ಪಟ್ನಾ: ನಾಯಕ ಮಯಂಕ್ ಅಗರವಾಲ್ ಅವರ ಬಿರುಸಿನ ಶತಕದ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ಬಿಹಾರ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಪಂದ್ಯದಲ್ಲಿ ಮೇಲುಗೈ ಪಡೆದಿರುವ ಕರ್ನಾಟಕ ಈಗ ಆತಿಥೇಯ ತಂಡದ ಮೇಲೆ ಒತ್ತಡ ಹೇರುವ ಸ್ಥಿತಿಯಲ್ಲಿದೆ.
ಮೊದಲ ದಿನ 59 ಓವರುಗಳ ಆಟ ಸಾಧ್ಯವಾಗಿತ್ತು. ಮಳೆ ಮತ್ತು ಮೈದಾನ ತೇವಗೊಂಡಿದ್ದ ಕಾರಣ ಮೊಯಿನ್ ಉಲ್ ಹಕ್ ಕ್ರೀಡಾಂಗಣದಲ್ಲಿ ಎರಡನೇ ದಿನ ಒಂದೂ ಎಸೆತ ಸಾಧ್ಯವಾಗಿರಲಿಲ್ಲ. ಮೂರನೇ ದಿನವೂ ತಡವಾಗಿ ಪಂದ್ಯ ಆರಂಭವಾಯಿತು. ಇಡಿ ದಿನ ಸಾಧ್ಯವಾಗಿದ್ದು 48 ಓವರುಗಳ ಆಟ ಮಾತ್ರ.
ಗರಿಷ್ಠ ಪಾಯಿಂಟ್ ಗಳಿಸಲು ಕರ್ನಾಟಕಕ್ಕೆ ಮೂರನೇ ದಿನ ವೇಗವಾಗಿ ರನ್ ಗಳಿಸುವುದೊಂದೇ ದಾರಿಯಾಗಿತ್ತು. ಶನಿವಾರ ಬಿಹಾರ 143 ರನ್‌ಗಳಿಗೆ ಉರುಳಿದ್ದು, ಕರ್ನಾಟಕ 3 ಓವರುಗಳಲ್ಲಿ ವಿಕೆಟ್ ಕಳೆದುಕೊಳ್ಳದೇ 16 ರನ್ ಗಳಿಸಿತ್ತು. ಮೂರನೇ ದಿನದ ಕೊನೆಗೆ ಕರ್ನಾಟಕ 7 ವಿಕೆಟ್‌ಗೆ 287 ರನ್‌ಗಳೊಡನೆ ಆಟ ಪೂರೈಸಿತು. ಸದ್ಯ 144 ರನ್‌ಗಳ ಮುನ್ನಡೆ ಪಡೆದಿದೆ.
ಮೊದಲ ದಿನ ಮೈದಾನದಿಂದ ಹೊರಗಿದ್ದ ಕಾರಣ, ಮೂರನೇ ಕ್ರಮಾಂಕದಲ್ಲಿ ಆಡಬೇಕಾಗಿ ಬಂದ ನಾಯಕ ಮಯಂಕ್ ಸ್ವತಃ ಮುಂಚೂಣಿಯಲ್ಲಿದ್ದು, 131 ಎಸೆತಗಳಲ್ಲಿ 105 ರನ್ ಹೊಡೆದು ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಉಪನಾಯಕ ಮನಿಷ್ ಪಾಂಡೆ ಕೂಡ ಬಿರುಸಿನ ಆಟಕ್ಕಿಳಿದು 55 ಎಸೆತಗಳಲ್ಲಿ 56 ರನ್ (4x5, 6x2) ಬಾರಿಸಿದರು.
ರನ್ ವೇಗ ಹೆಚ್ಚಿಸುವ ಭರದಲ್ಲಿ ಕೊನೆಯ ಅವಧಿಯಲ್ಲಿ ಕರ್ನಾಟಕ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಮುನ್ನಡೆ ಹಿಗ್ಗಿಸಿ, ಎದುರಾಳಿ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಬೇಗ ಆಲ್‌ಔಟ್ ಮಾಡಿ ಇನಿಂಗ್ಸ್ ಜಯದ ಯೋಜನೆ ಕರ್ನಾಟಕ ತಂಡದ್ದು.
ಕರ್ನಾಟಕಕ್ಕೆ ಈ ಪಂದ್ಯದಲ್ಲಿ ಜಯ ಅತ್ಯಗತ್ಯ ಸಹ. ಮೊದಲೆರಡು ಪಂದ್ಯಗಳಲ್ಲಿ (ಕ್ರಮವಾಗಿ ಮಧ್ಯಪ್ರದೇಶ ಮತ್ತು ಕೇರಳ ವಿರುದ್ಧ) ಮಳೆ ಮತ್ತು ಮೈದಾನ ಆಡಲು ಯೋಗ್ಯವಾಗಿಲ್ಲದ ಒಟ್ಟು ಎರಡು ಪಾಯಿಂಟ್‌ಗಳಷ್ಟೇ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.