ಲಖನೌ: ಏಕನಾ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ದಿನವೇ 15 ವಿಕೆಟ್‌ಗಳು ಪತನಗೊಂಡವು. ಉಭಯ ತಂಡಗಳ ಬೌಲರ್‌ಗಳ ಆರ್ಭಟದ ನಡುವೆಯೂ ಕರ್ನಾಟಕ ಬಳಗವು ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು.
ಇದಕ್ಕೆ ಪ್ರಮುಖ ಕಾರಣರಾದವರು ಕರ್ನಾಟಕದ ಮಧ್ಯಮವೇಗಿ ವಾಸುಕಿ ಕೌಶಿಕ್ ಅವರು. 32 ವರ್ಷದ ಕೌಶಿಕ್ (16-6-20-5) ಅವರು ಕಳೆದ ಪಂದ್ಯದಲ್ಲಿ (ಬಂಗಾಳ ಎದುರು) ಕೂಡ ಐದು ವಿಕೆಟ್ ಗೊಂಚಲು ಗಳಿಸಿದ್ದರು. ಇಲ್ಲಿಯೂ ಅವರ ದಾಳಿಗೆ ಉತ್ತರ ಪ್ರದೇಶ ತಂಡವು ಕೇವಲ 89 ರನ್‌ಗಳಿಗೆ ಕುಸಿಯಿತು. ಇದಕ್ಕುತ್ತರವಾಗಿ ಕರ್ನಾಟಕ ತಂಡವು ದಿನದಾಟದ ಅಂತ್ಯಕ್ಕೆ 31 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 127 ರನ್ ಗಳಿಸಿತು. 38 ರನ್‌ಗಳ ಮುನ್ನಡೆ ಸಾಧಿಸಿತು.
ಆದರೆ ಈ ಪಂದ್ಯದಲ್ಲಿಯೂ ಅಗ್ರಕ್ರಮಾಂಕದ ಬ್ಯಾಟರ್‌ಗಳು ದೀರ್ಘ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಈ ಸಂದರ್ಭದಲ್ಲಿ ಪದಾರ್ಪಣೆ ಮಾಡಿದ ಕೃಷ್ಣನ್ ಶ್ರೀಜಿತ್ (ಬ್ಯಾಟಿಂಗ್ 68; 77ಎ, 4X9) ಮತ್ತು ಅನುಭವಿ ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 14) ತಂಡಕ್ಕೆ ಆಸರೆಯಾದರು. ಆರಂಭಿಕ ಬ್ಯಾಟರ್ ನಿಕಿನ್ ಜೋಸ್ ಹಾಗೂ ಆರ್. ಸ್ಮರಣ್ ಅವರಿಬ್ಬರನ್ನೂ ವೇಗಿ ಅಕೀಬ್ ಖಾನ್ ಅವರು ಒಂದೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಶ್ರೀಜಿತ್ ತಮ್ಮ ಆಯ್ಕೆಯನ್ನು ಅಚ್ಚುಕಟ್ಟಾಗಿ ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ನಾಯಕ ಮಯಂಕ್ (30; 39ಎ, 4X4) ಹಾಗೂ ಶ್ರೀಜಿತ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿದರು. ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಅವರ ಎಸೆತದ ಚಲನೆಯ ಜಾಡು ಹಿಡಿಯುವುದರಲ್ಲಿ ಎಡವಿದ ಮಯಂಕ್ ಕ್ಲೀನ್‌ಬೌಲ್ಡ್ ಆದರು. ಮನೀಷ್ ಪಾಂಡೆ ಮತ್ತು ಅಭಿನವ್ ಮನೋಹರ್ ತಲಾ 6 ರನ್ ಗಳಿಸಿದರು. ಅವರಿಬ್ಬರ ವಿಕೆಟ್‌ಗಳನ್ನೂ ಶಿವಂ ಮಾವಿ ತಮ್ಮ ಬುಟ್ಟಿಗೆ ಹಾಕಿಕೊಂಡರು. ಕರ್ನಾಟಕದ ಇಬ್ಬರೂ ಬ್ಯಾಟರ್‌ಗಳು ವಿಕೆಟ್‌ಕೀಪರ್ ಆರ್ಯನ್ ಜುಯಾಲ್‌ಗೆ ಕ್ಯಾಚ್ ಆದರು.
