ADVERTISEMENT

ರಣಜಿ ಟ್ರೋಫಿ: ಕರ್ನಾಟಕ–ಮಧ್ಯಪ್ರದೇಶಕ್ಕೆ ತಲಾ 1 ಪಾಯಿಂಟ್

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 14:40 IST
Last Updated 14 ಅಕ್ಟೋಬರ್ 2024, 14:40 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಇಂದೋರ್‌: ಕರ್ನಾಟಕ ಮತ್ತು ಆತಿಥೇಯ ಮಧ್ಯಪ್ರದೇಶ ತಂಡಗಳು ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ತಲಾ ಒಂದು ಪಾಯಿಂಟ್‌ ಪಡೆದವು. ಕೊನೆಯ ದಿನವಾದ ಸೋಮವಾರ, ಮಂದ ಬೆಳಕಿನಿಂದ ಈ ಪಂದ್ಯ ಬೇಗನೇ ಅಂತ್ಯಕಂಡಿತು. ಆರಂಭ ಆಟಗಾರನಾಗಿ ಬಡ್ಡಿ ಪಡೆದ ನಿಕಿನ್ ಜೋಸ್‌ ಒಂದು ರನ್‌ನಿಂದ ಶತಕ ಕಳೆದುಕೊಂಡರು.

ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶ ಭಾನುವಾರದ ಮೊತ್ತಕ್ಕೇ (8 ವಿಕೆಟ್‌ಗೆ 425) ತನ್ನ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಕರ್ನಾಟಕ 75 ಓವರುಗಳಲ್ಲಿ 5 ವಿಕೆಟ್‌ಗೆ 206 ರನ್ ಗಳಿಸಿತು. ಟೀ ನಂತರ ಮಂದ ಬೆಳಕು ಪಂದ್ಯಕ್ಕೆ ಅಡ್ಡಿಮಾಡಿತು.

ADVERTISEMENT

ನಿಕಿನ್ ಜೋಸ್‌ ಎಚ್ಚರಿಕೆ ಮಿಶ್ರಿತ ಆಕ್ರಮಣದ ಆಟವಾಡಿ ಎಂಟು ಬೌಂಡರಿ, ನಾಲ್ಕು ಸಿಕ್ಸರ್‌ಗಳಿದ್ದ 99 ರನ್ ಗಳಿಸಿದರು. ಕುಮಾರ್ ಕಾರ್ತಿಕೇಯ ಬೌಲಿಂಗ್‌ನಲ್ಲಿ ಲೆಗ್‌ ಬಿಫೋರ್ ಬಲೆಗೆ ಬಿದ್ದರು. ಒಂದು ಹಂತದಲ್ಲಿ ಕರ್ನಾಟಕ 72 ರನ್‌ಗಳಾಗುವಷ್ಟರಲ್ಲಿ 4 ಪ್ರಮುಖ ವಿಕೆಟ್‌ ಕಳೆದುಕೊಂಡು ಪರದಾಡಿತ್ತು. ಆದರೆ ನಿಕಿನ್ ಮತ್ತು ಶ್ರೇಯಸ್‌ ಗೋಪಾಲ್ (ಔಟಾಗದೇ 60, 110ಎ) ಐದನೇ ವಿಕೆಟ್‌ಗೆ 127 ರನ್ ಸೇರಿಸಿ ತಂಡವನ್ನು ರಕ್ಷಿಸಿದರು. 

ನಾಯಕ ಮಯಂಕ್ ಅಗರವಾಲ್‌, ವೇಗಿ ಕಾರ್ತಿಕೇಯ ಬೌಲಿಂಗ್‌ನಲ್ಲಿ ಸಿಲಿ ಪಾಯಿಂಟ್‌ನಲ್ಲಿ ಕ್ಯಾಚಿತ್ತರು. ಮನಿಷ್‌ ಪಾಂಡೆ, ಗಲಿಯಲ್ಲಿದ್ದ ರಜತ್ ಪಾಟೀದಾರ್ ಅವರು ಹಿಡಿದ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ದೇವದತ್ತ ಪಡಿಕ್ಕಲ್ (16) ಮತ್ತು ಮೊದಲ ಪಂದ್ಯವಾಡಿದ ರವಿಚಂದ್ರನ್ ಸ್ಮರಣ್ (17) ಬೇರೂರುವ ಹಂತದಲ್ಲೇ ವಾಪಸಾದರು.

