‘ಆರಂಭಿಕ ಹಿನ್ನಡೆಯಿಂದ ನನ್ನ ಆತ್ಮವಿಶ್ವಾಸ ಕುಗ್ಗಿರಲಿಲ್ಲ. ಮೊದಲ ಪಂದ್ಯದಲ್ಲಿ ಮಾಡಿದ ತಪ್ಪುಗಳ ವಿಡಿಯೊ ನೋಡಿ ಅವುಗಳನ್ನು ತಿದ್ದಿಕೊಂಡೆ. ಮತ್ತಷ್ಟು ಕಠಿಣ ಅಭ್ಯಾಸ ಮಾಡಿದ್ದರಿಂದಲೇ ಶತಕ ಬಾರಿಸಲು ಸಾಧ್ಯವಾಯಿತು...’
ಕುಂದಾನಗರಿ ಬೆಳಗಾವಿಯಲ್ಲಿ ಕಳೆದ ವಾರ ನಡೆದ ಮುಂಬೈ ಎದುರಿನ ರಣಜಿ ಪಂದ್ಯವದು. ತಮ್ಮ ಎರಡನೇ ಪ್ರಥಮ ದರ್ಜೆ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೆ.ವಿ. ಸಿದ್ದಾರ್ಥ್ ಅವರಲ್ಲಿ ಆತ್ಮವಿಶ್ವಾಸ ಧುಮ್ಮಿಕ್ಕುತ್ತಿತ್ತು. ಅತ್ಯಂತ ಖುಷಿಯಿಂದ ಮಾಧ್ಯಮಗಳ ಎದುರು ಮಾತನಾಡಿದರು.
ರಾಜ್ಯ ತಂಡದ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆರ್. ಸಮರ್ಥ್, ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್ ರಾಷ್ಟ್ರೀಯ ತಂಡದಲ್ಲಿದ್ದಾರೆ. ಆದ್ದರಿಂದ ಹೊಸ ಪ್ರತಿಭೆಗಳಿಗೆ ಈ ಬಾರಿಯ ರಣಜಿ ಪಂದ್ಯಗಳಲ್ಲಿ ಅವಕಾಶ ಸಿಗುತ್ತಿದೆ.
ಕರ್ನಾಟಕ ತಂಡ ಈ ಸಲ ತನ್ನ ಮೊದಲ ರಣಜಿ ಪಂದ್ಯವನ್ನು ನಾಗಪುರದಲ್ಲಿ ವಿದರ್ಭ ಎದುರು ಆಡಿತ್ತು. ಆಗ ಸಿದ್ದಾರ್ಥ್ ಮತ್ತು ಬಿ.ಆರ್. ಶರತ್ ಇಬ್ಬರೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆರಂಭಿಕ ಪಂದ್ಯದಲ್ಲಿ ಶರತ್ ಶತಕ ಬಾರಿಸಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದರು. ಆದರೆ, ಬೆಂಗಳೂರಿನ ಸಿದ್ದಾರ್ಥ್ ಮೊದಲ ಇನಿಂಗ್ಸ್‌ನಲ್ಲಿ 19 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 16 ರನ್ ಗಳಿಸಿ ಔಟಾಗಿದ್ದರು.
ರಾಜ್ಯ ತಂಡದಲ್ಲಿ ಅವಕಾಶ ಪಡೆಯಲು ಸಾಕಷ್ಟು ಪೈಪೋಟಿ ಇದೆ. ಒಬ್ಬ ಆಟಗಾರ ಕೆಲ ಪಂದ್ಯಗಳಲ್ಲಿ ವೈಫಲ್ಯನಾದರೆ, ಹೊಸ ಆಟಗಾರ ಅವಕಾಶದ ಬಾಗಿಲು ತಟ್ಟಲು ಕಾಯುತ್ತಿರುತ್ತಿದ್ದಾರೆ. ಆದ್ದರಿಂದ ತಂಡದಲ್ಲಿ ಸ್ಥಾನ ಗಳಿಸುವ ಪ್ರತಿ ಆಟಗಾರನಿಗೂ ಎಲ್ಲ ಪಂದ್ಯಗಳಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಬೇಕಾದ ಸವಾಲು ಇರುತ್ತದೆ.
ಈ ಸವಾಲನ್ನು ದಿಟ್ಟತನದಿಂದ ಎದುರಿಸಿದ ಬಲಗೈ ಬ್ಯಾಟ್ಸ್‌ಮನ್ ಸಿದ್ದಾರ್ಥ್ ಮುಂಬೈ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 161 ರನ್ ಗಳಿಸಿದರು. ಎರಡನೇ ಇನಿಂಗ್ಸ್‌ನಲ್ಲಿ 71 ರನ್ ಗಳಿಸಿ ಅಜೇಯರಾಗಿ ಉಳಿದರು.
ಬೆಂಗಳೂರು ಯನೈಟೆಡ್ ಕ್ರಿಕೆಟ್ ಕ್ಲಬ್‌ನಲ್ಲಿ (ಬಿಯುಸಿಸಿ) ಕ್ರಿಕೆಟ್ ಕೌಶಲ ಕಲಿತ ಸಿದ್ದಾರ್ಥ್ ಐದು ವರ್ಷಗಳಿಂದ ಸ್ವಸ್ತಿಕ್ ಯೂನಿಯನ್ ಕ್ಲಬ್ ಪ್ರತಿನಿಧಿಸುತ್ತಿದ್ದಾರೆ.
