ADVERTISEMENT

ರಣಜಿ ಕ್ರಿಕೆಟ್: ಮತ್ತೊಂದು ಗೆಲುವಿಗೆ ಕರ್ನಾಟಕದ ತುಡಿತ

ಕರ್ನಾಟಕ–ಬಂಗಾಳ ಮುಖಾಮುಖಿ ಇಂದಿನಿಂದ; ಹೊಸ ಪ್ರತಿಭೆಗಳ ಮೇಲೆ ಭರವಸೆ

ಗಿರೀಶ ದೊಡ್ಡಮನಿ
Published 6 ನವೆಂಬರ್ 2024, 0:51 IST
Last Updated 6 ನವೆಂಬರ್ 2024, 0:51 IST
ಕರ್ನಾಟಕದ ಬೌಲರ್‌ಗಳಿಗೆ ಬೌಲಿಂಗ್ ಕೋಚ್ ಮನ್ಸೂರ್ ಅಲಿ ಖಾನ್ ಮಾರ್ಗದರ್ಶನ ನೀಡಿದರು   –ಪ್ರಜಾವಾಣಿ ವಾರ್ತೆ/ ಬಿ.ಕೆ. ಜನಾರ್ಧನ್
ಕರ್ನಾಟಕದ ಬೌಲರ್‌ಗಳಿಗೆ ಬೌಲಿಂಗ್ ಕೋಚ್ ಮನ್ಸೂರ್ ಅಲಿ ಖಾನ್ ಮಾರ್ಗದರ್ಶನ ನೀಡಿದರು   –ಪ್ರಜಾವಾಣಿ ವಾರ್ತೆ/ ಬಿ.ಕೆ. ಜನಾರ್ಧನ್   

ಬೆಂಗಳೂರು: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಕ್ರಿಕೆಟ್ ತಂಡದವರು ಮಂಗಳವಾರ ಬೆಳಿಗ್ಗೆ ಅಭ್ಯಾಸ ಮಾಡುತ್ತಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ನೆಟ್ಸ್‌ನಲ್ಲಿ ವೇಗಿ ವಿದ್ವತ್ ಕಾವೇರಪ್ಪ ಕಾಣಿಸಿಕೊಂಡರು. ಬುಧವಾರ ಇಲ್ಲಿ ಆರಂಭವಾಗಲಿರುವ ಬಂಗಾಳ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಬೌಲಿಂಗ್ ಹೊಣೆ ಹೊತ್ತ ಯುವ ಬೌಲರ್‌ಗಳೊಂದಿಗೆ ಮತ್ತು ಸ್ನೇಹಿತರೊಂದಿಗೆ ‘ಕುಶಲೋಪರಿ’ ನಡೆಸಿ ಹೊರನಡೆದರು.

ಸಿ ಗುಂಪಿನಲ್ಲಿ ನಾಲ್ಕನೇ ಪಂದ್ಯ ಆಡಲಿರುವ ಕರ್ನಾಟಕ ತಂಡವು ಈಗ ಅನನುಭವಿ ವೇಗಿಗಳ ದಂಡಿನೊಂದಿಗೆ ಕಣಕ್ಕಿಳಿಯಬೇಕಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವಿದ್ವತ್ ಅವರ ಸಲಹೆಗಳು ಈ ನವಪ್ರತಿಭೆಗಳಿಗೆ ಲಭಿಸಿರಬಹುದು. 

