ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌: ಪೈಪೋಟಿ ಬಳಿಕ ನೀರಸ ಅಂತ್ಯ

ಕರ್ನಾಟಕ– ಹಿಮಾಚಲ ಪ್ರದೇಶ ನಡುವಣ ಪಂದ್ಯ ಡ್ರಾ

ಮಹಮ್ಮದ್ ನೂಮಾನ್
Published 28 ಡಿಸೆಂಬರ್ 2019, 19:46 IST
Last Updated 28 ಡಿಸೆಂಬರ್ 2019, 19:46 IST
ವಿಕೆಟ್‌ ಪಡೆದ ಕರ್ನಾಟಕದ ವಿ.ಕೌಶಿಕ್‌, ಸಹ ಆಟಗಾರರ ಜತೆ ಸಂತಸ ಹಂಚಿಕೊಂಡರು– ಪ್ರಜಾವಾಣಿ ಚಿತ್ರ/ ಸವಿತಾ ಬಿ.ಆರ್‌
ವಿಕೆಟ್‌ ಪಡೆದ ಕರ್ನಾಟಕದ ವಿ.ಕೌಶಿಕ್‌, ಸಹ ಆಟಗಾರರ ಜತೆ ಸಂತಸ ಹಂಚಿಕೊಂಡರು– ಪ್ರಜಾವಾಣಿ ಚಿತ್ರ/ ಸವಿತಾ ಬಿ.ಆರ್‌   

ಮೈಸೂರು: ಉಭಯ ತಂಡಗಳ ಆಟಗಾರರಲ್ಲಿ ಗೆಲುವಿನ ತುಡಿತ ಕಂಡುಬರಲಿಲ್ಲ. ಅಂತಿಮ ದಿನ ಅಲ್ಪ ಪೈಪೋಟಿಯ ಬಳಿಕ ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ತಂಡಗಳು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯವನ್ನು ನೀರಸವಾಗಿ ಡ್ರಾ ಮಾಡಿಕೊಂಡವು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ಗೆಲುವಿಗೆ 183 ರನ್‌ಗಳ ಗುರಿ ಪಡೆದಿದ್ದ ಹಿಮಾಚಲ ಪ್ರದೇಶ, ಎರಡನೇ ಇನಿಂಗ್ಸ್‌ನಲ್ಲಿ 16 ಓವರ್‌ ಗಳಲ್ಲಿ 2 ವಿಕೆಟ್‌ಗೆ 34 ರನ್‌ ಗಳಿಸಿದ್ದಾಗ ಪಂದ್ಯವನ್ನು ಕೊನೆಗೊಳಿಸಲಾಯಿತು. ಚಹಾ ವಿರಾಮದ ಬಳಿಕ ಇನ್ನೂ 34 ಓವರ್‌ಗಳ ಆಟ ಬಾಕಿಯಿದ್ದವು. ಆದರೆ ಎರಡೂ ತಂಡಗಳು ಜಯ ಗಳಿಸಲು ಪ್ರಯತ್ನಿಸಲಿಲ್ಲ.

ಮೊದಲ ಇನಿಂಗ್ಸ್‌ ಮುನ್ನಡೆ ಪಡೆದ ಹಿಮಾಚಲ ಪ್ರದೇಶ ಮೂರು ಪಾಯಿಂಟ್‌ ಪಡೆದರೆ, ಕರ್ನಾಟಕ ಒಂದು ಪಾಯಿಂಟ್‌ ಗಳಿಸಿತು. ರಾಜ್ಯ ತಂಡ ಈ ಋತುವಿನಲ್ಲಿ ಮೂರು ಪಂದ್ಯಗಳಿಂದ ಒಟ್ಟು 10 ಪಾಯಿಂಟ್‌ ಕಲೆಹಾಕಿದ್ದು, ಮುಂದಿನ ಪಂದ್ಯದಲ್ಲಿ (ಜ.3 ರಿಂದ 6) ಮುಂಬೈ ತಂಡವನ್ನು ಎದುರಿಸಲಿದೆ.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ 114 ರನ್‌ ಗಳ ಹಿನ್ನಡೆ ಅನುಭವಿಸಿದ್ದ ಕರುಣ್‌ ನಾಯರ್‌ ಬಳಗ ಎರಡನೇ ಇನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಆಲೌಟಾಯಿತು. ಆ ಮೂಲಕ 182 ರನ್‌ಗಳ ಮುನ್ನಡೆ ಸಾಧಿಸಿತು.