ಜೈನ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿರುವ ಅವರು ಆರು ವರ್ಷದವರಿದ್ದಾಗಲೇ ವೃತ್ತಿಪರ ಕ್ರಿಕೆಟ್ ತರಬೇತಿ ಆರಂಭಿಸಿದರು. ಆರಂಭದ ದಿನಗಳಲ್ಲಿ ಅಂತರರಾಷ್ಟ್ರೀಯ ಅಂಪೈರ್ ಶಾವೀರ್ ತಾರಾಪುರೆ, ಕಮಲ್ ಟಂಡನ್, ಸುರೇಶ ಶಾನಭಾಗ್ ಬಳಿ ತರಬೇತಿ ಪಡೆದರು. ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಡೆಸುವ ಮೊದಲ ಡಿವಿಷನ್ ಟೂರ್ನಿಯಲ್ಲಿ ಸತತ ಮೂರು ವರ್ಷ ಒಟ್ಟು ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ್ದಾರೆ. ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ಪ್ರತಿನಿಧಿಸಿದ್ದರು.
ಮಗನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಎಸ್.ಕೆ. ವೆಂಕಟೇಶ (ಟೈ ವೆಂಕಟೇಶ) ಅವರು ‘ಕರ್ನಾಟಕ ಸೀನಿಯರ್ ತಂಡದಲ್ಲಿ ಅವಕಾಶ ಪಡೆಯುವ ಸಲುವಾಗಿ ಸಿದ್ದಾರ್ಥ್ ಐದು ವರ್ಷಗಳಿಂದ ಕಾಯುತ್ತಿದ್ದ. ವಿವಿಧ ಡಿವಿಷನ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ. ಈಗ ರಾಜ್ಯ ತಂಡದಲ್ಲಿ ಪ್ರಮುಖ ಆಟಗಾರರು ಇಲ್ಲದ ಕಾರಣ ಅವಕಾಶ ಸಿಕ್ಕಿದೆ. ಇದನ್ನು ಚೆನ್ನಾಗಿ ಬಳಸಿಕೊಂಡಿದ್ದಕ್ಕೆ ಖುಷಿಯಾಗಿದೆ’ ಎಂದರು.
ಹಿಂದಿನ ಶಫಿ ದಾರಾಶಾ ಟೂರ್ನಿಯಲ್ಲಿ ಸಿದ್ದಾರ್ಥ್ ಡಿ.ವೈ. ಪಾಟೀಲ ಅಕಾಡೆಮಿ ಎದುರಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದರು. ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಅಖಿಲ ಭಾರತ ಟೂರ್ನಿಯಲ್ಲಿ 65ರ ಸರಾಸರಿಯಲ್ಲಿ ಒಟ್ಟು 452 ರನ್ ಗಳಿಸಿದ್ದರು. ಸರ್ ಮಿರ್ಜಾ ಇಸ್ಮಾಯಿಲ್ ಶೀಲ್ಡ್ ಟೂರ್ನಿಯಲ್ಲಿ 55.40ರ ಸರಾಸರಿಯಲ್ಲಿ ಒಟ್ಟು 554 ರನ್ ಕಲೆ ಹಾಕಿದ್ದರು. ಮೊದಲ ಡಿವಿಷನ್ ಟೂರ್ನಿಯಲ್ಲಿ 700ಕ್ಕೂ ಹೆಚ್ಚು ರನ್ ಹೊಡೆದಿದ್ದರು.
ಯೋಜನೆಗೆ ತಕ್ಕ ಆಟ:
‘ನನ್ನ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ನಂಬಿಕೆಯಿತ್ತು. ಆದ್ದರಿಂದ ಆರಂಭದಲ್ಲಿ ರನ್ ಗಳಿಸುವುದಕ್ಕಿಂತ ಹೆಚ್ಚಾಗಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಬೇಕು ಎನ್ನುವ ಯೋಜನೆ ರೂಪಿಸಿದ್ದೆ. ಸಣ್ಣ ಮೊತ್ತವನ್ನು ಶತಕವನ್ನಾಗಿ ಪರಿವರ್ತಿಸಲು ತಾಳ್ಮೆಯಿಂದ ಆಡಿದೆ. ನನ್ನ ಯೋಜನೆಗೆ ಅನುಗುಣವಾಗಿ ಆಡಿದ್ದರಿಂದ ಅಂದುಕೊಂಡಂತೆಯೇ ಶತಕ ಹೊಡೆದೆ’ ಎಂದು ಸಿದ್ದಾರ್ಥ್ ಹೇಳಿದರು.
‘ಕರ್ನಾಟಕ ತಂಡದಲ್ಲಿ ಸ್ಥಾನ ಗಳಿಸಿಕೊಳ್ಳಲು ಸಾಕಷ್ಟು ಪೈಪೋಟಿಯಿದೆ. ಸಿಕ್ಕ ಅವಕಾಶ ಬಳಸಿಕೊಳ್ಳಬೇಕಾದ ಸವಾಲು ಕೂಡ ನಮ್ಮ ಮುಂದಿದೆ. ಆದ್ದರಿಂದ ಎಚ್ಚರಿಕೆಯಿಂದ ಆಡಿದೆ. ಮುಂದಿನ ಪ್ರತಿ ಪಂದ್ಯದಲ್ಲೂ ಇದೇ ರೀತಿ ಆಡುತ್ತೇನೆ’ ಎಂದು ಕೆನರಾ ಬ್ಯಾಂಕ್ ಉದ್ಯೋಗಿಯಾಗಿರುವ ಸಿದ್ದಾರ್ಥ್ ಭರವಸೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.