ADVERTISEMENT

ರಣಜಿ ಟ್ರೋಫಿ | KAR Vs KER: ಮತ್ತೆ ಮಳೆಯ ಆಟ

ಮೂರು ವಿಕೆಟ್ ಕಳೆದುಕೊಂಡ ಕೇರಳ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 14:12 IST
Last Updated 19 ಅಕ್ಟೋಬರ್ 2024, 14:12 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕ ಮತ್ತು ಕೇರಳ ತಂಡಗಳ ನಡುವಣ ಪಂದ್ಯದ ಎರಡನೇ ದಿನವೂ ಮಳೆ ಮತ್ತು ತೇವಗೊಂಡ ಮೈದಾನದಿಂದ ಸ್ವಲ್ಪ ಹೊತ್ತು ಮಾತ್ರ ಆಟ ಸಾಧ್ಯವಾಯಿತು. ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ 27 ಓವರುಗಳ ಆಟ ಸಾಧ್ಯವಾಗಿದ್ದು ಕೇರಳ 3 ವಿಕೆಟ್‌ಗೆ 161 ರನ್ ಗಳಿಸಿದೆ.

ADVERTISEMENT

ಮೊದಲ ದಿನ ಟೀ ವಿರಾಮದ ನಂತರ‌ವಷ್ಟೇ ಆಟ ಸಾಧ್ಯವಾಗಿದ್ದು, 23 ಓವರುಗಳಲ್ಲಿ ಕೇರಳ ವಿಕೆಟ್‌ ನಷ್ಟವಿಲ್ಲದೇ 88 ರನ್ ಹೊಡೆದಿತ್ತು. ಕರ್ನಾಟಕದ ಬೌಲರ್‌ಗಳು ಇಂದು ಆರಂಭದ ಅವಧಿಯಲ್ಲಿ ಮೂರು ವಿಕೆಟ್‌ಗಳನ್ನು ಪಡೆದು ಕೇರಳ ಅಬ್ಬರಿಸದಂತೆ ನೋಡಿಕೊಂಡರು.

ದಿನದಾಟ ಬೇಗನೇ ಮೊಟಕುಗೊಂಡಾಗ ನಾಯಕ ಸಚಿನ್ ಬೇಬಿ (ಔಟಾಗದೇ 23, 62ಎ) ಮತ್ತು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (ಔಟಾಗದೇ 15, 12ಎ) ಕ್ರೀಸ್‌ನಲ್ಲಿದ್ದರು. ಮೋಡದ ವಾತಾವರಣದಲ್ಲಿ ಬಿರುಸಿನಿಂದ ಆಡಿದ ಭಾರತ ತಂಡದ ಆಟಗಾರ ಸ್ಯಾಮ್ಸನ್‌ ಎರಡು ಬೌಂಡರಿಗಳ ಜೊತೆ ಒಂದು ಸಿಕ್ಸರ್ ಎತ್ತಿದರು.

ಲಂಚ್‌ ನಂತರ ಆಟ ನಡೆಯಲಿಲ್ಲ. ಜಿಟಿಜಿಟಿ ಮಳೆ ಮಧ್ಯಾಹ್ನ 2 ಗಂಟೆಗೆ ಬಿಡುವು ನೀಡಿದರೂ, ಪಿಚ್‌ ಸುತ್ತಮುತ್ತಲ ಭಾಗ ತೇವಗೊಂಡಿದ್ದು ಮಧ್ಯಾಹ್ನ 3.30ಕ್ಕೆ ಅಂಪೈರ್‌ಗಳು ದಿನದಾಟ ಕೊನೆಗೊಳಿಸಲು ನಿರ್ಧರಿಸಿದರು.

ಆರಂಭ ಆಟಗಾರ ವತ್ಸಲ್‌ ಗೋವಿಂದ್ (31) ಶುಕ್ರವಾರದ ಮೊತ್ತಕ್ಕೇ ನಿರ್ಗಮಿಸಿದರು. ದಿನದ ಐದನೇ ಓವರಿನಲ್ಲಿ ತಂಡದ ಮೊತ್ತ 94 ಆಗಿದ್ದಾಗ ಅವರು ವೈಶಾಖ ವಿಜಯಕುಮಾರ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇದೇ ಮೊತ್ತಕ್ಕೆ ರೋಹನ್ ಕುನ್ನುಮ್ಮಾಳ್ ಸಹ ವಾಸುಕಿ ಕೌಶಿಕ್ ಬೌಲಿಂಗ್‌ನಲ್ಲಿ ನಿರ್ಗಮಿಸಿದರು. ಬಾಬಾ ಅಪರಾಜಿತ್ (19, 58ಎ) ಶ್ರೇಯಸ್ ಗೋಪಾಲ್‌ಗೆ ವಿಕೆಟ್‌ ನೀಡುವ ಮೊದಲು ಸಚಿನ್ ಬೇಬಿ ಜೊತೆ 50 ರನ್ ಸೇರಿಸಿದ್ದರಿಂದ ತಂಡ ಚೇತರಿಸಿತು.

ಸ್ಕೋರುಗಳು: ಮೊದಲ ಇನಿಂಗ್ಸ್‌: ಕೇರಳ: 50 ಓವರುಗಳಲ್ಲಿ 3 ವಿಕೆಟ್‌ಗೆ 161 (ವತ್ಸಲ್ ಗೋವಿಂದ್ 31, ರೋಹನ್ ಕುನ್ನುಮ್ಮಾಳ್ 63, ಸಚಿನ್ ಬೇಬಿ ಔಟಾಗದೇ 23, ಸಂಜು ಸ್ಯಾಮ್ಸನ್ ಔಟಾಗದೇ 15; ವಾಸುಕಿ ಕೌಶಿಕ್ 43ಕ್ಕೆ1, ವೈಶಾಖ ವಿಜಯಕುಮಾರ್ 34ಕ್ಕೆ1, ಶ್ರೇಯಸ್ ಗೋಪಾಲ್ 18ಕ್ಕೆ1) ವಿರುದ್ಧ ಕರ್ನಾಟಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.