ಹೈದರಾಬಾದ್: ‘ಶಕ್ತಿಶಾಲಿ’ ಬ್ಯಾಟಿಂಗ್ ಸರದಿಯ ಮೂಲಕ ಎದುರಾಳಿಗಳ ಬೌಲಿಂಗ್ ಅನ್ನು ನಿರ್ದಯವಾಗಿ ದಂಡಿಸುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಅಂಕಪಟ್ಟಿಯ ತಳದಲ್ಲಿರುವ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಗುರುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಿಸಲಿದೆ.
ಐಪಿಎಲ್‌ನ ಈ ಆವೃತ್ತಿಯೊಂದರಲ್ಲೇ ಹೈದರಾಬಾದ್ ತಂಡ ಮೂರು ಬಾರಿ 250ಕ್ಕಿಂತ ಹೆಚ್ಚು ಮೊತ್ತ ಪೇರಿಸಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಮುಂಬೈ ಇಂಡಿಯನ್ಸ್ ಮೇಲೆ 277 ರನ್ ಹೊಡೆದಿದ್ದ ಪ್ಯಾಟ್ ಕಮಿನ್ಸ್ ಬಳಗ, ನಂತರ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿ 3 ವಿಕೆಟ್‌ಗೆ 287 ರನ್‌ಗಳ ದಾಖಲೆ ಮೊತ್ತ ಗಳಿಸಿತು. ಇದು ಸಾಲದೆಂಬಂತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪವರ್‌ಪ್ಲೇ ಅವಧಿಯಲ್ಲೇ ವಿಕೆಟ್ ನಷ್ಟವಿಲ್ಲದೇ 125 ರನ್ ಚಚ್ಚಿ ಐಪಿಎಲ್‌ನಲ್ಲಿ ಮೊದಲ ಬಾರಿ 300ರ ಬಳಿ ಸಾಗುವ ಸೂಚನೆ ನೀಡಿತ್ತು.
ದುರ್ಬಲ ಬೌಲಿಂಗ್ ಹೊಂದಿರುವ ಆರ್‌ಸಿಬಿ ವಿರುದ್ಧವೂ ಹೈದರಾಬಾದ್ ತನ್ನ ದಂಡಯಾತ್ರೆಯನ್ನು ಮುಂದುವರಿಸಿದಲ್ಲಿ ಅಚ್ಚರಿಯೇನಿಲ್ಲ. ಏಳು ವಿಕೆಟ್‌ಗಳೊಡನೆ ಆರ್‌ಸಿಬಿಯ ಉತ್ತಮ ಬೌಲರ್ ಎನಿಸಿರುವ ಯಶ್ ದಯಾಳ್ ಬೌಲರ್‌ಗಳ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದ್ದಾರೆ ಎಂದರೆ ತಂಡದ ಬೌಲಿಂಗ್ ಶಕ್ತಿ ಊಹಿಸಬಹುದು.
ಆಡಿದ ಎಂಟರಲ್ಲಿ ಆರ್‌ಸಿಬಿ ಗೆದ್ದಿರುವುದು ಒಂದು ಮಾತ್ರ– ಅದು ತವರಿನಲ್ಲಿ ಪಂಜಾಬ್ ಕಿಂಗ್ಸ್ ಎದುರು. ಪ್ಲೇ ಆಫ್ ಆಸೆ ಬತ್ತಿಹೋಗಿದೆ. ಬೌಲಿಂಗ್ ದೌರ್ಬಲ್ಯ ಮರೆಗೆ ಸರಿಸಲು ಬ್ಯಾಟರ್‌ಗಳು ಶಕ್ತಿ ಮೀರಿ ಶ್ರಮ ಹಾಕಿದ್ದಾರೆ. ಆದರೆ ಅದು ಫಲ ನೀಡುತ್ತಿಲ್ಲ.
ಈ ಹಿಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ 223 ರನ್‌ಗಳ ಗುರಿ ಬೆನ್ನಟ್ಟುವಾಗ ಆರ್‌ಸಿಬಿ ಹೋರಾಟ ನಡೆಸಿ, ದುರದೃಷ್ಟಕರ ರೀತಿಯಲ್ಲಿ ಒಂದು ರನ್‌ನಿಂದ ಸೋತಿತ್ತು. ಬ್ಯಾಟರ್‌ಗಳು ಸಾಂಘಿಕ ಪ್ರದರ್ಶನ ನೀಡಿದರು. ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರು ಈಗಲೂ ತಂಡದ ಬ್ಯಾಟಿಂಗ್ ಆಧಾರಸ್ಥಂಭ. 379 ರನ್‌ಗಳೊಡನೆ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಟ್ರಾವಿಸ್ ಹೆಡ್ ಮೊದಲ ಕೆಲವು ಪಂದ್ಯಗಳಲ್ಲಿ ಗಮನ ಸೆಳೆದಿರಲಿಲ್ಲ. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಗ್ಯಾಪ್‌ಗಳನ್ನು ಕಂಡುಕೊಂಡು ಬೌಂಡರಿಗಳನ್ನು ಹೊಡೆಯುವ ಜೊತೆಗೆ ಸಿಕ್ಸರ್‌ಗಳ ಮೂಲಕ ಮೊತ್ತವನ್ನು ಒಂದೇ ಸಮನೇ ಏರಿಸುತ್ತಿದ್ದಾರೆ. ಅಭಿಷೇಕ್ ಶರ್ಮಾ ಅವರಿಗೆ ಒಳ್ಳೆಯ ಸಾಥ್ ನೀಡಿದ್ದಾರೆ. ಹೆನ್ರಿಚ್ ಕ್ಲಾಸೆನ್ ಕೂಡ ಈ ರನ್ ಸೂರೆಯಲ್ಲಿ ಸೇರಿಕೊಂಡಿದ್ದಾರೆ.
ಬ್ಯಾಟರ್‌ಗಳ ಈ ಅಬ್ಬರದಿಂದ ಸನ್‌ರೈಸರ್ಸ್ ಬೌಲರ್‌ಗಳ ಮೇಲೆ ಒತ್ತಡ ಕಡಿಮೆಯಾಗಿದೆ. ತಂಡ ಏಳು ಪಂದ್ಯಗಳಿಂದ 10 ಪಾಯಿಂಟ್ಸ್ ಕಲೆಹಾಕಿದೆ.
ಪಂದ್ಯ ಆರಂಭ: ರಾತ್ರಿ 7.30.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್
ಮುಖಾಮುಖಿ
ಆಡಿದ ಪಂದ್ಯಗಳು: 24
ಆರ್‌ಸಿಬಿಗೆ ಗೆಲುವು 10
ಸನ್‌ರೈಸರ್ಸ್‌ಗೆ ಗೆಲುವು 13
ಫಲಿತಾಂಶವಿಲ್ಲ 1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.