ADVERTISEMENT

ಭಾರತ–ನ್ಯೂಜಿಲೆಂಡ್ ಟೆಸ್ಟ್ ಇಂದಿನಿಂದ |ಮಳೆಯಾಟವೋ, ಕ್ರಿಕೆಟ್ ಆಟವೋ?

ಚಿನ್ನಸ್ವಾಮಿ ಅಂಗಳದಲ್ಲಿ ಭಾರತ–ನ್ಯೂಜಿಲೆಂಡ್ ಟೆಸ್ಟ್ ಇಂದಿನಿಂದ; ಉದ್ಯಾನನಗರಿಯಲ್ಲಿ ಯಲ್ಲೋ ಅಲರ್ಟ್

ಗಿರೀಶ ದೊಡ್ಡಮನಿ
Published 15 ಅಕ್ಟೋಬರ್ 2024, 22:43 IST
Last Updated 15 ಅಕ್ಟೋಬರ್ 2024, 22:43 IST
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಅನ್ನು ಮಳೆಯಿಂದ ರಕ್ಷಿಸಲು ಹೊದಿಕೆ ಹಾಕುತ್ತಿರುವ ಸಿಬ್ಬಂದಿ  –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್ 
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಅನ್ನು ಮಳೆಯಿಂದ ರಕ್ಷಿಸಲು ಹೊದಿಕೆ ಹಾಕುತ್ತಿರುವ ಸಿಬ್ಬಂದಿ  –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್    

ಬೆಂಗಳೂರು: ಯಾವುದೇ ಕ್ರಿಕೆಟ್ ಪಂದ್ಯ ನಡೆಯುವ ಮುನ್ನಾದಿನ ಅಭಿಮಾನಿಗಳ ವಲಯದಲ್ಲಿ ಸೋಲು, ಗೆಲುವುಗಳ ಲೆಕ್ಕಾಚಾರ ನಡೆಯುತ್ತದೆ. ಆದರೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸನ್ನಿವೇಶ ವಿಭಿನ್ನವಾಗಿದೆ. ಈ ಪಂದ್ಯ ಸುಸೂತ್ರವಾಗಿ ನಡೆಯಲು ಮಳೆಯು ಅವಕಾಶ ಕೊಡುವುದೇ ಎಂಬ ಮಾತುಕತೆಗಳು ಜೋರಾಗಿವೆ.  

ಮಂಗಳವಾರ ಬೆಳಗಿನ ಜಾವದಿಂದಲೇ ಉದ್ಯಾನನಗರಿಯಲ್ಲಿ ಮಳೆ ಸುರಿಯುತ್ತಿದೆ. ಇನ್ನೂ ಎರಡು, ಮೂರು ದಿವಸ ಇದೇ ವಾತಾವರಣ ಮುಂದುವರಿಯುವ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರಿಂದಾಗಿ ಪಂದ್ಯದ ಬಹುತೇಕ ಸಮಯವು ಮಳೆಯಲ್ಲಿ ಕೊಚ್ಚಿಹೋಗುವ ಸಾಧ್ಯತೆ ಇದೆ. 

‘ಕನಿಷ್ಠ ಎರಡು ಅಥವಾ ಮೂರು ದಿನ ಸಿಕ್ಕರೂ ಸಾಕು. ಭಾರತ ತಂಡ ಗೆಲ್ಲುವುದು ಖಚಿತ’ ಎಂಬ ವಿಶ್ವಾಸದ ಮಾತುಗಳಿಗೂ ಕಡಿಮೆಯೇನಿಲ್ಲ. ಇದಕ್ಕೆ ಕಾರಣ; ಈಚೆಗಷ್ಟೇ ಕಾನ್ಪುರದ ಗ್ರೀನ್‌ ಪಾರ್ಕ್‌ನಲ್ಲಿ ನಡೆದಿದ್ದ ಬಾಂಗ್ಲಾ ಎದುರಿನ ಟೆಸ್ಟ್‌ನಲ್ಲಿ ಭಾರತ ಸಾಧಿಸಿದ್ದ ವಿಜಯ. ಆ ಪಂದ್ಯದ ಎರಡೂವರೆ ದಿನಗಳ ಆಟವು ಮಳೆಗಾಹುತಿಯಾಗಿತ್ತು.  ಕೊನೆಯ ಎರಡು ದಿನ ಮಳೆ ಬರಲಿಲ್ಲ. ಈ ಅವಧಿಯಲ್ಲಿಯೇ ಭಾರತ ಆರ್ಭಟಿಸಿತ್ತು. ಅಮೋಘ ಜಯ ಸಾಧಿಸಿತ್ತು. ಅದರೊಂದಿಗೆ ಸ್ವದೇಶದಲ್ಲಿ ಸತತ 18ನೇ ಟೆಸ್ಟ್ ಸರಣಿ ಗೆದ್ದ ದಾಖಲೆ ಬರೆಯಿತು. 