ಕಳೆದ ಪಂದ್ಯಗಳಲ್ಲಿ ವಿದ್ವತ್ ಗೈರಿಯಲ್ಲಿ ಹೊಣೆ ನಿಭಾಯಿಸಿದ್ದ ವೈಶಾಖ ವಿಜಯಕುಮಾರ್ ಈಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿದ್ದಾರೆ. ಪ್ರಸಿದ್ಧಕೃಷ್ಣ ಕೂಡ ಭಾರತ ತಂಡದೊಂದಿಗೆ ಇದ್ದಾರೆ. ಅದರಿಂದಾಗಿ ಈಗ  ವಾಸುಕಿ ಕೌಶಿಕ್ ಒಬ್ಬರೇ ಹೆಚ್ಚು ಅನುಭವಿಯಾಗಿರುವ ಬೌಲರ್‌. ಅವರನ್ನು ಬಿಟ್ಟರೆ ವಿದ್ಯಾಧರ್ ಪಾಟೀಲ ಕೆಲವು ಪಂದ್ಯಗಳನ್ನು ಆಡಿದ್ದಾರೆ. ಇದರಿಂದಾಗಿ ಅಭಿಲಾಷ್ ಶೆಟ್ಟಿ ಪದಾರ್ಪಣೆ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. 

ADVERTISEMENT

‘ಅಭಿಲಾಷ್ ಅವರನ್ನು ಗಂಭೀರವಾಗಿ ಗಮನಿಸುತ್ತಿದ್ದೇವೆ. ಎಡಗೈವೇಗಿಯಾಗಿರುವ ಅವರು ಉತ್ತಮವಾಗಿ ಆಡಬಹುದು. ಕೌಶಿಕ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ವಿದ್ಯಾಧರ್ (ಪಾಟೀಲ) ಕೂಡ ತಿಮ್ಮಪ್ಪಯ್ಯ ಟ್ರೋಫಿ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು. ಅಲ್ಲದೇ ನಮ್ಮ ಬಳಗದಲ್ಲಿ ಯಶೋವರ್ಧನ್ ಪರಂತಾಪ್ ಇದ್ದಾರೆ. ಅವರು ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದಾರೆ’ ಎಂದು ತಂಡದ ಕೋಚ್ ಯರೇ ಗೌಡ ಹೇಳಿದರು.

ಆದರೆ ಸದ್ಯದ ಸನ್ನಿವೇಶದಲ್ಲಿ ಕರ್ನಾಟಕಕ್ಕೆ ನಾಕೌಟ್ ಹಾದಿಯು ಸುಲಭವಾಗಿಲ್ಲ. ಆದ್ದರಿಂದ ಈಗ ಯಾವುದೇ ಹೊಸಪ್ರಯೋಗ ನಡೆಸುವುದು ತುಸು ಸವಾಲಿನದ್ದಾಗಬಹುದು. ಆದರೆ ಈ ಸವಾಲು ಎದುರಿಸುವುದು ತಂಡಕ್ಕೆ ಅನಿವಾರ್ಯವಾಗಿದೆ. ಏಕೆಂದರೆ;  ಟೂರ್ನಿಯ ಮೊದಲೆರಡು ಪಂದ್ಯಗಳು ಮಳೆಗೆ ಕೊಚ್ಚಿ ಹೋಗಿದ್ದರಿಂದ ಒಟ್ಟು 2 ಅಂಕಗಳು ಮಾತ್ರ ಸಿಕ್ಕಿದ್ದವು. ಪಟ್ನಾದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಬಿಹಾರ ವಿರುದ್ಧ ಜಯಿಸಿದ್ದು ಕರ್ನಾಟಕ ತಂಡದಲ್ಲಿ ಜೀವಸೆಲೆ ತುಂಬಿದೆ. ಒಟ್ಟು 8 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಕೇರಳ (8) ಮತ್ತು ಹರಿಯಾಣ (13) ಕ್ರಮವಾಗಿ ಎರಡು ಮತ್ತು ಒಂದನೇ ಸ್ಥಾನದಲ್ಲಿವೆ. ಆದ್ದರಿಂದ ಕರ್ನಾಟಕ ತಂಡವು ಮುಂದಿನ ಎಲ್ಲ ಪಂದ್ಯಗಳನ್ನು ಜಯಿಸಿದರೆ ಹಾದಿ ಸುಗಮ. 

ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನಿಕಿನ್ ಜೋಸ್, ನಾಯಕ ಮಯಂಕ್ ಮತ್ತು ಅನುಭವಿ ಮನೀಷ್ ಪಾಂಡೆ ಅವರೇ ದೊಡ್ಡ ಆಸರೆಯಾಗಬೇಕು. ಈ ವಿಭಾಗದಲ್ಲಿ ದೇವದತ್ತ ಪಡಿಕ್ಕಲ್ ಇಲ್ಲದಿರುವ ಕೊರತೆಯನ್ನು ನೀಗಿಸುವುದು ಹೊಸ ಪ್ರತಿಭೆ ಆರ್. ಸ್ಮರಣ್ ಅವರಿಗಿರುವ ಹೊಣೆ. ಬೀಸುಹೊಡೆತಗಳ ಆಟಗಾರ ಅಭಿನವ್ ಮನೋಹರ್ ಅವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಕಾರ್ಯ ಮಾಡಬೇಕಿದೆ. ಉಳಿದಂತೆ ಸ್ಪಿನ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಮತ್ತು ಹಾರ್ದಿಕ್ ರಾಜ್ ಅವರ ಮೇಲೆ ವಿಶ್ವಾಸವಿಡಬಹುದು. ಶ್ರೇಯಸ್, ಅಭಿನವ್ ಅವರು ಪಟ್ನಾದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರು. ಸ್ಪಿನ್ನರ್ ಮೊಹಸೀನ್ ಖಾನ್ ಕೂಡ ಭರವಸೆ ಮೂಡಿಸಿದ್ದರು. 

ಬಂಗಾಳ ತಂಡದಲ್ಲಿಯೂ ಇಂತಹದೇ ವರ್ತಮಾನಗಳಿವೆ. ಪ್ರಮುಖ ಬ್ಯಾಟರ್ ಅಭಿಮನ್ಯು ಈಶ್ವರನ್ ಮತ್ತು ವೇಗಿ ಮುಕೇಶ್ ಕುಮಾರ್ ಅವರು ಭಾರತ  ಎ ತಂಡದಲ್ಲಿ ಆಡುತ್ತಿದ್ದಾರೆ. ಆದ್ದರಿಂದ ಈ ಪಂದ್ಯಕ್ಕೆ ಅವರು ಲಭ್ಯರಿಲ್ಲ. ಅನುಭವಿ ವೃದ್ಧಿಮಾನ್ ಸಹಾ ಇರುವುದು ತಂಡಕ್ಕೆ ಬಲ.

ಅಂಕಪಟ್ಟಿಯಲ್ಲಿ ಬಂಗಾಳ ತಂಡವು ಕರ್ನಾಟಕದ ನಂತರದ ಸ್ಥಾನದಲ್ಲಿದೆ. ಕಳೆದ 3 ಪಂದ್ಯಗಳಲ್ಲಿಯೂ ಮಳೆಯ ಆಟವೇ ಹೆಚ್ಚು ನಡೆದು ಡ್ರಾ ಆದವು. ಅದರಿಂದಾಗಿ ಅನುಸ್ಟುಪ್ ಮಜುಂದಾರ್ ಬಳಗವು ಜಯಕ್ಕಾಗಿ ಕಾತರಿಸಿದೆ.

ಕರ್ನಾಟಕ ತಂಡವು ಬಂಗಾಳದ ವಿರುದ್ಧ ರಣಜಿ ಪಂದ್ಯ ಜಯಿಸಿ ದಶಕವಾಗಿದೆ. 2014–15ರಲ್ಲಿ ಗೆದ್ದ ನಂತರ 2019ರಲ್ಲಿ ಕೋಲ್ಕತ್ತದಲ್ಲಿ ಸೋತಿತ್ತು. ಆ ಸೋಲಿಗೆ ಈಗ ಮುಯ್ಯಿ ತೀರಿಸಿಕೊಳ್ಳುವ ಸಮಯ ಬಂದಿದೆ. 

