ADVERTISEMENT

ರಣಜಿ ಕ್ರಿಕೆಟ್‌ | ಕರ್ನಾಟಕ–ಬಂಗಾಳ ಪಂದ್ಯ ಡ್ರಾ; ಮಯಂಕ್ ಬಳಗದ ನಾಕೌಟ್ ಹಾದಿ ಜಟಿಲ

ಗಿರೀಶದೊಡ್ಡಮನಿ
Published 10 ನವೆಂಬರ್ 2024, 0:20 IST
Last Updated 10 ನವೆಂಬರ್ 2024, 0:20 IST
<div class="paragraphs"><p>ವೃದ್ಧಿಮಾನ್ ಸಹಾ ಮತ್ತು ಸುದೀಪ್‌ ಕುಮಾರ್ ಘರಾಮಿ&nbsp;&nbsp;  </p></div>

ವೃದ್ಧಿಮಾನ್ ಸಹಾ ಮತ್ತು ಸುದೀಪ್‌ ಕುಮಾರ್ ಘರಾಮಿ  

   

–ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್

ಬೆಂಗಳೂರು: ಶನಿವಾರ ಬೆಳಿಗ್ಗೆ ವೇಗಿ ವಿದ್ಯಾಧರ ಪಾಟೀಲ ಅವರು ಬಂಗಾಳ ತಂಡದ ಎರಡು ವಿಕೆಟ್ ಗಳಿಸಿದಾಗ ಕರ್ನಾಟಕ ಬಳಗದಲ್ಲಿ ಗೆಲುವಿನ ಸಣ್ಣ ಆಸೆಯೊಂದು ಚಿಗುರಿತ್ತು.

ADVERTISEMENT

ಆಗ ಬಂಗಾಳದ ಸ್ಕೋರು 5 ವಿಕೆಟ್‌ಗಳಿಗೆ 160 ಆಗಿತ್ತು. 240 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದಷ್ಟು ಬೇಗ ಉಳಿದ ವಿಕೆಟ್ ಗಳಿಸಿ ಉಳಿದ ಅವಧಿಯಲ್ಲಿ ಗೆಲುವಿಗೆ ಪ್ರಯತ್ನಿಸುವ ಉತ್ಸಾಹ ಮಯಂಕ್ ಅಗರವಾಲ್ ಬಳಗದಲ್ಲಿ ಗರಿಗೆದರಿತ್ತು. ಆದರೆ ಪ್ರವಾಸಿ ತಂಡದ ಬ್ಯಾಟರ್ ಸುದೀಪ್ ಕುಮಾರ್ ಘರಾಮಿ (ಔಟಾಗದೆ 101, 193ಎ, 4X13, 6X1) ಮತ್ತು ವೃದ್ಧಿಮಾನ ಸಹಾ (63; 70ಎ, 4X7, 6X1) ಅವರು ಕರ್ನಾಟಕ ತಂಡದ ಆಸೆಗೆ ಅಡ್ಡಿಯಾದರು. ಕರ್ನಾಟಕದ ನಾಕೌಟ್ ಹಾದಿಯು ಮತ್ತಷ್ಟು ಕಠಿಣವಾಗುವಂತೆ ಮಾಡಿದರು.

ಡ್ರಾ ಆದ ಪಂದ್ಯದಲ್ಲಿ ಬಂಗಾಳವು ಮೊದಲ ಇನಿಂಗ್ಸ್‌ ಮುನ್ನಡೆಯಿಂದಾಗಿ  3 ಅಂಕ ಗಳಿಸಿತು. ಆತಿಥೇಯ ಬಳಗವು ಒಂದು ಅಂಕ ಪಡೆದು ನಿಟ್ಟುಸಿರು ಬಿಟ್ಟಿತು.

ಬಂಗಾಳ ತಂಡದ ಘರಾಮಿ ಮತ್ತು ಸಹಾ ಜೋಡಿ  ಊಟದ ವಿರಾಮದವರೆಗೆ ಪಾರಮ್ಯ ಮೆರೆಯಿತು. ತಂಡವು  81.4  ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 283 ರನ್ ಗಳಿಸಿದ  ಡಿಕ್ಲೇರ್ ಮಾಡಿಕೊಂಡಿತು. ಕರ್ನಾಟಕಕ್ಕೆ 364 ರನ್‌ಗಳ ಗೆಲುವಿನ ಗುರಿಯೊಡ್ಡಿತು. ಆಗ ದಿನದಾಟದಲ್ಲಿ 50 ಓವರ್‌ಗಳು ಮಾತ್ರ ಬಾಕಿ ಇದ್ದವು. ಆದ್ದರಿಂದ ಈ ಗುರಿ ಕಠಿಣವಾಗಿತ್ತು.

ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಬಂಗಾಳದ ಸೂರಜ್ ಸಿಂಧು ಜೈಸ್ವಾಲ್ (27ಕ್ಕೆ3) ಬಲವಾದ ಪೆಟ್ಟು ನೀಡಿದರು. ಎರಡನೇ ಓವರ್‌ನಲ್ಲಿ ನಾಯಕ ಮಯಂಕ್ ಅಗರವಾಲ್ ಎರಡನೇ ಓವರ್‌ನಲ್ಲಿ ಅನುಸ್ಟುಪ್ ಮಜುಂದಾರ್‌ಗೆ ಕ್ಯಾಚಿತ್ತರು. ಜೈಸ್ವಾಲ್ ಹಾಕಿದ ಆರನೇ ಓವರ್‌ನಲ್ಲಿ ಕಿಶನ್ ಬೆದಾರೆ ಕೂಡ ಶಕೀರ್ ಗಾಂಧಿಗೆ ಕ್ಯಾಚ್ ಕೊಟ್ಟರು. ಈ ಹಂತದಲ್ಲಿ ಜೊತೆಗೂಡಿದ ಆರ್. ಸ್ಮರಣ್ (ಔಟಾಗದೆ 35) ಮತ್ತು ಶ್ರೇಯಸ್ ಗೋಪಾಲ್ (32 ರನ್) ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 54 ರನ್‌ ಸೇರಿಸಿದರು. ಈ ಜೊತೆಯಾಟವನ್ನೂ ಜೈಸ್ವಾಲ್ ಅವರು ಶ್ರೇಯಸ್‌ಗೆ ಎಲ್‌ಬಿ ಡಬ್ಲ್ಯು ಬಲೆಯಲ್ಲಿ ಬೀಳಿಸುವ ಮೂಲಕ ಮುರಿದರು.

ಚಹಾ ವಿರಾಮದ ನಂತರ ಒಂದಿಷ್ಟು ಹೊತ್ತು ಸ್ಮರಣ್ ಮತ್ತು ಮನೀಷ್ ಪಾಂಡೆ (ಔಟಾಗದೆ 30) ಅವರು ಒಂದಿಷ್ಟು ಹೊತ್ತು ಬ್ಯಾಟಿಂಗ್ ಮುಂದುವರಿಸಿದರು. ತಂಡವು 28 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 110 ರನ್‌ ಗಳಿಸಿದ್ದ ಸಂದರ್ಭದಲ್ಲಿ ಉಭಯ ತಂಡದ ನಾಯಕರು ಡ್ರಾ ಗೆ ಸಮ್ಮತಿಸಿ ಕೈಕುಲುಕಿದರು.

‘ನಾಕೌಟ್ ಪ್ರವೇಶಕ್ಕಾಗಿ ಯಾವುದೇ ಲೆಕ್ಕಾಚಾರಗಳನ್ನು ಮಾಡುತ್ತಿಲ್ಲ. ಆದರೆ ಇನ್ನೂ ನಮ್ಮ ಮುಂದೆ ಉಳಿದಿರುವ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಅಂತರದಿಂದ ಜಯಿಸುವ ಸಂಪೂರ್ಣ ಪ್ರಯತ್ನ ಮಾಡುತ್ತೇವೆ’ ಎಂದು ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಮಯಂಕ್ ಅಗವಾಲ್ ಹೇಳಿದರು.

ಸಿ ಗುಂಪಿನಲ್ಲಿ ಕರ್ನಾಟಕದ ಮೊದಲೆರಡು ಪಂದ್ಯಗಳು ಮಳೆಗೆ ಕೊಚ್ಚಿಹೋಗಿದ್ದವು. ಆದರೆ ಬಿಹಾರ ಎದುರಿನ ಪಂದ್ಯದಲ್ಲಿ ಗೆದ್ದಿದ್ದ ತಂಡವು ಮೂರನೇ ಸ್ಥಾನಕ್ಕೇರಿತ್ತು. ತವರಿನಂಗಳದಲ್ಲಿ ಬಂಗಾಳ ಎದುರು ಜಯಿಸುವ ಕರ್ನಾಟಕದ ಆಸೆ ಕೈಗೂಡಲಿಲ್ಲ. ಮೊದಲ ಇನಿಂಗ್ಸ್ ಮುನ್ನಡೆಯೂ ದೊರೆಯಲಿಲ್ಲ. ಆದ್ದರಿಂದ ಇನ್ನುಳಿದಿರುವ ಮೂರು ಪಂದ್ಯಗಳಲ್ಲಿ ಜಯಿಸಿದರೆ ಮಾತ್ರ ನಾಕೌಟ್ ಅವಕಾಶ ಸಿಗುವ ಸಾಧ್ಯತೆ ಇದೆ. 

‘ಮಳೆ, ಹವಾಮಾನಗಳು ನಮ್ಮ ನಿಯಂತ್ರಣದಲ್ಲಿ ಇಲ್ಲ. ಆಡುವ ಅವಕಾಶ ಸಿಕ್ಕಾಗ ಸಂಪೂರ್ಣವಾಗಿ ತೊಡಗಿಸಿಕೊಂಡು ಗೆಲುವಿಗಾಗಿ ಪ್ರಯತ್ನಿಸುತ್ತೇವೆ. ನಮ್ಮ ತಂಡದ ಅನುಭವಿ ಆಟಗಾರರು ಭಾರತ ಮತ್ತು ಭಾರತ ಎ ತಂಡದಲ್ಲಿ ಆಡಲು ಹೋಗಿರುವುದು ಹೆಮ್ಮೆಯ ವಿಷಯ. ಈಗ ನಮ್ಮಲ್ಲಿರುವ ಯುವ ಆಟಗಾರರು ಭರವಸೆ ಮೂಡಿಸಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಇನ್ನೂ ಉತ್ತಮವಾಗಿ ಆಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಆರ್. ಸ್ಮರಣ್ ಬ್ಯಾಟಿಂಗ್ ವೈಖರಿ  –ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.