ಅಹಮದಾಬಾದ್: ಮೊದಲ ಪಂದ್ಯದ ವೈಫಲ್ಯವನ್ನು ಸರಿದೂಗಿಸುವಂತೆ ಆಡಿದ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಬಿರುಸಿನ ಶತಕ (109) ಬಾರಿಸಿದರು. ಗುಜರಾತ್ ವಿರುದ್ಧ ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದ ಎರಡನೇ ದಿನವಾದ ಶನಿವಾರ ಬ್ಯಾಟರ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಕರ್ನಾಟಕ ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು.
ಗುಜರಾತ್ ತಂಡದ 266 ರನ್‌ಗಳಿಗೆ ಉತ್ತರವಾಗಿ ದಿನದಾಟ ಮುಗಿದಾಗ ಕರ್ನಾಟಕ 5 ವಿಕೆಟ್‌ಗೆ 328 ರನ್ ಗಳಿಸಿದೆ. ಈಗಾಗಲೇ 62 ರನ್ ಮುನ್ನಡೆ ಹೊಂದಿರುವ ಕರ್ನಾಟಕ ನಾಲ್ಕು ವಿಕೆಟ್‌ಗಳನ್ನು ಹೊಂದಿದ್ದು, ಒತ್ತಡ ಹೇರುವ ಸ್ಥಿತಿಯಲ್ಲಿದೆ. ಪಂಜಾಬ್ ವಿರುದ್ಧ ಎರಡೂ ಸರದಿಗಳಲ್ಲಿ ರನ್ ಖಾತೆ ತೆರೆಯುವ ಮೊದಲೇ ನಿರ್ಗಮಿಸಿದ್ದ ಮಯಂಕ್, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆತಿಥೇಯರ ದುರ್ಬಲ ದಾಳಿಯನ್ನು ದಂಡಿಸಿ ಮೊದಲ ದರ್ಜೆ ಕ್ರಿಕೆಟ್‌ನಲ್ಲಿ 16ನೇ ಶತಕ ದಾಖಲಿಸಿದರು. 124 ಎಸೆತಗಳ ಅವರ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್, 17 ಬೌಂಡರಿಗಳಿದ್ದವು.
ಅನುಭವಿ ಮನೀಷ್ ಪಾಂಡೆ (ಬ್ಯಾಟಿಂಗ್ 56, 94 ಎ, 4x4, 6x2) ಜೊತೆ ಮೊದಲ ರಣಜಿ ಪಂದ್ಯ ಆಡುತ್ತಿರುವ ವಿಕೆಟ್ ಕೀಪರ್ ಸುಜಯ್ ಸತೇರಿ (ಬ್ಯಾಟಿಂಗ್ 24, 35ಎ) ಅವರು ಭಾನುವಾರ ಆಟ ಮುಂದುವರಿಸಲಿದ್ದು, ಕರ್ನಾಟಕ ಮುನ್ನಡೆ ಉಬ್ಬಿಸುವ ಗುರಿಯಲ್ಲಿದೆ.
ರವಿಕುಮಾರ್ ಸಮರ್ಥ್ (60, 108ಎ, 4x7) ಜೊತೆ ಮೊದಲ ವಿಕೆಟ್‌ಗೆ ಮಯಂಕ್ 172 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಒದಗಿಸಿದರು. ಲಂಚ್ ವೇಳೆಗೇ ಕರ್ನಾಟಕ 147 ರನ್ ಗಳಿಸಿದ್ದು, ದೊಡ್ಡ ಮೊತ್ತದ ಸೂಚನೆ ನೀಡಿತು. ಆದರೆ 172ರ ಮೊತ್ತಕ್ಕೆ ಆರಂಭ ಆಟಗಾರರಿಬ್ಬರೂ ನಿರ್ಗಮಿಸಿದರು. 39ನೇ ಓವರ್‌ನಲ್ಲಿ ಸಮರ್ಥ್, ಎಡಗೈ ಸ್ಪಿನ್ನರ್ ಸಿದ್ಧಾರ್ಥ ದೇಸಾಯಿ ಅವರ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಆರು ಎಸೆತಗಳ ತರುವಾಯ ನಾಯಕ ಚಿಂತನ್ ಗಜ ಬೌಲಿಂಗ್‌ನಲ್ಲಿ ಮಯಂಕ್ ಅವರು ವಿಕೆಟ್ ಕೀಪರ್ ಹೆಟ್ ಪಟೇಲ್‌ಗೆ ಕ್ಯಾಚಿತ್ತರು.
ದೇವದತ್ತ ಪಡಿಕ್ಕಲ್ (42) ಮತ್ತು ನಿಕಿನ್ ಜೋಸ್ ನಡುವಣ ಮೂರನೇ ವಿಕೆಟ್‌ಗೆ 65 ರನ್‌ಗಳು ಬಂದವು. ಪಡಿಕ್ಕಲ್, ಆಫ್ ಸ್ಪಿನ್ನರ್ ರಿಂಕೇಶ್ ವಘೇಲಾ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಚೆಂಡನ್ನು ವಿಕೆಟ್‌ಗೆ ಎಳೆದುಕೊಂಡರು.
ಗುಜರಾತ್ ಕಡೆ ವೇಗದ ಬೌಲರ್ ಚಿಂತನ್ ಗಜ (43ಕ್ಕೆ2) ಬಿಟ್ಟರೆ ಉಳಿದ ಬೌಲರ್‌ಗಳು ಪರಿಣಾಮಕಾರಿಯಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.