ್ದಾರೆ. ಇದರಿಂದಾಗಿ ಇದರಿಂದಾಗಿ ಸಿಒಎ ಯಲ್ಲಿ ಇರುವ ಈ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ ಎನ್ನಲಾಗಿದೆ.

‘ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯ ಎರಡನೇ ಪಂದ್ಯ ಮುಗಿಯು ವಷ್ಟರಲ್ಲಿ ವಿಚಾರಣೆ ಪ್ರಕ್ರಿಯೆ ಮುಗಿಯ ಬೇಕು’ ಎಂದು ರಾಯ್ ಹೇಳಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿ ಇಮೇಲ್ ಮಾಡಿ ರುವ ಎಡುಲ್ಜಿ, ‘ಸುಮ್ಮನೇ ಕಾಟಾಚಾರಕ್ಕೆ ವಿಚಾರಣೆ ನಡೆಯಬಾರದು. ಯಾವುದೇ ತರಾತುರಿ ಸಲ್ಲದು. ಕೂಲಂಕಷವಾದ ವಿಚಾರಣೆ ಪ್ರಕ್ರಿಯೆ ನಡೆಯುವುದು ಅಗತ್ಯವಿದೆ’ ಎಂದಿದ್ದಾರೆ.

ಕಾನೂನು ಸಲಹೆ ನೀಡಿರುವ ತಂಡವು ವಿಚಾರಣೆಯನ್ನು ಹಂಗಾಮಿ ಒಂಬುಡ್ಸ್‌ಮನ್‌ ಅವರಿಂದ ಮಾಡಿಸ ಬೇಕು ಎಂದು ಸಲಹೆ ನೀಡಿದೆ. ಅಮಿಕಸ್ ಕ್ಯೂರಿಯಿಂದ ವಿಚಾರಣೆ ನಡೆಸಬೇಕು ಎಂದು ರಾಯ್ ಸಲಹೆ ನೀಡಿದ್ದರು.

ಆದರೆ, ವಿಚಾರಣಾ ಸಮಿತಿಯಲ್ಲಿ ಸಿಒಎ ಸದಸ್ಯರು ಮತ್ತು ಬಿಸಿಸಿಐ ಪದಾಧಿಕಾರಿಗಳು ಇರಬೇಕು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಡ ಎಂದು ಎಡುಲ್ಜಿ ಅಭಿಪ್ರಾಯಪಟ್ಟಿದ್ದಾರೆ.

ಈಚೆಗೆ ಟಿ.ವಿ. ವಾಹಿನಿಯ ‘ಕಾಫಿ ವಿಥ್ ಕರಣ್’ ಕಾರ್ಯಕ್ರಮದಲ್ಲಿ ಹಾರ್ದಿಕ್ ಮತ್ತು ರಾಹುಲ್ ಅವರು ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅವರನ್ನು ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಂದ ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.