ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ಆತಂಕದಲ್ಲಿರುವ ಆತಿಥೇಯರಿಗೆ ಅಭಿನವ್ ಆಸರೆ

ಕೌಶಿಕ್‌ಗೆ ಐದು ವಿಕೆಟ್, ಮುಗ್ಗರಿಸಿದ ಕರ್ನಾಟಕದ ಅಗ್ರಕ್ರಮಾಂಕದ ಬ್ಯಾಟರ್‌ಗಳು

ಗಿರೀಶದೊಡ್ಡಮನಿ
Published 8 ನವೆಂಬರ್ 2024, 0:20 IST
Last Updated 8 ನವೆಂಬರ್ 2024, 0:20 IST
ಕರ್ನಾಟಕ ತಂಡದ ಬ್ಯಾಟರ್ ಅಭಿನವ್ ಮನೋಹರ –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್ 
ಕರ್ನಾಟಕ ತಂಡದ ಬ್ಯಾಟರ್ ಅಭಿನವ್ ಮನೋಹರ –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್    

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಎರಡನೇ ದಿನವಾಟವು  ಮಂದಬೆಳಕಿನಿಂದಾಗಿ ಸ್ಥಗಿತವಾಯಿತು. ಆತಿಥೇಯ ಕರ್ನಾಟಕದ ಬಳಗದಲ್ಲಿಯೂ ಅಂತಹದೇ ನಿರಾಶೆಯ ಛಾಯೆ ಆವರಿಸಿತ್ತು.  

ಮಯಂಕ್ ಅಗರವಾಲ್ ಬಳಗದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಇಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದಲ್ಲಿ ಬಂಗಾಳ ಎದುರು ಮುಗ್ಗರಿಸಿದ್ದೇ ಇದಕ್ಕೆ ಕಾರಣ. ಇದೀಗ ಕ್ರೀಸ್‌ನಲ್ಲಿರುವ ಅಭಿನವ್ ಮನೋಹರ್ (ಬ್ಯಾಟಿಂಗ್ 50; 73ಎ) ಮತ್ತು ಅನುಭವಿ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 23; 55ಎ) ಅವರ ಮೇಲೆ ನಿರೀಕ್ಷೆಯ ಭಾರ ಇದೆ. 

ಪ್ರಮುಖ ಬೌಲರ್‌ಗಳ ಕೊರತೆಯ ನಡುವೆ ಮಿಂಚಿದ ವಾಸುಕಿ ಕೌಶಿಕ್ (38ಕ್ಕೆ5) ಬಂಗಾಳ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 301 ರನ್‌ಗಳಿಗೆ ನಿಯಂತ್ರಿಸುವಲ್ಲಿ ಆತಿಥೇಯರು ಯಶಸ್ವಿಯಾದರು.  ಆದರೆ ಈ ಸಂತಸ ಬಹಳ ಹೊತ್ತು ಉಳಿಯಲಿಲ್ಲ. 

ADVERTISEMENT

ಕರ್ನಾಟಕ ಇನಿಂಗ್ಸ್‌ನ ಊಟ ಹಾಗೂ ಚಹಾ ವಿರಾಮದ ನಡುವಿನ ಅವಧಿಯಲ್ಲಿ 4 ವಿಕೆಟ್‌ಗಳು ಉರುಳಿದವು. ದಿನದಾಟದ ಕೊನೆಯ ಅವಧಿಯಲ್ಲಿಯೂ ಒಂದು ವಿಕೆಟ್ ಪತನವಾಯಿತು. ಆಗಿನ್ನೂ ತಂಡದ ಮೊತ್ತ 100ರ ಗಡಿಯನ್ನೂ ಮುಟ್ಟಿರಲಿಲ್ಲ.  ಈ ಹಂತದಲ್ಲಿ ಮನೋಹರ್ ಮತ್ತು ಶ್ರೇಯಸ್ ಆಸರೆಯಾದರು. ಇದರಿಂದಾಗಿ  ದಿನದಾಟದ ಮುಕ್ತಾಯಕ್ಕೆ ತಂಡವು 51 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 155 ರನ್ ಗಳಿಸಿತು.  ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಬೇಕಾದರೆ ಇನ್ನೂ 146 ರನ್‌ ಗಳಿಸಬೇಕಿದೆ. ಅಭಿನವ್ ಮತ್ತು ಶ್ರೇಯಸ್ ಮುರಿಯದ 6ನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಸೇರಿಸಿದ್ದಾರೆ. 