ಕೌಶಿಕ್ ಕೈಚಳಕ
ಬೆಳಗಿನ ವಾತಾವರಣದಲ್ಲಿ ಲಖನೌನಲ್ಲಿ ಇಬ್ಬನಿಮಿಶ್ರಿತ ತಂಪು ಗಾಳಿಯಲ್ಲಿ ಆರಂಭವಾದ ಪಂದ್ಯದಲ್ಲಿ ಆತಿಥೇಯ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತನ್ನ ಪ್ರಮುಖ ಬೌಲರ್‌ಗಳಿಲ್ಲದೇ ಕಣಕ್ಕಿಳಿದ ಕರ್ನಾಟಕ ತಂಡದಲ್ಲಿ ಯಶೋವರ್ಧನ್ ಪರಂತಾಪ್ ಪದಾರ್ಪಣೆ ಮಾಡಿದರು. ಕಳೆದ ಪಂದ್ಯದಲ್ಲಿ ಆಡಿದ್ದ ಅಭಿಲಾಷ್ ಶೆಟ್ಟಿಗೆ ವಿಶ್ರಾಂತಿ ನೀಡಲಾಯಿತು. ಸ್ಪಿನ್ನರ್ ಮೊಹಸೀನ್ ಖಾನ್ ಕೂಡ ಇಲ್ಲಿ ಕಣಕ್ಕಿಳಿದರು.
ವಿದ್ವತ್ ಕಾವೇರಪ್ಪ ಹಾಗೂ ವೈಶಾಖ ವಿಜಯಕುಮಾರ್ ಅನುಪಸ್ಥಿತಿಯಲ್ಲಿ ಕೌಶಿಕ್ ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಅವರಿಗೆ ವಿದ್ಯಾಧರ್ ಪಾಟೀಲ (22ಕ್ಕೆ3) ಉತ್ತಮ ಬೆಂಬಲ ನೀಡಿದರು.
ಇನಿಂಗ್ಸ್‌ನ ಮೊದಲ ವಿಕೆಟ್ ಗಳಿಸಿದ್ದು ವಿದ್ಯಾಧರ್ ಅವರೇ. ಐದನೇ ಓವರ್‌ನಲ್ಲಿ ಕೌಶಿಕ್ ಅವರು ಮಾಧವ್ ಕೌಶಿಕ್ ಮತ್ತು ಆರ್ಯನ್ ಜುಯಾಲ್ ಅವರನ್ನು ಖಾಲಿ ಕೈನಲ್ಲಿ ಪೆವಿಲಿಯನ್‌ಗೆ ಮರಳುವಂತೆ ಮಾಡಿದರು. ಕೆಳಕ್ರಮಾಂಕದಲ್ಲಿ ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದ ಸಮೀರ್ ರಿಜ್ವಿ (25; 59ಎ), ಕೃತಗ್ಯಾ ಸಿಂಗ್ (13 ರನ್) ಹಾಗೂ ಸೌರಭ್ ಕುಮಾರ್ (13 ರನ್) ಅವರ ವಿಕೆಟ್‌ಗಳನ್ನೂ ಕೌಶಿಕ್ ಕಬಳಿಸಿದರು.
ಇನ್ನೊಂದೆಡೆ ಪರಂತಾಪ್ ಮತ್ತು ಮೊಹಸೀನ್ ಕೂಡ ತಲಾ ಒಂದು ವಿಕೆಟ್ ಗಳಿಸಿದರು.
(ಮಾಹಿತಿ: ಬಿಸಿಸಿಐ ಡಾಟ್ ಟಿವಿ ವೆಬ್‌ಸೈಟ್)
ನಿಶ್ಚಲ್ ಮತ್ತೊಂದು ಶತಕ ನದಿಯಾದ್: ಕನ್ನಡಿಗ ಡಿ. ನಿಶ್ವಲ್ (145; 169ಎ 4X23) ಮತ್ತು ಚೇತನ್ ಬಿಷ್ಟ್ (ಬ್ಯಾಟಿಂಗ್ 120; 194ಎ 4X14 6X1) ಅವರಿಬ್ಬರ ಶತಕಗಳ ಬಲದಿಂದ ನಾಗಾಲ್ಯಾಂಡ್ ತಂಡವು ಪ್ಲೇಟ್ ಗುಂಪಿನ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಿತು. ಬುಧವಾರ ಇಲ್ಲಿ ಮಿಜೋರಾಂ ಎದುರು ಆರಂಭವಾದ ಪಂದ್ಯದಲ್ಲಿ ನಾಗಾಲ್ಯಾಂಡ್ ತಂಡವು 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 363 ರನ್ ಗಳಿಸಿತು.
ನಿಶ್ಚಲ್ ಅವರು ಈ ಋತುವಿನಲ್ಲಿ ಗಳಿಸಿದ ನಾಲ್ಕನೇ ಶತಕ ಇದಾಗಿದೆ.
ಸಂಕ್ಷಿಪ್ತ ಸ್ಕೋರು: ನಾಗಾಲ್ಯಾಂಡ್: 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 363 (ಸೆದೆಝಾಲಿ ರುಪೆರೊ 31 ಡಿ. ನಿಶ್ಚಲ್ 145 ಚೇತನ್ ಬಿಷ್ಟ್ ಬ್ಯಾಟಿಂಗ್ 120 ಕೆ.ಸಿ. ಕಾರ್ಯಪ್ಪ 64ಕ್ಕೆ2) ಮಿಜೋರಾಂ ವಿರುದ್ಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.