ಕರಾಚಿ: ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಆದಾಯದಲ್ಲಿ ಶೇ 90ರಷ್ಟು ಭಾಗ ಭಾರತದ ಪಾಲೇ ಇದೆ. ಹೀಗಾಗಿ ಭಾರತ ಬಯಸಿದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಕುಸಿಯುವಂತೆ ಮಾಡಬಲ್ಲದು ಎಂದು ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಹೇಳಿದ್ದಾರೆ.
ಪಿಸಿಬಿ, ಭಾರತದ ಮರ್ಜಿಯಲ್ಲಿರುವ ಕಾರಣ ಇಲ್ಲಿನ ಕ್ರಿಕೆಟ್ ವ್ಯವಹಾರಗಳನ್ನು ಅಲ್ಲಿನ ಉದ್ಯಮ ಸಂಸ್ಥೆಗಳು ನಡೆಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ. ಅಂತರ ಪ್ರಾಂತೀಯ ವ್ಯವಹಾರಗಳ ಸೆನೆಟ್ ಸ್ಥಾಯಿ ಸಮಿತಿಯ ಮುಂದೆ ಗುರುವಾರ ಹಾಜರಾಗಿ ರಮೀಜ್ ಈ ಹೇಳಿಕೆ ನೀಡಿದ್ದಾರೆ. ಐಸಿಸಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ಥಳೀಯ ಉದ್ಯಮಸಂಸ್ಥೆಗಳ ಮೂಲಕ ಹಣಕಾಸಿನ ನೆರವನ್ನು ಹೊಂದಿಸಿಕೊಂಡು ಸ್ವಾವಲಂಬಿಯಾಗಲು ಪಿಸಿಬಿಗೆ ಇದು ಸಕಾಲ ಎಂದೂ ರಮೀಜ್ ಹೇಳಿದ್ದಾರೆ.
‘ಐಸಿಸಿ ರಾಜಕೀಯಕರಣವಾದ ಸಂಸ್ಥೆಯಾಗಿದ್ದು, ಏಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ಗುಂಪು ಇದರಲ್ಲಿದೆ. ಐಸಿಸಿಯ ಶೇ 90ರಷ್ಟು ಆದಾಯ ಭಾರತದ ಮೂಲಕ ಕ್ರೋಡೀಕರಣಗೊಳ್ಳುತ್ತದೆ. ಇದೊಂದು ರೀತಿ ಭಯಮೂಡಿಸುವಂಥದ್ದು’ ಎಂದು ಹೇಳಿದ ರಮೀಜ್, ಪಿಸಿಬಿಯ ಆಯವ್ಯಯದಲ್ಲಿ ಐಸಿಸಿಯಿಂದ ಬರುವ ಪಾಲು ಶೇ 50ರಷ್ಟು ಇರುತ್ತದೆ ಎಂದರು.
ಭಾರತೀಯ ಉದ್ಯಮ ಸಮೂಹಗಳು ಪಾಕಿಸ್ತಾನದ ಕ್ರಿಕೆಟ್ ವ್ಯವಹಾರವನ್ನು ನಡೆಸುತ್ತಿವೆ. ಒಂದೊಮ್ಮೆ ಭಾರತದ ಪ್ರಧಾನಿ ನಾಳೆಯೇ ಪಾಕಿಸ್ತಾನಕ್ಕೆ ಯಾವುದೇ ನಿಧಿಯನ್ನು ನೀಡದಿರುವ ತೀರ್ಮಾನ ಕೈಗೊಂಡಲ್ಲಿ ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಕುಸಿದುಬೀಳಬಲ್ಲದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ಐಸಿಸಿಯು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಂತೆ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ತನ್ನ ಧ್ವನಿ ಕೇಳಿಸುವಂತೆ ಆಗಬೇಕಾದರೆ ಪಿಸಿಬಿ ಸ್ವಾವಲಂಬಿಯಾಗಬೇಕು. ಆಗ ಮಾತ್ರ, ಭದ್ರತೆಯ ಕಾರಣ ನೀಡಿ ನ್ಯೂಜಿಲೆಂಡ್, ಇಂಗ್ಲೆಂಡ್ ತಂಡಗಳು ನಿಗದಿಯಾಗಿದ್ದ ಪ್ರವಾಸಗಳಿಂದ ಹಿಂದೆ ಸರಿಯುವಂಥ ದೃಷ್ಟಾಂತಗಳು ಪುನರಾವರ್ತನೆ ಆಗುವುದಿಲ್ಲ’ ಎಂದರು.
ಮುಂದೂಡಲಾಗಿರುವ ನ್ಯೂಜಿಲೆಂಡ್‌ನ ಪಾಕಿಸ್ತಾನ ಪ್ರವಾಸಕ್ಕೆ ಸಂಬಂಧಿಸಿ ವಾರದೊಳಗೆ ಒಳ್ಳೆಯ ಸುದ್ದಿ ಸಿಗಲಿದೆ. ಪರಿಷ್ಕೃತ ವೇಳಾಪಟ್ಟಿ ರೂಪಿಸುವಲ್ಲಿ ನ್ಯೂಜಿಲೆಂಡ್ ಕಾರ್ಯನಿರತವಾಗಿದೆ ಎಂದರು.
18 ವರ್ಷಗಳ ನಂತರ ಮೊದಲ ಬಾರಿ ನ್ಯೂಜಿಲೆಂಡ್ ತಂಡ, ಪಾಕಿಸ್ತಾನಲ್ಲಿ ಕ್ರಿಕೆಟ್ ಆಡಲು ಸೆಪ್ಟೆಂಬರ್ 11 ರಂದು ಆ ದೇಶಕ್ಕೆ ಬಂದಿಳಿದಿತ್ತು. ಮೂರು ಏಕದಿನ ಹಾಗೂ ಐದು ಟಿ–20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ತಮ್ಮ ದೇಶದ ಸರ್ಕಾರ ಹಾಗೂ ಭದ್ರತಾ ಸಂಸ್ಥೆಗಳು ಅಲ್ಲಿನ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ಒಂದೂ ಪಂದ್ಯ ಆಡದೇ ಸೆ. 19ರಂದು ಕಿವೀಸ್ ಆಟಗಾರರು ಪಾಕಿಸ್ತಾನದಿಂದ ಹಿಂತಿರುಗಿದ್ದರು.
ಪಾಕಿಸ್ತಾನ ಕ್ರಿಕೆಟ್ ಮತ್ತು ಮಂಡಳಿಗೆ ಚೈತನ್ಯ ನೀಡಲು ವಾರದಿಂದ ಹತ್ತು ದಿನಗಳ ಅವಧಿಯಲ್ಲಿ ತಮ್ಮ ಕಾರ್ಯಯೋಜನೆ ಸಲ್ಲಿಸುವುದಾಗಿ ರಮೀಜ್ ಹೇಳಿದರು. ‘ರಾಷ್ಟ್ರೀಯ ತಂಡ ಉತ್ತಮವಾಗಿ ಆಡದಿದ್ದಲ್ಲಿ ಮತ್ತು ಪಂದ್ಯಗಳನ್ನು ಗೆಲ್ಲದಿದ್ದಲ್ಲಿ ಅದರಲ್ಲಿ ಮಂಡಳಿಯ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಎಡವಿದ್ದಾರೆ ಎಂದು ಅರ್ಥ ಬರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.