ADVERTISEMENT

ರಣಜಿ ಟ್ರೋಫಿ | ಅಭಿನವ್, ಮನೀಷ್ ಉತ್ತಮ ಬ್ಯಾಟಿಂಗ್; ಮಯಂಕ್ ಬಳಗಕ್ಕೆ ಮೂರು ಅಂಕ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 14:18 IST
Last Updated 16 ನವೆಂಬರ್ 2024, 14:18 IST
ಅಭಿನವ್ ಮನೋಹರ್ 
ಅಭಿನವ್ ಮನೋಹರ್    

ಲಖನೌ: ಆತಿಥೇಯ ಉತ್ತರಪ್ರದೇಶ ಎದುರು ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಪಡೆದ ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ ಅಧಿಕಾರಯುತವಾಗಿ ಆಡದ ಕಾರಣ ಗೆಲುವು ಕೈತಪ್ಪಿತು. ಡ್ರಾ ಆದ ಪಂದ್ಯದಲ್ಲಿ 3 ಅಂಕ ಪಡೆದಿದ್ದಷ್ಟೇ ಮಯಂಕ್ ಅಗರವಾಲ್ ಬಳಗದ ಸಾಧನೆ.  

ಏಕನಾ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಉತ್ತರಪ್ರದೇಶವು 261 ರನ್‌ಗಳ ಗೆಲುವಿನ ಗುರಿ ಒಡ್ಡಿತ್ತು. ಊಟಕ್ಕಿಂತ ಮುನ್ನವೇ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಸಂಜೆಯವರಿಗೂ ಸಮಯವೂ ಇತ್ತು. ನಿಕಿನ್ ಜೋಸ್ (48; 84ಎ) ಮತ್ತು ಮಯಂಕ್ ಅಗರವಾಲ್ (37; 46ಎ) ಉತ್ತಮ ಆರಂಭ ನೀಡಿದರು. ಆದರೆ ದೀರ್ಘ ಇನಿಂಗ್ಸ್‌ ಆಡುವಲ್ಲಿ ಯಶಸ್ವಿಯಾಗಲಿಲ್ಲ. ಸ್ಮರಣ್ ಆರ್ ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಕೃಷ್ಣನ್ ಶ್ರೀಜಿತ್ ಕೂಡ ಬೇಗನೆ ನಿರ್ಗಮಿಸಿದರು. ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಶ್ರೇಯಸ್ ಗೋಪಾಲ್ ಕೂಡ 1 ರನ್ ಗಳಿಸಿ ಔಟಾದರು. 

ಇದರಿಂದಾಗಿ ಗೆಲುವಿನ ಅವಕಾಶ ದೂರ ಸರಿಯಿತು. ಆತಿಥೇಯ ಬೌಲರ್‌ಗಳು ನಿರಂತರವಾಗಿ ಉತ್ತಮ ದಾಳಿ ಸಂಘಟಿಸಿ ಒತ್ತಡ ಹೇರಿದರು. ವಿಪ್ರಜ್ ನಿಗಮ್ ಎರಡು ವಿಕೆಟ್ ಕೂಡ ಕಿತ್ತರು. ಇದರಿಂದಾಗಿ ಕ್ರೀಸ್‌ನಲ್ಲಿ ಇದ್ದ ಮನೀಷ್ ಪಾಂಡೆ (ಔಟಾಗದೆ 36;  78ಎ)  ಮತ್ತು ಅಭಿನವ್ ಮನೋಹರ್ (ಔಟಾಗದೆ 31; 72ಎ) ಅವರು ವಿಕೆಟ್ ಪತನಕ್ಕೆ ತಡೆಯೊಡ್ಡಿದರು. ಅಭಿನವ್  ಉತ್ತಮ ಎಸೆತಗಳನ್ನು ಗೌರವಿಸಿದರು. ಬೌನ್ಸರ್‌ಗಳಿಂದ ತಪ್ಪಿಸಿಕೊಂಡರು. ಆದರೆ, ಅವಕಾಶ ಸಿಕ್ಕಾಗಲೆಲ್ಲ ಚೆಂಡನ್ನು ಬೌಂಡರಿಗೆರೆ ದಾಟಿಸಲೂ ಹಿಂಜರಿಯಲಿಲ್ಲ. ಇನ್ನೊಂದೆಡೆ ಮನೀಷ್ ಕೂಡ  ಇದೇ ನೀತಿ ಅನುಸರಿಸಿದರು. ಇದರಿಂದಾಗಿ ತಂಡವು ಸೋಲಿನಿಂದ ತಪ್ಪಿಸಿಕೊಂಡಿತು. ಉತ್ತರಪ್ರದೇಶ ಕೂಡ ನಿರುಮ್ಮಳವಾಯಿತು. 

