ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಮಾಧವ್–ಆರ್ಯನ್ ದ್ವಿಶತಕದ ಜೊತೆಯಾಟ

ಉತ್ತರಪ್ರದೇಶ ದಿಟ್ಟ ತಿರುಗೇಟು; ಕರ್ನಾಟಕದ ಶ್ರೇಯಸ್, ಮೊಹಸಿನ್‌ಗೆ ತಲಾ 2 ವಿಕೆಟ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 14:29 IST
Last Updated 15 ನವೆಂಬರ್ 2024, 14:29 IST
ಅನ್ಷುಲ್ ಕಾಂಭೋಜ್ 
ಅನ್ಷುಲ್ ಕಾಂಭೋಜ್    

ಲಖನೌ: ಮಾಧವ್ ಕೌಶಿಕ್ ಮತ್ತು ಆರ್ಯನ್ ಜುಯಾಲ್ ಅವರು ಶತಕ ದಾಖಲಿಸುವ ಮೂಲಕ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ದಿಟ್ಟ ತಿರುಗೇಟು ನೀಡಿದರು. 

ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 89 ರನ್‌ ಗಳಿಸಿ ಕುಸಿದಿದ್ದ ಉತ್ತರ ಪ್ರದೇಶ ತಂಡವು ಮಾಧವ್ (134; 274ಎ) ಮತ್ತು ನಾಯಕ ಆರ್ಯನ್ (109; 257ಎ) ಅವರ ಆಟದ ಬಲದಿಂದ ಎರಡನೇ ಇನಿಂಗ್ಸ್‌ನಲ್ಲಿ 139 ರನ್‌ಗಳ ಮುನ್ನಡೆ ಸಾಧಿಸಿದೆ.

ಶುಕ್ರವಾರ ದಿನದಾಟದ ಅಂತ್ಯಕ್ಕೆ ಉತ್ತರ ಪ್ರದೇಶ ತಂಡವು 110 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 325 ರನ್ ಗಳಿಸಿದೆ. ಆದಿತ್ಯ ಶರ್ಮಾ (ಬ್ಯಾಟಿಂಗ್ 24) ಮತ್ತು ಕೃತಗ್ಯಾ ಸಿಂಗ್ (ಬ್ಯಾಟಿಂಗ್ 5) ಕ್ರೀಸ್‌ನಲ್ಲಿದ್ದಾರೆ.  ಪಂದ್ಯದ ಕೊನೆಯ ಹಾಗೂ ನಾಲ್ಕನೇ ದಿನವಾದ ಶನಿವಾರ ಕರ್ನಾಟಕಕ್ಕೆ ಕಠಿಣ ಗುರಿಯೊಡ್ಡುವ ಛಲದಲ್ಲಿದೆ. 

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ 275 ರನ್ ಗಳಿಸಿದ್ದ ಕರ್ನಾಟಕ ತಂಡವು 186 ರನ್‌ಗಳ ಉತ್ತಮ ಮುನ್ನಡೆ ಗಳಿಸಿತ್ತು. ಎರಡನೇ ದಿನವಾದ ಗುರುವಾರ  ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ತಂಡವು 26 ಓವರ್‌ಗಳಲ್ಲಿ 1ವಿಕೆಟ್‌ಗೆ 78 ರನ್ ಗಳಿಸಿತ್ತು. ಶುಕ್ರವಾರವೇ ‘ಇನಿಂಗ್ಸ್‌–ಜಯ’ದ ಕನಸು ಕಂಡಿದ್ದ ಕರ್ನಾಟಕಕ್ಕೆ ಕೌಶಿಕ್ ಮತ್ತು ಆರ್ಯನ್ ನಿರಾಶೆ ಮೂಡಿಸಿದರು. ದಿನದ ಬಹುತೇಕ ಸಮಯ ಕ್ರೀಸ್‌ನಲ್ಲಿದ್ದ ಈ ಜೋಡಿಯು ಎರಡನೇ ವಿಕೆಟ್‌ಗೆ 246 ರನ್‌ ಸೇರಿಸಿದರು. 

ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿದ್ದ ಮಧ್ಯಮವೇಗಿ ವಿ. ಕೌಶಿಕ್ ಹಾಗೂ ವಿದ್ಯಾಧರ್ ಪಾಟೀಲ ಅವರ ಪ್ರಯತ್ನಕ್ಕೆ ಫಲ ದಕ್ಕಲಿಲ್ಲ. ಇಡೀ ದಿನ ಬೌಲರ್‌ಗಳೂ ಮತ್ತು ಫೀಲ್ಡರ್‌ಗಳನ್ನು ಉತ್ತರಪ್ರದೇಶ ಜೋಡಿಯು ಸತಾಯಿಸಿತು. ತಾಳ್ಮೆಯುತ ಬ್ಯಾಟಿಂಗ್‌ನಿಂದಾಗಿ ಆತಿಥೇಯ ತಂಡವು ಈಗ ಉತ್ತಮ ಸ್ಥಿತಿ ತಲುಪಿದೆ. ಇನಿಂಗ್ಸ್‌ನ 85ನೇ ಓವರ್‌ನಲ್ಲಿ ಮಾಧವ್ ಕೌಶಿಕ್ ವಿಕೆಟ್ ಗಳಿಸಿದ ಸ್ಪಿನ್ನರ್ ಮೊಹಸಿನ್ ಖಾನ್ ಜೊತೆಯಾಟ ಮುರಿದರು. ಮಾಧವ್ ಕ್ಯಾಚ್ ಪಡೆದ ಮನೀಷ್ ಪಾಂಡೆ ನಿಟ್ಟುಸಿರುಬಿಟ್ಟರು.

ನಂತರದ ಓವರ್‌ನಲ್ಲಿಯೇ ಶ್ರೇಯಸ್ ಗೋಪಾಲ್ ಅವರು ರಿತುರಾಜ್ ಸಿಂಗ್ ವಿಕೆಟ್ ಕಬಳಿಸಿದರು. ಎಂಟು ಓವರ್‌ಗಳ ನಂತರ ಮತ್ತೊಮ್ಮೆ ಶ್ರೇಯಸ್ ಮೋಡಿ ಮಾಡಿದರು. ಅವರ ಓವರ್‌ನಲ್ಲಿ ಆರ್ಯನ್ ಜುಯಾಲ್ ಕ್ಯಾಚ್ ಪಡೆದ ನಿಕಿನ್ ಜೋಸ್ ಸಂಭ್ರಮಿಸಿದರು. ಕ್ರೀಸ್‌ಗೆ ಬಂದ ಸಮೀರ್ ರಿಜ್ವಿ (30; 61ಎ) ಅವರು ಕಾಲೂರಲು ಮೊಹಸಿನ್ ಬಿಡಲಿಲ್ಲ. 

ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ತನ್ನ  ನಾಕೌಟ್ ಕನಸು ಜೀವಂತವಾಗುಳಿಯಬೇಕಾದರೆ ಇಲ್ಲಿ ಗೆಲುವು ಅಗತ್ಯವಾಗಿದೆ. ಆದ್ದರಿಂದ ಶನಿವಾರ ಬೆಳಿಗ್ಗೆ  ಬೇಗನೆ ಉತ್ತರ ಪ್ರದೇಶದ ಐದು ವಿಕೆಟ್‌ಗಳನ್ನು ಕಬಳಿಸಿ, ಸಾಧಾರಣ ಗುರಿಯನ್ನು ಮುಟ್ಟಬೇಕು. ಇಲ್ಲವೇ ಡ್ರಾ ಮಾಡಿಕೊಂಡರೆ ಕನಿಷ್ಠ 3 ಅಂಕಗಳು ಸಿಗುತ್ತವೆ. ಸೋತರೆ ಮಾತ್ರ ಕರ್ನಾಟಕವು ನಾಕೌಟ್ ಹಾದಿಯಿಂದ ಹೊರಹೋಗುವ ಸಾಧ್ಯತೆ ಹೆಚ್ಚಿದೆ. 