ADVERTISEMENT

ಬಾಂಗ್ಲಾ ವಿರುದ್ಧ ತೋರಿದ ಆಕ್ರಮಣಶೀಲ ಆಟವನ್ನೇ ಇಲ್ಲಿಯೂ ಮುಂದುವರಿಸುವ ತವಕದಲ್ಲಿ ರೋಹಿತ್ ಶರ್ಮಾ ಬಳಗವಿದೆ. ಸೋಮವಾರ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ  ಇದನ್ನೇ ಸೂಚ್ಯವಾಗಿ ಹೇಳಿದ್ದರು. ಕಾನ್ಪುರ ಕ್ರೀಡಾಂಗಣದಲ್ಲಿ ಮಳೆ ನೀರು ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಆದರೆ, ಚಿನ್ನಸ್ವಾಮಿ ಅಂಗಳದಲ್ಲಿ ಸಬ್‌ ಏರ್ ಸಿಸ್ಟಮ್ ಎಂಬ ಅತ್ಯಾಧುನಿಕ ವ್ಯವಸ್ಥೆ ಇದೆ. ಮಳೆ ಬಂದು ನಿಂತ ಅರ್ಧ ಗಂಟೆಯಲ್ಲಿ ಪಂದ್ಯವಾಡಲು ಮೈದಾನವನ್ನು ಸಿದ್ಧಗೊಳಿಸುವ ನುರಿತ ಸಿಬ್ಬಂದಿಯೂ ಇಲ್ಲಿದೆ. ಆದರೆ ಮಳೆ ಸುರಿಯುತ್ತಲೇ ಇದ್ದರೆ, ಆಟಗಾರರು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕಾಲ ಕಳೆಯಬೇಕಷ್ಟೇ. 

ಎರಡು ವರ್ಷಗಳ ನಂತರ ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್‌ಪ್ರಿಯರು ಕಾತುರರಾಗಿದ್ದಾರೆ. ಅದರಲ್ಲೂ ತಮ್ಮ ನೆಚ್ಚಿನ ವಿರಾಟ್ ಕೊಹ್ಲಿ ಆಟವನ್ನು ನೋಡುವ ತವಕದಲ್ಲಿದ್ದಾರೆ. ಕೊಹ್ಲಿ ಮತ್ತು ತಂಡದ ನಾಯಕ ರೋಹಿತ್ ಶರ್ಮಾ ಅವರು ಈಗಾಗಲೇ ಟಿ20 ಮಾದರಿಯಿಂದ ನಿವೃತ್ತಿ ಪಡೆದಿದ್ದಾರೆ. ಆದ್ದರಿಂದ ಉಳಿದ ಮಾದರಿಗಳಲ್ಲಿ ಇನ್ನು ಹೆಚ್ಚು ಕಾಲ ಆಡುವುದು ಅನುಮಾನ. ಇಬ್ಬರಿಗೂ ಬೆಂಗಳೂರಿನಲ್ಲಿ ಆಡುವ ಕೊನೆಯ ಟೆಸ್ಟ್ ಪಂದ್ಯವೂ ಇದಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆದರೆ ಅವರಿಬ್ಬರೂ ಬ್ಯಾಟಿಂಗ್‌ನಲ್ಲಿ ಲಯಕ್ಕೆ ಮರಳುವ ಅಗತ್ಯವಿದೆ. 

ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ಆಲ್‌ರೌಂಡ್ ಆಟವು ತಂಡದ ಪ್ರಮುಖ ಶಕ್ತಿಯಾಗಿದೆ. ಚೆನ್ನೈನಲ್ಲಿ ಬಾಂಗ್ಲಾ ಎದುರಿನ ಟೆಸ್ಟ್‌ನಲ್ಲಿ ಅಶ್ವಿನ್ ಶತಕ ಹೊಡೆದಿದ್ದರು ಮತ್ತು ಐದು ವಿಕೆಟ್ ಗೊಂಚಲೂ ಗಳಿಸಿದ್ದರು. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಎದುರಾಳಿ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡಬಲ್ಲ ಆಟಗಾರರು. 

