ADVERTISEMENT

ಮಳೆ ಅಡಚಣೆ: ಭಾರತ– ದಕ್ಷಿಣ ಆಫ್ರಿಕಾ ಪಂದ್ಯ ರದ್ದು

ಪಿಟಿಐ
Published 8 ಜುಲೈ 2024, 3:16 IST
Last Updated 8 ಜುಲೈ 2024, 3:16 IST

ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ ತಾಜ್ಮೀನ್ ಬ್ರಿಟ್ಸ್‌ ಬ್ಯಾಟಿಂಗ್

ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ ತಾಜ್ಮೀನ್ ಬ್ರಿಟ್ಸ್‌ ಬ್ಯಾಟಿಂಗ್

ಪಿಟಿಐ ಚಿತ್ರ

ADVERTISEMENT

ಚೆನ್ನೈ: ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡವು ಮೊದಲು ಬ್ಯಾಟಿಂಗ್‌ ಮಾಡಿ 6 ವಿಕೆಟ್‌ಗೆ 177 ರನ್‌ ಗಳಿಸಿದ ನಂತರ ನಿರಂತರ ಮಳೆ ಸುರಿದ ಪರಿಣಾಮ ಭಾರತ ವಿರುದ್ಧದ ಎರಡನೇ ಟಿ20 ಪಂದ್ಯ ರದ್ದುಗೊಂಡಿತು.

ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ತಂಡವು 1–0 ಮುನ್ನಡೆ ಕಾಯ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಭಾರತ 12 ರನ್‌ಗಳಿಂದ ಪರಾಭವಗೊಂಡಿತ್ತು. ಹೀಗಾಗಿ, ತವರಿನಲ್ಲಿ ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ಹರ್ಮನ್‌ಪ್ರೀತ್‌ ಕೌರ್‌ ಬಳಗವು ಮಂಗಳವಾರ (ಜುಲೈ 9) ಇಲ್ಲಿ ನಡೆಯುವ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಎಂ.ಎ. ಚಿದಂಬರಂ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ದಕ್ಷಿಣ ಆಫ್ರಿಕಾದ ಇನಿಂಗ್ಸ್‌ ವೇಳೆಯೂ ಮೂರು ಬಾರಿ ಮಳೆ ಅಡಚಣೆ ಉಂಟುಮಾಡಿತು. ಇನಿಂಗ್ಸ್ ವಿರಾಮ ವೇಳೆ ಮತ್ತೆ ಮಳೆ ಆರಂಭವಾಯಿತು. ಸಾಕಷ್ಟು ಸಮಯ ಕಾದರೂ ಮಳೆ ನಿಲ್ಲಲಿಲ್ಲ. ಹೀಗಾಗಿ ಅಂಪೈರ್‌ಗಳು ಪಂದ್ಯ ರದ್ದು ಮಾಡುವ ನಿರ್ಧಾರ ಪ್ರಕಟಿಸಿದರು.

ಇದಕ್ಕೂ ಮೊದಲು ಪ್ರವಾಸಿ ತಂಡವು ತಾಜ್ಮೀನ್ ಬ್ರಿಟ್ಸ್ (52; 39ಎ, 4X6, 6X1) ಮತ್ತು ಅನೆಕಿ ಬಾಷ್ (40; 32ಎ, 4X6) ಅವರ ಬ್ಯಾಟಿಂಗ್ ಬಲದಿಂದ ಸವಾಲಿನ ಮೊತ್ತ ಪೇರಿಸಿತ್ತು.

ಭಾರತದ ಪೂಜಾ ವಸ್ತ್ರಕರ್ (37ಕ್ಕೆ2) ಮತ್ತು ದೀಪ್ತಿ ಶರ್ಮಾ (20ಕ್ಕೆ2) ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೂ ಬ್ಯಾಟರ್‌ಗಳ ರನ್‌ ಗಳಿಕೆಗೆ ಕಡಿವಾಣ ಹಾಕುವಲ್ಲಿ ಉಳಿದ ಬೌಲರ್‌ಗಳು ವಿಫಲರಾದರು.

ನಾಯಕಿ ಲೌರಾ ವೊಲ್ವಾರ್ಟ್ (22; 12 ಎಸೆತ) ಮತ್ತು ಬ್ರಿಟ್ಸ್‌ ಮೊದಲ ವಿಕೆಟ್ ಜೊತೆಯಾಟದಲ್ಲಿ  43 ರನ್‌ (4 ಓವರ್‌ಗಳಲ್ಲಿ) ಗಳಿಸಿ ಉತ್ತಮ ಆರಂಭ ನೀಡಿದರು.  ಲೌರಾ ವಿಕೆಟ್ ಗಳಿಸಿದ ಪೂಜಾ ಅವರು ಜೊತೆಯಾಟವನ್ನು ಮುರಿದರು. ಇದಾಗಿ ನಾಲ್ಕು ಓವರ್‌ಗಳ ನಂತರ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಮರೈಜನ್ ಕ್ಯಾಪ್ ಕೂಡ ಔಟಾದರು. ಈ ಹಂತದಲ್ಲಿ ಬ್ರಿಟ್ಸ್ ಮತ್ತು ಬಾಷ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 38 ರನ್‌ ಸೇರಿಸಿದ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ದೀಪ್ತಿ ಬೌಲಿಂಗ್‌ನಲ್ಲಿ ತಾಜ್ಮೀನ್ ಔಟಾದ ನಂತರ ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಬೀಸಾಟಕ್ಕೆ ಒತ್ತು ನೀಡಿದರು. ಇದರಿಂದಾಗಿ ತಂಡದ ಮೊತ್ತವೂ ಹೆಚ್ಚಾಯಿತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 177 (ಲೌರಾ ವೊಲ್ವಾರ್ಟ್ 22, ತಾಜ್ಮೀನ್ ಬ್ರಿಟ್ಸ್ 52, ಮರೈಜನ್ ಕ್ಯಾಪ್ 20, ಅನೆಕೆ ಬಾಷ್ 40, ಪೂಜಾ ವಸ್ತ್ರಕರ್ 37ಕ್ಕೆ2, ದೀಪ್ತಿ ಶರ್ಮಾ 20ಕ್ಕೆ2).

ಫಲಿತಾಂಶ: ಪಂದ್ಯ ರದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.