50 ಓವರ್‌ಗಳಲ್ಲಿ 183 ರನ್‌ಗಳ ಗುರಿ ಬೆನ್ನಟ್ಟಿದ ಪ್ರವಾಸಿ ತಂಡಕ್ಕೆ ವಿ.ಕೌಶಿಕ್‌ ಆಘಾತ ನೀಡಿದರು. ಬಿಗುವಾದ ಬೌಲಿಂಗ್‌ ನಡೆಸಿದ ಅವರು ಪ್ರಿಯಾಂಶು ಖಂಡೂರಿ ಮತ್ತು ಸುಮೀತ್‌ ವರ್ಮಾ ಅವರನ್ನು ಬೇಗನೇ ಔಟ್‌ ಮಾಡಿದರು. ಖಂಡೂರಿ ಅವರು ವಿಕೆಟ್‌ ಕೀಪರ್ ಬಿ.ಆರ್‌.ಶರತ್‌ಗೆ ಕ್ಯಾಚಿತ್ತರೆ, ಸುಮೀತ್‌ ಅವರನ್ನು ಸ್ಕ್ವೇರ್‌ಲೆಗ್‌ ಕ್ಷೇತ್ರದಲ್ಲಿದ್ದ ಡಿ.ನಿಶ್ಚಲ್‌ ಸೊಗಸಾದ ಕ್ಯಾಚ್‌ ಪಡೆದು ಔಟ್‌ ಮಾಡಿದರು. ಬೇಗನೇ ಎರಡು ವಿಕೆಟ್‌ ಕಳೆದುಕೊಂಡ ಹಿಮಾಚಲ ಪ್ರದೇಶ ಗೆಲುವಿನ ಪ್ರಯತ್ನ ಕೈಬಿಟ್ಟಿತು.

ಪ್ರಶಾಂತ್‌ ಚೋಪ್ರಾ ಮತ್ತು ಆಕಾಶ್‌ ವಸಿಷ್ಠ್ ರಕ್ಷಣಾತ್ಮಕವಾಗಿ ಬ್ಯಾಟ್‌ ಮಾಡಿದರು. ಒಂದು ರನ್‌ ಗಳಿಸಿದ್ದಾಗ ಆಕಾಶ್‌ಗೆ ಜೀವದಾನ ಲಭಿಸಿತ್ತು. ಕೌಶಿಕ್‌ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ಆರ್‌.ಸಮರ್ಥ್‌ ಕ್ಯಾಚ್‌ ಕೈಚೆಲ್ಲಿದ್ದರು. 11 ಓವರ್‌ಗಳನ್ನು ಎದುರಿಸಿದ ಈ ಜೋಡಿ ಚಹಾ ವಿರಾಮದವರೆಗೆ ಹೆಚ್ಚಿನ ವಿಕೆಟ್‌ ಬೀಳದಂತೆ ನೋಡಿಕೊಂಡಿತು. ಇದರಿಂದ ಕರ್ನಾಟಕದ ಗೆಲುವಿನ ಪ್ರಯತ್ನಕ್ಕೆ ಹಿನ್ನಡೆಯಾಯಿತು.

ಶತಕ ವಂಚಿತ ಪಡಿಕ್ಕಲ್: ಇದಕ್ಕೂ ಮುನ್ನ ಕರ್ನಾಟಕ ಮೂರು ವಿಕೆಟ್‌ಗೆ 191 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿತ್ತು. ದೇವದತ್ತ ಪಡಿಕ್ಕಲ್‌ ಮತ್ತು ಕರುಣ್‌ ನಾಯರ್‌ ಕ್ರಮವಾಗಿ 69 ಹಾಗೂ 62 ರನ್‌ಗಳೊಂದಿಗೆ ಬ್ಯಾಟಿಂಗ್‌ ಮುಂದುವರಿಸಿದ್ದರು. ಪಡಿಕ್ಕಲ್ ಮೊದಲ ಓವರ್‌ನಿಂದಲೇ ಲೀಲಾ ಜಾಲವಾಗಿ ರನ್‌ ಗಳಿಸಿದರೆ, ಕರುಣ್‌ ಪರದಾಡಿದರು.

