ಗುವಾಹಟಿ: ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಭಾನುವಾರ ಐಪಿಎಲ್ ಪಂದ್ಯದಲ್ಲಿ ಎದುರಿಸಲಿರುವ ರಾಜಸ್ಥಾನ ರಾಯಲ್ಸ್ ತಂಡ ಸತತ ನಾಲ್ಕು ಪಂದ್ಯಗಳ ಸೋಲಿನ ಸರಪಳಿ ತುಂಡರಿಸಲು ತನ್ನೆಲ್ಲಾ ಶ್ರಮ ಹಾಕಲಿದೆ.
ರಾಯಲ್ಸ್ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದು, 16 ಪಾಯಿಂಟ್ಸ್ ಹೊಂದಿದೆ. ಆದರೆ ಕೊನೆಯ ಕೆಲವು ಪಂದ್ಯಗಳಲ್ಲಿ ಸೋಲನುಭವಿಸುತ್ತ ಬಂದಿದೆ. ಬ್ಯಾಟಿಂಗ್ ಇದ್ದಕ್ಕಿದ್ದ ಹಾಗೆ ಕಳೆಗುಂದಿದೆ. ಎರಡು ಪಂದ್ಯಗಳಲ್ಲಿ ತಂಡಕ್ಕೆ 150ರ ಗಡಿ ದಾಟಲೂ ಸಾಧ್ಯವಾಗಿಲ್ಲ. ಉತ್ತಮ ಲಯದಲ್ಲಿದ್ದ ಜೋಸ್ ಬಟ್ಲರ್ ತವರಿಗೆ ಮರಳಿದ್ದು, ಕೊರತೆ ಎನಿಸಿದೆ.
ಸೋಲಿನ ಸರಣಿಗೆ ಕೊನೆಹಾಡಬೇಕಾದರೆ, ಅಗ್ರ ಮೂವರು ಆಟಗಾರರಾದ ಯಶಸ್ವಿ ಜೈಸ್ವಾಲ್, ನಾಯಕ ಸಂಜು ಸ್ಯಾಮ್ಸನ್ ಮತ್ತು ಸ್ಥಳೀಯ ತಾರೆ ರಿಯಾನ್ ಪರಾಗ್ ಹೆಚ್ಚಿನ ಹೊಣೆಯಿಂದ ಆಡಬೇಕಾಗಿದೆ. ಕೊನೆಯ ಲೀಗ್ ಪಂದ್ಯ ಗೆದ್ದಲ್ಲಿ ಮಾತ್ರ ರಾಯಲ್ಸ್ ಎರಡನೇ ಸ್ಥಾನಕ್ಕೇರಬಹುದು.
ಗುಜರಾತ್ ಟೈಟನ್ಸ್ ವಿರುದ್ಧ ಮಳೆಯಿಂದ ಪಂದ್ಯ ರದ್ದಾದ ಕಾರಣ ಕೆಕೆಆರ್ (19 ಪಾಯಿಂಟ್ಸ್) ಅಗ್ರಸ್ಥಾನ ಖಚಿತಪಡಿಸಿಕೊಂಡಾಗಿದೆ. ಆ ತಂಡ ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ. ಮೇ 11ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ನಂತರ ಕೋಲ್ಕತ್ತ ಒಂದೂ ಪಂದ್ಯ ಆಡಿಲ್ಲ.
ಆದರೆ ತಂಡದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿರುವ ಆರಂಭ ಆಟಗಾರ, ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಅವರು ವಿಶ್ವಕಪ್‌ಗೆ ಪೂರ್ವಭಾವಿ ಆಗಿ ಪಾಕಿಸ್ತಾನ ವಿರುದ್ಧ ಟಿ20– ಸರಣಿ ಆಡಲು ತವರಿಗೆ ಮರಳಿದ್ದಾರೆ.
ಸಾಲ್ಟ್ ಮತ್ತು ಸುನಿಲ್ ನಾರಾಯಣ್ ಜೊತೆಯಾಟದಲ್ಲಿ 897 ರನ್‌ಗಳು ಹರಿದುಬಂದಿವೆ. ಸಾಲ್ಟ್ ಸ್ಥಾನದಲ್ಲಿ, ಅಫ್ಗಾನಿಸ್ತಾನದ ವಿಕೆಟ್ ಕೀಪರ್–ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ ಆಡುವ ಸಾಧ್ಯತೆ ಇದೆ. ಉಳಿದಂತೆ ಶ್ರೇಯಸ್ ಅಯ್ಯರ್, ಆಂಡ್ರೆ ರಸೆಲ್ ಅವರ ಮೇಲೂ ಹೊಣೆಯಿದೆ.
ಪಂದ್ಯದ ದಿನ ಮಳೆಯಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಂದ್ಯ ಆರಂಭ: ರಾತ್ರಿ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.