ತಂಡಕ್ಕೆ ಉತ್ತಮ ಆರಂಭ ಕೊಡುವ ಪ್ರಯತ್ನವನ್ನು ಮಯಂಕ್ ಅಗರವಾಲ್ ಮತ್ತು ಕಿಶನ್ ಬೆದಾರೆ (ಫೀಲ್ಡಿಂಗ್ ಮಾಡುವಾಗ ಹಣೆಗೆ ಚೆಂಡು ಬಡಿದು ಗಾಯಗೊಂಡಿದ್ದ ನಿಕಿನ್ ಜೋಸ್ ಅವರಿಗೆ ಕಂಕಷನ್ ಬದಲಿ ಆಟಗಾರ) ಮಾಡಿದರು. ಇಬ್ಬರೂ ಅಪಾರ ತಾಳ್ಮೆಯಿಂದ ಬಂಗಾಳ ಬೌಲರ್‌ಗಳನ್ನು ಎದುರಿಸಿದರು.  ಇದರಿಂದಾಗಿ 15 ಓವರ್‌ಗಳಲ್ಲಿ ಈ ಜೋಡಿಯು ಕೇವಲ 34 ರನ್ ಸೇರಿಸಿತು.

ಬಂಗಾಳ ತಂಡದ ವೇಗಿ ಇಶಾನ್ ಪೊರೆಲ್ ಎಸೆತವನ್ನು ಕಿಶನ್ ಅವರು ಬೌಂಡರಿಗೆ ಕಳಿಸುವ ಪ್ರಯತ್ನ ಮಾಡಿದರು. ಆದರೆ, ಗಾಳಿಯಲ್ಲಿ ಸಾಗಿದ ಚೆಂಡನ್ನು ಪಾಯಿಂಟ್ ಫೀಲ್ಡರ್ ಶಾಬಾಜ್ ಸುಲಭವಾಗಿ ಕ್ಯಾಚ್ ಮಾಡಿದರು. ಇದರೊಂದಿಗೆ ಜೊತೆಯಾಟ ಮುರಿಯಿತು. ಸಾಲು ಸಾಲು ವಿಕೆಟ್ ಪತನವೂ ಶುರುವಾಯಿತು. ಬಂಗಾಳದ ಬಲಗೈ ಮಧ್ಯಮವೇಗಿ ರಿಷವ್ ವಿವೇಕ್ (44ಕ್ಕೆ2) ಮತ್ತು ಸೂರಜ್ ಸಿಂಧು ಜೈಸ್ವಾಲ್ (44ಕ್ಕೆ2) ಆತಿಥೇಯರಿಗೆ ಪೆಟ್ಟುಕೊಟ್ಟರು. 

ಎರಡನೇ ರಣಜಿ ಋತು ಆಡುತ್ತಿರುವ ಬೆಳಗಾವಿಯ ಸುಜಯ್ ಸತೇರಿ (10 ರನ್) ಮತ್ತು ನವಪ್ರತಿಭೆ ಆರ್. ಸ್ಮರಣ್ (26; 35ಎ) ಅವಕಾಶ ಕೈಚೆಲ್ಲಿದರು. ಅನುಭವಿ ಆರಂಭಿಕ ಬ್ಯಾಟರ್ ಮಯಂಕ್ ತಾವೆದುರಿಸಿದ 78ನೇ ಎಸೆತದಲ್ಲಿ ಜೈಸ್ವಾಲ್ ಹಾಕಿದ ಚೆಂಡಿನ ಚಲನೆ ಗುರುತಿಸದೇ ಕ್ಲೀನ್‌ಬೌಲ್ಡ್‌ ಆದರು. ಮನೀಷ್ ಪಾಂಡೆ ಖಾತೆಯನ್ನೇ ತೆರೆಯಲಿಲ್ಲ. ವಿವೇಕ್ ಎಸೆತವನ್ನು ಆಡುವ ಭರದಲ್ಲಿ ಶುವಾಂ ಡೇ ಕೈಗೆ ಕ್ಯಾಚಿತ್ತರು. ಅಭಿನವ್ ಅವರೊಂದಿಗೆ 5ನೇ ವಿಕೆಟ್ ಜೊತೆಯಾಟದಲ್ಲಿ 34 ರನ್‌ ಸೇರಿಸಿದ್ದ ಸ್ಮರಣ್ ಅವರಿಗೆ ಜೈಸ್ವಾಲ್ ಪೆವಿಲಿಯನ್ ದಾರಿ ತೋರಿಸಿದರು. 

