ADVERTISEMENT

ರಣಜಿ ಟ್ರೋಫಿ ಫೈನಲ್ ಇಂದಿನಿಂದ: ಪ್ರಶಸ್ತಿಗಾಗಿ ವಿದರ್ಭ–ಮುಂಬೈ ಸೆಣಸಾಟ

ಪಿಟಿಐ
Published 9 ಮಾರ್ಚ್ 2024, 23:30 IST
Last Updated 9 ಮಾರ್ಚ್ 2024, 23:30 IST
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ   

ಮುಂಬೈ: ನಾಯಕ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಮುಂಬೈ ತಂಡ ಭಾನುವಾರ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ 42ನೇ ಬಾರಿ ಪ್ರಶಸ್ತಿಗೆ ಯತ್ನಿಸಲಿದೆ. ಆದರೆ ಹೋರಾಟಕ್ಕೆ ಹೆಸರಾದ ವಿದರ್ಭ ತಂಡ ಸುಲಭವಾಗಿ ಮಣಿಯುವ ತಂಡವಲ್ಲ. ಹೀಗಾಗಿ ಫೈನಲ್ ಕುತೂಹಲಕ್ಕೆ ಎಡೆಮಾಡಿದೆ.

ಮೂರು ವರ್ಷ ಮೊದಲು ಆಸ್ಟ್ರೇಲಿಯಾದಲ್ಲಿ ಭಾರತದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಹಾನೆ ಈಗ ರಾಷ್ಟ್ರೀಯ ತಂಡದ ಗಣನೆಯಲ್ಲಿ ಇಲ್ಲ. ಅವರು ಉತ್ತಮ ಲಯದಲ್ಲೂ ಇಲ್ಲ. ರಣಜಿ ಋತುವಿನಲ್ಲಿ 13.4 ಸರಾಸರಿಯಲ್ಲಿ 134 ರನ್‌ಗಳನ್ನಷ್ಟೇ ಗಳಿಸಿದ್ದಾರೆ. ಅವರಿಗಿಂತ ಪರಿಣತ ವೇಗಿ ಮೋಹಿತ್ ಅವಸ್ಥಿ ಹೆಚ್ಚು ರನ್ (192) ಗಳಿಸಿದ್ದಾರೆ.

ಗಾಯಾಳು ಸೂರ್ಯಕುಮಾರ್ ಯಾದವ್ ಮತ್ತು ರಾಷ್ಟ್ರೀಯ ‘ಎ’ ಮತ್ತು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಸರ್ಫರಾಜ್ ಖಾನ್ ಅವರ ಅಲಭ್ಯತೆ ಅಷ್ಟೇನೂ ಕಾಡದಂತೆ ನೋಡಿಕೊಂಡರು. ಶ್ರೇಯಸ್‌ ಅಯ್ಯರ್ ‘ಗಾಯ’ದ ಕಾರಣ ಕ್ವಾರ್ಟರ್‌ಫೈನಲ್‌ಗೆ ಲಭ್ಯರಾಗಲಿಲ್ಲ. ಆದರೆ  ಅವರ ನಾಯಕತ್ವದ ಕೌಶಲ ತಂಡವನ್ನು 48ನೇ ಬಾರಿ ಫೈನಲ್‌ಗೆ ತಂದು ನಿಲ್ಲಿಸಿದೆ.

ADVERTISEMENT

ಪ್ರಮುಖರ ಅಲಭ್ಯದ ಕೊರೆಯನ್ನು ವಿಕೆಟ್‌ ಕೀಪರ್ ಬ್ಯಾಟರ್‌ ಹಾರ್ದಿಕ್ ತಮೋರೆ (252 ರನ್), ವೇಗದ ಬೌಲರ್‌ ತನುಷ್‌ ಕೋಟ್ಯಾನ್ (481), ಶಮ್ಸ್ ಮುಲಾನಿ (290) ಅವರು ಸರಿದೂಗಿಸಿದ್ದಾರೆ. 19 ವರ್ಷದೊಳಗಿನವರ ತಂಡದಲ್ಲಿ ಆಡಿದ್ದ ಮುಶೀರ್ ಖಾನ್ ಅವರೂ ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕೊಡುಗೆ ನೀಡಬಲ್ಲರು.

ಎರಡು ಬಾರಿಯ ಚಾಂಪಿಯನ್ ವಿದರ್ಭ ಸ್ಥಿರ ಪ್ರದರ್ಶನ ನೀಡಿದೆ. ಬ್ಯಾಟರ್‌ಗಳ ಪೈಕಿ ಕರುಣ್ ನಾಯರ್ (41.06 ಸರಾಸರಿಯಲ್ಲಿ 616 ರನ್), ಧ್ರುವ್ ಶೋರೆ (549 ರನ್), ಅಥರ್ವ ತೈಡೆ (44.08 ಸರಾಸರಿಯಲ್ಲಿ 529), ಯಶಸ್‌ ರಾಥೋಡ್‌ (456) ಅವರು ವಿದರ್ಭ ಪರ ವಿವಿಧ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೌಲರ್‌ಗಳ ಪೈಕಿ ಆದಿತ್ಯ ಸರ್ವಟೆ (40 ವಿಕೆಟ್‌) ಮತ್ತು ಆದಿತ್ಯ ಠಾಕರೆ (33) ಯಶಸ್ವಿ ಬೌಲರ್‌ಗಳೆನಿಸಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕ ತಂಡದ ಮೇಲೆ ಜಯಗಳಿಸಿದ್ದ ವಿದರ್ಭ, ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶ ಮೇಲೆ ಸಾಧಿಸಿದ ಗೆಲುವು ಅದರ ಹೋರಾಟದ ಕೆಚ್ಚಿಗೆ ನಿದರ್ಶನವಾಗಿತ್ತು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಧ್ಯಪ್ರದೇಶ 82 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.