ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ದುರ್ಗಮ ಹಾದಿಯಲ್ಲಿ ಮಯಂಕ್ ಪಡೆ

ಕರ್ನಾಟಕ– ಉತ್ತರಪ್ರದೇಶ ಹಣಾಹಣಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 23:37 IST
Last Updated 12 ನವೆಂಬರ್ 2024, 23:37 IST
   

ಲಖನೌ: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಈ ಋತುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ನಾಕೌಟ್ ತಲುಪುವ ಹಾದಿ ದುರ್ಗಮವಾಗಿದೆ. 

ಸಿ ಗುಂಪಿನಲ್ಲಿ ಆಡುತ್ತಿರುವ ಮಯಂಕ್ ಬಳಗವು ಕಳೆದ ನಾಲ್ಕು ಸುತ್ತಿನಲ್ಲಿ ಗಳಿಸಿರುವುದು 9 ಅಂಕಗಳನ್ನು ಮಾತ್ರ. ಅದರಲ್ಲಿ ಮೊದಲೆರಡು ಪಂದ್ಯಗಳು ಮಳೆಯಲ್ಲಿ ಕೊಚ್ಚಿಹೊಗಿದ್ದವು. ಪಟ್ನಾದಲ್ಲಿ ಬಿಹಾರ ಎದುರು ಗೆದ್ದಿದ್ದ ಕರ್ನಾಟಕ, ಬೆಂಗಳೂರಿನಲ್ಲಿ ಬಂಗಾಳದ ಎದುರು ಡ್ರಾ ಮಾಡಿಕೋಂಡಿತ್ತು. ಅದರಲ್ಲಿ ಮೊದಲ ಇನಿಂಗ್ಸ್‌ ಹಿನ್ನಡೆ ಅನುಭವಿಸಿದ್ದ ಕರ್ನಾಟಕ ಕೇವಲ 1 ಅಂಕ ಗಳಿಸಿತ್ತು. ಇದರಿಂದಾಗಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಗೆದ್ದು ಪೂರ್ಣ ಅಂಕಗಳನ್ನು ಗಳಿಸಿದರೆ ನಾಕೌಟ್ ಅವಕಾಶ ಸಿಗಬಹುದು. ಈ ಹಾದಿಯ ಮೊದಲ ಸವಾಲು ಬುಧವಾರದಿಂದ ಆರಂಭವಾಗಲಿರುವ ಉತ್ತರಪ್ರದೇಶ ಎದುರಿನ ಪಂದ್ಯದಲ್ಲಿ ಆಡಲಿದೆ. 

ಈ ಪಂದ್ಯದಲ್ಲಿಯೂ ಕರ್ನಾಟಕ ತಂಡಕ್ಕೆ ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡಲಿದೆ. ಅದು ಪ್ರಮುಖವಾಗಿ ಬೌಲರ್‌ಗಳ ವಿಭಾಗದಲ್ಲಿ ಮಧ್ಯಮವೇಗಿ ವಾಸುಕಿ ಕೌಶಿಕ್ ಬಿಟ್ಟರೆ ಉಳಿದ ವೇಗಿಗಳಿಗೆ ಅನುಭವ ಕಡಿಮೆ. ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಅವರು ಬಂಗಾಳ ವಿರುದ್ಧ ಪದಾರ್ಪಣೆ ಮಾಡಿದ್ದರು. ವಿದ್ಯಾಧರ್ ಪಾಟೀಲ ಅವರೂ ಗಾಯದಿಂದ ಚೇತರಿಸಿಕೊಂಡ ನಂತರ ಭರವಸೆ ಮೂಡಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪರಿಣಾಮ ಬೀರಿದ್ದರು. ಆದರೆ ಪ್ರಮುಖ ಜೊತೆಯಾಟಗಳಿಗೆ ಕಡಿವಾಣ ಹಾಕುವ ತಂತ್ರಗಾರಿಕೆ ಇನ್ನೂ ರೂಢಿಸಿಕೊಳ್ಳಬೇಕಷ್ಟೇ. ಕೌಶಿಕ್ ತಮ್ಮ ಎಂದಿನ ಮಧ್ಯಮವೇಗದ  ವೈವಿಧ್ಯಗಳ ಎಸೆತಗಳನ್ನು ಪ್ರಯೋಗಿಸುತ್ತಿರುವುದು ತಂಡಕ್ಕೆ ಬಲ. ಬೆಂಗಳೂರಿನ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ್ದರು. ವೈಶಾಖ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಪ್ರಸಿದ್ಧಕೃಷ್ಣ ಅವರ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ವಿಭಾಗದ ಹೊಣೆ ಕೌಶಿಕ್ ಮೇಲೆಯೇ ಇದೆ. ಸ್ಪಿನ್ ಬೌಲಿಂಗ್ ಹೊಣೆಯನ್ನು ಶ್ರೇಯಸ್ ಗೋಪಾಲ್ ಅವರೇ ನಿಭಾಯಿಸಬೇಕಿದೆ. 