ಆದರೆ ಬಾಂಗ್ಲಾ ತಂಡಕ್ಕಿಂತಲೂ ಕಿವೀಸ್ ಪಡೆ ಹೆಚ್ಚು ಬಲಾಢ್ಯವಾಗಿದೆ. ಕೇನ್ ವಿಲಿಯಮ್ಸನ್ ಗಾಯಗೊಂಡಿದ್ದು ಟಾಮ್ ಲೇಥಮ್ ನಾಯಕತ್ವದಲ್ಲಿ ತಂಡ ಕಣಕ್ಕಿಳಿಯಲಿದೆ. ಡೆವೊನ್ ಕಾನ್ವೆ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ ಸೇರಿದಂತೆ ನ್ಯೂಜಿಲೆಂಡ್‌ನ ಹಲವು ಆಟಗಾರರೂ ಐಪಿಎಲ್‌ ನಲ್ಲಿ ಆಡಿ ಭಾರತದ ವಾತಾವರಣವನ್ನು ಚೆನ್ನಾಗಿ ಅರಿತಿದ್ದಾರೆ. ವೇಗಿ ಟಿಮ್ ಸೌಥಿ, ಸ್ಪಿನ್ನರ್ ಸ್ಯಾಂಟನರ್ ಮತ್ತು ಅಜಾಜ್ ಪಟೇಲ್ ಅವರು ಆತಿಥೇಯ ಬ್ಯಾಟರ್‌ಗಳನ್ನು ಕಾಡುವಷ್ಟು ಸಮರ್ಥರಾಗಿದ್ದಾರೆ.

ಆದರೆ ಇವರೆಲ್ಲರ ಆಟ ನಡೆಯಬೇಕಾದರೆ ಜಮಖಾನೆ, ಟಾರ್ಪಾಲಿನ್‌ಗಳ ಹೊದಿಕೆಗಳಲ್ಲಿ ಬೆಚ್ಚಗೆ ಮಲಗಿರುವ ಪಿಚ್ ಮೈಕೊಡವಿ ಏಳಲು ಮಳೆರಾಯ ಆಸ್ಪದ ಕೊಡಬೇಕಷ್ಟೇ!

ತಂಡಗಳು: ರೋಹಿತ್ ಶರ್ಮಾ (ನಾಯಕ) ಜಸ್‌ಪ್ರೀತ್ ಬೂಮ್ರಾ (ಉಪನಾಯಕ) ಯಶಸ್ವಿ ಜೈಸ್ವಾಲ್ ಶುಭಮನ್ ಗಿಲ್ ವಿರಾಟ್ ಕೊಹ್ಲಿ ಕೆ.ಎಲ್. ರಾಹುಲ್ ಸರ್ಫರಾಜ್ ಖಾನ್ ರಿಷಭ್ ಪಂತ್ (ವಿಕೆಟ್‌ಕೀಪರ್) ಧ್ರುವ ಜುರೆಲ್ (ವಿಕೆಟ್‌ಕೀಪರ್)  ಆರ್. ಅಶ್ವಿನ್ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಕುಲದೀಪ್ ಯಾದವ್ ಮೊಹಮ್ಮದ್ ಸಿರಾಜ್ ಆಕಾಶದೀಪ್. ನ್ಯೂಜಿಲೆಂಡ್: ಟಾಮ್ ಲೇಥಮ್ (ನಾಯಕ) ಡೆವೊನ್ ಕಾನ್ವೆ ಮಾರ್ಕ್ ಚಾಪ್‌ಮನ್ ವಿಲ್ ಯಂಗ್ ಡ್ಯಾರಿಲ್ ಮಿಚೆಲ್ ಗ್ಲೆನ್ ಫಿಲಿಪ್ಸ್ ಮೈಕೆಲ್ ಬ್ರೇಸ್‌ವೆಲ್ ಮಿಚೆಲ್ ಸ್ಯಾಂಟನರ್ ರಚಿನ್ ರವೀಂದ್ರ ಟಾಮ್ ಬ್ಲಂಡೆಲ್ (ವಿಕೆಟ್‌ಕೀಪರ್) ಅಜಾಜ್ ಪಟೇಲ್ ಮ್ಯಾಟ್ ಹೆನ್ರಿ ಟಿಮ್ ಸೌಥಿ ವಿಲಿಯಂ ಒ ರೂರ್ಕಿ ಜೇಕಬ್ ಡಫಿ.    ಪಂದ್ಯ ಆರಂಭ: ಬೆಳಿಗ್ಗೆ 9.30 ನೇರಪ್ರಸಾರ: ಸ್ಪೋರ್ಟ್ಸ್ 18 ಜಿಯೊ ಸಿನಿಮಾ ಆ್ಯಪ್

ತವರಿನಲ್ಲಿ ಮಿಂಚುವರೇ ರಾಹುಲ್?

