ಮೈಸೂರು: ಕರ್ನಾಟಕ ತಂಡ ಪ್ರಸಕ್ತ ರಣಜಿ ಕ್ರಿಕೆಟ್ ಋತುವಿನಲ್ಲಿ ಮೊದಲ ಗೆಲುವು ಸಾಧಿಸಿದೆ. ಮೈಸೂರಿನಲ್ಲಿ ಶನಿವಾರ ಕೊನೆಗೊಂಡ ಪಂದ್ಯದಲ್ಲಿ ಆರ್.ವಿನಯ್ ಕುಮಾರ್ ಬಳಗ 7 ವಿಕೆಟ್‌ಗಳಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತು.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 184 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಅಂತಿಮ ದಿನದ ಭೋಜನ ವಿರಾಮದ ಬಳಿಕ 70.2 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ದೇವದತ್ತ ಪಡಿಕ್ಕಲ್ (77), ಡಿ.ನಿಶ್ಚಲ್ (61) ಮತ್ತು ಕೌನೇನ್ ಅಬ್ಬಾಸ್ (ಔಟಾಗದೆ 34) ಅವರು ಕರ್ನಾಟಕದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಂದ ಶನಿವಾರ ಆಟ ಮುಂದುವರೆಸಿದ ಕರ್ನಾಟಕ ಎಚ್ಚರಿಕೆಯ ಬ್ಯಾಟಿಂಗ್ ಮಾಡಿ ಯಾವುದೇ ಒತ್ತಡಕ್ಕೆ ಒಳಗಾಗದೆ ಗೆಲುವು ಒಲಿಸಿಕೊಂಡಿತು. ಪಡಿಕ್ಕಲ್ ಮತ್ತು ನಿಶ್ಚಲ್ ಮೊದಲ ವಿಕೆಟ್‌ಗೆ 121 ರನ್ ಸೇರಿಸಿ ತಂಡದ ಗೆಲುವು ಖಚಿತಪಡಿಸಿದರು.
ಕರ್ನಾಟಕ ತಂಡ ನಾಗಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ವಿದರ್ಭ ವಿರುದ್ಧ ಮತ್ತು ಬೆಳಗಾವಿಯಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಮುಂಬೈ ಎದುರು ಡ್ರಾ ಸಾಧಿಸಿತ್ತು.
ಈ ಗೆಲುವಿನಿಂದ ಕರ್ನಾಟಕ ಆರು ಪಾಯಿಂಟ್ ಕಲೆಹಾಕಿತು. ಮೂರು ಪಂದ್ಯಗಳಿಂದ ಒಟ್ಟು 12 ಪಾಯಿಂಟ್ ಕಲೆಹಾಕಿರುವ ವಿನಯ್ ಬಳಗ ‘ಎ’ ಗುಂಪಿನಲ್ಲಿ ಅಗ್ರಸ್ಥಾನಲ್ಲಿದೆ.
ಸ್ಕೋರ್ ಕಾರ್ಡ್
ಮಹಾರಾಷ್ಟ್ರ ಮೊದಲ ಇನಿಂಗ್ಸ್ 113 (39.4 ಓವರ್) ಮತ್ತು ಎರಡನೇ ಇನಿಂಗ್ಸ್ 256 (97 ಓವರ್), ಕರ್ನಾಟಕ ಮೊದಲ ಇನಿಂಗ್ಸ್ 186 (84.2 ಓವರ್) ಮತ್ತು ಎರಡನೇ ಇನಿಂಗ್ಸ್ 3ಕ್ಕೆ 184 (70.2 ಓವರ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.