ಹಿಂದಿನ ದಿನದ ಮೊತ್ತಕ್ಕೆ ಕೇವಲ ಎರಡು ರನ್‌ ಸೇರಿಸಿ (64, 160 ಎಸೆತ, 4 ಬೌಂ) ವೈಭವ್‌ ಅರೋರಾಗೆ ವಿಕೆಟ್‌ ಒಪ್ಪಿಸಿದರು.

ಶ್ರೇಯಸ್‌ ಗೋಪಾಲ್‌ ಬಂದಷ್ಟೇ ವೇಗದಲ್ಲಿ ವಾಪಸಾದರು. ಪಡಿಕ್ಕಲ್‌ (99 ರನ್, 201 ಎಸೆತ, 8 ಬೌಂ) ಅವರು ಶತಕಕ್ಕೆ ಕೇವಲ ಒಂದು ರನ್‌ ಬೇಕಿದ್ದಾಗ ಅರೋರ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಜೆ.ಸುಚಿತ್‌ ಅವರನ್ನು ಔಟ್ ಮಾಡಿದ ರಿಷಿ ಧವನ್‌ ಐದು ವಿಕೆಟ್‌ ಸಾಧನೆ ಮಾಡಿದರು. ಏಳನೇ ವಿಕೆಟ್‌ ಬಿದ್ದಾಗ ಕರ್ನಾಟಕ ಕೇವಲ 127 ರನ್‌ಗಳ ಮುನ್ನಡೆಯಲ್ಲಿತ್ತು.

ಆದರೆ ಬಿ.ಆರ್‌.ಶರತ್ (42, 82 ಎಸೆತ, 5 ಬೌಂ) ಮತ್ತು ಅಭಿಮನ್ಯು ಮಿಥುನ್ (22, 54 ಎಸೆತ) ಎಂಟನೇ ವಿಕೆಟ್‌ಗೆ 46 ರನ್‌ ಸೇರಿಸಿ ಆತಿಥೇಯರ ಮುನ್ನಡೆ ಹಿಗ್ಗಿಸಿದರು. ಭೋಜನ ವಿರಾಮದ ವೇಳೆಗೆ 7 ವಿಕೆಟ್‌ಗೆ 283 ರನ್‌ ಗಳಿಸಿದ್ದ ತಂಡ ಆ ಬಳಿಕ ಬೆನ್ನುಬೆನ್ನಿಗೆ ಮೂರು ವಿಕೆಟ್‌ ಕಳೆದುಕೊಂಡು ಆಲೌಟ್‌ ಆಯಿತು.

ದಕ್ಕದ 200ನೇ ಗೆಲುವು
ರಣಜಿ ಕ್ರಿಕೆಟ್‌ನಲ್ಲಿ 200ನೇ ಜಯ ಸಾಧಿಸುವ ಕರ್ನಾಟಕದ ಕನಸು ಈ ಪಂದ್ಯದಲ್ಲೂ ಈಡೇರಲಿಲ್ಲ. ಹಿಮಾಚಲ ಪ್ರದೇಶ ವಿರುದ್ಧ ನಡೆದದ್ದು 442ನೇ ಪಂದ್ಯವಾಗಿತ್ತು. ಕರ್ನಾಟಕ 199 ಜಯ ಸಾಧಿಸಿದ್ದು, 177 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 66 ರಲ್ಲಿ ಸೋಲು ಕಂಡಿದೆ.

*
ಪಿಚ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿರಲಿಲ್ಲ. ಚಹಾ ವಿರಾಮಕ್ಕೆ ಮುನ್ನ ಎದುರಾಳಿಗಳ ಇನ್ನೆರಡು ವಿಕೆಟ್‌ ಪಡೆದಿದ್ದಲ್ಲಿ, ಗೆಲುವಿಗೆ ಪ್ರಯತ್ನಿಸುತ್ತಿದ್ದೆವು.
-ಕರುಣ್‌ ನಾಯರ್, ಕರ್ನಾಟಕ ತಂಡದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.