ನವದೆಹಲಿ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ ಬೆನ್ನಲ್ಲೇ ಭಾರತಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಮೇಶ್ ಪೊವಾರ್ ಅವರ ಗುತ್ತಿಗೆ ಅವಧಿ ಪೂರ್ಣಗೊಂಡಿದೆ. ಕೋಚ್ ಆಗಿ ಮುಂದುವರಿಯಬೇಕಾದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿಯಮಗಳ ಪ್ರಕಾರ ಅವರು ಮತ್ತೆ ಅರ್ಜಿ ಸಲ್ಲಿಸಬೇಕಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಮಿಥಾಲಿ ರಾಜ್ ಬಳಗ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ತಂಡದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆಗಳು ಇವೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ತಂಡಕ್ಕೆ ಚೇತರಿಕೆ ತುಂಬಲ ಶ್ರಮಿಸುತ್ತಿದ್ದು ಹೊಸ ಆಟಗಾರ್ತಿಯರನ್ನು ಮುನ್ನೆಲೆಗೆ ತರುವ ಚಿಂತನೆಯಲ್ಲಿದ್ದಾರೆ.
2020ರ ಟ್ವೆಂಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಬ್ಲ್ಯು ವಿ ರಾಮನ್ ಅವರ ಬದಲಿಗೆ ಪೊವಾರ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಅವರ ಅವಧಿಯಲ್ಲಿ ನಿರೀಕ್ಷಿತ ಸಾಧನೆ ಕಂಡುಬರಲಿಲ್ಲ.
‘ವಿಶ್ವಕಪ್ ಟೂರ್ನಿ ವರೆಗೆ ಪೊವಾರ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅವರನ್ನು ಮುಂದುವರಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಹೀಗಾಗಿ ಹೊಸ ಕೋಚ್ ನೇಮಕದ ಪ್ರಕ್ರಿಯೆ ಅರ್ಜಿ ಸಲ್ಲಿಕೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಪೊವಾರ್ ಅವರಿಗೆ ಮುಂದುವರಿಯುವ ಬಯಕೆ ಇದ್ದರೆ ಅರ್ಜಿ ಸಲ್ಲಿಸಬಹುದು. ಕ್ರಿಕೆಟ್ ಸಲಹಾ ಸಮಿತಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ‘ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ತಂಡವನ್ನು ಉತ್ತಮ ಸ್ಥಿತಿಯಲ್ಲಿರಿಸಿದ್ದ ರಾಮನ್ ಅವರಿಗೆ ಮುಂದುವರಿಯಲು ಅವಕಾಶ ನೀಡದೇ ಇದ್ದುದರ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ನಾಯಕಿ ಮಿಥಾಲಿ ರಾಜ್ ಅವರೊಂದಿಗೆ ಮನಸ್ಥಾಪ ಹೊಂದಿದ್ದ ಪವಾರ್ ಅವರನ್ನು ಕೋಚ್ ಆಗಿ ನೇಮಕ ಮಾಡಿದಾಗ ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿ ಮೂಡಿತ್ತು. ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ತಂಡದಲ್ಲಿ ಇಬ್ಬರು ಹಿರಿಯ ಆಟಗಾರ್ತಿಯರ ನಡುವೆ ಶೀತಲ ಸಮರ ನಡೆದಿತ್ತು ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.