ಮಧ್ಯಪ್ರದೇಶಕ್ಕೆ ಮೊದಲ ಇನಿಂಗ್ಸ್ ಮುನ್ನಡೆಯ ಆಸೆ ಚಿಗುರೊಡೆಯುವಂತೆ ಕಂಡಾಗ ನಿಕಿನ್– ಶ್ರೇಯಸ್‌ ಜೋಡಿ ಆ ಲೆಕ್ಕಾಚಾರ ಬುಡಮೇಲು ಮಾಡಿತು.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ: 8 ವಿಕೆಟ್‌ಗೆ 425 ಡಿಕ್ಲೇರ್ಡ್‌; ಕರ್ನಾಟಕ: 75 ಓವರುಗಳಲ್ಲಿ 5 ವಿಕೆಟ್‌ಗೆ 206 (ನಿಕಿನ್ ಜೋಸ್ 99, ಶ್ರೇಯಸ್ ಗೋಪಾಲ್‌ ಔಟಾಗದೇ 60; ಕುಮಾರ್ ಕಾರ್ತಿಕೇಯ 68ಕ್ಕೆ3, ಸಾರಾಂಶ್ ಜೈನ್ 103ಕ್ಕೆ2). ಪಂದ್ಯದ ಆಟಗಾರ: ಶುಭಂ ಶರ್ಮಾ.

‘ಸಿ’ ಗುಂಪಿನ ಇತರ ಪಂದ್ಯಗಳು:

ಬಂಗಾಳ: 311 ಮತ್ತು 60.5 ಓವರುಗಳಲ್ಲಿ 3 ವಿಕೆಟ್‌ಗೆ 254 ಡಿ. (ಭಾನುವಾರ:  ವಿಕೆಟ್‌ ನಷ್ಟವಿಲ್ಲದೇ 141) (ಸುದೀಪ್ ಚಟರ್ಜಿ 93, ಅಭಿಮನ್ಯು ಈಶ್ವರನ್ ಅಜೇಯ 127); ಉತ್ತರ ಪ್ರದೇಶ: 292 ಮತ್ತು 51 ಓವರುಗಳಲ್ಲಿ 6 ವಿಕೆಟ್‌ಗೆ 162 (ಪ್ರಿಯಂ ಗರ್ಗ್‌ ಅಜೇಯ 105; ಮುಕೇಶ್ ಕುಮಾರ್ 58ಕ್ಕೆ2, ಮೊಹಮ್ಮದ್‌ ಕೈಫ್‌ 4ಕ್ಕೆ2). ಪಂದ್ಯ ಡ್ರಾ. ಬಂಗಾಳ: 3 ಪಾ. ಉತ್ತರ ಪ್ರದೇಶ: 1 ಪಾ.

ಪಂಜಾಬ್‌: 191 ಮತ್ತು 55.1 ಓವರುಗಳಲ್ಲಿ 142 (ಅನ್ಮೋಲ್‌ಪ್ರೀತ್ ಸಿಂಗ್ 37, ಪ್ರಭಸಿಮ್ರನ್ ಸಿಂಗ್ 51; ಆದಿತ್ಯ ಸರ್ವತೆ 43ಕ್ಕೆ4, ಜಲಜ್ ಸಕ್ಸೇನ 40ಕ್ಕೆ2, ಬಾಬಾ ಅಪರಾಜಿತ್ 35ಕ್ಕೆ4); ಕೇರಳ: 179 ಮತ್ತು 36 ಓವರುಗಳಲ್ಲಿ 2 ವಿಕೆಟ್‌ಗೆ 158 (ಸಚಿನ್ ಬೇಬಿ 56, ರೋಹನ್ ಕುನ್ನುಮಾಳ್ 48, ಬಾಬಾ ಅಪರಾಜಿತ್ ಔಟಾಗದೇ 39). ಕೇರಳಕ್ಕೆ ಜಯ. ಕೇರಳ: 6 ಪಾ. ಪಂಜಾಬ್ 0.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.