ಬೆಂಗಳೂರು: ಶುಕ್ರವಾರ ಬೆಳಿಗ್ಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು ರಣಜಿ ಪಂದ್ಯವೋ ಅಥವಾ ಟ್ವೆಂಟಿ–20 ಪಂದ್ಯವೋ ಎಂದು ಕ್ರಿಕೆಟ್ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದು ಸುಳ್ಳಲ್ಲ. ಹಾಗಿತ್ತು ಮನೀಷ್ ಪಾಂಡೆಯ ಬ್ಯಾಟಿಂಗ್ ಅಬ್ಬರ!
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ರಾಜಸ್ಥಾನದ ಬೌಲರ್‌ಗಳ ಎಸೆತಗಳನ್ನು ಚಚ್ಚಿದ ಪಾಂಡೆ ಕರ್ನಾಟಕ ತಂಡಕ್ಕೆ 6 ವಿಕೆಟ್‌ಗಳ ಗೆಲುವಿನ ಕಾಣಿಕೆ ನೀಡಿದರು. ಅವರ ನಾಯಕತ್ವದ ಬಳಗವು ಸೆಮಿಫೈನಲ್ ಪ್ರವೇಶಿಸಿತು.
ಇಡೀ ಟೂರ್ನಿಯಲ್ಲಿ ರನ್ ಬರ ಎದುರಿಸಿದ್ದ ಕರುಣ್ ನಾಯರ್ (ಔಟಾಗದೆ 61; 129ಎಸೆತ, 6 ಬೌಂಡರಿ) ಮತ್ತು ಮನೀಷ್ (ಔಟಾಗದೆ 87, 75ಎಸೆತ, 14ಬೌಂಡರಿ, 2ಸಿಕ್ಸರ್) ಮುರಿಯದ ಐದನೇ ವಿಕೆಟ್ ಪಾಲುಗಾರಿಕೆಯಲ್ಲಿ 129 ರನ್ ಸೇರಿಸಿದರು. ಇದರೊಂದಿಗೆ ರಾಜಸ್ಥಾನ ತಂಡದ ಶತಪ್ರಯತ್ನಗಳು ಮಣ್ಣುಪಾಲಾದವು. ಗುರುವಾರ ರಾಜಸ್ಥಾನ ತಂಡವು ಕರ್ನಾಟಕಕ್ಕೆ 184 ರನ್‌ಗಳ ಜಯದ ಗುರಿ ನೀಡಿತ್ತು. ದಿನದಾಟದ ಅಂತ್ಯಕ್ಕೆ 45 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕರುಣ್ ನಾಯರ್ ಮತ್ತು ರೋನಿತ್ ಮೋರೆ ಕ್ರೀಸ್‌ನಲ್ಲಿದ್ದರು. ನಾಲ್ಕನೇ ದಿನವೂ ರಾಜಸ್ಥಾನ ಬೌಲರ್‌ಗಳು ಬೆಳಗಿನ ವಾತಾವರಣ ಮತ್ತು ಪಿಚ್‌ನ ಗುಣವನ್ನು ಸಮರ್ಥವಾಗಿ ಬಳಸಿಕೊಂಡು ಎಸೆತಗಳನ್ನು ಪ್ರಯೋಗಿಸಿದರು.
ದಿನದಾಟದ ಐದನೇ ಓವರ್‌ನಲ್ಲಿ ‘ನೈಟ್ ವಾಚಮನ್’ ರೋನಿತ್ ಮೋರೆ ಔಟಾದರು. ಅವರ ಬ್ಯಾಟ್ ಅಂಚಿಗೆ ಸವರಿದ ಚೆಂಡು ವಿಕೆಟ್ ಕೀಪರ್ ಚೇತನ್ ಬಿಷ್ಠ್ ಕೈಸೇರಿತು. ಬೌಲರ್ ತನ್ವೀರ್ ಉಲ್ ಹಕ್ ನೋಬಾಲ್ ಮಾಡಿರುವ ಕುರಿತು ರೆಫರಿ ವಿಡಿಯೊ ಪರಿಶೀಲನೆ ನಡೆಸಿದರು. ಬೌಲರ್ ಪರ ತೀರ್ಪು ನೀಡಿದರು. ರಾಜಸ್ಥಾನ ಆಟಗಾರರು ಈ ಋತುವಿನಲ್ಲಿ ಕೊನೆಯ ಬಾರಿಗೆ ಸಂಭ್ರಮಿಸಿದರು!