ಪಂದ್ಯ ಆರಂಭ: ಬೆಳಿಗ್ಗೆ 9.30

ಬಂಗಾಳ ತಂಡದ ವೃದ್ಧಿಮಾನ್ ಸಹಾ ಅವರನ್ನು ಆಲಂಗಿಸಿ ಅಭಿನಂದಿಸಿದ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್‌  –ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ಧನ್
ವೈಶಾಖ, ವಿದ್ವತ್ ಕಾವೇರಪ್ಪ ಅಲಭ್ಯ ಬಂಗಾಳ ತಂಡದಲ್ಲಿ ಅಭಿಮನ್ಯು, ಮುಕೇಶ್ ಗೈರು ಸ್ಮರಣ್, ಅಭಿನವ್ ಮನೋಹರ್ ಮೇಲೆ ಭರವಸೆ
ಫ್ರ್ಯಾಂಚೈಸಿಗಳ ಗಮನ ಸೆಳೆಯಲು ಅವಕಾಶ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಆಟಗಾರರ ಮೆಗಾ ಹರಾಜು ಇದೇ ತಿಂಗಳು ನಡೆಯಲಿದೆ. ಆದ್ದರಿಂದ ಫ್ರ್ಯಾಂಚೈಸಿ ಮಾಲೀಕರ ಗಮನ ಸೆಳೆಯಲು ಆಟಗಾರರಿಗೆ ರಣಜಿ ಟ್ರೋಫಿಯ ಪಂದ್ಯಗಳೂ ವೇದಿಕೆಯಾಗುವ ಸಾಧ್ಯತೆ ಇದೆ.  ಈಚೆಗಷ್ಟೇ ನಡೆಸ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಐಪಿಎಲ್ ತಂಡಗಳು ತಮ್ಮ ಬಹಳಷ್ಟು ಆಟಗಾರರನ್ನು ಬಿಡುಗಡೆ ಮಾಡಿವೆ. ವಿವಿಧ ತಂಡಗಳಲ್ಲಿದ್ದ ಕರ್ನಾಟಕ ಎಲ್ಲ ಆಟಗಾರರೂ ಫ್ರ್ಯಾಂಚೈಸಿಗಳಿಂದ ಬಿಡುಗಡೆಗೊಂಡಿದ್ದಾರೆ. ಆದ್ದರಿಂದ ಬಿಡ್‌ನಲ್ಲಿ ಲಭ್ಯರಾಗಲಿದ್ದಾರೆ. ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡ್ ನಡೆಯಲಿದೆ. ಅದಕ್ಕು ಮುನ್ನ ನಡೆಯುವ ಪಂದ್ಯಗಳಲ್ಲಿ ಗಮನ ಸೆಳೆಯುವ ಅವಕಾಶಗಳು ಆಟಗಾರರ ಮುಂದಿವೆ.  ಆದ್ದರಿಂದ ಈ ತಿಂಗಳು ನಡೆಯಲಿರುವ ದೇಶಿ ಪಂದ್ಯಗಳು ರೋಚಕವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಸಹಾ–ಮಯಂಕ್ ಆಪ್ತ ಸಮಾಲೋಚನೆ ಈ ರಣಜಿ ಟೂರ್ನಿಯ ನಂತರ ಕ್ರಿಕೆಟ್‌ಗೆ ವಿದಾಯ ಹೇಳಿರುವುದಾಗಿ ಘೋಷಿಸಿರುವ ಬಂಗಾಳದ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅವರನ್ನು ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಆಲಂಗಿಸಿ ಅಭಿನಂದಿಸಿದರು.  ಬಿ ಗ್ರೌಂಡ್‌ನಲ್ಲಿರುವ ನೆಟ್ಸ್‌ನಲ್ಲಿ ಉಭಯ ತಂಡಗಳ ಆಟಗಾರರ ಅಭ್ಯಾಸ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯಾಸಕ್ಕೆ ಬಂದ ಸಹಾ ಅವರನ್ನು ಮಯಂಕ್ ಬಿಗಿದಪ್ಪಿ ಅಭಿನಂದಿಸಿದರು. ಉಳಿದ ಆಟಗಾರರೂ ಅವರ ಹಸ್ತಲಾಘವ ಮಾಡಿ ಶುಭ ಕೋರಿದರು. ಸಹಾ ಸ್ವಲ್ಪ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.