ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ಸೋಲು ತಪ್ಪಿಸಲು ಕರ್ನಾಟಕ ಹೋರಾಟ

ಬಂಗಾಳ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ; ಪೊರೆಲ್ ಉತ್ತಮ ಬೌಲಿಂಗ್

ಗಿರೀಶದೊಡ್ಡಮನಿ
Published 9 ನವೆಂಬರ್ 2024, 0:59 IST
Last Updated 9 ನವೆಂಬರ್ 2024, 0:59 IST
ಕರ್ನಾಟಕ ಕ್ರಿಕೆಟ್ ತಂಡದ ವಿದ್ಯಾಧರ್ ಪಾಟೀಲ ಬ್ಯಾಟಿಂಗ್ ವೈಖರಿ  –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್
ಕರ್ನಾಟಕ ಕ್ರಿಕೆಟ್ ತಂಡದ ವಿದ್ಯಾಧರ್ ಪಾಟೀಲ ಬ್ಯಾಟಿಂಗ್ ವೈಖರಿ  –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್    

ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಬಂಗಾಳ ಎದುರು ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಲಿಲ್ಲ. ಪ್ರವಾಸಿ ತಂಡವು ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸಿತು. ಪಂದ್ಯದಲ್ಲಿ ಉಳಿದಿರುವ ಇನ್ನೊಂದು ದಿನದಲ್ಲಿ ಸೋಲು ತಪ್ಪಿಸಿಕೊಳ್ಳಲು ಕರ್ನಾಟಕ ಹೋರಾಟ ಮುಂದುವರಿಸಿದೆ. ವಾಸುಕಿ ಕೌಶಿಕ್ ನೇತೃತ್ವದ ಬೌಲಿಂಗ್ ಪಡೆಯ ಮೇಲೆ ನಿರೀಕ್ಷೆಯ ನೋಟಗಳು ನೆಟ್ಟಿವೆ.

ಸಿ ಗುಂಪಿನ ಮೊದಲೆರಡೂ ಪಂದ್ಯಗಳು ಮಳೆಗೆ ಕೊಚ್ಚಿಹೋಗಿದ್ದವು. ಮೂರನೇ ಪಂದ್ಯದಲ್ಲಿ ಕರ್ನಾಟಕವು ಬಿಹಾರ ಎದುರು ಜಯಿಸಿತ್ತು. ಅದರಿಂದಾಗಿ ತಂಡದ ಖಾತೆಯಲ್ಲಿ 8 ಪಾಯಿಂಟ್‌ಗಳಿವೆ.  ಸೆಮಿಫೈನಲ್ ಹಾದಿ ಸುಗಮವಾಗಬೇಕಾದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಂಗಾಳ ಎದುರಿನ ಪಂದ್ಯವೂ ಸೇರಿದಂತೆ ಇನ್ನುಳಿದಿರುವ ಎಲ್ಲ ಹಣಾಹಣಿಗಳಲ್ಲಿ ಜಯಿಸುವುದು ಅಗತ್ಯ. ಆದರೆ  ಪ್ರವಾಸಿ ಬೌಲರ್‌ಗಳಾದ  ಇಶಾನ್ ಪೊರೆಲ್ (55ಕ್ಕೆ4) ಮತ್ತು ಸೂರಜ್ ಸಿಂಧು ಜೈಸ್ವಾಲ್ (64ಕ್ಕೆ3) ಅವರು ಆತಿಥೇಯರ ಹಾದಿಯನ್ನು ಕಠಿಣಗೊಳಿಸಿದರು.   ಅವರ ದಾಳಿಯ ಮುಂದೆ ಆತಿಥೇಯ ತಂಡವು ಊಟದ ವಿರಾಮಕ್ಕೆ ಆರು ನಿಮಿಷಗಳ ಮುನ್ನ 80 ರನ್‌ಗಳ ಹಿನ್ನಡೆ ಅನುಭವಿಸಿತು. ಬಂಗಾಳ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 301 ರನ್‌ಗಳಿಗೆ ಉತ್ತರವಾಗಿ ಕರ್ನಾಟಕಕ್ಕೆ 221 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಎರಡನೇ ಇನಿಂಗ್ಸ್ ಆರಂಭಿಸಿದ ಬಂಗಾಳ ತಂಡವು ದಿನದಾಟದ ಮುಕ್ತಾಯಕ್ಕೆ 44 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 127 ರನ್‌ ಗಳಿಸಿದೆ. ಇದರಿಂದಾಗಿ ಒಟ್ಟು207 ರನ್‌ಗಳ ಮುನ್ನಡೆ ಸಾಧಿಸಿದೆ. ಸುದೀಪ್ ಕುಮಾರ್ ಘರಾಮಿ (ಬ್ಯಾಟಿಂಗ್ 25; 72ಎ, 4X4) ಮತ್ತು ಶಹಬಾಜ್ ಅಹಮದ್ (ಬ್ಯಾಟಿಂಗ್ 12; 27ಎ, 4X1) ಕ್ರೀಸ್‌ನಲ್ಲಿದ್ದಾರೆ.