ಆಗ ಬಂದ ಮನೀಷ್ ಪಾಂಡೆ ‘ಮ್ಯಾಚ್ ಫಿನಿಷರ್’ ಆದರು. ಬೌಲರ್‌ಗಳನ್ನು ನಿರ್ಭಿಡೆಯಿಂದ ದಂಡಿಸಿದರು. ಟ್ವೆಂಟಿ–20 ಕ್ರಿಕೆಟ್ ಮಾದರಿಯ ಬ್ಯಾಟಿಂಗ್ ಮಾಡಿದ ಮನೀಷ್ ಅವರು ಕರುಣ್ ಅವರಿಗಿಂತ ಮೊದಲೇ ಅರ್ಧಶತಕ ಗಳಿಸಿದರು. ತಮ್ಮನ್ನು ಏಕದಿನ ಸರಣಿಗೆ ಭಾರತ ತಂಡದಿಂದ ಬಿಟ್ಟಿದ್ದನ್ನು ಪ್ರಶ್ನಿಸಿದಂತಿತ್ತು ಅವರ ಆಟ. ಇಡೀ ಋತುವಿನಲ್ಲಿ ವೈಫಲ್ಯ ಅನುಭವಿಸಿದ್ದ ಕರುಣ್ ಕೂಡ ಅರ್ಧಶತಕ ಹೊಡೆದು ಲಯಕ್ಕೆ ಮರಳಿದರು. ಅವರು 38 ರನ್ ಗಳಿಸಿದ್ದಾಗ ಕ್ಯಾಚ್ ಬಿಟ್ಟ ದೀಪಕ್ ಚಾಹರ್ ಪಂದ್ಯವನ್ನೇ ಕೈಚೆಲ್ಲಿದರು. ನಾಯಕ ಮಹಿಪಾಲ್ ಸೆಟ್ ಮಾಡುತ್ತಿದ್ದ ಫೀಲ್ಡಿಂಗ್ ತಂತ್ರಗಳೆಲ್ಲವನ್ನೂ ಪುಡಿಗಟ್ಟಿದ ಮನೀಷ್ ಚೆಂಡನ್ನು ಬೌಂಡರಿಗಟ್ಟಿದರು. ಇನ್ನೊಂದೆಡೆ ತಾಳ್ಮೆಯಿಂದ ಆಡಿದ ಕರುಣ್ ಉತ್ತಮ ಹೊಡೆತಗಳಿಂದ ಗಮನ ಸೆಳೆದರು. 109ನೇ ಎಸೆತದಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಆದರೆ ಮನೀಷ್ ತಮ್ಮ ಅರ್ಧಶತಕ ಪೂರೈಸಲು ತೆಗೆದುಕೊಂಡಿದ್ದು ಕೇವಲ 53 ಎಸೆತಗಳನ್ನು ಮಾತ್ರ. ಮಧ್ಯಮವೇಗಿಗಳ ಸ್ವಿಂಗರ್‌ಗಳನ್ನು ಸ್ಲಿಪ್ ಫೀಲ್ಡರ್‌ಗಳ ನಡುವಿನಿಂದ ಬೌಂಡರಿಗೆ ಕಳಿಸುತ್ತಿದ್ದ ಮನೀಷ್ ನೋಡುಗರ ಚಪ್ಪಾಳೆ ಗಿಟ್ಟಿಸಿದರು. ಇದರಿಂದಾಗಿ ಸ್ಕೋರ್ ಬೋರ್ಡ್‌ನಲ್ಲಿ ರನ್‌ಗಳು ಶರವೇಗದಲ್ಲಿ ದಾಖಲಾದವು. ತಂಡ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು.
ಕರ್ನಾಟಕ ತಂಡವು ಹೋದ ವರ್ಷ ಸೆಮಿಫೈನಲ್‌ನಲ್ಲಿ ವಿದರ್ಭ ಎದುರು ಸೋತಿತ್ತು. ಈಗ ಸತತ ಎರಡನೇ ವರ್ಷ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ. ಲಖನೌನಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ಮತ್ತು ಸೌರಾಷ್ಟ್ರ ನಡುವಣ ಕ್ವಾರ್ಟರ್‌ಫೈನಲ್‌ನಲ್ಲಿ ಗೆದ್ದ ತಂಡವು ಕರ್ನಾಟಕವನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.