ಇಂದೋರ್: ಒಂದು ದಶಕದಿಂದ ರಣಜಿ ಟ್ರೋಫಿ ಗೆಲುವಿಗಾಗಿ ಪರಿತಪಿಸಿರುವ ಕರ್ನಾಟಕ ತಂಡವು ಶುಕ್ರವಾರ ಮಧ್ಯಪ್ರದೇಶದ ಎದುರು ಈ ಸಲದ ಋತುವಿನಲ್ಲಿ ಅಭಿಯಾನ ಆರಂಭಿಸಲಿದೆ.
ಯುವ ಆಟಗಾಠರು ಹೆಚ್ಚಿನ ಸಂಖ್ಯೆಯಲ್ಲಿರುವ ತಂಡವನ್ನು ಅನುಭವಿ ಮಯಂಕ್ ಅಗರವಾಲ್ ಮುನ್ನಡೆಸುತ್ತಿದ್ದಾರೆ. ಮನೀಷ್ ಪಾಂಡೆ ಉಪನಾಯಕರಾಗಿದ್ದಾರೆ. ಇಬ್ಬರೂ ದಶಕದ ಹಿಂದೆ ಎರಡು ಸಲ ರಣಜಿ ಟ್ರೋಫಿ ಜಯದ ಸಿಹಿಯನ್ನು ಉಂಡವರು. ಆದರೆ ಅಲ್ಲಿಂದ ಈಚೆಗೆ ಹಲವು ಬಾರಿ ನಾಕೌಟ್ ಹಂತದಲ್ಲಿಯೇ ತಂಡ ಎಡವಿರುವ ಕಹಿಯನ್ನೂ ಇವರಿಬ್ಬರೂ ಅನುಭವಿಸಿದ್ದಾರೆ.
ಭಾರತ ತಂಡವನ್ನು ಪ್ರತಿನಿಧಿಸಿರು ಅನುಭವ ಹೊಂದಿರುವ ಮಯಂಕ್ ಮತ್ತು ಮನೀಷ್ ಅವರು ದೇಶಿ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನ ಮತ್ತೊಂದು ಬಾರಿ ರಣಜಿ ಕಿರೀಟ ಧರಿಸುವ ಛಲದಲ್ಲಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕ ತಂಡವು ವಿಜಯ ಹಜಾರೆ ಟ್ರೋಫಿ (2017–18, 2019–20) ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ (2018–19) ಗಳನ್ನು ಜಯಿಸಿದೆ. ಆದರೆ ‘ದೇಶಿ ಕ್ರಿಕೆಟ್ ರಾಜ’ನನ್ನು ಒಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ 3 ಕ್ವಾರ್ಟರ್‌ಫೈನಲ್ ಮತ್ತು 3 ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಒಂದು ಬಾರಿಯೂ ಫೈನಲ್ ಪ್ರವೇಶಿಸಲಿಲ್ಲ.
ಈ ಸಲ ಸಿ ಗುಂಪಿನಲ್ಲಿ ಆಡುತ್ತಿರುವ ಕರ್ನಾಟಕ ತಂಡವು ಮಧ್ಯಪ್ರದೇಶ, ಕೇರಳ, ಬಿಹಾರ, ಬಂಗಾಳ, ಉತ್ತರಪ್ರದೇಶ, ಪಂಜಾಬ್ ಮತ್ತು ಹರಿಯಾಣ ತಂಡಗಳನ್ನು ಎದುರಿಸಲಿದೆ. ಇದರಲ್ಲಿ ಯಾವುದೇ ತಂಡವನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಪ್ರತಿಯೊಂದು ಪಂದ್ಯವೂ ಮಯಂಕ್ ಬಳಗಕ್ಕೆ ಸವಾಲಾಗಲಿದೆ.
ತಂಡದಲ್ಲಿ ಮಯಂಕ್, ಮನೀಷ್ ಬಿಟ್ಟರೆ, ಶ್ರೇಯಸ್ ಗೋಪಾಲ್ ಹೆಚ್ಚು ಅನುಭವಿ ಆಟಗಾರರಾಗಿದ್ದಾರೆ. ವೇಗಿ ವಿದ್ವತ್ ಕಾವೇರಪ್ಪ ಗಾಯಗೊಂಡಿರುವುದರಿಂದ ಮೊದಲೆರಡು ಪಂದ್ಯಗಳಲ್ಲಿ ಆಡುವುದಿಲ್ಲ. ಪ್ರಸಿದ್ಧಕೃಷ್ಣ, ವೈಶಾಖ ವಿಜಯಕುಮಾರ್, ಆರ್. ಕೌಶಿಕ್ ಅವರು ವೇಗದ ವಿಭಾಗದ ಹೊಣೆ ನಿಭಾಯಿಸುವರು. ಸ್ಪಿನ್ ವಿಭಾಗದಲ್ಲಿ ಶ್ರೇಯಸ್ ಅವರೊಂದಿಗೆ ಆಲ್‌ರೌಂಡರ್ ಹಾರ್ದಿಕ್ ರಾಜ್ ಜೊತೆಗೂಡುವ ಸಾಧ್ಯತೆ ಇದೆ. ವಿಕೆಟ್‌ಕೀಪಿಂಗ್ ಹೊಣೆಯು ಸುಜಯ್ ಸತೇರಿ ಅಥವಾ ಲವನೀತ್ ಸಿಸೊಡಿಯಾ ಅವರಲ್ಲಿ ಒಬ್ಬರಿಗೆ ದಕ್ಕುವುದು ಖಚಿತ. ಮಯಂಕ್, ಮನೀಷ್, ನಿಕಿನ್ ಜೋಸ್ ಹಾಗೂ ದೇವದತ್ತ ಪಡಿಕ್ಕಲ್ ಅವರು ಲಯ ಕಾಪಾಡಿಕೊಳ್ಳುವುದು ಮಹತ್ವದ್ದಾಗಲಿದೆ. ಹೊಸಪ್ರತಿಭೆಗಳಾದ ಮೊಹಸಿನ್ ಖಾನ್, ಅಭಿಲಾಶ್ ಶೆಟ್ಟಿ, ಹೋದ ಬಾರಿ ಆಡಿದ್ದ ಕಿಶನ್ ಬೆದರೆ ಮತ್ತು ವಿದ್ಯಾಧರ್ ಪಾಟೀಲ ಅವರಿಗೆ ಮೊದಲ ಪಂದ್ಯದಲ್ಲಿ ಅವಕಾಶ ಸಿಗುವುದು ಖಚಿತವಿಲ್ಲ.