ಐಪಿಎಲ್‌ನಲ್ಲಿ ತಮ್ಮ ಬೀಸುಹೊಡೆತಗಳ ಮೂಲಕ ಗಮನ ಸೆಳೆದಿರುವ ಮನೋಹರ್ ಇಲ್ಲಿ ಕ್ರೀಸ್‌ಗೆ ಬಂದವರೇ ಪಟಪಟನೆ ರನ್‌ ಗಳಿಸಿದರು. ಆದರೆ ವಿಕೆಟ್‌ಗಳು ಪತನಗೊಳ್ಳಲಾರಂಭಿಸಿದಾಗ ತಮ್ಮ ಆಟದ ವೇಗ ಕಡಿಮೆ ಮಾಡಿದರು. ಶ್ರೇಯಸ್ ಕೂಡ ಸಹನೆಯಿಂದ ಬ್ಯಾಟಿಂಗ್ ಮಾಡಿದರು. 

ಐದು ವಿಕೆಟ್ ಗೊಂಚಲು ಗಳಿಸಿದ ಕರ್ನಾಟಕ ತಂಡದ ಬೌಲರ್ ವಾಸುಕಿ ಕೌಶಿಕ್‌ ಚೆಂಡು ತೋರಿಸಿ ಹರ್ಷ ವ್ಯಕ್ತಪಡಿಸಿದರು  –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್ 
ಕೌಶಿಕ್‌ಗೆ ಐದು ವಿಕೆಟ್ ಪಂ
ದ್ಯದ ಮೊದಲ ದಿನವಾದ ಬುಧವಾರ ಕರ್ನಾಟಕ ತಂಡದ ಕೌಶಿಕ್ 3 ವಿಕೆಟ್ ಗಳಿಸಿದ್ದರು. ದಿನದಾಟದ ಅಂತ್ಯಕ್ಕೆ ಬಂಗಾಳ ತಂಡವು 5 ವಿಕೆಟ್‌ಗಳಿಗೆ 249 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಶಹಬಾಜ್ ಮತ್ತು ವೃದ್ಧಿಮಾನ್ ಸಹಾ ಅವರು ಆಟ ಮುಂದುವರಿಸಿದರು.  ದಿನದ ಎರಡನೇ ಓವರ್ ಬೌಲಿಂಗ್ ಮಾಡಿದ ಕೌಶಿಕ್ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಶಹಬಾಜ್ ಅವರು ಕೀಪರ್ ಸುಜಯ್ ಸತೇರಿಗೆ ಕ್ಯಾಚಿತ್ತರು. ಇಶಾನ್ ಪೊರೆಲ್ ಅವರ ವಿಕೆಟ್ ಗಳಿಸಿದ ಕೌಶಿಕ್ ಐದು ವಿಕೆಟ್ ಗೊಂಚಲು ಪೂರೈಸಿದರು. ಇನ್ನೊಂದೆಡೆ ಪದಾರ್ಪಣೆಯ ಬೌಲರ್ ಅಭಿಲಾಷ್ ಶೆಟ್ಟಿ ಅವರು ವೃದ್ಧಿಮಾನ್ ವಿಕೆಟ್ ಪಡೆದರು. ಸ್ಪಿನ್ನರ್ ಶ್ರೇಯಸ್ ಬೌಲಿಂಗ್‌ನಲ್ಲಿ ಆಮಿರ್ ಗನಿ ಮತ್ತು ಜೈಸ್ವಾಲ್ ಔಟಾದರು. ಊಟದ ವಿರಾಮಕ್ಕೆ ಸುಮಾರು 40 ನಿಮಿಷಕ್ಕೂ ಮುನ್ನ ಆತಿಥೇಯರು ಬ್ಯಾಟಿಂಗ್ ಆರಂಭಿಸಿದರು.  ಹಾರ್ದಿಕ್ ರಾಜ್‌ಗೆ ಗಾಯ: ಬೆಳಿಗ್ಗೆ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಕರ್ನಾಟಕದ ಆಟಗಾರ ಹಾರ್ದಿಕ್ ರಾಜ್ ಗಾಯಗೊಂಡರು. ಅವರು ಡೈವ್ ಮಾಡುವಾಗ ಬಿದ್ದರು. ನಂತರ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಪೆವಿಲಿಯನ್‌ಗೆ ಕರೆದೊಯ್ಯಲಾಯಿತು.