ADVERTISEMENT

ಪಂದ್ಯದ ಕೊನೆ ದಿನವಾದ ಶನಿವಾರ ಬೆಳಿಗ್ಗೆ ಬಂಗಾಳದ ವಿಕೆಟ್‌ಗಳನ್ನು ಬೇಗನೆ ಉರುಳಿಸಬೇಕು. ಸಾಧ್ಯವಾದಷ್ಟು ಕಡಿಮೆ ಗುರಿ  ಪಡೆದು ಗೆಲುವಿಗಾಗಿ ಪ್ರಯತ್ನಿಸಬೇಕು. ಅದಕ್ಕಾಗಿ ಅಗ್ರಕ್ರಮಾಂಕದ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕು. ಮೊದಲ ಇನಿಂಗ್ಸ್‌ನಂತೆ ವೈಫಲ್ಯ ಅನುಭವಿಸಿದರೆ ಸೋಲಿನ ಕಹಿ ಕಾಡಬಹುದು. ಕನಿಷ್ಟ ಡ್ರಾ ಸಾಧಿಸಿದರೆ ಒಂದು ಅಂಕ ಸಿಗಲಿದೆ. 

ಆದರೆ ತನ್ನ ಕಳೆದ ಮೂರು ಪಂದ್ಯಗಳಲ್ಲಿ ಡ್ರಾ ಕಂಡಿರುವ ಬಂಗಾಳ ಮೊದಲ ಗೆಲುವಿಗಾಗಿ ತವಕಿಸುತ್ತಿದೆ. ಅನುಸ್ಟುಪ್ ಮಜುಂದಾರ್ ಬಳಗದ ಹಾವಭಾವಗಳಲ್ಲಿ ಅಪಾರ ಆತ್ಮವಿಶ್ವಾಸ ಎದ್ದುಕಾಣುತ್ತಿದೆ.

ವಿದ್ಯಾಧರ್–ಕೌಶಿಕ್ ಜೊತೆಯಾಟ

ಕರ್ನಾಟಕವು ಗುರುವಾರ 51 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 155 ರನ್ ಗಳಿಸಿತ್ತು. ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಅಭಿನವ್ ಮನೋಹರ್ ಮತ್ತು ಶ್ರೇಯಸ್ ಗೋಪಾಲ್ ಅವರ ಮೇಲೆ ಬೆಟ್ಟದಷ್ಟು ಭರವಸೆ ಮೂಡಿತ್ತು. ಶುಕ್ರವಾರ ಬೆಳಿಗ್ಗೆ ಅವರನ್ನು ಕಟ್ಟಿಹಾಕುವಲ್ಲಿ ಪ್ರವಾಸಿ ಬೌಲರ್‌ಗಳು ಯಶಸ್ವಿಯಾದರು. ಇಶಾನ್ ಬೌಲಿಂಗ್‌ನಲ್ಲಿ ಶ್ರೇಯಸ್ ವಿಕೆಟ್‌ಕೀಪರ್ ಸಹಾಗೆ ಕ್ಯಾಚ್ ಆದರು. ಐದು ಓವರ್‌ಗಳ ನಂತರ ಅಭಿನವ್ ಕೂಡ ಶ್ರೇಯಸ್ ರೀತಿಯಲ್ಲಿಯೇ ನಿರ್ಗಮಿಸಿದರು. ಆಗಿನ್ನೂ ಕರ್ನಾಟಕವು 130 ರನ್‌ಗಳಿಂದ ಹಿಂದಿತ್ತು. 

ಈ ಹಂತದಲ್ಲಿ ವಿದ್ಯಾಧರ್ ಪಾಟೀಲ (33; 61ಎ, 4X3, 6X1) ಮತ್ತು ಕೌಶಿಕ್ (11; 56ಎ, 4X1) ತಂಡದ ಹೋರಾಟಕ್ಕೆ ಬಲ ತುಂಬುವ ಪ್ರಯತ್ನ ಮಾಡಿದರು. ವಿದ್ಯಾಧರ್ ಹೊಡೆದ ಒಂದು ಸಿಕ್ಸರ್‌ಗೆ ಚೆಂಡು ಪ್ರೆಸ್ ಬಾಕ್ಸ್‌ ಗಾಜಿನ ಪರದೆಗೆ ಬಡಿಯಿತು.ಇನ್ನೊಂದು ಬದಿಯಿಂದ ಕೌಶಿಕ್ ಉತ್ತಮ ಬೆಂಬಲ ಕೊಟ್ಟರು. 9ನೇ ವಿಕೆಟ್ ಜೊತೆಯಾಟದಲ್ಲಿ 40 ರನ್ ಸೇರಿಸಿದರು. ಆದರೆ ಜೈಸ್ವಾಲ್ ಹಾಕಿದ ಎಸೆತವೊಂದರಲ್ಲಿ ಬೀಟ್ ಆದ ವಿದ್ಯಾಧರ್ ವಿಕೆಟ್ ಪತನವಾಯಿತು. 93 ನಿಮಿಷ ಬ್ಯಾಟಿಂಗ್ ಮಾಡಿದ ರಾಯಚೂರು ಹುಡುಗ ನಿರಾಶೆಯಿಂದ ಮರಳಿದರು. ಹಾರ್ದಿಕ್ (11 ರನ್) ಪ್ರದಿಪ್ತ ಅವರ ನೇರ ಥ್ರೋಗೆ ರನ್‌ಔಟ್ ಆದರು.

80 ನಿಮಿಷ ಕ್ರೀಸ್‌ನಲ್ಲಿದ್ದ ಕೌಶಿಕ್ ಅವರನ್ನು ಇಶಾನ್ ಎಲ್‌ಬಿ ಬಲೆಗೆ ಕೆಡವಿದರು. ಅದರೊಂದಿಗೆ ಕರ್ನಾಟಕದ 396 ನಿಮಿಷಗಳ ಇನಿಂಗ್ಸ್‌ ಮುಕ್ತಾಯವಾಯಿತು.

ಬಂಗಾಳ ಕ್ರಿಕೆಟ್ ತಂಡದ ಬೌಲರ್ ಇಶಾನ್ ಪೊರೆಲ್   –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.