ಬೆಂಗಳೂರು:ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ಎದುರು ನೋಡುತ್ತಿರುವಮಧ್ಯಪ್ರದೇಶ ತಂಡಕ್ಕೆ 41 ಬಾರಿಯ ಚಾಂಪಿಯನ್ ಮುಂಬೈ ಫೈನಲ್ ಪಂದ್ಯದ ಗೆಲುವಿಗೆ 108 ರನ್‌ಗಳ ಅಲ್ಪ ಗುರಿ ನೀಡಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 22ರಂದು ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡ, ಮೊದಲ ಇನಿಂಗ್ಸ್‌ನಲ್ಲಿ 374ರನ್ ಗಳಿಸಿ ಆಲೌಟ್ ಆಗಿತ್ತು. ಪೃಥ್ವಿ ಶಾ ಪಡೆಗೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (78) ಅರ್ಧಶತಕ ಹಾಗೂ ಸರ್ಫರಾಜ್ ಖಾನ್ (134) ಶತಕ ಸಿಡಿಸಿ ನೆರವಾಗಿದ್ದರು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮಧ್ಯಪ್ರದೇಶ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 536 ರನ್ ಕಲೆಹಾಕಿತ್ತು.ಯಶ್ ದುಬೆ (133), ಶುಭಂ ಎಸ್. ಶರ್ಮಾ (116) ಮತ್ತು ರಜತ್ ಪಾಟೀದಾರ್ (122) ಶತಕ ಭಾರಿಸಿ ಮಿಂಚಿದ್ದರು. ಹೀಗಾಗಿ, ಆದಿತ್ಯ ಶ್ರೀವಾಸ್ತವ ಬಳಗಕ್ಕೆ ಮೊದಲ ಇನಿಂಗ್ಸ್‌ನಲ್ಲಿ 162 ರನ್‌ಗಳ ಮುನ್ನಡೆ ಲಭಿಸಿತ್ತು.
ಬಳಿಕ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡವನ್ನು ಮಧ್ಯಪ್ರದೇಶ ಬೌಲರ್‌ಗಳು ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡಿದರು. ಅರ್ಧಶತಕ ಗಳಿಸಿದ ಸುವೇದ್ ಪಾರ್ಕರ್ (51), ನಾಯಕ ಪೃಥ್ವಿ ಶಾ (44) ಮತ್ತು ಸರ್ಫರಾಜ್ ಖಾನ್ (41) ಹೊರತುಪಡಿಸಿ ಉಳಿದವರಿಂದ ಉತ್ತಮ ಆಟ ಮೂಡಿಬರಲಿಲ್ಲ. ಹೀಗಾಗಿ ಈ ತಂಡಎರಡನೇ ಇನಿಂಗ್ಸ್‌ನಲ್ಲಿ 269 ರನ್ ಗಳಿಗೆ ಸರ್ವಪತನ ಕಂಡಿದೆ.
ಮಧ್ಯಪ್ರದೇಶ ಪರ ಕುಮಾರ ಕಾರ್ತಿಕೇಯ 4 ವಿಕೆಟ್ ಕಬಳಿಸಿದರೆ, ಗೌರವ್ ಯಾದವ್ ಮತ್ತು ಪಾರ್ಥ್ ಸಹಾನಿ ತಲಾ ಎರಡೆರಡು ವಿಕೆಟ್ ಹಂಚಿಕೊಂಡರು.
ಸುಲಭ ಗುರಿ ಎದುರು ಎದುರಾಳಿ ಬ್ಯಾಟರ್‌ಗಳನ್ನು ಮುಂಬೈ ಬೌಲರ್‌ಗಳು ನಿಯಂತ್ರಿಸುವರೇ ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.