ಬೆಂಗಳೂರು: 'ಸ್ಥಳೀಯ ಹೀರೊ’ ಕೆ.ಎಲ್. ರಾಹುಲ್ ಅವರು ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಸ್ಥಿರಗೊಳಿಸುವ ಛಲದಲ್ಲಿದ್ದಾರೆ. ಸಿಗುತ್ತಿರುವ ಅವಕಾಶಗಳಲ್ಲಿಯೇ ತಮ್ಮ ಸಾಮರ್ಥ್ಯ ಮೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಾಂಗ್ಲಾ ಎದುರಿನ ಸರಣಿಯಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು ಒಂದು ಅರ್ಧಶತಕ ಗಳಿಸಿದ್ದರು. ಇದೀಗ ತಮ್ಮ ತವರಿನಂಗಳದಲ್ಲಿ ಅವಕಾಶ ಸಿಕ್ಕರೆ ಮಿಂಚುವ ಭರವಸೆಯಲ್ಲಿದ್ದಾರೆ.  ಆರಂಭಿಕ ಬ್ಯಾಟರ್‌ಗಳ ಸ್ಥಾನದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಆಡುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಆಡುತ್ತಿದ್ದಾರೆ. ಅಪಘಾತದಲ್ಲಿ ಆದ ಗಾಯಗಳಿಂದ ಸಂಪೂರ್ಣ ಚೇತರಿಸಿಕೊಂಡಿರುವ ರಿಷಭ್ ಪಂತ್ ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚುತ್ತಿದ್ದಾರೆ. ಅಲ್ಲದೇ ಈ ಸರಣಿಯಲ್ಲಿ ಎರಡನೇ ವಿಕೆಟ್‌ಕೀಪರ್ ಆಗಿ ಧ್ರುವ ಜುರೇಲ್ ಕೂಡ ಸ್ಥಾನ ಪಡೆದಿದ್ದಾರೆ. ಆದ್ದರಿಂದ ರಾಹುಲ್ ಅವರು ಪರಿಣತ ಬ್ಯಾಟರ್ ಆಗಿ ತಮ್ಮ ಹೊಣೆ ನಿಭಾಯಿಸಬೇಕಿದೆ. ಅದರಲ್ಲೂ ಆರನೇ ಕ್ರಮಾಂಕದಲ್ಲಿ ತಮ್ಮ ಸಾಮರ್ಥ್ಯ ತೋರುವ ಸವಾಲು ಅವರ ಮುಂದಿದೆ.  ಮುಂಬರುವ ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ತಂಡದಲ್ಲಿ ಸ್ಥಾನ ಪಡೆಯಲು ರಾಹುಲ್ ಅವರಿಗೆ ಕಿವೀಸ್ ಎದುರಿನ ಸರಣಿಯಲ್ಲಿ ತೋರುವ ಆಟ ಮುಖ್ಯವಾಗಲಿದೆ. ಇಲ್ಲಿ ವಿಫಲರಾದರೆ; ಅವರ ಸ್ಥಾನಕ್ಕೆ ಲಗ್ಗೆ ಹಾಕಲು ಮುಂಬೈನ ಸರ್ಫರಾಜ್ ಖಾನ್ ಶ್ರೇಯಸ್ ಅಯ್ಯರ್ ಸಿದ್ಧವಾಗಿದ್ದಾರೆ.

ಶಮಿ ಫಿಟ್ ಆಗಿಲ್ಲ: ರೋಹಿತ್

‘ವೇಗಿ ಮೊಹಮ್ಮದ್ ಶಮಿ ಆವರನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ತಂಡಕ್ಕೆ ಆಯ್ಕೆ ಮಾಡುವ ಕುರಿತು ಖಚಿತವಾಗಿ ಹೇಳಲಾಗದು. ಅವರು ಹಿಮ್ಮಡಿಯ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಈ ಹಂತದಲ್ಲಿಯೇ ಅವರ ಮೊಣಕಾಲಿನಲ್ಲಿ ಊತ ಕಂಡುಬಂದಿದೆ. ಇದು ಅನಿರೀಕ್ಷಿತ ಬೆಳವಣಿಗೆ’ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.  ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಶಮಿ ಶೇ 100ರಷ್ಟು ಫಿಟ್‌ ಆಗುವ ಹೊತ್ತಿನಲ್ಲಿಯೇ ಮತ್ತೆ ಸಮಸ್ಯೆಯಾಗಿದೆ. ಅವರು ಎನ್‌ಸಿಎಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಣತ ವೈದ್ಯರು ಮತ್ತು ಫಿಸಿಯೊಗಳು ಅವರ ಆರೈಕೆ ಮಾಡುತ್ತಿದ್ದಾರೆ’ ಎಂದರು.   ‘ಶಮಿ ಫಿಟ್‌ ಆಗಿ ತಂಡಕ್ಕೆ ಮರಳಬೇಕು ಎಂದು ನಮ್ಮ ಆಶಯವಾಗಿದೆ.  ಆದರೆ ಅವರು ಸಂಪೂರ್ಣ ಚೇತರಿಸಿಕೊಳ್ಳಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.