ಬೆಂಗಳೂರು: ಕಳೆದ ಎರಡು ದಿನಗಳಿಂದ ನಗರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇನ್ನೂ ಎರಡ್ಮೂರು ದಿನ ಹೀಗೆ ಎನ್ನಲಾಗುವ ವರದಿಗಳೂ ಇವೆ. ಆದರೆ ಉದ್ಯಾನನಗರಿಯ ಕ್ರಿಕೆಟ್ ಪ್ರಿಯರನ್ನು ಮಾತ್ರ ಈ ಮಳೆಗೆ ತಡೆಯಲು ಆಗಿಲ್ಲ.
ಬುಧವಾರದಿಂದ ಇಲ್ಲಿ ಆಯೋಜನೆಗೊಂಡಿರುವ ಭಾರತ–ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಇದಕ್ಕೆ ಸಾಕ್ಷಿ. ಮೊದಲ ದಿನದಾಟದಲ್ಲಿ ಟಾಸ್ ಹಾಕಲು ಕೂಡ ಮಳೆ ಆಸ್ಪದ ಕೊಡಲಿಲ್ಲ. ಮಧ್ಯಾಹ್ನ 2.36ಕ್ಕೆ ದಿನದಾಟವನ್ನೂ ರದ್ದುಗೊಳಿಸಲಾಯಿತು. ಆದರೆ 500ಕ್ಕೂ ಹೆಚ್ಚು ಜನರು ಗ್ಯಾಲರಿ ಬಿಟ್ಟು ಕದಲಲಿಲ್ಲ. ಬೆಳಿಗ್ಗೆ 8.30ರಿಂದಲೇ ಕ್ರೀಡಾಂಗಣದತ್ತ ಮುಖ ಮಾಡಿದ್ದರು.
ಸತತವಾಗಿ ಸುರಿಯುತ್ತಿರುವ ಮಳೆಗೂ ಜಗ್ಗದ ಜನರು ‘ನಮ್ಮನ್ನು ಒಳಗೆ ಬಿಡಿ, ಕುಳಿತುಕೊಳ್ಳುತ್ತೇವೆ’ ಎಂದು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದರು.
ಕ್ರೀಡಾಂಗಣದ ಮುಖ್ಯದ್ವಾರದ ಬಳಿ ಪ್ರೇಕ್ಷಕರೊಬ್ಬರು, ‘ದುಡ್ಡು ಕೊಟ್ಟು ಟಿಕೆಟ್ ಖರೀದಿಸಿದ್ದೇವೆ. ನಾವು ಮಳೆಯಲ್ಲಿ ನಿಂತಿರಬೇಕಾ. ಒಳಗೆ ಬಿಡಿ. ಆಟ ಶುರುವಾಗುವವರೆಗೂ ಕುಳಿತಿರುತ್ತೇವೆ. ನಮ್ಮನ್ನು ಒಳಗೆ ಬಿಟ್ಟರೆ ನಿಮಗೇನು ಕಷ್ಟ’ ಎಂದು ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
'10.30ಕ್ಕೆ ಒಳಗೆ ಬಿಡುತ್ತೇವೆ. ಇನ್ನೂ ಪಂದ್ಯ ಆರಂಭವಾಗಿಲ್ಲ’ ಎಂದು ಪೊಲೀಸರು ಉತ್ತರಿಸುತ್ತಿದ್ದರು.
‘ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ರಿಕೆಟ್ ಪಂದ್ಯ ನಡೆದರೂ ಜನರು ಸೇರುತ್ತಿದ್ದಾರೆ. ನಾವು ಐಪಿಎಲ್ ಅಷ್ಟೇ ಅಲ್ಲ. ಯಾವುದೇ ಪಂದ್ಯಕ್ಕಾದರೂ ಬರುತ್ತೇವೆ. ಎರಡು ವರ್ಷದ ನಂತರ ಇಲ್ಲಿ ಟೆಸ್ಟ್ ನಡೆಯುತ್ತಿದೆ. ಅದಕ್ಕಾಗಿ ಟಿಕೆಟ್ ಖರೀದಿಸಿದ್ದೇವೆ. ಮಳೆ ನಿಂತರೆ ಪಂದ್ಯ ನಡೆದೇ ನಡೆಯುತ್ತದೆ ಎನ್ನುವ ವಿಶ್ವಾಸವಿದೆ’ ಎಂದು ಸರದಿ ಸಾಲಿನಲ್ಲಿದ್ದ ಸುರೇಶ್ ಕುಮಾರ್ ಮತ್ತು ಸಂಗಡಿಗರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಮತ್ತು ನೆರವು ಸಿಬ್ಬಂದಿಯ ಕೆಲವರು ಕಾರಿನಲ್ಲಿ 9.25ರ ಸುಮಾರಿಗೆ ಕ್ರೀಡಾಂಗಣಕ್ಕೆ ಬಂದರು. ಒಳಾಂಗಣ ಕ್ರೀಡಾಂಗಣಕ್ಕೆ ತೆರಳಿ ತಾಲೀಮು ನಡೆಸಿದರು. ಮಧ್ಯಾಹ್ನ 3ರ ನಂತರ ಸ್ವಲ್ಪ ಹೊತ್ತು ಮಳೆ ನಿಂತಿತ್ತು. ಆಗ ಕ್ರೀಡಾಂಗಣ ಸಿಬ್ಬಂದಿಯು ಹೊದಿಕೆಯನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಅಂಪೈರ್‌ಗಳಾದ ಪಾಲ್ ರಿಫೆಲ್, ಮೈಕೆಲ್ ಗಾಫ್ ಮತ್ತು ರಿಚರ್ಡ್ ಇಲಿಂಗ್‌ವರ್ಥ್ ಪಿಚ್ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಬಿ ಗ್ರೌಂಡ್‌ನಲ್ಲಿದ್ದ ರೋಹಿತ್ ಶರ್ಮಾ ಮತ್ತು ನೆರವು ಸಿಬ್ಬಂದಿಯೂ ಪಿಚ್ ಪರಿಶೀಲಿಸಿ ಮರಳಿದರು. ಆಗಲೂ ಗ್ಯಾಲರಿಯಲ್ಲಿದ್ದ ಒಂದಿಷ್ಟು ಜನರು ಹರ್ಷೋದ್ಘಾರಗಳೊಂದಿಗೆ ರೋಹಿತ್ ಅವರ ಗಮನ ಸೆಳೆದರು.
ಗುರುವಾರವೂ ಇಡೀ ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಬಿಡಿ 100ನೇ ಪಂದ್ಯದ ನೆನಪು
ತಂದ ಮಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2015ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ನಡೆದಿದ್ದ ಟೆಸ್ಟ್ ಪಂದ್ಯದ ಸಂದರ್ಭದಲ್ಲಿಯೂ ಇದೇ ರೀತಿ ಮಳೆಯಾಟ ನಡೆದಿತ್ತು. ಆ ಪಂದ್ಯವು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ ಅವರಿಗೆ 100ನೇ ಟೆಸ್ಟ್ ಆಗಿತ್ತು. ಅವರ ಇಡೀ ಕುಟುಂಬವು ಆ ದಿನ ಹಾಜರಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡವು 214 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಭಾರತ ತಂಡವು ವಿಕೆಟ್ ನಷ್ಟವಿಲ್ಲದೇ 80 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಆರಂಭವಾಗಿತ್ತು. ನಂತರದ ನಾಲ್ಕು ದಿನಗಳ ಕಾಲ ಸತತ ಮಳೆ ಬಂದ ಕಾರಣ ಆಟ ನಡೆಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.