ADVERTISEMENT

ಆತಿಥೇಯ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಸಂಪೂರ್ಣವಾಗಿ ಪಾರಮ್ಯ ಮೆರೆಯಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 89 ರನ್ ಗಳಿಸಿದ್ದ ತಂಡವು  2ನೇ ಇನಿಂಗ್ಸ್‌ನಲ್ಲಿ 134 ಓವರ್‌ಗಳಲ್ಲಿ 446 ರನ್ ಗಳಿಸಿತು. ಕೊನೆಯ ದಿನದಾಟದ ಬೆಳಿಗ್ಗೆ ಸೌರಭ್ ಕುಮಾರ್ (54 ರನ್) ಅರ್ಧಶತಕ ಗಳಿಸಿದರು. ಆದಿತ್ಯ (41 ರನ್) ಮತ್ತು ವಿಪ್ರಜ್ ನಿಗಮ್ (26 ರನ್) ಕೂಡ ಉತ್ತಮವಾಗಿ ಬ್ಯಾಟ್ ಮಾಡಿದರು. ಶುಕ್ರವಾರ ಮಾಧವ್ ಕೌಶಿಕ್ ಮತ್ತು ಆರ್ಯನ್ ಜುಯಾಲ್ ಶತಕ ದಾಖಲಿಸಿದ್ದರು. ಇದರಿಂದಾಗಿ ಕರ್ನಾಟಕದ ಬೌಲರ್‌ಗಳೂ ಬಸವಳಿದರು. ಈ ನಡುವೆಯೂ ಶ್ರೇಯಸ್ ಗೋಪಾಲ್ 122ಕ್ಕೆ5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 

ಕರ್ನಾಟಕ ತಂಡಕ್ಕೆ ಈಗ ನಾಕೌಟ್ ಹಾದಿಯೂ ಸರಳವಾಗಿಲ್ಲ. ಕರ್ನಾಟಕದ ಮೊದಲೆರಡು ಪಂದ್ಯಗಳು ಮಳೆಗೆ ಕೊಚ್ಚಿಹೋಗಿದ್ದವು. ಮೂರನೇಯದ್ದರಲ್ಲಿ ಬಿಹಾರ ವಿರುದ್ಧ ಜಯಿಸಿತ್ತು. ಬಂಗಾಳ ವಿರುದ್ಧ ಡ್ರಾ ಮಾಡಿಕೊಂಡು 1 ಅಂಕ ಪಡೆದಿತ್ತು. ಆದರೆ ಇಲ್ಲಿ ಗೆಲುವಿನ ಅವಕಾಶವನ್ನು ಕೈಚೆಲ್ಲಿತು. 

ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಪಂಜಾಬ್ ಮತ್ತು ಹರಿಯಾಣ ತಂಡಗಳನ್ನು ಎದುರಿಸಬೇಕಿದೆ. ಹರಿಯಾಣ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಂಜಾಬ್ 11 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.  ಈ ಎರಡೂ ಪಂದ್ಯಗಳು 2025ರ ಜನವರಿ–ಫೆಬ್ರುವರಿಯಲ್ಲಿ ನಡೆಯಲಿವೆ. 

ಶ್ರೇಯಸ್ ಗೋಪಾಲ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.