ADVERTISEMENT

ರಣಜಿ ಕ್ರಿಕೆಟ್: ಸುಲಭ ಜಯದ ಮೇಲೆ ಮಯಂಕ್ ಪಡೆ ಕಣ್ಣು

ಕರ್ನಾಟಕ–ಬಿಹಾರ ಪಂದ್ಯ ಇಂದಿನಿಂದ; ವೈಶಾಖ, ಕೌಶಿಕ್ ಮೇಲೆ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 23:32 IST
Last Updated 25 ಅಕ್ಟೋಬರ್ 2024, 23:32 IST
ಮಯಂಕ್ ಅಗರವಾಲ್ 
ಮಯಂಕ್ ಅಗರವಾಲ್    

ಪಟ್ನಾ: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟ ಪ್ರವೇಶಿಸಬೇಕಾದರೆ ಸವಾಲಿನ ಹಾದಿಯನ್ನು ಕ್ರಮಿಸಬೇಕಿದೆ. ಸಿ ಗುಂಪಿನಲ್ಲಿ ಮುಂದಿರುವ ಐದು ಪಂದ್ಯಗಳಲ್ಲಿ ಗೆದ್ದರೆ ಹಾದಿ ಸುಗಮವಾಗಬಹುದು. ಶನಿವಾರ ಬಿಹಾರ ವಿರುದ್ಧ ಆರಂಭವಾಗಲಿರುವ ಪಂದ್ಯದಿಂದಲೇ ಈ ಗೆಲುವಿನ ಓಟವನ್ನು ಆರಂಭಿಸುವ ಛಲದಲ್ಲಿದೆ. 

ಈ ಬಾರಿ ಸಿ ಗುಂಪಿನಲ್ಲಿ ಆಡುತ್ತಿರುವ ಕರ್ನಾಟಕ ತಂಡದ ಮೊದಲೆರಡೂ ಪಂದ್ಯಗಳೂ ಮಳೆಯಲ್ಲಿ ಮುಳುಗಿದ್ದವು. ಅದರಿಂದಾಗಿ  ಎರಡೂ  ಪಂದ್ಯಗಳಿಂದ ಒಟ್ಟು 2 ಅಂಕಗಳು ಮಾತ್ರ ಲಭಿಸಿವೆ. ಅಂಕಿ, ಸಂಖ್ಯೆ ಮತ್ತು ಅನುಭವದ ಹೋಲಿಕೆಯಲ್ಲಿ ಕರ್ನಾಟಕ, ಬಿಹಾರ ತಂಡಕ್ಕಿಂತ ಬಲಾಢ್ಯವಾಗಿದೆ. ಆದ್ದರಿಂದ ಗೆಲುವಿನ ಸಾಧ್ಯತೆಗಳು ಹೆಚ್ಚಿವೆ. ಪೂರ್ಣ ಅಂಕಗಳನ್ನು ಕಲೆಹಾಕಲು ಇದು ಉತ್ತಮ ಅವಕಾಶವಾಗಿದೆ. 

ಮೊದಲ ಪಂದ್ಯದಲ್ಲಿ ನಿಕಿನ್ ಜೋಸ್ 1 ರನ್‌ ಅಂತರದಿಂದ ಶತಕ ತಪ್ಪಿಸಿಕೊಂಡಿದ್ದರು. ಶ್ರೇಯಸ್ ಗೋಪಾಲ್ ಅರ್ಧಶತಕ ಗಳಿಸಿದ್ದರು. ಮಯಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ ಅವರು ಉತ್ತಮ ಲಯಕ್ಕೆ ಮರಳಿದರೆ ಬ್ಯಾಟಿಂಗ್‌ಗೆ ಬಲ ಬರಲಿದೆ. ಈ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಅವರು ಲಭ್ಯರಿಲ್ಲ. ಅವರು ಭಾರತ ಎ ತಂಡದಲ್ಲಿ  ಆಡಲು ತೆರಳಿದ್ದಾರೆ. ವೇಗಿ ವಿದ್ವತ್ ಕಾವೇರಪ್ಪ ಕೂಡ ಅವರೊಂದಿಗೇ ಇದ್ದಾರೆ.

ADVERTISEMENT

ಹೊಸ ಪ್ರತಿಭೆಗಳಾದ ಆರ್‌. ಸ್ಮರಣ್, ಸುಜಯ್ ಸತೇರಿ, ಬೌಲರ್ ವಿದ್ಯಾಧರ್ ಪಾಟೀಲ, ಆಲ್‌ರೌಂಡರ್ ಹಾರ್ದಿಕ್ ರಾಜ್  ಅವರಿಗೆ ತಮ್ಮ ಪ್ರತಿಭೆ ಮೆರೆಯಲು ಇದು ಸದವಕಾಶವಾಗಿದೆ. ಬೌಲಿಂಗ್ ವಿಭಾಗದ ಸಂಪೂರ್ಣ ಜವಾಬ್ದಾರಿ ಅನುಭವಿ ವೈಶಾಖ ವಿಜಯಕುಮಾರ್, ವಿ. ಕೌಶಿಕ್ ಅವರ ಮೇಲೆ ಹೆಚ್ಚಿದೆ. 