ಶುಭಂ ಶರ್ಮಾ ನಾಯಕತ್ವದ ಮಧ್ಯಪ್ರದೇಶ ತಂಡವೂ ಶುಭಾರಂಭದ ನಿರೀಕ್ಷೆಯಲ್ಲಿದೆ. ಬ್ಯಾಟರ್ ರಜತ್ ಪಾಟೀದಾರ್, ಆಲ್‌ರೌಂಡರ್ ವೆಂಕಟೇಶ್ ಅಯ್ಯರ್, ವೇಗಿ ಆವೇಶ್ ಖಾನ್, ಕುಲವಂತ್ ಖೆಜ್ರೊಲಿಯಾ, ಯಶ್ ದುಬೆ ಅವರ ಬಲವಿರುವುದರಿಂದ ತವರಿನ ಅಂಗಳದಲ್ಲಿ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ.
ಪಂದ್ಯ ಆರಂಭ: ಬೆಳಿಗ್ಗೆ 9.30
ಪ್ರಮುಖ ಅಂಶಗಳು
* ಮಯಂಕ್ ಅಗರವಾಲ್ ಇದೇ ಮೊದಲ ಸಲ ಮಧ್ಯಪ್ರದೇಶ ಎದುರು ನಾಯಕತ್ವ ವಹಿಸಲಿದ್ದಾರೆ.
* ಇಲ್ಲಿಯವರೆಗೂ 14 ಪ್ರತ್ಯೇಕ ತಂಡಗಳ ಎದುರು ನಾಯಕತ್ವ ವಹಿಸಿರುವ ಮಯಂಕ್ ಅಗರವಾಲ್
* ಮನೀಷ್ ಪಾಂಡೆ ಅವರು ಇನ್ನು 568 ರನ್ ಗಳಿಸಿದರೆ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕರ್ನಾಟಕದ ಆಟಗಾರನಾಗುವರು. ಬ್ರಿಜೇಷ್ ಪಟೇಲ್ (7126) ದಾಖಲೆ ಮುರಿಯುವರು
* ಮನೀಷ್ ಪಾಂಡೆ ಇನ್ನು 4 ಶತಕ ಗಳಿಸಿದರೆ ಬ್ರಿಜೇಷ್ ಪಟೇಲ್ ಅವರ 26 ಶತಕಗಳ ದಾಖಲೆ ಸರಿಗಟ್ಟುವರು
* ದೇವದತ್ತ ಪಡಿಕ್ಕಲ್ 17 ರನ್ ಗಳಿಸಿದರೆ ರಣಜಿ ಕ್ರಿಕೆಟ್‌ನಲ್ಲಿ 2 ಸಾವಿರ ರನ್ ಗಳಿಸಿದ ಆಟಗಾರನಾಗುವರು
* 2019–20ರಲ್ಲಿ ಶಿವಮೊಗ್ಗದಲ್ಲಿ ಕರ್ನಾಟಕ–ಮಧ್ಯಪ್ರದೇಶ ಮುಖಾಮುಖಿಯಾಗಿದ್ದವು. ಡ್ರಾ ಆಗಿದ್ದ ಪಂದ್ಯದಲ್ಲಿ ಮಧ್ಯಪ್ರದೇಶ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು.
* ಕರ್ನಾಟಕ ತಂಡವು ರಣಜಿ ಇತಿಹಾಸದಲ್ಲಿ 8 ಸಲ ಚಾಂಪಿಯನ್ 6 ಬಾರಿ ರನ್ನರ್ಸ್ ಅಪ್ ಆಗಿದೆ. ಮಧ್ಯಪ್ರದೇಶ 1 ಸಲ ಚಾಂಪಿಯನ್. ಅಂಕಿ ಸಂಖ್ಯೆ: ಚನ್ನಗಿರಿ ಕೇಶವಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.