ಆರ್ಯನ್  ಜುಯಾಲ್ 
ಕರ್ನಾಟಕದ ಶ್ರೇಯಸ್ ಗೋಪಾಲ್ 
ಅನ್ಷುಲ್‌ ಕಾಂಬೋಜ್‌ 10 ವಿಕೆಟ್ ದಾಖಲೆ
ಲಾಹ್ಲಿ ಹರಿಯಾಣ : ಹರಿಯಾಣದ ಯುವ ಬೌಲರ್ ಅನ್ಷುಲ್ ಕಾಂಭೋಜ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಗಳಿಸಿದರು.   ಟೂರ್ನಿಯ ಇತಿಹಾಸದಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಅವರಾಗಿದ್ದಾರೆ. ಬಂಗಾಳದ ಪ್ರೇಮಾಂಗ್ಸು ಚಟರ್ಜಿ ಮತ್ತು ರಾಜಸ್ಥಾನದ ಪ್ರದೀಪ್ ಸುಂದರಮ್ ಅವರು ಕೂಡ ಈ ಹಿಂದೆ 10 ವಿಕೆಟ್ ಸಾಧನೆ ಮಾಡಿದ್ದರು ಎಂದು ‘ಕ್ರಿಕ್‌ಇನ್ಫೋ ಡಾಟ್ ಕಾಮ್’ ವರದಿ ಮಾಡಿದೆ.  ಸಿ ಗುಂಪಿನ ಈ ಪಂದ್ಯದಲ್ಲಿ ಅನ್ಷುಲ್ (30.1–9–49–10) ಬೌಲಿಂಗ್ ಮುಂದೆ ಕೇರಳ ತಂಡವು 116.1 ಓವರ್‌ಗಳಲ್ಲಿ 291 ರನ್‌ಗಳಿಗೆ ಕುಸಿಯಿತು. ಆದರೆ ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಹರಿಯಾಣ ತಂಡದ ಬ್ಯಾಟರ್‌ಗಳೂ ವೈಫಲ್ಯ ಅನುಭವಿಸಿದರು. ಶುಕ್ರವಾರ ದಿನದಾಟದ ಅಂತ್ಯಕ್ಕೆ 61 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 139 ರನ್ ಗಳಿಸಿತು. ಇನಿಂಗ್ಸ್ ಮೊತ್ತ ಚುಕ್ತಾ ಮಾಡಲು ಇನ್ನೂ 152 ರನ್‌ಗಳ ಅಗತ್ಯವಿದೆ. ಪಂದ್ಯದ ಎರಡನೇ ದಿನವಾದ ಗುರುವಾರ ಅನ್ಷುಲ್ ಅವರು ಎರಡು ವಿಕೆಟ್ ಗಳಿಸಿದ್ದರು. ಮೂರನೇ ದಿನದಾಟದಲ್ಲಿ  ಉಳಿದ ಎಂಟೂ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು.  ಅವರ ದಾಳಿಯ ನಡುವೆಯೂ ಕೇರಳದ ಕುನ್ನುಮಾಳ್ ಸಚಿನ್ ಬೇಬಿ ಅಕ್ಷಯ್ ಚಂದ್ರನ್ ಮತ್ತು ಅಜರುದ್ದೀನ್ ಅವರು ತಲಾ ಒಂದು ಅರ್ಧಶತಕ ಗಳಿಸಿದರು.  ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೇರಳ: 116.1 ಓವರ್‌ಗಳಲ್ಲಿ 291 (ಅಜರುದ್ದೀನ್ 53 ಶೌನ್ ರೋಜರ್ 42 ಅನ್ಷುಲ್ ಕಾಂಭೋಜ್ 49ಕ್ಕೆ10) ಹರಿಯಾಣ: 61 ಓವರ್‌ಗಳಲ್ಲಿ 7ಕ್ಕೆ139 (ಲಕ್ಷ್ಯಣ್ಯ ದಲಾಲ್ 21 ಯುವರಾಜ್ 20 ಅಂಕಿತ ಕುಮಾರ್ 27 ನಿಶಾಂತ್ ಸಿಂಧು ಬ್ಯಾಟಿಂಗ್ 29 ನಿಧೀಶ್ 37ಕ್ಕೆ3)  (ಮೊಹಾಲಿ): ಬಿಹಾರ: 135 ಮತ್ತು 28.4 ಓವರ್‌ಗಳಲ್ಲಿ 98 (ಬಿಪಿನ್ ಸೌರಭ್ 33 ಗುರನೂರ್ ಬ್ರಾರ್ 14ಕ್ಕೆ5) ಪಂಜಾಬ್: 84.1 ಓವರ್‌ಗಳಲ್ಲಿ 300 (ಜಸ್ಕರಣವೀರ್ ಪಾಲ್ 65 ಸಲೀಲ್ ಅರೋರಾ 64 ಗುರನೂರ್ ಬ್ರಾರ್ 34 ಸಕೀಬ್ ಹುಸೇನ್ 114ಕ್ಕೆ4) : ಪಂಜಾಬ್ ತಂಡಕ್ಕೆ ಇನಿಂಗ್ಸ್ ಮತ್ತು 67 ರನ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.