ADVERTISEMENT

KAR vs TN: ಕರ್ನಾಟಕ–ತಮಿಳುನಾಡು ಸಮಬಲದ ಹೋರಾಟ: ಬೌಲಿಂಗ್‌ನಲ್ಲೂ ಗೌತಮ್ ಕಮಾಲ್

ರಣಜಿ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 11:50 IST
Last Updated 10 ಡಿಸೆಂಬರ್ 2019, 11:50 IST
ಐಪಿಎಲ್ ಪಂದ್ಯ ವೇಳೆ ಕೆ.ಗೌತಮ್‌
ಐಪಿಎಲ್ ಪಂದ್ಯ ವೇಳೆ ಕೆ.ಗೌತಮ್‌   

ದಿಂಡಿಗಲ್:ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಸಮಬಲದ ಹೋರಾಟ ನಡೆಸಿವೆ. ಮೊದಲ ಇನಿಂಗ್ಸ್‌ನಲ್ಲಿ ಕರುಣ್‌ ನಾಯರ್‌ ಬಳಗ ಕಲೆ ಹಾಕಿದ್ದ 336 ರನ್‌ಗಳಿಗೆ ಪ್ರತಿಯಾಗಿ ಬ್ಯಾಟಿಂಗ್‌ ಆರಂಭಿಸಿರುವ ತಮಿಳುನಾಡು, 4 ವಿಕೆಟ್‌ ಕಳೆದುಕೊಂಡು 165 ರನ್‌ ಗಳಿಸಿದೆ. ಹೀಗಾಗಿ ಇನಿಂಗ್ಸ್‌ ಹಿನ್ನಡೆ ತಪ್ಪಿಸಿಕೊಳ್ಳಲು ಎರಡೂ ತಂಡಗಳಿಗೆ ಸಮಾನ ಅವಕಾಶವಿದೆ.

ಇಲ್ಲಿನಎನ್‌.ಪಿ.ಆರ್. ಕಾಲೇಜು ಮೈದಾನದಲ್ಲಿ ಸೋಮವಾರ ಆರಂಭವಾದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಕೆ.ಗೌತಮ್‌ ಬೌಲಿಂಗ್‌ನಲ್ಲಿಯೂ ಕಮಾಲ್‌ ಮಾಡಿದರು. ಮೊದಲ ವಿಕೆಟ್‌ಗೆ 81 ರನ್‌ ಗಳಿಸಿ ಸುಸ್ಥಿತಿಯಲ್ಲಿದ್ದ ತಮಿಳುನಾಡು ತಂಡದ ಆರಂಭಿಕ ಜೋಡಿಯನ್ನು ಅವರು ಪೆವಿಲಿಯನ್‌ಗೆ ಅಟ್ಟಿದರು. 74 ಎಸೆತಗಳಲ್ಲಿ 32 ರನ್‌ ಗಳಿಸಿದ್ದ ಮುರುಳಿ ವಿಜಯ್‌ ಹಾಗು 75 ಎಸೆತಗಳಲ್ಲಿ 47 ರನ್ ಕಲೆಹಾಕಿದ್ದ ಅಭಿನವ್‌ ಮುಕುಂದ್‌ ತಂಡದ ಮೊತ್ತ 82 ಆಗುವುದರೊಳಗೆ ಔಟಾದರು.

ಬಳಿಕ ಬಂದ ನಾಯಕ ವಿಜಯ್‌ ಶಂಕರ್‌ (12) ಹೆಚ್ಚು ಹೊತ್ತು ನಿಲ್ಲಲು ಬಿಡದ ಗೌತಮ್‌, ಮೊದಲ ಮೂರೂ ವಿಕೆಟ್‌ಗಳನ್ನು ಕಬಳಿಸಿ ಸಂಭ್ರಮಿಸಿದರು. ತಾಳ್ಮೆಯಿಂದ ಬ್ಯಾಟ್‌ ಬೀಸುತ್ತಿದ್ದ ಬಾಬಾ ಅಪರಾಜಿತ್ (32) ವಿಕೆಟ್‌ ಪಡೆದ ರೋನಿತ್‌ ಮೋರೆ, ಹೋರಾಟವನ್ನು ಸಮಬಲಗೊಳಿಸಿದರು.

ಸದ್ಯ ಎರಡನೇ ದಿನದಾಟ ಮುಕ್ತಾಯವಾಗಿದ್ದು, ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಇನಿಂಗ್ಸ್‌ ಮುನ್ನಡೆ ಸಾಧಿಸಲು ಉಳಿದಿರುವ 6 ವಿಕೆಟ್‌ಗಳಿಂದ 171ರನ್‌ ಗಳಿಸಬೇಕಿದೆ. ಅನುಭವಿ ದಿನೇಶ್‌ ಕಾರ್ತಿಕ್‌ (23) ಹಾಗೂ ಎನ್‌.ಜಗದೀಶನ್‌ (6) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು
ಕರ್ನಾಟಕ ಮೊದಲ ಇನಿಂಗ್ಸ್‌: 336ಕ್ಕೆ ಆಲೌಟ್

ದೇವದತ್ತ ಪಡಿಕ್ಕಲ್ 78 ರನ್‌, ಪವನ್‌ ದೇಶಪಾಂಡೆ 65, ಕೆ. ಗೌತಮ್‌ 51, ಮಯಂಕ್ ಅಗರವಾಲ್‌ 43
ಆರ್‌. ಅಶ್ವಿನ್‌ಗೆ 79ಕ್ಕೆ 4 ವಿಕೆಟ್‌
ಮಣಿಮಾರನ್ ಸಿದ್ದಾರ್ಥ್‌ 47ಕ್ಕೆ 2 ವಿಕೆಟ್‌
ಕೃಷ್ಣಮೂರ್ತಿ ವಿಘ್ನೇಶ್ 55ಕ್ಕೆ 2 ವಿಕೆಟ್‌
ಬಾಬಾ ಅಪರಾಜಿತ್ 24ಕ್ಕೆ 1 ವಿಕೆಟ್

ತಮಿಳುನಾಡು ಮೊದಲ ಇನಿಂಗ್ಸ್‌: 4 ವಿಕೆಟ್‌ಗೆ 165ಕ್ಕೆ ಆಲೌಟ್
ಅಭಿನವ್‌ ಮುಕುಂದ್‌47 ರನ್‌, ಬಾಬಾ ಅಪರಾಜಿತ್ 37, ಮುರುಳಿ ವಿಜಯ್‌ 32 ರನ್‌
ಕೆ. ಗೌತಮ್‌ 61ಕ್ಕೆ 3ವಿಕೆಟ್‌
ರೋನಿತ್‌ ಮೋರೆ 40ಕ್ಕೆ 1ವಿಕೆಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.