ವಿ. ಪ್ರತಾಪ್ ಸಿಂಗ್ ಅವರ ನಾಯಕತ್ವದ ಬಿಹಾರ ತಂಡವು ತನ್ನ ಮೊದಲ ಪಂದ್ಯದಲ್ಲಿ ಹರಿಯಾಣ ವಿರುದ್ಧ ಸೋತಿತ್ತು. ಬಂಗಾಳ ಎದುರಿನ ಎರಡನೇ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೇ ಕೊನೆಯಾಗಿತ್ತು. ಇದರಿಂದ ಉಭಯ ತಂಡಗಳಿಗೆ ತಲಾ ಒಂದು ಅಂಕ ದೊರೆತಿತ್ತು. 

ಪಟ್ನಾದಲ್ಲಿ ಮಳೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದ್ದರಿಂದ ಮಯಂಕ್ ಬಳಗವು ಮೊದಲ ಜಯದ ಕನಸು ಕಾಣುತ್ತಿದೆ. 

ಮೂವರು ಮಧ್ಯಮವೇಗಿಗಳಿಗೆ ಅವಕಾಶ: ಗೌಡ ಬಿಹಾರದ ರಾಜಧಾನಿ ಪಟ್ನಾದಲ್ಲಿ ಶನಿವಾರ ಕರ್ನಾಟಕ ತಂಡದವರು ಅಭ್ಯಾಸ ಮಾಡಿದರು. ಪ್ರಸ್ತುತ ಟೂರ್ನಿಯಲ್ಲಿ ಎರಡು ಸುತ್ತುಗಳು ಮುಗಿದಿವೆ. ಆದರೂ ಪೂರ್ಣಪ್ರಮಾಣದಲ್ಲಿ ಆಡಲು ತಂಡಕ್ಕೆ ಸಾಧ್ಯವಾಗಿಲ್ಲ. ಮಳೆಯಿಂದಾಗಿ ಎರಡೂ ಪಂದ್ಯಗಳು ಡ್ರಾ ಆಗಿದ್ದವು.    ‘ಪಿಚ್ ಉತ್ತಮವಾಗಿದೆ. ಮೂವರು ಮಧ್ಯಮವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳ ಸಂಯೋಜನೆಯೊಂದಿಗೆ ಕಣಕ್ಕಿಳಿಯುತ್ತೇವೆ. ಇವತ್ತು ಸ್ವಲ್ಪ ಮಂದ ಬೆಳಕು ಮತ್ತು ಮೋಡಗಳು ಇವೆ. ಆದರೆ ಪಂದ್ಯದ ದಿನಗಳಲ್ಲಿ ಮಳೆ ಬರುವ ಲಕ್ಷಣಗಳಿಲ್ಲ‘ ಎಂದು ಕರ್ನಾಟಕ ತಂಡದ ಮುಖ್ಯ ಕೋಚ್ ಯರೇ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.  ‘ಗುಂಪಿನ ಮೊದಲೆರಡು ಪಂದ್ಯಗಳಲ್ಲಿ ಮಳೆಯಿಂದಾಗಿ ಫಲಿತಾಂಶ ಬರಲಿಲ್ಲ. ಆದ್ದರಿಂದ ನಾವು ಮುಂಬರುವ ಎಲ್ಲ ಪಂದ್ಯಗಳಲ್ಲಿ ಜಯಿಸುವತ್ತಲೇ ಚಿತ್ತ ನೆಟ್ಟಿದ್ದೇವೆ. ಕ್ವಾರ್ಟರ್‌ಫೈನಲ್‌ ಲೆಕ್ಕಾಚಾರದ ಬಗ್ಗೆ ಈಗಲೇ ಯೋಚಿಸುತ್ತಿಲ್ಲ. ಈ ಪಂದ್ಯದ ನಂತರದ ಬೆಳವಣಿಗೆಯನ್ನು ನೋಡಿ ಲೆಕ್ಕಾಚಾರ ಮಾಡುತ್ತೇವೆ’ ಎಂದರು.  ‘ಬಿಹಾರ ತಂಡವು ಉತ್ತಮ ಆಟಗಾರರನ್ನು ಹೊಂದಿದೆ. ಹೋದ ಋತುವಿನಲ್ಲಿ ಅವರು ಕೇರಳದ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದ್ದರು. ಆದ್ದರಿಂದ ನಾವು ಅವರನ್ನು ಹಗುರವಾಗಿ ಪರಿಗಣಿಸಿಲ್ಲ. ನಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಣಕ್ಕಿಳಿಯುತ್ತೇವೆ‘ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.