ADVERTISEMENT

ಬ್ಯಾಟಿಂಗ್ ನಲ್ಲಿ ಅನುಭವಿಗಳಾದ ಮಯಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ತಂಡದ ಬಹುತೇಕ ಒತ್ತಡ ಕಡಿಎಯಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್, ಆರ್‌. ಸ್ಮರಣ್ ಅವರು ಭರವಸೆ ಮೂಡಿಸಿರುವ ಆಟಗಾರರು. ದೇವದತ್ತ ಪಡಿಕ್ಕಲ್ ಅವರು ಭಾರತ ಎ ತಂಡದಲ್ಲಿ ಆಡುತ್ತಿದ್ದಾರೆ. ಅವರು ಮರಳಿ ಬರುವವರೆಗೂ ಸ್ಮರಣ್ ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಬ್ಯಾಟಿಂಗ್ ಶೈಲಿ ಇರುವ ಯುವಪ್ರತಿಭೆ ಸ್ಮರಣ್, ದೀರ್ಘ ಇನಿಂಗ್ಸ್‌ ಆಡಿದರೆ ತಂಡಕ್ಕೆ ಉಪಯುಕ್ತವಾಗಲಿದೆ. ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ (ಕಂಕಷನ್) ನಿಕಿನ್ ಜೋಸ್ ಇಲ್ಲಿ ಮರಳದಿದ್ದರೆ ಕಿಶನ್ ಬೆದಾರೆ ಅವಕಾಶ ಪಡೆಯುವುದು ಖಚಿತ. 

ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಉತ್ತರಪ್ರದೇಶ ತಂಡವೂ ಟೂರ್ನಿಯಲ್ಲಿ ಒಂದೂ ಪಂದ್ಯ ಜಯಿಸಿಲ್ಲ. ಆರ್ಯನ್ ಜುಯಾಲ್ ನಾಯಕತ್ವದ ತಂಡವುಕಳೆದ ‍ಪಂದ್ಯದಲ್ಲಿ ಕೇರಳದ ಎದುರು ಮಣಿದಿತ್ತು. ಅನುಭವಿ ಸ್ಪಿನ್ನರ್ ಪಿಯೂಷ್ ಚಾವ್ಲಾ, ಸೌರಭ್ ಕುಮಾರ್, ವೇಗಿ ಶಿವಂ ಮಾವಿ ತಂಡದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಆರ್ಯನ್, ನಿತೀಶ್ ರಾಣಾ, ಪ್ರಿಯಂ ಗರ್ಗ್ ಅವರು ತಮ್ಮ ಲಯಕ್ಕೆ ಮರಳಿದರೆ ಕರ್ನಾಟಕದ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು. 

ಕೆಂಪು ಮಣ್ಣಿನ ಪಿಚ್: ಯರೇಗೌಡ

ಕೆಂಪು ಮಣ್ಣಿನ ಪಿಚ್‌ ಮೂರನೇ ದಿನದಿಂದ ಚೆಂಡಿಗೆ ತಿರುವು ನೀಡುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ತಮ್ಮ ತಂಡದ ಯೋಜನೆ ಇರಲಿದೆ ಎಂದು ಕರ್ನಾಟಕ ತಂಡದ ಕೋಚ್ ಯರೇಗೌಡ ಹೇಳಿದ್ದಾರೆ. ‘ಬ್ಯಾಟರ್‌ಗಳು ಉತ್ತಮವಾಗಿ ಆರಂಭ ಮಾಡುತ್ತಿದ್ದಾರೆ. ಆದರೆ ದೊಡ್ಡ ಜೊತೆಯಾಟಗಳನ್ನು ಬೆಳೆಸಲು ಪ್ರಯತ್ನಿಸುವ ಅಗತ್ಯಇದೆ. ಬೌಲಿಂಗ್‌ನಲ್ಲಿ ನಮ್ಮಲ್ಲಿ ಉದಯೋನ್ಮುಖ ಆಟಗಾರರು ಹೆಚ್ಚಿದ್ದಾರೆ. ನಮ್ಮ ತಂಡದಲ್ಲಿ ಇದು ಸುಧಾರಣೆ ಕಾಲ ನಡೆಯುತ್ತಿದೆ. ಪ್ರತಿಭಾವಂತರು ಹೊಂದಿಕೊಳ್ಳುತ್ತಿದ್ದಾರೆ’ ಎಂದು ಯರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ಪಂದ್ಯ ಆರಂಭ: ಬೆಳಿಗ್ಗೆ 9.30

ಬಲಾಬಲ

ಪಂದ್ಯ;14

ಕರ್ನಾಟಕ ಜಯ: 4

ಲಖನೌ ಜಯ: 1

ಡ್ರಾ; 9

ಪಂದ್ಯ ಆಡಲಿರುವ ಶಮಿ

ಕೋಲ್ಕತ್ತ : ಭಾರತದ ಅಗ್ರ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಅವರ ಬಹುನಿರೀಕ್ಷಿತ ಪುನರಾಗಮನಕ್ಕೆ ವೇದಿಕೆ ಸಜ್ಜಾಗಿದೆ. ಅವರು ಬುಧವಾರ ಇಂದೋರ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆ ಬುಧವಾರ ತಿಳಿಸಿದೆ.

ಸುಮಾರು ಒಂದು ವರ್ಷದ ನಂತರ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಕಳೆದ ವರ್ಷದ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್‌ ಸಂದರ್ಭದಲ್ಲಿ ಗಾಯಾಳಾದ ನಂತರ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಪುನಃಶ್ಚೇತನ ಭಾಗವಾಗಿ ಆರೈಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.