Cut-off box -

ಮೊದಲ ಇನಿಂಗ್ಸ್:
ಬಂಗಾಳ: 301 (101.5 ಓವರ್‌ಗಳಲ್ಲಿ) (ಬುಧವಾರ 78 ಓವರ್‌ಗಳಲ್ಲಿ 5ಕ್ಕೆ249) ಶಹಬಾಜ್ ಸಿ ಸತೇರಿ ಬಿ ಕೌಶಿಕ್ 59 (110ಎ, 4X7) ವೃದ್ಧಿಮಾನ್ ಸಿ ಸ್ಮರಣ್‌ ಬಿ ಅಭಿಲಾಷ್ 6 (20ಎ, 4X1) ಆಮೀರ್ ಸಿ ಅಭಿಲಾಷ್ ಬಿ ಶ್ರೇಯಸ್ 18 (64ಎ, 4X2) ಸೂರಜ್ ಬಿ ಶ್ರೇಯಸ್ 16 (41ಎ, 4X2) ಇಶಾನ್ ಸಿ ಮಯಂಕ್ ಬಿ ಕೌಶಿಕ್ 5 (16ಎ, 4X1) ವಿವೇಕ್ ಔಟಾಗದೆ 1 (3ಎ) ಇತರೆ: ‌13 (ಬೈ 2, ಲೆಗ್‌ಬೈ 6, ವೈಡ್ 3, ನೋಬಾಲ್ 2) ವಿಕೆಟ್ ಪತನ: 6–254 (ಶಹಬಾಜ್ ಅಹಮದ್;79.4), 7–254 (ವೃದ್ಧಿಮಾನ್ ಸಹಾ; 82.4), 8–286 (ಸೂರಜ್ ಸಿಂಧು ಜೈಸ್ವಾಲ್; 95.2), 9–299 (ಇಶಾನ್ ಪೊರೆಲ್; 100.6), 10–301 (ಆಮೀರ್ ಗನಿ; 101.5) ಬೌಲಿಂಗ್‌: ವಿ. ಕೌಶಿಕ್ 25–12–38–5, ಅಭಿಲಾಷ್ ಶೆಟ್ಟಿ 20–6–62–2, ವಿದ್ಯಾಧರ್ ಪಾಟೀಲ 19–4–63–0, ಶ್ರೇಯಸ್ ಗೋಪಾಲ್ 25.5–2–87–3, ಹಾರ್ದಿಕ್ ರಾಜ್ 12–1–43–0 ಕರ್ನಾಟಕ 5ಕ್ಕೆ155 (51 ಓವರ್‌ಗಳಲ್ಲಿ) ಮಯಂಕ್ ಬಿ ಜೈಸ್ವಾಲ್ 17 (78ಎ, 4X1) ಕಿಶನ್ ಸಿ ಶಹಬಾಜ್ ಬಿ ಇಶಾನ್ 23 (50ಎ, 4X3) ಸತೇರಿ ಸಿ ಸಹಾ ಬಿ ವಿವೇಕ್ 10 (13ಎ, 4X2) ಸ್ಮರಣ್ ಸಿ ಚಟರ್ಜಿ ಬಿ ಜೈಸ್ವಾಲ್ 26 (35ಎ, 4X4) ಪಾಂಡೆ ಸಿ ಶುವಾಂ ಬಿ ವಿವೇಕ್ 0 (2ಎ) ಮನೋಹರ್ ಬ್ಯಾಟಿಂಗ್ 50 (73ಎ, 4X6, 6X1) ಶ್ರೇಯಸ್ ಬ್ಯಾಟಿಂಗ್ 23 (55ಎ, 4X2) ಇತರೆ: 6 (ಲೆಗ್‌ಬೈ 5, ವೈಡ್ 1) ವಿಕೆಟ್ ಪತನ: 1–34 (ಕಿಶನ್ ಬೆದಾರೆ; 15.4), 2–52 (ಸುಜಯ್ ಸತೇರಿ; 21.5), 3–62 (ಮಯಂಕ್ ಅಗರವಾಲ್‘; 24.6), 4–63 (ಮನೀಷ್ ಪಾಂಡೆ; 25.5), 5–95 (ಸ್ಮರಣ್; 32.6) ಬೌಲಿಂಗ್‌: ಇಶಾನ್ ಪೊರೆಲ್ 15–3–38–1, ಸೂರಜ್ ಸಿಂಧು ಜೈಸ್ವಾಲ್ 17–2–53–2, ರಿಷಭ್ ವಿವೇಕ್ 15–3–44–2, ಶಹಬಾಜ್ ಅಹಮದ್ 1–0–6–0, ಅವಿಲಿನ್ ಘೋಷ್ 3–1–9–0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.