ADVERTISEMENT

ರಣಜಿ ಕ್ರಿಕೆಟ್: ಉತ್ತರಾಖಂಡ ಪರ ಕನ್ನಡಿಗ ಸಮರ್ಥ್ ಶತಕ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:29 IST
Last Updated 27 ಅಕ್ಟೋಬರ್ 2024, 16:29 IST
ಆರ್‌. ಸಮರ್ಥ್
ಆರ್‌. ಸಮರ್ಥ್   

ಡೆಹ್ರಾಡೂನ್: ಕನ್ನಡಿಗ ಆರ್. ಸಮರ್ಥ್ ಅವರ ಶತಕದ ಬಲದಿಂದ ಉತ್ತರಾಖಂಡ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ವಿದರ್ಭ ಎದುರು ದಿಟ್ಟ ಹೋರಾಟ ನಡೆಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡವು 88 ಓವರ್‌ಗಳಲ್ಲಿ 326 ರ್ ಗಳಿಸಿತು. ಇದಕ್ಕುತ್ತರವಾಗಿ ಉತ್ತರಾಖಂಡ ತಂಡವು ಎರಡನೇ ದಿನವಾದ ಭಾನುವಾರ 87 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 242 ರನ್ ಗಳಿಸಿತು. 

ಉತ್ತರಾಖಂಡ ತಂಡದ ನಾಯಕ ಸಮರ್ಥ್ ಅವರು 241 ಎಸೆತಗಳಲ್ಲಿ 119 ರನ್‌ ಗಳಿಸಿದರು. 31 ವರ್ಷದ ಬ್ಯಾಟರ್ ಸಮರ್ಥ್ ಅವರು  ಈ ಋತುವಿನಲ್ಲಿ ಕರ್ನಾಟಕದಿಂದ ಉತ್ತರಾಖಂಡಕ್ಕೆ ವಲಸೆ ಹೋಗಿದ್ದಾರೆ. ಸಮರ್ಥ ಬಳಗವು ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಲು ಇನ್ನೂ 84 ರನ್‌ ಗಳಿಸಬೇಕಿದೆ. 

ADVERTISEMENT

ದೆಹಲಿಗೆ ಪರದಾಟ: ಅಸ್ಸಾಂ ತಂಡದ ಎದುರು ದೆಹಲಿಯ ಬ್ಯಾಟರ್‌ಗಳು ಪರದಾಡಿದರು. ಇದರಿಂದಾಗಿ ತಂಡವು ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ ಹಿನ್ನಡೆ ಅನುಭವಿಸುವ ಆತಂಕದಲ್ಲಿದೆ. 

ಅಸ್ಸಾಂ ತಂಡವುಗಳಿಸಿರುವ 330 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ದೆಹಲಿ ತಂಡವು ಎರಡನೇ ದಿನದಾಟದ  ಅಂತ್ಯಕ್ಕೆ 214 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಅಸ್ಸಾಂ ತಂಡದ ಸ್ವರೂಪಂ ಪುರಕಾಯಸ್ಥ (46ಕ್ಕೆ3) ಪೆಟ್ಟು ನೀಡಿದರು. ತಂಡವು ಹಿನ್ನಡೆ ತಪ್ಪಿಸಿಕೊಳ್ಳಲು ಇನ್ನೂ 116 ರನ್ ಗಳಿಸಬೇಕಿದೆ.

ಸಂಕ್ಷಿಪ್ತ ಸ್ಕೋರು:

ಡೆಹ್ರಾಡೂನ್ – ವಿದರ್ಭ: 88 ಓವರ್‌ಗಳಲ್ಲಿ 326 (ಧ್ರುವ ಶೋರೆ 35, ದಾನೀಶ್ ಮಳೆವರ್ 56, ಯಶ್ ರಾಥೋಡ್ 135, ಮಯಂಕ್ ಮಿಶ್ರಾ 72ಕ್ಕೆ3, ಅವನೀಶ್ ಸುಧಾ 35ಕ್ಕೆ2, ಸ್ವಪ್ನಿಲ್ ಸಿಂಗ್ 70ಕ್ಕೆ2) ಉತ್ತರಾಖಂಡ: 87 ಓವರ್‌ಗಳಲ್ಲಿ 7ಕ್ಕೆ242 (ಆರ್. ಸಮರ್ಥ್ 119, ಅಕ್ಷಯ್ ವಖಾರೆ 47ಕ್ಕೆ3)

ನವದೆಹಲಿ – ಅಸ್ಸಾಂ: 330 (ಶಿವಶಂಕರ್ ರಾಯ್ 59, ಸುಮಿತ್ ಗಡಿಗಾಂವ್ಕರ್ 162, ಹರ್ಷಿತ್ ರಾಣಾ 80ಕ್ಕೆ5) ದೆಹಲಿ: 6ಕ್ಕೆ214 (ಹಿಮ್ಮತ್ ಸಿಂಗ್ 55, ಸ್ವರೂಪಂ ಪುರಕಾಯಸ್ಥ 46ಕ್ಕೆ3) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.